ಶೋಷಿತ ಸಮುದಾಯಗಳ ಹಿತದೃಷ್ಟಿ ಮತ್ತು ಅಂಬೇಡ್ಕರರ ಆಶಯಕ್ಕನುಗುಣವಾಗಿ ಪ್ರತಿಯೊಬ್ಬನ ಏಳ್ಗೆಯನ್ನೂ ಗಮನದಲ್ಲಿಟ್ಟುಕೊಂಡು ಮೀಸಲಾತಿ, ಒಳ ಮೀಸಲಾತಿ ಮತ್ತು ಕೆನೆಪದರ ಚಿಂತನೆಯಲ್ಲಿನ ಸಕಾಲಿಕ ಬದಲಾವಣೆಗಳು ಅವಶ್ಯವಾಗಿ ನಡೆಯಬೇಕು. – ಶಂಕರ್ ಸೂರ್ನಳ್ಳಿ,
ಮೀಸಲಾತಿ ಎಂದಾಕ್ಷಣ ಎಲ್ಲರ ಮನಸಿಗೆ ಮೊದಲು ಬರುವುದೇ ಶೋಷಿತ ದಲಿತ ವರ್ಗ. ನಮ್ಮಂತೆ ಮೆರಿಟ್ ಅರ್ಹತೆ ಇಲ್ಲದಿದ್ದರೂ ಮೀಸಲಾತಿಯ ಕಾರಣಕ್ಕೆ ಬಿಟ್ಟಿ ಅವಕಾಶಗಳನ್ನ ದಂಡಿಯಾಗಿ ಗಿಟ್ಟಿಸಿಕೊಳ್ಳುವ ಮಂದಿ ಇವರುಗಳು ಎಂಬ ಭಾವನೆಯೇ ಅನೇಕರಲ್ಲಿದೆ. ಒಂದು ವೇಳೆ ಈ ದರಿದ್ರ ಮೀಸಲಾತಿ ಎಂಬುದೇ ಇಲ್ಲದಿದ್ದರೆ ನಮ್ಮಂತಹ “ಅರ್ಹ”ರುಗಳು ಯಾವ ಕಾರಣಕ್ಕೂ ಉದ್ಯೋಗ ವಂಚಿತರಾಗಿ ಈಗಿನಂತೆ ಅಲೆಯ ಬೇಕಾಗುತ್ತಿರಲಿಲ್ಲ. ಸೀಮೆಗಿಲ್ಲದ ಸಾಮಾಜಿಕ ನ್ಯಾಯದ ಹೆಸರಲ್ಲಿ ನಿಜವಾದ ಪ್ರಾಮಾಣಿಕತೆಗೆ, ನೈಜ ಅರ್ಹತೆಗೆ ಆ ಮೂಲಕ ದೇಶದ ಅಭಿವೃದ್ಧಿಗೂ ದೊಡ್ಡ ಕಂಟಕವಾಗುತ್ತಿರುವುದೇ ಈ ಮೀಸಲಾತಿ ಎಂಬ ವಾದ ಅನೇಕರದ್ದು. ಇದೇ ಕಾರಣಕ್ಕಾಗಿ ಸರ್ ಎಂ ವಿಶ್ವೇಶರಯ್ಯನಂತಹವರೂ ಕೂಡ ಮೀಸಲಾತಿ ಸಿದ್ಧಾಂತವನ್ನು ಕಟುವಾಗಿ ವಿರೋಧಿಸಿದ್ದರು.
ಹಾಗೆ ನೋಡಿದರೆ ಈ ಮೀಸಲಾತಿಯ ಕಲ್ಪನೆ ಅಂಬೇಡ್ಕರರದ್ದೂ ಅಲ್ಲ, ಕೃಷ್ಣರಾಜ ಒಡೆಯರದ್ದೂ ಅಲ್ಲ. ಭಾರತದಲ್ಲಿ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಇಂತಹ ವರ್ಗಕ್ಕೆ ಇಂತಹ ಕಾರ್ಯ, ಇಂತಹ ವರ್ಗಕ್ಕೆ ಇಂತಹ ವೇತನ, ಇಂತಹ ವರ್ಗಕ್ಕೆ ಸಮಾಜದಲ್ಲಿ ಇಂತಹ ಮರ್ಯಾದೆ ಕೊಡಲೇಬೇಕು ಎನ್ನುವ ನಿಯಮ ನಿರ್ಬಂಧ ಹಿಂದೂ ಧಾರ್ಮಿಕ ಶಾಸ್ತ್ರಗಳಲ್ಲೇ ಇದ್ದು ಇದೂ ಕೂಡ ಮೀಸಲಾತಿಯಲ್ಲದೇ ಮತ್ತೇನು?. ಉದಾಹರಣೆಗೆ ವಿದ್ಯೆಯ ಮೀಸಲಾತಿಯ ಬಗ್ಗೆ ಹೇಳುವುದಾದರೆ ಕ್ಷತ್ರಿಯರು ಹಾಗು ಬ್ರಾಹ್ಮಣ ವರ್ಗಕ್ಕಷ್ಟೇ ಅವರಲ್ಲೂ ಸ್ತ್ರೀಯರನ್ನು ಹೊರತುಪಡಿಸಿ ಪುರುಷರಿಗಷ್ಟೇ ಅಂದಿನ ಗುರುಕುಲಗಳಲ್ಲಿ ವಿದ್ಯೆಯ “ಮೀಸಲು“ ನಿಯಮ ಕಡ್ಡಾಯವಿತ್ತು. ಅರ್ಜುನಾದಿಗಳ ಸಾರ್ವಜನಿಕ ಶಸ್ತ್ರ ಪ್ರದರ್ಶನದ ಸಮಯದಲ್ಲಿ ಬಂದ ಕರ್ಣನಲ್ಲಿ ನಿನ್ನ ಕುಲ ಗೋತ್ರ ಯಾವುದಪ್ಪ ಎಂದು ನೇರಾನೇರ ಕೇಳಿ ಅವನ ಅರ್ಹತೆಯನ್ನು ಅವಮಾನಿಸಲಾಗಿತ್ತು. ಸೂತ ಕುಲ (ಬ್ರಾಹ್ಮಣ -ಕ್ಷತ್ರಿಯ ಸಂಬಂಧದಲ್ಲಿ ಜನಿಸಿದ ವರ್ಗ) ದವನ ಪಾಡೇ ಹೀಗಿದ್ದರೆ ಆವತ್ತಿನ ಶೂದ್ರರ ಪಾಡೇನಿದ್ದೀತು? ರಾಮನಿಂದ ಮರಣದಂಡನೆಗೊಳಗಾದ ಶಂಭೂಕನ ಕಥೆ ಗೊತ್ತಲ್ಲ.
ಆವತ್ತು ಬ್ರಾಹ್ಮಣ ಕ್ಷತ್ರಿಯರಿಗೆ ಒಂದು ಬಗೆಯ ಮೀಸಲಾದರೆ ಮಧ್ವಾಚಾರ್ಯರು ಹೇಳುವ ನಿತ್ಯ ನಾರಕಿಗಳಾದ ಹಾಗು ಭಗವದ್ಗೀತೆಯಲ್ಲಿ ಕೃಷ್ಣನಿಂದ ಹೇಳಲ್ಪಡುವ ಪಾಪಯೋನಿಗಳಾದ ಶೂದ್ರರಿಗೆ ಭೂಸುರಾದಿ ಅನ್ಯರ ಸೇವೆಯೇ ನಿಜವಾದ ಮೀಸಲು ಭಾಗ್ಯವೆನ್ನುತ್ತದೆ ವೈದಿಕ ಶಾಸ್ತ್ರಗಳು. ಈ ಬಗೆಯಲ್ಲ ಆವತ್ತಿನ “ಮೀಸಲಾತಿ” ಯ ನೇರ ಫಲಾನುಭವಿಗಳು ಯಾರಾಗಿದ್ದರು ಎಂಬುವುದನ್ನು ಹಿಂದೂ ಶಾಸ್ತ್ರಗಳೇ ಸ್ಪಷ್ಟವಾಗಿ ಹೇಳಿವೆ. ಕೇವಲ ಹುಟ್ಟಿನ ಶ್ರೇಷ್ಟತೆಯ ಕಾರಣಕ್ಕಾಗಿ ಬ್ರಾಹ್ಮಣವರ್ಗಕ್ಕೆ ವಿದ್ಯೆ, ಅಂತಸ್ತು, ಜಮೀನುಗಳ ಹಕ್ಕು, ಸಾಮಾಜಿಕ ಗೌರವಗಳನ್ನು ಶಾಸ್ತ್ರೀಯವಾಗಿ ಅವರೇ ಬರಕೊಂಡ ಧರ್ಮ ಶಾಸ್ತ್ರಗಳ ಮೂಲಕ ಮೀಸಲಾಗಿಸಲಾಗಿದ್ದರೆ ವಿದ್ಯೆ, ಅಧಿಕಾರ, ಸಾಮಾಜಿಕ ಗೌರವಗಳಿಂದ ಶೂದ್ರವರ್ಗವನ್ನು ವಂಚಿತರನ್ನಾಗಿಸಿದ್ದರು. ಆವತ್ತು ಹುಟ್ಟಿನ ಶ್ರೇಷ್ಟತೆಯ ಆಧಾರದಲ್ಲಿ ಸಮಾಜದಲ್ಲಿ ಮೀಸಲಾತಿ ಜಾರಿಯಲ್ಲಿದ್ದರೆ ಇವತ್ತು ಸಂವಿಧಾನಾತ್ಮಕವಾಗಿ ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಮೀಸಲಾತಿ ಜಾರಿಗೊಂಡು ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ಒಂದಿಲ್ಲೊಂದು ಕಾರಣಕ್ಕೆ ಆಗಾಗ ಸುದ್ದಿಯಲ್ಲಿರುವ ಈ ಮೀಸಲಾತಿ ಇವತ್ತು ಪುನಃ ಸುದ್ದಿಯಲ್ಲಿದೆ. ಕಾರಣ ಒಳ ಮೀಸಲಾತಿಯ ಚಿಂತನೆ.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರು ನಮ್ಮ ಸಮಾಜದಲ್ಲಿ ಸಾಮಾಜಿಕವಾಗಿ ನಿಕೃಷ್ಟ ಬದುಕನ್ನು ಬದುಕುತ್ತಿರುವ ಶೋಷಿತ ವರ್ಗವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಸಮ ಸಮಾಜದ ಕನಸನ್ನು ಕಂಡು ಅದನ್ನು ಸಾಧಿಸುವ ಸಲುವಾಗಿ ಮೀಸಲಾತಿಯ ಪ್ರಸ್ತಾಪವನ್ನು ಮಾಡಿದ್ದರು. ದಲಿತರು, ಹಿಂದುಳಿದ ವರ್ಗದವರು, ಮಹಿಳೆಯರು, ಅಂಗವಿಕಲರು, ಧಾರ್ಮಿಕ ಅಲ್ಪಸಂಖ್ಯಾತರು, ಭಾಷಾ ಅಲ್ಪಸಂಖ್ಯಾತರು, ರೈತರು, ಗ್ರಾಮೀಣ ಪ್ರದೇಶವಾಸಿಗಳು,ಆರ್ಥಿಕವಾಗಿ ಹಿಂದುಳಿದವರು ಆದಿಯಾಗಿ ಸಾಂದರ್ಭಿಕವಾಗಿ ವಿವಿಧ ಬಗೆಯಲ್ಲಿ ಮೀಸಲು ಸೌಲಭ್ಯವನ್ನು ಪಡೆಯುವ ಅವಕಾಶಗಳಿದ್ದು ಇದೀಗ ಸಾಮಾಜಿಕವಾಗಿ ಮೇಲ್ ಸ್ತರದಲ್ಲಿರುವ ಬ್ರಾಹ್ಮಣ ಸಮುದಾಯಕ್ಕೂ ಕೂಡ ವಿಶೇಷವಾಗಿ (ವಾರ್ಷಿಕ ಆದಾಯದ ಮಿತಿಯನ್ನು ಇತರಿಗಿಂತ ಹೆಚ್ಚಿಸಿ) ಈ ಸೌಲಭ್ಯವನ್ನು ಸರಕಾರ ಒದಗಿಸಿದೆ.
ಸಾಮಾನ್ಯವಾಗಿ ಶೋಷಿತ ಹಾಗು ಹಿಂದುಳಿದ ವರ್ಗದ ಇಂದಿನ ಪೀಳಿಗೆಗೆ ಸಾಮಾಜಿಕ ಶೋಷಣೆ ಅಂದರೆ ಏನು? ಅದರ ಯಾತನೆ ಯಾವ ರೀತಿಯದ್ದು ಎಂಬುದರ ಪರಿಕಲ್ಪನೆ ಇರದು. ಜೀವಮಾನವಿಡೀ ಬಿಟ್ಟಿಯಾಗಿ ದುಡಿಸುವ ಜೀತ ಪದ್ಧತಿ, ಗೌರವವಿಲ್ಲದ ಅತಂತ್ರ ಬದುಕು, ವಿದ್ಯೆ, ಸ್ವಂತ ಭೂಮಿ, ಅಧಿಕಾರಗಳ ಕಲ್ಪನೆಯೂ ಬಾರದಂತಹ ಸ್ಥಿತಿಗಳೇ ಮೊದಲಾದ ಅಂದಿನ ಪರಿಸ್ಥಿತಿ ಈಗಿಲ್ಲ. ಉಡುವ ಬಟ್ಟೆ ಉಣ್ಣುವ ಆಹಾರದಲ್ಲಿ ಅವರವರ ಇಚ್ಛೆಗೂ ಈಗ ಬೆಲೆ ಬಂದಿದೆ. ಇವತ್ತು ದಲಿತನೊಬ್ಬ ಯಾರದೇ ಸರಿ ಸಮನಾಗಿ ನಿಂತು ಮಾತನಾಡಬಹುದು. ಕಾಲಿಗೆ ಚಪ್ಪಲನ್ನು ಧರಿಸಬಹುದು. ಇದೇ ರೀತಿ “ಬ್ರಾಹ್ಮಣರಲ್ಲೂ ಬಡವರಿಲ್ಲವಾ..” ಎನ್ನುವ ಅನೇಕ ಮೇಲ್ವರ್ಗದ ನವ ಪೀಳಿಗೆಗೆ ಇಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ನಡುವಿನ ವ್ಯತ್ಯಾಸಗಳ ಅರಿವೂ ಇಲ್ಲ.
ನನ್ನನ್ನೂ ಸೇರಿ ದೊಡ್ಡ ಬಂಗ್ಲೆ, ಆಧುನಿಕ ಕಾರು, ವಿಮಾನ ಪ್ರಯಾಣ, ಟುಸ್ ಪುಸ್ ಇಂಗ್ಲೀಷು, ದುಬಾರಿ ಧಿರಿಸುಗಳೆಲ್ಲವೂ ಶೋಷಿತ ಹಾಗು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಹೆಸರಲ್ಲಿ ಅಂಬೇಡ್ಕರ್ ಕೊಟ್ಟಂತಹ ಕೊಡುಗೆಗಳು. ಒಂದು ವೇಳೆ ಇಂತಹ ಪಲ್ಲಟದ ಪ್ರಕ್ರಿಯೆ ನಡೆಯದೇ ಇದ್ದಿದ್ದರೆ, ವಿದ್ಯೆಗೂ ಅವಕಾಶವಿರದೇ ನಾವೆಲ್ಲ ಯಾರೋ ಬಲಾಢ್ಯರ ಮನೆಯಲ್ಲಿ ಅವರು ಕೊಟ್ಟ ತಂಗಳು ತಿಂದು ಜೀತ ಮಾಡಿಕೊಂಡು ಅದರಲ್ಲೇ ಬದುಕಿನ ಸುಖ ಕಾಣುತ್ತಿದ್ದೇವೆನ್ನುವುದು ವಾಸ್ತವ. ಅಂಬೇಡ್ಕರ್ ಶೋಷಿತರ ಸಬಲೀಕರಣ ಹಾಗು ಸ್ವಾಭಿಮಾನದ ಬದುಕಿನ ಮುಂದಾಲೋಚನೆಯನ್ನಿಟ್ಟುಕೊಂಡು ನೀಡಿದ ಈ ಮೀಸಲಾತಿಯ ಅವಕಾಶವನ್ನು ಪಡೆದ ಮಂದಿ ಇಂದು ಅಂಬೇಡ್ಕರರ ಆ ಉದ್ದೇಶವನ್ನೇ ಮರೆತಂತಿದೆ. ಶೋಷಿತ ವರ್ಗಕ್ಕೆ ಯಾವುದೋ ಅನ್ಯಾಯವಾಗಿದೆ ಎಂದು ಎಲ್ಲೋ ಪ್ರತಿಭಟನೆ ಅಥವ ಪ್ರತಿರೋಧ ನಡೆದರೆ. ಆ ಪ್ರತಿಭಟನೆಯಲ್ಲಿ ಅಂದಿನ ಕೂಲಿನಾಲಿ ಬಿಟ್ಟುಕೊಂಡು ಬಂದ ಕೆಲವರು ಕಾಣಸಿಗುವರೇ ವಿನಹ ಮೀಸಲಾತಿಯ ಲಾಭ ಪಡೆದವರನ್ನು ಇಲ್ಲಿ ಹುಡುಕ ಬೇಕಷ್ಟೆ. ಕುದುರೆ ಮೇಲೆ ಮದುಮಗ ಕುಳಿತದ್ದಕ್ಕೆ, ಚಪ್ಪಲಿ ಹಾಕಿದ್ದಕ್ಕೆ ದಲಿತರ ಕೊಲೆ, ಉನ್ನಾವ್, ಹತ್ರಾಸ್ ನಂತಹ ಅಮಾನುಷ ಪ್ರಕರಣಗಳು ನಡೆದಾಗ ಈ ನವ ಬ್ರಾಹ್ಮಣರು ಬಹುತೇಕ ನಮಗದು ಸಂಬಂಧವೇ ಇಲ್ಲದಂತ ವಿಷಯ ಎಂಬಂತಿರುವುದುಂಟು. ಅಂಬೇಡ್ಕರ್ ಕೊಟ್ಟ ಮೀಸಲಾತಿ ಸೌಲಭ್ಯಗಳ ದೆಸೆಯಿಂದ ಮೇಲೆ ಬಂದ ಇಂತವರು ಶೋಷಿತ ಸಂವೇದನೆಗಳಿಗೆ ತುಂಬಾ ಕ್ಷೀಣವಾಗಿ ಸ್ಪಂದಿಸುವುದನ್ನು ನೋಡಿದಾಗ ಇವರುಗಳೆಲ್ಲ ಅಂಬೇಡ್ಕರ್ ರವರ ಮೀಸಲು ಆಶಯಗಳನ್ನು ಮರೆತಿದ್ದಾರೆಯೇ ಎಂಬ ಭಾವನೆ ಬಾರದಿರದು.
ಮೀಸಲಾತಿಯ ಹೆಸರಲ್ಲಿ ಅಂಬೇಡ್ಕರ್ ರವರದು ಯಾರೋ ಕೆಲವರನ್ನಷ್ಟೆ ಮೇಲೆತ್ತುವ ಉದ್ದೇಶವಾಗಿದ್ದಿರಲಿಲ್ಲ. ಈ ವರೆಗಿನ ಅವಕಾಶ ವಂಚಿತ ಸಮಾಜ ಈ ಮೂಲಕವಾದರೂ ಮುಂದುವರೆದು ಬಳಿಕ ಈ ಬೆಳವಣಿಗೆ ಅವರಿಂದಲೇ (ಫಲಾನುಭವಿ) ಸಾರ್ವತ್ರಿಕವಾಗಿ ಬೆಳೆಯಲಿ ಎಂಬುದು. ಮೀಸಲಾತಿ ಸೌಲಭ್ಯ ಪಡೆದಂತ ಮಂದಿ ಅವಕಾಶವಂಚಿತ ಇನ್ನುಳಿದವರ ಋಣದಲ್ಲೇ ಇರುತ್ತಾನೆಂಬುದನ್ನು ಮರೆಯದೇ ಕನಿಷ್ಟ ಪಕ್ಷ ಸಮುದಾಯದಲ್ಲಿ ಅನ್ಯಾಯವಾದಾಗ, ಸಾಮೂಹಿಕ ಸಮಸ್ಯೆಗಳು ಎದುರಾದಾಗ ಅದಕ್ಕೆ ಸ್ಪಂದಿಸುವ ಕೆಲಸವನ್ನಾದರೂ ಮಾಡಬೇಕು. ಮೀಸಲಾತಿಯ ದಲಿತ ಫಲಾನುಭವಿಗಳು ತಮ್ಮ ಸಿರಿವಂತಿಕೆಯನ್ನು ದೇಗುಲಗಳಿಗೆ, ಹೋಮ ಹವನ, ಹರಕೆ ಪೂಜೆಗಳಿಗೆ ಸುರಿಯುವ ಬದಲು ದಲಿತ ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಒಂದಂಶ ವಿನಿಯೋಗಿಸಿ ಈ ಋಣವನ್ನು ಕಮ್ಮಿಯಾಗಿಸಿಕೊಂಡರೆ ಈ ಮೂಲಕ ಅವಶ್ಯವುಳ್ಳವರು ಆರ್ಥಿಕ ದುಸ್ಥಿತಿಯಿಂದ ವಿದ್ಯಾಭ್ಯಾಸ ತೊರೆಯದೇ ಬದುಕಿನಲ್ಲಿ ಮುಂದೆ ಬಂದಾರು.
ಜಾತಿ ಗಣತಿಯ ಅಂಕಿ ಅಂಶಗಳಲ್ಲಿ ಕಂಡು ಬರುವಂತೆ ದಲಿತ ಸಮುದಾಯ ದೊಡ್ಡ ಸಂಖ್ಯೆಯದು ಎನ್ನುವ ಮಾತು ಕೇವಲ ಅರ್ಧ ಸತ್ಯ ಮಾತ್ರ. ಪರಿಶಿಷ್ಟ ಜಾತಿ ಮತ್ತು ಪಂಗಡ (scheduled caste / Scheduled tribes) ಎನ್ನುವುದು ಯಾವುದೋ ನಿರ್ದಿಷ್ಟ ನಿಯಮದಂತೆ ಸಾಮಾಜಿಕವಾಗಿ ವರ್ಗೀಕರಿಸಲ್ಪಟ್ಟಂತಹ ಸಮುದಾಯಗಳ ಒಂದು ಗುಂಪೇ ವಿನಃ ಸಾಮುದಾಯಿಕವಾಗಿ ಇವುಗಳು ಒಂದಲ್ಲ. ಅಂದರೆ ಉದಾ: ಪರಿಶಿಷ್ಟ ಜಾತಿ ಅಡಿಯಲ್ಲಿ ಬರುವ ಜಾತಿಗಳೆಲ್ಲ ಸಮಾಜದಲ್ಲಿ ಅವರದೇ ಜಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿರುತ್ತವೆಯಲ್ಲದೇ ಈ ಜಾತಿಗಳ ನಡುವೆ ಯಾವ ಕೊಡು ಕೊಳ್ಳುವಿಕೆಯ ಸಂಬಂಧವೂ ಇರದು. ದಲಿತ ಸಮುದಾಯದ ಈ ಪರಿಶಿಷ್ಟ (Scheduled) ಎನ್ನುವ ಪ್ರಿಫಿಕ್ಸ್ ಹಿಂದೆ Depressed classes (ಶೋಷಿತ ಸಮುದಾಯ) ಎಂದು ಕರೆಯಲಾಗುತ್ತಿದ್ದ ಒಂದು ವರ್ಗಕ್ಕೆ ಸರಕಾರವೇ ನೀಡಿದ ಸಾಮುದಾಯಿಕ ವರ್ಗೀಕೃತ ಗುರುತಷ್ಟೆ. ಈ ರೀತಿಯಲ್ಲಿ ದೇಶದ ಅಥವಾ ಆಯಾ ರಾಜ್ಯಗಳ ನಿಯಮಗಳಡಿಯಲ್ಲಿ ಬರುವ ಶೋಷಿತ ಸಮುದಾಯದ ಗುಂಪುಗಳು ಏನೇ, ಎಷ್ಟೇ ಅಥವಾ ಹೇಗೇ ಇದ್ದರೂ ಕೂಡ ಪರಿಶಿಷ್ಟ ಎಂಬ ಹೆಸರಲ್ಲಿ ಒಂದಾಗಿ ತೋರುತ್ತಿದ್ದವು.
ಈ ರೀತಿಯಲ್ಲಿ ವರ್ಗೀಕೃತಗೊಂಡ ದಲಿತ ಸಮುದಾಯದೊಳಗೂ ಸಾಮಾಜಿಕ ಹಾಗು ಐತಿಹಾಸಿಕ ಕಾರಣಗಳಿಂದ ಕೆಲವಾರು ಸಹಜ ತಾರತಮ್ಯಗಳಿವೆ. ಜನಸಂಖ್ಯಾ ಬಲದಲ್ಲಿಯಾಗಲೀ, ಸಾಮಾಜಿಕ ಸ್ಥಾನಮಾನಗಳ ವಿಚಾರದಲ್ಲಾಗಲೀ ಅನೇಕ ವ್ಯತ್ಯಾಸಗಳನ್ನು ಇಲ್ಲಿ ಕಾಣಬಹುದು. ಒಟ್ಟಾರೆ ದಲಿತರೇ ಆದರೂ ನಿಮ್ಮ ಜಾತಿಗಿಂತ ನಮ್ಮದು ಮೇಲು ಎಂಬ ಭಾವವಾಗಲೀ ಶೈಕ್ಷಣಿಕ, ರಾಜಕೀಯವಾಗಿ ಅವಕಾಶ ಗಿಟ್ಟಿಸಿಕೊಂಡ ವಿಚಾರದಲ್ಲಾಗಲೀ ಅನೇಕ ಅಸಮಾನತೆಗಳಿವೆ. ಇಂತಹ ಸಂದರ್ಭಗಳಲ್ಲಿ ದಲಿತರೊಳಗೇ ಇರುವ ಚಿಕ್ಕ ಪುಟ್ಟ ಸಮುದಾಯಗಳ, ಪ್ರಾತಿನಿಧ್ಯಕ್ಕಾಗಿ ಹೆಣಗುತ್ತಿರುವ ಸಮುದಾಯಗಳ, ಅಸ್ಪೃಶ್ಯರಲ್ಲೂ ಅಸ್ಪೃಶ್ಯರಾಗಿ ಪರಿಗಣಿಸಲ್ಪಡುವ ಸಮುದಾಯಗಳ ಉನ್ನತೀಕರಣದ ಚಿಂತನೆಯೂ ಕೂಡ ಇಲ್ಲಿ ಅತೀ ಅವಶ್ಯ. ಒಳ ಮೀಸಲಾತಿ ಎಂಬ ಪರಿಕಲ್ಪನೆಗೆ ಚಾಲನೆ ದೊರಕಿದ್ದು ಇದೇ ಹಿನ್ನೆಲೆಯಲ್ಲಿ.
ಮೀಸಲಾತಿ ವಿಚಾರಕ್ಕೆ ಸರಕಾರ ನೇರವಾಗಿ ಕೈ ಹಾಕಿದರೆ ಸಮಸ್ಯೆ ಎಂದು ಈ ತನಕ ಅನೇಕರಿಗೆ ಉದ್ಯೋಗದಾಯಕವಾಗಿದ್ದ ದೇಶದ ಹಿರಿಯ ಹಾಗು ಪ್ರಮುಖ ಸಂಸ್ಥೆ, ಕಾರ್ಯಾಲಯಗಳನ್ನೆಲ್ಲ ಖಾಸಗೀಕರಿಸಿ ಮೀಸಲಾತಿಯನ್ನು ಪರೋಕ್ಷವಾಗಿ ಇಲ್ಲವಾಗಿಸುವ ಹುನ್ನಾರ ಈಗಾಗಲೇ ಕಾರ್ಯರೂಪದಲ್ಲಿದೆ. ಒಳ ಮೀಸಲಾತಿಯ ಹೆಸರಲ್ಲಿ ದಲಿತರಲ್ಲೇ ಒಡಕು ಮೂಡಿಸಿ ಆ ಮೂಲಕ ದೇಶದ ಈ ಬೃಹತ್ ಜನಶಕ್ತಿಯನ್ನೇ ಒಡೆದು ದಲಿತರ ಹಂಗಿರದಂತ ತಮ್ಮ ರಾಜಕೀಯ ಮತ್ತು ಸಾಂಸ್ಕೃತಿಕ ಬೇಳೆ ಬೇಯಿಸಿಕೊಳ್ಳುವ ಚಿಂತನೆಯೂ ಕೂಡ ಇದರ ಹಿಂದಿರುವುದನ್ನು ಅನೇಕರು ಈಗಾಗಲೇ ಗಮನಿಸಿದ್ದಾರೆ.
ಶೋಷಿತ ಸಮುದಾಯಗಳ ಹಿತದೃಷ್ಟಿ ಮತ್ತು ಅಂಬೇಡ್ಕರರ ಆಶಯಕ್ಕನುಗುಣವಾಗಿ ಪ್ರತಿಯೊಬ್ಬನ ಏಳ್ಗೆಯನ್ನೂ ಗಮನದಲ್ಲಿಟ್ಟುಕೊಂಡು ಮೀಸಲಾತಿ, ಒಳ ಮೀಸಲಾತಿ ಮತ್ತು ಕೆನೆಪದರ ಚಿಂತನೆಯಲ್ಲಿನ ಸಕಾಲಿಕ ಬದಲಾವಣೆಗಳು ಅವಶ್ಯವಾಗಿ ನಡೆಯಬೇಕು. ಮೊನ್ನೆ ದತ್ತಿ ಇಲಾಖೆಗೆ ಒಳ ಪಟ್ಟಿರುವ ಒಂದು ದೇಗುಲದ ಕೆಲಸಕ್ಕಾಗಿ ಸರಕಾರಿ ಜಾಹೀರಾತೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಚಪ್ಪಲಿ ಕಾಯುವ ಕೆಲಸಕ್ಕೆ ವಿಶೇಷವಾದ ಮೀಸಲಾತಿಯನ್ನು ಕೊಟ್ಟಿದ್ದರು. ಗೊತ್ತಲ್ಲ, ಅದು ದಲಿತ ಸಮುದಾಯಕ್ಕೆ. ಏನೇ ಮೀಸಲಾತಿ ಕೊಟ್ಟರೂ ಜನರ ಚಿಂತನೆ ಸಮಾಜದಲ್ಲಿ ಬದಲಾಗದೇ ಯಾವ ಅಂಬೇಡ್ಕರ್ ಆಶಯಗಳೂ ಸುಲಭದಲ್ಲಿ ಜಾರಿಯಾಗಲಾರವು. ಶೋಷಿತ ವರ್ಗ ಅನಿವಾರ್ಯವಾಗಿ ನಡೆಸಿಕೊಂಡು ಬರುತ್ತಿದ್ದ ಅನಿಷ್ಟ ಮಲಹೊರುವ ಪದ್ಧತಿಯ ನಿರ್ಮೂಲನೆಗೆ ಎಷ್ಟೆಲ್ಲ ಸಮಸ್ಯೆಗಳು ಎದುರಾದವು. ಮಲ ಹೊರಲು, ಚಪ್ಪಲಿ ಕಾಯಲಷ್ಟೇ ದಲಿತರಿಗೆ ಮೀಸಲಾತಿ ಕೊಟ್ಟು ಭಾರತೀಯ ಸಮಾಜದ ಶಾಶ್ವತ ಮತ್ತು ಒರಿಜಿನಲ್ “ಕೆನೆಪದರ” ವಾದ ಬ್ರಾಹ್ಮಣ್ಯದಾಟಕ್ಕೆ ಶೋಷಿತ ವರ್ಗ ಬಲಿಯಾಗದೇ ಹೆಜ್ಜೆ ಇಡುವಂತಾಗಲಿ.
ಶಂಕರ್ ಸೂರ್ನಳ್ಳಿ
ಸಾಮಾಜಿಕ ಕಾರ್ಯಕರ್ತರು
ಇದನ್ನೂ ಓದಿ-‘ಕೆನೆಪದರ’ ನೀತಿ ಅನ್ವಯ; ದಲಿತರಿಗೆ ಮಾಡುವ ಅನ್ಯಾಯ