ಟೆಸ್ಲಾ ಕಂಪನಿ ಮಾಲೀಕ ಎಲಾನ್ ಮಸ್ಕ್ ಅವರು ವಿದ್ಯುನ್ಮಾನ ಮತಯಂತ್ರ (Electronic Voting Machine- EVM) ಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವುದು ಭಾರತದಲ್ಲಿ ಭಾರೀ ಚರ್ಚೆಗೆ ಎಡೆಮಾಡಿದೆ. ಭಾರತ ಚುನಾವಣಾ ಆಯೋಗ(ECI) ವೇ ಮಧ್ಯಪ್ರವೇಶಿಸಿದ್ದು, ಎಲಾನ್ ಮಸ್ಕ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಮಾತ್ರವಲ್ಲದೆ `ಎಲಾನ್ ಮಸ್ಕ್ ಅವರೇ ಭಾರತಕ್ಕೆ ಬನ್ನಿ, ನಾವು ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲು ನಾವು ಸಿದ್ಧರಿದ್ದೇವೆ” ಎಂದು ಸವಾಲು ಹಾಕಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಚುನಾವಣಾ ಆಯೋಗ, ಇದು ಊಹಾಪೋಹಗಳಿಂದ ಕೂಡಿದ ಅಸಂಬದ್ಧ ಮತ್ತು ಮತ್ತು ಭಾರತೀಯ ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಕೆಡಿಸುವ ಪ್ರಯತ್ನವಾಗಿದೆ. ಎಲಾನ್ ಮಸ್ಕ್ ಅವರೇ ಈ ಬಗ್ಗೆ ನಾವು ನಿಮಗೆ ಸವಾಲು ಹಾಕುತ್ತೇವೆ. ಭಾರತಕ್ಕೆ ಬನ್ನಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮಹಾ ಚುನಾವಣೆಯಲ್ಲಿ ಬಳಸಿರುವ ಇವಿಎಂಗಳನ್ನು ಹ್ಯಾಕ್ ಮಾಡಲ ಸಾಧ್ಯ ಇಲ್ಲ ಎಂದು ಪ್ರಾತ್ಯಕ್ಷಿಕೆ ನೀಡಲು ಸಿದ್ದರಿದ್ದೇವೆ ಎಂದು ಪಂಥಾಹ್ವಾನ ನೀಡಿದೆ.
ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಸ್ಕ್ ಹೇಳಿಕೆಯ ಪರವಾಗಿ ನಿಂತಿವೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ , ಅಸೋಸಿಯೇಟೆಡ್ ಪ್ರೆಸ್ ಪ್ರಕಾರ ಪೋರ್ಟೊ ರಿಕೊದ ಪ್ರಾಥಮಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ ಸಂಬಂಧಿಸಿ ನೂರಾರು ಅಕ್ರಮಗಳು ನಡೆದಿವೆ. ಅದೃಷ್ಟವಶಾತ್, ಪೇಪರ್ ಟ್ರಯಲ್ ಇದ್ದುದರಿಂದ ಸಮಸ್ಯೆಯನ್ನು ಗುರುತಿಸಿ ಮತ ಎಣಿಕೆಗಳನ್ನು ಸರಿಪಡಿಸಲಾಯಿತು. ಅದೇ ಪೇಪರ್ ಟ್ರಯಲ್ ಇಲ್ಲದ ನ್ಯಾಯವ್ಯಾಪ್ತಿಯಲ್ಲಿ ಏನಾಗುತ್ತದೆ. ಚುನಾವಣೆಗಳಲ್ಲಿ ಇಲೆಕ್ಟ್ರಾನಿಕ್ ಹಸ್ತಕ್ಷೇಪಗಳನ್ನು ತಪ್ಪಿಸಲು ನಾವು ಬ್ಯಾಲೆಟ್ ಪೇಪರ್ ಗಳಿಗೆ ಹಿಂದುರುಗಬೇಕು ಎಂದು ತಿಳಿಸಿದ್ದರು.
ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ್ದ ಎಲಾನ್ ಮಸ್ಕ್ ಅವರು, ವಿದ್ಯುನ್ಮಾನ ಮತಯಂತ್ರಗಳನ್ನು ತೊಲಗಿಸಬೇಕು. ಮಾನವರಿಂದ ನಿರ್ಮಿತವಾದ ಇವಿಎಂಗಳು ಮನುಷ್ಯರಿಂದ ಅಥವಾ ಕೃತಕ ಬುದ್ಧಿಮತ್ತೆ(AI) ನಿಂದ ಹ್ಯಾಕ್ ಆಗುವ ಅಪಾಯ ಕಡಿಮೆ ಇದ್ದರೂ ಫಲಿತಾಂಶ ಬದಲಿಸುವ ಸಾಧ್ಯತೆ ಇದ್ದೇ ಇದೆ ಎಂದು ತಿಳಿಸಿದ್ದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಂತೂ ಇವಿಎಂಗಳ ಬಗ್ಗೆ ತೀವ್ರ ಹರಿಹಾಯ್ದಿದ್ದು ಅದು ಬ್ಲಾಕ್ ಬಾಕ್ಸ್ ಇದ್ದಂತೆ ಅವುಗಳನ್ನು ಪರೀಕ್ಷಿಸಲು ಯಾರಿಗೂ ಅವಕಾಶ ಇಲ್ಲದಂತಾಗಿದೆ ಎಂದು ಆರೋಪಿಸಿದ್ದರು.