ಮಾಧ್ಯಮ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಾದ ಜರೂರು ಇದೆ. ಇಲ್ಲದಿದ್ದ ಪಕ್ಷದಲ್ಲಿ ಮನೆ-ಮನೆಯ ಹೆಣ್ಣುಮಕ್ಕಳು, ಸ್ನಿಗ್ಧ ಚೆಲುವು, ಬದುಕಿನ ಖಾಸಗಿ ಸುಂದರ ಕ್ಷಣಗಳೆಲ್ಲವೂ ಬಿಕರಿಯಾಗಿ ಹೆಣ್ಣುಮಕ್ಕಳು, ಅವರ ಬದುಕು ಸರಕಾಗಿ ಬಿಡುವ ಅಪಾಯಗಳಿವೆ. ವ್ಯಾವಹಾರಿಕವಾದ ಸಂವೇದನಾರಹಿತ ಮನಸ್ಸುಗಳಿಂದ ಭೀಕರವಾದ ಕೃತ್ಯಗಳು, ಮನುಕುಲ ನಾಚುವ, ತಲೆತಗ್ಗಿಸುವ, ಪೈಶಾಚಿಕ ಕೃತ್ಯಗಳು ಭವಿಷ್ಯದಲ್ಲಿ ನಡೆಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ – ಡಾ. ನಿಕೇತನ, ಪ್ರಾಧ್ಯಾಪಕರು.
ನೀಲಿ ಕಂಗಳ ಚೆಲುವೆ ಮೊನಾಲಿಸಾಳ ಬದುಕಿನ ಮೇಲೆ ಸಾಮಾಜಿಕ ಮಾಧ್ಯಮ ಜಗತ್ತು ಹೇರಿದ, ಮಾಡಿರುವ ದುಷ್ಪರಿಣಾಮ ನನ್ನನ್ನು ಈ ಲೇಖನ ಬರೆಯುವಂತೆ ಪ್ರೇರೇಪಿಸಿದೆ. ‘ಹೆಣ್ಣಿಗೆ ಸೌಂದರ್ಯವೇ ಶಾಪ’ ಎನ್ನುವ ರೂಢಿಮಾತಿದೆ. ಇಲ್ಲಿ ಮೊನಾಲಿಸಾಳ ದುಡಿದು ತಿನ್ನುವ ಕಾಯಕ ಸಿದ್ಧಾಂತದ ಸ್ವಾಭಿಮಾನದ ಬದುಕನ್ನು ಸಾಮಾಜಿಕ ಮಾಧ್ಯಮ ವೈರಲ್ ಮಾಡಿ ಹದಗೆಡಿಸಿದ ರೀತಿ ನಿಜವಾಗಿಯೂ ಅಕ್ಷಮ್ಯ ಅಪರಾಧವೇ ಆಗಿದೆ. ಈ ಹಿಂದೆ ಹಾಡಿಯ ಹುಡುಗನೊಬ್ಬನನ್ನು ಸಿನಿಮಾ ಜಗತ್ತಿಗೆ ಪರಿಚಯಿಸಿ, ಕೊನೆಗೆ ಹಾಡಿಗೆ ಅಟ್ಟಿ ನೇಣಿಗೆ ಶರಣಾಗುವಂತೆ ಮಾಡಿದ ಮಾಧ್ಯಮ ಜಗತ್ತಿನ ರಿಯಾಲಿಟಿ ಶೋಗಳ ದುಃಸ್ವಪ್ನ ನಮ್ಮ ಕಣ್ಣೆದುರಿಗೆ ಇರುವಾಗ, ಕೋಗಿಲೆ ಕಂಠದ ಹೆಣ್ಣೊಬ್ಬಳನ್ನು ಲತಾಮಂಗೇಷ್ಕರ್, ಆಶಾ ಬೋಂಸ್ಲೆಗಿಂತಲೂ ಮಿಗಿಲೆಂಬಂತೆ ಬಿಂಬಿಸಿ ಈ ಮಾಧ್ಯಮ ಜಗತ್ತು ಕೊನೆಗೆ ಕೈಬಿಟ್ಟಿರುವ ವಿದ್ಯಮಾನವೂ ನಮ್ಮ ಕಣ್ಣೆದುರಿಗೇ ಇದೆ. ಇದೇ ರೀತಿಯಾಗಿ ಹಲವಾರು ಅಮಾಯಕರ, ಮುಗ್ಧರ, ತಮ್ಮ ಪಾಡಿಗೆ ತಾವು ಬದುಕನ್ನು ಆನಂದಿಸಿ ದಿನಗಳೆಯುತ್ತಿರುವವರನ್ನು ರಾತ್ರೋರಾತ್ರಿಯಲ್ಲಿ ಮಾಧ್ಯಮ ಜಗತ್ತು ತನ್ನ ಕಬಂಧಬಾಹುಗಳಿಂದ ಸೆಲೆಬ್ರಿಟಿಗಳಂತೆ ಬಿಂಬಿಸಿ, ಅವರ ಬದುಕನ್ನು ಉತ್ತುಂಗಕ್ಕೆ ಏರಿಸಿದಂತೆ ಕಂಡರೂ ಅದರ ಆಳದಲ್ಲಿ ಅಡಗಿರುವ ವಿಕೃತಿಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತಿವೆ. ನಮ್ಮ ಮನುಕುಲದ ಇಂಥ ಅನರ್ಘ್ಯ ರತ್ನಗಳನ್ನು ಮತಿಭ್ರಮಣೆ, ಚಿತ್ತವಿಕಲತೆಗೆ, ಮನೋವ್ಯಾಧಿಗೆ ತಳ್ಳುತ್ತಿರುವ ನವಮಾಧ್ಯಮ ಜಗತ್ತಿನ ಕಬಂಧಬಾಹುಗಳಿಂದ ನಾವಿಂದು ಅವರನ್ನು ಬಹಳ ಎಚ್ಚರಿಕೆಯಿಂದ ಬಿಡಿಸಬೇಕಾಗಿದೆ.
ನಮ್ಮ ಸಂವಿಧಾನ ಕೊಡಮಾಡಿರುವ ಮೂಲಭೂತ ಹಕ್ಕುಗಳಾದ ಸ್ವಾತಂತ್ರ್ಯ, ಸಮಾನತೆ, ಪ್ರತಿಯೊಬ್ಬರೂ ಆತ್ಮಾಭಿಮಾನದಿಂದ, ಘನತೆಯಿಂದ, ಧೈರ್ಯ-ಸ್ಥೈರ್ಯದಿಂದ ಬದುಕುವ ಹಕ್ಕನ್ನು ನವಮಾಧ್ಯಮ ಜಗತ್ತು ಮಾನವೀಯ ಸಂವೇದನೆಗಳನ್ನು ಎಷ್ಟು ನಿರ್ದಯವಾಗಿ ಹಿಸುಕುತ್ತಿದೆ ಎಂಬುದನ್ನು ಇಂಥ ವಿದ್ಯಮಾನಗಳಿಂದ ನಾವು ಅರಿಯಲು ಸಾಧ್ಯ. ಹೀಗಾಗಿ ಜಾಗೃತವಾಗಿರುವ, ಮನುಷ್ಯತ್ವವನ್ನು ಉಸಿರಾಡುತ್ತಿರುವ, ಮಾನವೀಯತೆ ಇರುವ ಮನುಷ್ಯರೆಲ್ಲರೂ ಒಗ್ಗಟ್ಟಾಗಿ ಇಂಥ ವಿದ್ಯಮಾನಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕಾಗಿದೆ. ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಕ್ರಿಯಾಶೀಲವಾಗಿರುವವರೆಲ್ಲರೂ ಈ ಸಂವೇದನೆಗಳನ್ನು ಅರ್ಥೈಸಿಕೊಂಡು ಒಕ್ಕೊರಲಿನಿಂದ ಇದನ್ನು ಪ್ರತಿಭಟಿಸಿ, ಮುಂದೆ ಇಂಥ ವಿದ್ಯಮಾನಗಳು ಜರುಗದಂತೆ ಎಚ್ಚರವಹಿಸಬೇಕಾಗಿದೆ.
ಮಾಧ್ಯಮ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಾದ ಜರೂರು ಇದೆ. ಇಲ್ಲದಿದ್ದ ಪಕ್ಷದಲ್ಲಿ ಇಂಥ ಅಮಾನುಷ, ಸಂವೇದನಾರಹಿತ ಕೇವಲ ಹೊರಗನ್ನು ಅರಿಯುವಂಥ ಮನಸ್ಸುಗಳಿಂದ ಮನೆ-ಮನೆಯ ಹೆಣ್ಣುಮಕ್ಕಳು, ಸ್ನಿಗ್ಧ ಚೆಲುವು, ಬದುಕಿನ ಖಾಸಗಿ ಸುಂದರ ಕ್ಷಣಗಳೆಲ್ಲವೂ ಬಿಕರಿಯಾಗಿ ಹೆಣ್ಣುಮಕ್ಕಳು, ಅವರ ಬದುಕು ಸರಕಾಗಿ ಬಿಡುವ ಅಪಾಯಗಳಿವೆ. ವ್ಯಾವಹಾರಿಕವಾದ ಸಂವೇದನಾರಹಿತ ಮನಸ್ಸುಗಳಿಂದ ಭೀಕರವಾದ ಕೃತ್ಯಗಳು, ಮನುಕುಲ ನಾಚುವ, ತಲೆತಗ್ಗಿಸುವ, ಪೈಶಾಚಿಕ ಕೃತ್ಯಗಳು ಭವಿಷ್ಯದಲ್ಲಿ ನಡೆಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
‘ವನಸುಮದೊಳೆನ್ನ ಜೀವ ವಿಕಸಿಸುವಂತೆ’ ಎಂಬ ಕವಿವಾಣಿಯಂತೆ ಮನಸುಮಗಳಂತೆ ತಮ್ಮ ಕಾಡು-ಹಾಡಿ-ನಾಡಿನಲ್ಲಿ ಬದುಕನ್ನು ತಮ್ಮದೇ ಆದ ಸುಲಲಿತ ಸುಮನೋಹರ ರೀತಿಯಲ್ಲಿ ಕಟ್ಟಿಕೊಂಡು ತಮ್ಮಷ್ಟಕ್ಕೇ ತಮ್ಮ ಪಾಡಿಗೆ ಸಂತಸದ, ಸ್ವಾಭಿಮಾನದ ಬದುಕಿನೊಂದಿಗೆ ಕಾಯಕ ಸಿದ್ಧಾಂತದಂತೆ ದುಡಿದು ತಿನ್ನುತ್ತಿರುವ ಹೆಣ್ಣುಮಕ್ಕಳ ಬದುಕನ್ನು ಸಂತೆಯ ಸರಕಿನಂತೆ ಬಿಕರಿಗಿಟ್ಟು ಚಂದ ನೋಡುತ್ತಿರುವ ಈ ನವ ಮಾಧ್ಯಮಗಳ ಪೈಶಾಚಿಕ, ಅಮಾನವೀಯ ಕೃತ್ಯಕ್ಕೆ ಕಡಿವಾಣವನ್ನು ಹಾಕಲೇ ಬೇಕಾಗಿದೆ. ನಾಡಿನಲ್ಲಿರುವ ಕನಿಷ್ಠ ಮನುಷ್ಯತ್ವದ ಸಂವೇದನೆಯನ್ನು ಹೊಂದಿರುವ ಸರ್ವರೂ ಇದಕ್ಕೆ ಒಕ್ಕೊರಲಿನಿಂದ ಕೈ ಜೋಡಿಸಬೇಕಾಗಿದೆ. ನಮ್ಮೆಲ್ಲರ ಮನಸ್ಸನ್ನು ಹದಗೊಳಿಸಬೇಕಾಗಿದೆ. ಆಗ ಮಾತ್ರ ಭವಿಷ್ಯದಲ್ಲಿ ಹೆಣ್ಣುಮಕ್ಕಳು ಸ್ವಾಭಿಮಾನದಿಂದ, ಸಂತಸದಿಂದ ಉಸಿರಾಡಬಹುದಾಗಿದೆ. ನಮ್ಮೆಲ್ಲರ ಬದುಕಿನ ಖಾಸಗಿ ಸುಂದರ ಕ್ಷಣಗಳನ್ನು ವೈಯಕ್ತಿಕವಾಗಿ ಆನಂದಿಸಿ, ಸಾರ್ವತ್ರಿಕವಾಗಿ ಇನ್ನೊಬ್ಬರ ವೈಯಕ್ತಿಕ ಬದುಕಿನ ಘನತೆಯನ್ನು ಅರ್ಥ ಮಾಡಿಕೊಂಡು ಸಂತಸದಿಂದ ಸಹಬಾಳ್ವೆಯ ಸಮಾಜದಲ್ಲಿ ನಾವು ಉಸಿರಾಡಲು ಸಾಧ್ಯವಾಗಬಹುದಾಗಿದೆ
ಡಾ. ನಿಕೇತನ
ಪ್ರಾಧ್ಯಾಪಕರು
ಮೊ: 91641 65883
ಇದನ್ನೂ ಓದಿ- ಹೊಸ ಬೆಳಕು..