ಧರ್ಮಸ್ಥಳದಲ್ಲಿ ಹೂತ ಶವಗಳಿಗೆ ಸಾಕ್ಷ್ಯ ! ಪ್ರತ್ಯಕ್ಷದರ್ಶಿಗಳು ನಾಪತ್ತೆ, ಹೆಣ ಕೇಳಿದವರಿಗೆ ಚಿತ್ರಹಿಂಸೆ !

Most read

ಧರ್ಮಸ್ಥಳದಲ್ಲಿ ಹೂತು ಹೋದ ನೂರಾರು ಶವಗಳ ಬಗ್ಗೆ ಯಾರೋ ಹೇಳುವುದಲ್ಲ, ಕಪೋಲಕಲ್ಪಿತ ಕಥೆಯೂ ಅಲ್ಲ. ವಿಧಾನಸಭೆಯ ದಾಖಲೆಗಳಲ್ಲೇ ಧರ್ಮಸ್ಥಳದಲ್ಲಿ ಹೂತ ಶವಗಳ ಬಗ್ಗೆ ಉಲ್ಲೇಖವಿದೆ.  ಇದಕ್ಕಿಂತ ಸಾಕ್ಷ್ಯ ಬೇಕೇ? – ನವೀನ್ ಸೂರಿಂಜೆ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಸದ್ದು ಗದ್ದಲ-ವಿವಾದಗಳೇ ಇಲ್ಲದೇ ಹೂತು ಹಾಕಲು ಹೇಗೆ ಸಾಧ್ಯ ? ನೂರಾರು ಶವಗಳ ಪೈಕಿ ಬಹುತೇಕರು ಭಕ್ತರು ಮತ್ತು ಪ್ರವಾಸಿಗರೇ ಆಗಿರುತ್ತಾರೆ. ಹಾಗೊಂದು ವೇಳೆ ನೂರಾರು ಭಕ್ತರು-ಪ್ರವಾಸಿಗರು ನಾಪತ್ತೆಯಾಗಿದ್ದರೆ ಅವರ ಕುಟುಂಬದವರು ಧರ್ಮಸ್ಥಳ ಪೊಲೀಸ್ ಠಾಣೆಗೆ  ಹೋಗಿ ಕೇಳುವುದಿಲ್ಲವೇ ? ಅವರ ಮನೆಯವರು ಪೊಲೀಸ್ ಠಾಣೆಗೆ ಹೋಗಿ ತನ್ನ ಮಗ/ಮಗಳನ್ನು ಹುಡುಕಿ ಕೊಡಿ ಎಂದೋ, ಮಗ/ಮಗಳ ಶವವನ್ನು ನಮಗೆ ಹಸ್ತಾಂತರ ಮಾಡಿ ಎಂದೋ ಗದ್ದಲ ಎಬ್ಬಿಸಿರುವುದಿಲ್ಲವೇ ? ಇಂತಹ ಯಾವ ಘಟನೆಗಳು ಯಾಕೆ ಈವರೆಗೂ ವರದಿಯಾಗಿಲ್ಲ ಎಂದು ಹಲವರು ಪ್ರಾಕ್ಟಿಕಲ್ ಆಗಿರುವ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಶವಗಳನ್ನು ಕುಟುಂಬಸ್ಥರು ಕೇಳಿದರೆ ಅವರನ್ನು ಲಾಕಪ್ಪಿಗೆ ಹಾಕಿ ಹಿಂಸೆ ಮಾಡಲಾಗುತ್ತಿದೆ. ತನ್ನ ಮಗಳ ಶವ ಕೊಡಿ ಎಂದು ವೃದ್ಧ ತಂದೆ ತಾಯಿಯೇನಾದರೂ ಪೊಲೀಸ್ ಠಾಣೆಗೆ ಹೋದರೆ ಆ ವೃದ್ಧರನ್ನೂ ಅಂಗಿ ಬಿಚ್ಚಿಸಿ ಚಡ್ಡಿಯಲ್ಲಿ ಲಾಕಪ್ಪಿನಲ್ಲಿ ಹಾಕಲಾಗುತ್ತದೆ. ಮಲಮೂತ್ರ ಮಾಡುವುದಕ್ಕೂ ಅವಕಾಶ ಕೊಡದೇ ಹಲ್ಲೆ ನಡೆಸಲಾಗುತ್ತದೆ. ಕೊನೆಗೆ ಜೀವ ಉಳಿದರೆ ಸಾಕೆಂದು ಮಗ/ಮಗಳ ಶವದ ವಿಷಯವನ್ನೇ ಮರೆತು ಊರಿಗೆ ಬರಬೇಕಾಗುತ್ತದೆ. ಶವವನ್ನು ವಿಚಾರಿಸಲು ಹೋದವರೂ ಕೂಡಾ ನಾಪತ್ತೆಯಾಗುತ್ತಾರೆ. ಇದು ಕಾಲ್ಪನಿಕ ವಿಮರ್ಶೆಯಲ್ಲ. ಪೊಲೀಸರೋ, ಧರ್ಮಸ್ಥಳದವರು ಅಕ್ರಮವಾಗಿ ಧಫನ ಮಾಡಿದ ಶವಗಳು ಮತ್ತು ನಾಪತ್ತೆಯಾದವರ ಬಗ್ಗೆ 31 ಆಗಸ್ಟ್ 1983 ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆಯಾಗಿತ್ತು.

ಚರ್ಚೆ ಯಥಾವತ್ತು ಹೀಗಿದೆ :

ವಿಷಯ : ಧರ್ಮಸ್ಥಳದಲ್ಲಿ ನದಿಯಲ್ಲಿ ಬಿದ್ದು ಸತ್ತುಹೋದ ಎರಡು ಶವಗಳನ್ನು ಪೊಲೀಸರು ದಫನ್ ಮಾಡಿರುವ ಬಗ್ಗೆ.

ಶಂಕರರೆಡ್ಡಿ (ಶಿರಗುಪ್ಪ ಶಾಸಕರು) : ಮಾನ್ಯ ಅಧ್ಯಕ್ಷರೇ, ನಮ್ಮ ಶಿರಗುಪ್ಪ ತಾಲ್ಲೂಕಿಗೆ ಸೇರಿದ ವೆಂಕೋಬರಾವ್ ಎನ್ನುವವರ ಪುತ್ರ ಮತ್ತು ಆತನ ಸ್ನೇಹಿತರು ತೀರ್ಥಯಾತ್ರೆಗೆಂದು ಹೋದಾಗ ಧರ್ಮಸ್ಥಳದ ನದಿಯಲ್ಲಿ ಇಬ್ಬರೂ ಬಿದ್ದು ಸತ್ತು ಹೋದಂಥ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಹೆಣಗಳನ್ನು ಮೇಲೆ ತೆಗೆದು ಯಾರಿಗೂ ತಿಳಿಸದೆ ದಫನ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದಾದ ಒಂದು ತಿಂಗಳ ನಂತರ ವಿಷಯವನ್ನು ತಿಳಿದ ಶ್ರೀ ವೆಂಕೋಬರಾವ್ ಅವರು ಧರ್ಮಸ್ಥಳಕ್ಕೆ ಹೋಗಿ ಅಲ್ಲಿನ ಪೊಲೀಸರಲ್ಲಿ ವಿಚಾರ ಮಾಡಿ, ‘ಈ ಸುದ್ದಿಯನ್ನು ಪತ್ರಿಕೆಗಳ ಮತ್ತು ರೇಡಿಯೋ ಮೂಲಕ ಪ್ರಸಾರ ಮಾಡಿದ್ದರೆ ನನಗೆ ಕೂಡಲೇ ತಿಳಿಯುತ್ತಿತ್ತು’ ಎಂದು ಹೇಳಿದಾಗ ಅಲ್ಲಿದ್ದ ಹೆಡ್-ಕಾನ್ಸ್ ಟೇಬಲ್, ‘ನೀನು ಯಾರೋ ಮಗನೇ, ಇದನ್ನೆಲ್ಲಾ ಹೇಳಲು’ ಎಂದು ಆಡಬಾರದ ಮಾತುಗಳನ್ನು ಆಡಿ ಅವರ ಕಪಾಳಕ್ಕೆ ಹೊಡೆದು ಬಡಿದು ಮಾಡಿದ್ದೇ ಅಲ್ಲದೆ, ಅವರ ಜನಿವಾರವನ್ನೂ ಸಹ ಹರಿದು ಹಾಕಿದ ನಂತರ ಆ ವೃದ್ಧರನ್ನು ರಾತ್ರಿಯೆಲ್ಲಾ ಲಾಕಪ್‌ನಲ್ಲಿಟ್ಟಿದ್ದಾರೆ. ಅವರ ಬಳಿಯಲ್ಲಿದ್ದ 250 ರೂಪಾಯಿಗಳನ್ನೂ ಮತ್ತು ರಿಸ್ಟ್-ವಾಚನ್ನು ಸಹ ಕಿತ್ತುಕೊಂಡು ಈ ಪ್ರಕರಣವನ್ನು ಯಾರ ಬಳಿಯಾದರೂ ಹೇಳಿದರೆ ಮತ್ತೆ ಪೊಲೀಸರು ಕಾಟ ಕೊಡುವುದಾಗಿ ಹೇಳಿ ಅವರನ್ನು ಹೆದರಿಸಿ ಮುಚ್ಚಳಿಕೆಯನ್ನು ಸಹ ಅವರಿಂದ ಬರೆಸಿಕೊಂಡು ಹೊರಗೆ ಬಿಟ್ಟಿದ್ದಾರೆ. ಇಷ್ಟೆಲ್ಲಾ ನಡೆದ ನಂತರ ನಾನು ಈ ವಿಷಯದ ಬಗ್ಗೆ ಒಂದು ಪತ್ರವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ 2 ತಿಂಗಳ ಹಿಂದೆ ಬರೆದೆ. ಆದರೆ ಅವರಿಂದ ಸೌಜನ್ಯಕ್ಕಾದರೂ ಈ ವಿಷಯವನ್ನು ಪರಿಶೀಲನೆ ಮಾಡುತ್ತೇವೆಂದು ಹೇಳುವ ಒಂದು ಉತ್ತರ ನನಗೆ ಬರಲಿಲ್ಲ. ಆದ್ದರಿಂದ ಈ ಬಗ್ಗೆ ಇಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ಶಿವಮೂರ್ತಿ(ಶಾಸಕರು) : ಮಾನ್ಯ ಅಧ್ಯಕ್ಷರೇ,  ವೆಂಕೋಬರಾವ್ ಅವರು ತನ್ನ ಮಗ ಕಳೆದ ಒಂದು ತಿಂಗಳಿನಿಂದ ಎಲ್ಲಿಗೆ ಹೋದ ಎಂಬ ವಿಚಾರ ಆತನ ಸ್ನೇಹಿತರಿಂದಲೂ ತಿಳಿಯದಿದ್ದಾಗ ಒಂದು ದಿನ ಸತ್ತು ಹೋಗಿರುವ ವಾರ್ತೆ ಬರುತ್ತದೆ. ಆನಂತರ ಇವರು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಹೋಗಿ ವಿಚಾರ ಮಾಡಿದಾಗ, ಜನರಿಗೆ ರಕ್ಷಣೆ ಕೊಡುವಂತಹ ಅಧಿಕಾರಿಗಳೇ ಮಗನನ್ನು ಕಳೆದುಕೊಂಡ ತಂದೆಗೆ ಸೂಕ್ತ ಉತ್ತರವನ್ನೂ ಸಹ ಹೇಳುವ ಒಂದು ಸೌಜನ್ಯವನ್ನು ತೋರಿಸದೆ ಅವರ ಅಂಗಿಯನ್ನು ಬಿಚ್ಚಿಸಿ ಅಲ್ಲಿದ್ದ ಹೆಡ್- ಕಾನ್ಸ್‌ ಟೇಬಲ್ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ರಾತ್ರಿಯೆಲ್ಲಾ ಪೊಲೀಸ್ ಕಸ್ಟಡಿಯಲ್ಲಿಯೇ ಇಟ್ಟುಕೊಂಡು ಮಲಮೂತ್ರ ಮಾಡುವುದಕ್ಕೂ ಸಹ ಬಿಟ್ಟಿಲ್ಲ ಮತ್ತು ಕುಡಿಯಲು ನೀರನ್ನೂ ಸಹ ಕೊಟ್ಟಿಲ್ಲ. ಇಂತಹ ಅನೇಕ ಪ್ರಕರಣಗಳಲ್ಲಿ ಪೊಲೀಸರು ಹದ್ದುಮೀರಿ ನಡೆದುಕೊಳ್ಳುವಂತಹ ಪ್ರವೃತ್ತಿಯನ್ನು ಕರ್ನಾಟಕದ ಜನತೆ ಬಹಳ ಗಂಭೀರವಾಗಿ ವಿಚಾರ ಮಾಡುತ್ತಿದ್ದಾರೆ. ಸತ್ತ ಮಗನ ಬಗ್ಗೆ ಕೇಳಲು ಹೋದಾಗ ಈ ರೀತಿ ವರ್ತನೆ ಮಾಡಿದ್ದು ಸರಿಯೇ ಎಂಬ ಬಗ್ಗೆ ಸರ್ಕಾರದವರು ಉತ್ತರ ಕೊಡಬೇಕು.

ವಸಂತ ಬಂಗೇರ(ಬೆಳ್ತಂಗಡಿ ಶಾಸಕರು) : ಮಾನ್ಯ ಅಧ್ಯಕ್ಷರೇ, ಈ ಪ್ರಕರಣ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ವೆಂಕೋಬರಾವ್ ಅವರು ತನ್ನ ಮಗನು ಸತ್ತ ಬಗ್ಗೆ ವಿಚಾರಣೆ ಮಾಡಲು ಧರ್ಮಸ್ಥಳದ ಔಟ್ ಪೋಸ್ಟ್ ಪೊಲೀಸ್ ಸ್ಟೇಷನ್‌ಗೆ ಹೋದಾಗ ಅಲ್ಲಿದ್ದ ಹೆಡ್‌ ಕಾನ್ಸ್‌ ಟೇಬಲ್ ಸರಿಯಾದ ಉತ್ತರ ಕೊಡದೆ ಕೇಳಲು ಹೋದವರನ್ನು ಹೊಡೆದು ಅವರ ಜನಿವಾರವನ್ನು ಕಿತ್ತುಹಾಕಿ ಲಾಕಪ್‌ನಲ್ಲಿ ಹಾಕಿ ಮಾರನೇ ದಿವಸ ಹೊರಗೆ ಬಿಟ್ಟಿದ್ದಾರೆ. ಇವರ ಮಗನ ಹತ್ತಿರವಿದ್ದ ಟ್ರಾನ್ಸಿಸ್ಟರ್ ರೇಡಿಯೋ, ಟೇಪ್-ರೆಕಾರ್ಡರ್, ವಾಚ್ ಮುಂತಾದ ಯಾವ ವಸ್ತುಗಳನ್ನೂ ಸಹ ವಾಪಸ್‌ ಕೊಟ್ಟಿಲ್ಲ. ಧರ್ಮಸ್ಥಳಕ್ಕೆ ಇವರ ಮಗ ಹೋದಾಗ 4 ಜನರು ಸೇರಿಕೊಂಡು ಒಂದು ರೂಮನ್ನು ಪಡೆದಿದ್ದರು. ಈ 4 ಜನರಲ್ಲಿ ಇಬ್ಬರು ನದಿಗೆ ಬಿದ್ದು ಸತ್ತ ಮೇಲೆ ಉಳಿದ ಇಬ್ಬರು ಯಾರು, ಎಲ್ಲಿಗೆ ಹೋದರು ಎಂಬುದನ್ನು ವಿಚಾರಣೆ ಮಾಡಲು ಹೋದಾಗ ಪೊಲೀಸರು ಪೆಟ್ಟು ಕೊಟ್ಟಿದ್ದಾರೆ. ಸರ್ಕಾರದವರು ಮೊದಲು ಈ ಪೊಲೀಸರ ದೌರ್ಜನ್ಯ ವನ್ನು ನಿಲ್ಲಿಸಬೇಕು. ಈ ಹೆಡ್ ಕಾನ್ಸ್ ಟೇಬಲನ್ನು ಮೊದಲು ಅಮಾನತ್ತಿನಲ್ಲಿಟ್ಟು ಈ ಪ್ರಕರಣವನ್ನು ತನಿಖೆ ಮಾಡಬೇಕೆಂದು ತಮ್ಮ ಮೂಲಕ ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುತ್ತೇನೆ.

ಎಸ್. ಬಂಗಾರಪ್ಪ(ವಿರೋಧ ಪಕ್ಷದ ನಾಯಕರು) : ಮಾನ್ಯ ಅಧ್ಯಕ್ಷರೆ, ಮಾನ್ಯ ಸದಸ್ಯರುಗಳು ವಿವರಣೆ ಕೊಟ್ಟಿದ್ದಾರೆ. ನಾನು ಪುನಃ ವಿವರಣೆ ಕೊಡಲಿಕ್ಕೆ ಹೋಗುವುದಿಲ್ಲ. ಉದ್ದೇಶವೇನೆಂದರೆ ತಂದೆ ಮಗನನ್ನು ಕಳೆದುಕೊಂಡು ಪೊಲೀಸ್ ಸ್ಟೇಷನ್‌ಗೆ ಹೋದಾಗ ಅವರು ಅನುಕಂಪ ವ್ಯಕ್ತಪಡಿಸಬೇಕಾಗಿತ್ತು. ಮಗ ಸಾವಿಗೀಡಾದ  ದುರಂತ ನಡೆದದ್ದು ತಂದೆತಾಯಿಗಳಿಗೆ ಗೊತ್ತಿಲ್ಲ. ಆತ ಸತ್ತ ವಿಷಯವನ್ನು ರೇಡಿಯೋ ಮೂಲಕ ಬಿತ್ತರಿಸಬೇಕಾಗಿತ್ತು. ಪತ್ರಿಕೆಗಳ ಮೂಲಕ ಬರೆಸಬೇಕಾಗಿತ್ತು. ಈ ರೀತಿ ಮಾಡಲಿಕ್ಕೆ ಪೊಲೀಸ್ ಇಲಾಖೆಯಲ್ಲಿ ಕಾನೂನು ಇದೆ. ಅವರು ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಗಳು ಬಳ್ಳಾರಿಗೆ ಹೋಗಿದ್ದಾಗ ಅವರನ್ನು ಕಂಡು ಅರ್ಜಿ ಕೊಡಲು ಸತ್ತವನ ತಂದೆ ಕಾಯ್ದರು, ಆದರೆ, ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಯಾರೂ ಭೇಟಿ ಮಾಡುವ ಹಾಗೆ ಇಲ್ಲವೆಂದು ಹೇಳಿದಾಗ, ಆತ ಅರ್ಜಿಯನ್ನು ಬೆಂಗಳೂರಿಗೆ ಪೋಸ್ಟ್ ಮೂಲಕ ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಿದ್ದಾನೆ. ಆ ಅರ್ಜಿ ನಿಮ್ಮ ಕಛೇರಿಗೆ ದಿನಾಂಕ 27-7-1983 ರಂದು ಬಂದು ತಲುಪಿದೆ. ಅದರ ರಶೀತಿ ಆತನಿಗೆ ಹೋಗಿದೆ. ಮಗನನ್ನು ಕಳೆದುಕೊಂಡಂತಹ ವಿಚಾರ ತಂದೆಗೆ ಗೊತ್ತಾಗಿಲ್ಲ. ಇದು ಏತಕ್ಕೆ ಆಯಿತು ? ಮಗನನ್ನು ಕಳೆದುಕೊಂಡ ತಂದೆತಾಯಿಗಳ ಗೋಳನ್ನು ನೋಡಿದರೆ ಎಲ್ಲರಿಗೂ ಅರ್ಥವಾಗುತ್ತದೆ. ಆತ ತಮ್ಮ ಕಛೇರಿಗೆ ಅರ್ಜಿ ಕಳುಹಿಸಿ ಒಂದು ತಿಂಗಳ ಮೇಲಾಗಿದೆ, ವಿಚಾರ ಏನೆಂದು ಗೊತ್ತಿಲ್ಲ. ಆತ ಕಳುಹಿಸಿದ ಅರ್ಜಿಗೆ ಉತ್ತರ ಕಳುಹಿಸುವ ಸೌಜನ್ಯ ನೀವು ಏತಕ್ಕೆ ತೋರಿಸಿಲ್ಲ?. ಸದನಕ್ಕೆ ಉತ್ತರ ಕೊಡಬೇಕಾಗುತ್ತದೆ. ಪೊಲೀಸ್ ಅಧಿಕಾರಿಗಳ ಮೇಲೆ ಏನು ಕ್ರಮ ತೆಗೆದುಕೊಂಡಿದ್ದೀರಿ ? ಇಲಾಖೆ ರಕ್ಷಣೆ ಕೊಡುವ ಕಾರ್ಯದಲ್ಲಿ ಏನು ಕ್ರಮ ತೆಗೆದುಕೊಂಡಿದೆ ? ತಂದೆತಾಯಿಗಳಿಗೆ ವಿಷಯವನ್ನು ತಿಳಿಸಿದ್ದಾರೆಯೇ ? ಮಗ ಏನಾದ ಎಂದು ಕೇಳಲಿಕ್ಕೆ ಹೋದಾಗ ಹೊಡೆದಿದ್ದಾರೆ, ಇದನ್ನು ನಾವು ತಡೆದು ಕೊಳ್ಳುವುದಕ್ಕೆ ಆಗುವುದಿಲ್ಲ. ನಾನು ಸರ್ಕಾರವನ್ನು ಒತ್ತಾಯ ಮಾಡುವುದೇನೆಂದರೆ ಮುಖ್ಯಮಂತ್ರಿಗಳು ಈ ಸದನಕ್ಕೆ ಇದರ ಬಗ್ಗೆ ಯಾವಾಗ ಹೇಳಿಕೆ ಕೊಡುತ್ತಾರೆ ?

ಕೆ. ಶಿವಮೂರ್ತಿ(ಶಾಸಕರು) : ನಮ್ಮ ಪ್ರಶ್ನೆಗೆ ಯಾವಾಗ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ ? ಅರ್ಜಿ ಕೊಟ್ಟ ತಕ್ಷಣ ಅಧಿಕಾರಿಗಳು ಹೇಳುವ ಮಾತು ಹೇಳುವುದು ಬೇಡ.

ರಾಮಕೃಷ್ಣ ಹೆಗಡೆ(ಮುಖ್ಯಮಂತ್ರಿಗಳು) :  ಇವತ್ತು ಈ ವಿಚಾರವನ್ನು ಎತ್ತಿದ್ದೀರಿ, ಇಂತಿಷ್ಟೇ ಸಮಯದಲ್ಲಿ ಹೇಳಿಕೆ ಕೊಡುತ್ತೇನೆಂದು ಹೇಳುವುದು ಕಷ್ಟ.

ಎಸ್. ಬಂಗಾರಪ್ಪ (ವಿರೋಧ ಪಕ್ಷದ ನಾಯಕರು) : ಯಾಕೆ ? This, I don’t agree, You have gotwireless.

(ವಿಧಾನಸಭೆಯಲ್ಲಿ ಗದ್ದಲ)

ರಾಮಕೃಷ್ಣ ಹೆಗಡೆ (ಮುಖ್ಯಮಂತ್ರಿಗಳು) : You may not agree. But, I cannot dance to your tune.

ಎಸ್ ಬಂಗಾರಪ್ಪ(ವಿರೋಧ ಪಕ್ಷದ ನಾಯಕರು) : We have every right to demand.

ರಾಮಕೃಷ್ಣ ಹೆಗಡೆ (ಮುಖ್ಯಮಂತ್ರಿಗಳು) : You cannot force me like that. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಉತ್ತರ ಹೇಳುತ್ತೇನೆ.

(ವಿಧಾನಸಭೆಯಲ್ಲಿ ಮತ್ತೆ ಗದ್ದಲ)

 31 ಆಗಸ್ಟ್ 1983 ರ ವಿಧಾನಸಭೆ ಅಧಿವೇಶನದ ದಾಖಲೆಗಳ ಪ್ರಕಾರ ಅರ್ಥವಾಗುವುದೇನೆಂದರೆ, ಧರ್ಮಸ್ಥಳಕ್ಕೆಂದು ಬಂದು ರೂಂ ಮಾಡಿಕೊಂಡ ನಾಲ್ಕು ಜನರ ಪೈಕಿ ಇಬ್ಬರು ಸಾವಿಗೀಡಾಗುತ್ತಾರೆ. ಸಾವಿಗೀಡಾದ ಇಬ್ಬರು ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗುತ್ತಾರೆ. ‘ಒಬ್ಬನಿಗೆ ಈಜು ಬರುತ್ತಿರಲಿಲ್ಲ, ಆತನನ್ನು ರಕ್ಷಣೆ ಮಾಡಲು ಇನ್ನೊಬ್ಬ ಹೋಗುತ್ತಾನೆ. ಹಾಗಾಗಿ ಇಬ್ಬರೂ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ’ ಎಂದು ಪೊಲೀಸರು ಹೇಳುತ್ತಾರೆ. ಇದು ಪೊಲೀಸರ ವರ್ಶನ್. ಪ್ರತ್ಯಕ್ಷದರ್ಶಿಯಾಗಿದ್ದ ಇಬ್ಬರು ಸ್ಬೇಹಿತರು ನಾಪತ್ತೆಯಾಗುತ್ತಾರೆ ! ಸಾವಿಗೀಡಾದ ಇಬ್ಬರ ವಿಳಾಸಗಳಿದ್ದರೂ, ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡದೇ ಇಬ್ಬರ ಶವಗಳನ್ನೂ ದಫನ ಮಾಡುತ್ತಾರೆ. ವಿಷಯ ಇರುವುದು ಸಾವಿಗೀಡಾದ ಇಬ್ಬರ ಜೊತೆ ಇದ್ದ ಇನ್ನಿಬ್ಬರು ಎಲ್ಲಿ ಹೋದರು ಎನ್ನುವುದು ! ಆ ಇಬ್ಬರು ಜೀವಂತ ಇದ್ದಾರೋ, ಇಲ್ಲವೋ ಎಂಬುದು ಇನ್ನೂ ಗೊತ್ತಿಲ್ಲ ! ಮಗನ ಶವವನ್ನು ಕೇಳಲು ಹೋದ ವೃದ್ಧ ಬ್ರಾಹ್ಮಣ ತಂದೆಯನ್ನು ಪೊಲೀಸರು ಅಂಗಿ ಬಿಚ್ಚಿಸಿ ಲಾಕಪ್ಪಿನಲ್ಲಿ ಹಾಕಿ ಮಲಮೂತ್ರ ಮಾಡಲೂ ಹೊರಬಿಡದೇ, ಚಿತ್ರಹಿಂಸೆಯ ಹಲ್ಲೆ ನಡೆಸಿ ಧರ್ಮಸ್ಥಳದಿಂದ ಓಡಿಸಿದ್ದಾರೆ. ಅಂದಿನ ಶಿರಗುಪ್ಪ ಶಾಸಕರಿಂದಾಗಿ ಈ ವಿಷಯ ವಿಧಾನಸಭೆಯಲ್ಲಿ ಚರ್ಚೆಯಾಯಿತು. ಆದರೂ ನಾಲ್ಕು ಜನರ ಹೆಣ ಎಲ್ಲಿದೆ ? ಯಾರು ಯಾವ ಅಧಿಕಾರದಲ್ಲಿ ಧಫನ ಮಾಡಿದರು ಎಂಬ ಮಾಹಿತಿ ಕೊನೆಗೂ ಸಿಗಲಿಲ್ಲ.

ಧರ್ಮಸ್ಥಳದಲ್ಲಿ ಹೂತು ಹೋದ ನೂರಾರು ಶವಗಳ ಬಗ್ಗೆ ಯಾರೋ ಹೇಳುವುದಲ್ಲ, ಕಪೋಲಕಲ್ಪಿತ ಕಥೆಯೂ ಅಲ್ಲ. ವಿಧಾನಸಭೆಯ ದಾಖಲೆಗಳಲ್ಲೇ ಧರ್ಮಸ್ಥಳದಲ್ಲಿ ಹೂತ ಶವಗಳ ಬಗ್ಗೆ ಉಲ್ಲೇಖವಿದೆ.  ಇದಕ್ಕಿಂತ ಸಾಕ್ಷ್ಯ ಬೇಕೇ ?

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ-ಭಾವನಾಮಯ | ಪ್ರನಾಳ ಶಿಶು- ಕನಸು ವಾಸ್ತವಗಳ ಸುತ್ತಮುತ್ತ

More articles

Latest article