ಅವನನ್ನು ಕಂಡಾಗಲೆಲ್ಲ ಬೆವರು ತನಗೆ ತಾನೇ ಬರುತ್ತಿತ್ತು…

Most read

ಬಾಲ್ಯದ ಆಘಾತಗಳು ಅಂತ ಏನನ್ನು ಕರೆಯುತ್ತೇವೆಯೋ ಅವುಗಳು ಇನ್ನಿಲ್ಲದಂತೆ ನಮ್ಮನ್ನ ಕಾಡುತ್ತಲೇ ಬರುತ್ತವೆ. ಎಲ್ಲಾ ಗಂಡಸರೂ ಹೀಗೆಯೇ ಎನ್ನುವ ಭಾವನೆಗಳು ಮನಸ್ಸಿನಾಳದಲ್ಲಿ ಹೊಕ್ಕಿರುತ್ತವೆ. ಪುರುಷ ದ್ವೇಷಿ ನಿಲುವುಗಳನ್ನ ಸೃಷ್ಟಿಸಿ ಬಿಟ್ಟಿರುತ್ತವೆ. ಆ ಕಾರಣಕ್ಕೇ ಒಳ್ಳೆ ಮನಸ್ಸಿನಿಂದ, ಪ್ರೀತಿಯಿಂದ, ಗೌರವದಿಂದ, ಸ್ನೇಹದಿಂದ ಯಾರಾದರೂ ಕೈಕುಲುಕಿದರೂ, ಅಪ್ಪಿಕೊಂಡರೂ ಮನದಲ್ಲಿ ವಿಚಿತ್ರವಾದ ಸಂಕಟ ಮತ್ತು ಅಂಗೈಯಲ್ಲಿ ಕೆಂಡ ಇಟ್ಟುಕೊಂಡಂತೆ ನನಗೆ ಭಾಸವಾಗುತ್ತಿತ್ತು – ಶೃಂಗಶ್ರೀ ಟಿ, ಉಪನ್ಯಾಸಕಿ.

ನಾನು ಚಿಕ್ಕಂದಿನಿಂದಲೂ ಬೆಳೆದಿದ್ದು ಅಜ್ಜ ಅಜ್ಜಿಯೊಟ್ಟಿಗೆ. ಅವರಷ್ಟೇ ನನ್ನ ಬೆಚ್ಚಗಿನ ಜಗತ್ತು. ಅವ್ವ ಹಾಸಿಗೆ ಹಿಡಿದು ‌ಅದೆಷ್ಟೋ ವರ್ಷಗಳೇ ಕಳೆದಿದ್ದವು. ಆದರೂ ಮನೆಯಲ್ಲಿ ಅವಳದ್ದೇ ರಾಜ್ಯಭಾರ. ಕೂತಲ್ಲಿಯೇ ಎಲ್ಲವನ್ನೂ ನಡೆಸಿದಾಕೆ. ಹೀಗಾಗಿ ಅವಳು ಹೇಳಿದ್ದನ್ನ ಚಾಚೂ ತಪ್ಪದೇ ಪಾಲಿಸುವುದಷ್ಟೇ ನನ್ನ ಬದುಕಾಗಿತ್ತು.

ನಾನು ಸಣ್ಣವಳಿದ್ದಾಗಿನಿಂದಲೂ ಮನೆಯ  ಹೊರಗಿನ, ಒಳಗಿನ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸ ಬೇಕಾಯಿತು. ಅಡುಗೆ, ಮುಸುರೆ, ಸಂತೆ, ಹಾಲು,  ತರಕಾರಿ, ಬ್ಯಾಂಕು ಪ್ರತಿಯೊಂದನ್ನು ಅವ್ವ ಹೇಳಿದಂತೆ ಮಾಡುವುದು  ನನ್ನದೇ ಕೆಲಸಗಳಿಗಾಗಿದ್ದವು.

ಇದರಲ್ಲಿ ಪ್ರತಿದಿನ ಹಾಲು ತರುವುದೂ ನನ್ನ ಹೆಗಲ ಮೇಲೆ ಬಿದ್ದ ಹೊರೆಯಾಗಿತ್ತು. ಹಾಲು ತರುವುದು ಹೊರೆಯೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.  ಹೌದು ನನಗದು ಹೊರೆಯೇ. ಏಕೆಂದರೆ ನನಗದು ಹಿಡಿಸದ ಕೆಲಸವಾಗಿತ್ತು. ಕಾರಣ  ಹಾಲು ಮಾರುವ ವ್ಯಕ್ತಿಯ ನಡವಳಿಕೆಗಳು ತೀರಾ ಅಸಹಜ ಅನ್ನಿಸುತ್ತಿದ್ದವು. ಅವನ ಅಂಗಡಿಗೆ ಹೋದಾಗಲೆಲ್ಲ ಅವನ ಶಿಶ್ನವನ್ನು (Penis) ಮುಟ್ಟುವಂತೆ ಪ್ರಚೋದಿಸುತ್ತಿದ್ದ. ಕೆಲವೊಮ್ಮೆ ಅವನೆ ಮುಟ್ಟಿಕೊಂಡು ವಿಚಿತ್ರವಾಗಿ ವರ್ತಿಸಿ ಸಂತೋಷ ಪಡುತ್ತಿದ್ದ. ನಮ್ಮದು ಸಾಲ ಮಾಡಿ ತುಪ್ಪ ತಿನ್ನುವ ಬದುಕಲ್ಲದಿದ್ದರೂ ಸಾಲ ಮಾಡಿಯೇ ಹಾಲು ಕೊಂಡುಕೊಳ್ಳುವ ಬದುಕಾಗಿತ್ತು. ಹಾಗಾಗಿ ಅವನ ಅಂಗಡಿಗೇ ಹೋಗುವುದು ಅನಿವಾರ್ಯವಾಗಿತ್ತು.

ಸಾಂದರ್ಭಿಕ ಚಿತ್ರ

ಒಂದಿನವೂ ಮನೆಯಲ್ಲಾಗಲೀ, ಶಾಲಾ ತರಗತಿಗಳಲ್ಲಾಗಲೀ ʼಗುಡ್ ಟಚ್ ಬ್ಯಾಡ್ ಟಚ್ʼ ಬಗ್ಗೆ ಯಾವ ತರಗತಿಗಳೂ ತಿಳುವಳಿಕೆಗಳನ್ನು, ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿಯನ್ನು ಕೊಡದೆ ಆ ಅರಿವಿನಿಂದ ವಂಚಿತಳಾದ ನನಗೆ ಅವನ ವರ್ತನೆಗಳ ಕಾರಣ ಅರಿವಾಗಿದ್ದು ನಾನು ಪ್ರಬುದ್ಧತೆಗೆ ಬಂದಾಗಲೇ!. ಅಲ್ಲಿಯವರೆಗೂ ಆ ಸಂಗತಿಗಳು ಮನಸ್ಸಿನಲ್ಲಿಯೇ ಬೇರೂರಿ ಭಯ ಹಿಂಸೆಗಳನ್ನ ಬೆಳಸ ತೊಡಗಿದ್ದವು. ಅವನನ್ನು ಕಂಡಾಗಲೆಲ್ಲ ಬೆವರು ತನಗೆ ತಾನೇ ಬರುತ್ತಿತ್ತು.

ಗಂಡಸರ ಬಗೆಗೆ ವಿಚಿತ್ರವಾದ ಸಂಶಯ, ಭಯ ಹುಟ್ಟುಕೊಂಡಿದ್ದವು. ಇದರೊಟ್ಟಿಗೆ ಬಸ್ಸಲ್ಲಿ  ಸಂಚರಿಸುವಾಗಲೂ ಇಂತಹದ್ದೇ ಕೆಟ್ಟ ಅನುಭವಗಳು ಇನ್ನಷ್ಟು ಭಯ ಆತಂಕಗಳಿಗೆ ದಾರಿಮಾಡಿ ಕೊಟ್ಟಿದ್ದವು. ಬಸ್ ರಶ್ ಇದ್ದಾಗಲೂ ಕೆಲವೊಮ್ಮೆ ಬೇಕಂತಲೇ ಹೆಂಗಸರು, ಹುಡುಗಿಯರು ಇದ್ದ ಕಡೆಯೇ ಕೆಲವು ಕೆಟ್ಟ ಹುಳಗಳು ನಿಂತು ತನ್ನ ಶಿಶ್ನವನ್ನ ತಾಗಿಸುವುದು, ಪಕ್ಕದಲ್ಲಿ ಕೂತು ತೀರಾ ನಿದ್ರೆಗೆ ಹೋಗಿರುವಂತೆ ನಟಿಸುತ್ತಾ ಮೈಮೆಲೆ ಬೀಳುವುದು, ಭುಜಗಳಿಂದ ಸ್ತನಗಳಿಗೆ ತಾಗಿಸುವುದು, ದುರುಗುಟ್ಟಿ ನೋಡುವುದು, ಕೈಕುಲುಕುವ ನೆಪದಲ್ಲಿ ಕೈ ಹಿಡಿದುಕೊಂಡೇ ಇರುವುದು, ಅದರಿಂದ ಕೆಟ್ಟದಾದ ಸುಖ ಅನುಭವಿಸುವುದು, ಏನನ್ನೂ ಮಾಡದೆ, ಮುಟ್ಟದೆ ಕೇವಲ ತನ್ನ ಮಾತುಗಳಲ್ಲೇ ಡಬಲ್ ಮೀನಿಂಗ್ ಸಂಭಾಷಣೆಗಳನ್ನ ನಡೆಸಿ‌ ಸುಖಿಸುವ ಕೆಟ್ಟ ಗಂಡಸರ ಹಿಂಸೆಗಳು ಇನ್ನೂ ಏಷ್ಟೆಷ್ಟೋ ಆದ ಅನುಭವಗಳು ನನ್ನನ್ನು ಹಿಂಸೆಗೆ ಗುರಿಮಾಡುತ್ತಿದ್ದವು.

ಈಗಲೂ ಇಂತಹ ಕೆಟ್ಟ ಘಟನೆಗಳು ನೆನಪಿಗೆ ಬಂದಾಗಲೆಲ್ಲಾ ಮೈ ಜುಂ ಅನ್ನಿಸುತ್ತದೆ. ಈ ಯಾವ ಅನುಭವಗಳನ್ನೂ ಯಾರ ಬಳಿಯೂ ಹಂಚಿಕೊಳ್ಳಲೂ ಆಗದೆ ತನ್ನೊಳಗೆ ಇಟ್ಟುಕೊಳ್ಳಲೂ ಆಗದೆ ಒದ್ದಾಡುವ ಪರಿಯಿದೆಯಲ್ಲ ಅದು ಹೇಳತೀರದು. ಅವರೇನಾದರೂ ಸಾಕ್ಷಿ ಕೇಳಿದರೆ ಕೊಡುವುದಾದರೂ ಹೇಗೆ?! ನಮ್ಮ ಅನುಭವಗಳನ್ನು ನಿಜವೆಂದು ಸಾಬೀತು ಪಡಿಸುವುದಾದರೂ ಹೇಗೆ!? ಕೊನೆಗೆ ಸಾಕ್ಷಿ ಒದಗಿಸದೆ ಬರೀ ಆರೋಪ ಮಾಡಿದ್ದೇವೆಂದು ನಿರ್ಣಯಿಸಿಬಿಟ್ಟರೆ ?! ಆಗೇನು ಮಾಡುವುದು? ಇವೆಲ್ಲವೂ ಕಾಡಿ ಕೊನೆಯಲ್ಲಿ ಬಿಸಿ ತುಪ್ಪದಂತೆ ನುಂಗಲೂ ಆಗದ ಉಗಳಲೂ ಆಗದ ಅತಂತ್ರ ಸ್ಥಿತಿಗೆ ಸಿಲುಕಿ ಕೊಳ್ಳುತ್ತಿದ್ದೆ.

ಬಾಲ್ಯದ ಆಘಾತಗಳು (childhood traumas) ಅಂತ ಏನನ್ನು ಕರೆಯುತ್ತೇವೆಯೋ ಅವುಗಳು ಇನ್ನಿಲ್ಲದಂತೆ ನಮ್ಮನ್ನ ಕಾಡುತ್ತಲೇ ಬರುತ್ತವೆ. ಎಲ್ಲಾ ಗಂಡಸರೂ ಹೀಗೆಯೇ ಎನ್ನುವ ಭಾವನೆಗಳು ಮನಸ್ಸಿನಾಳದಲ್ಲಿ ಹೊಕ್ಕಿರುತ್ತವೆ. ಪುರುಷ ದ್ವೇಷಿ ನಿಲುವುಗಳನ್ನ ಸೃಷ್ಟಿಸಿ ಬಿಟ್ಟಿರುತ್ತದೆ. ಆ ಕಾರಣಕ್ಕೇ ಒಳ್ಳೆ ಮನಸ್ಸಿನಿಂದ, ಪ್ರೀತಿಯಿಂದ, ಗೌರವದಿಂದ, ಸ್ನೇಹದಿಂದ ಯಾರಾದರೂ ಕೈಕುಲುಕಿದರೂ, ಅಪ್ಪಿಕೊಂಡರೂ ಮನದಲ್ಲಿ ವಿಚಿತ್ರವಾದ ಸಂಕಟ ಮತ್ತು ಅಂಗೈಯಲ್ಲಿ ಕೆಂಡ ಇಟ್ಟುಕೊಂಡಂತೆ ನನಗೆ ಭಾಸವಾಗುತ್ತಿತ್ತು.

ಸಾಂದರ್ಭಿಕ ಚಿತ್ರ

ಇವೆಲ್ಲದಕ್ಕೂ ಪರಿಹಾರ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನ ನೀಡುವುದು. ಮಕ್ಕಳಿಗೆ ಮನೆಗಳಲ್ಲಿ, ತರಗತಿಗಳಲ್ಲಿ ಸರಿಯಾದ ಮಾಹಿತಿ ನೀಡಿ ಅವರನ್ನು ಜಾಗೃರನ್ನಾಗಿಸುವುದು. ಆದರೆ ವಿಪರ್ಯಾಸವೆಂದರೆ ಈ ಯಾವುದರ ಬಗ್ಗೆಯೂ ಮಾಹಿತಿ ನೀಡದೆ, ಮಾನವೀಯ ಗುಣಗಳನ್ನು ಬೆಳಸದೆ, ಸೂಕ್ಷ್ಮತೆಗಳನ್ನು ಅರ್ಥೈಸದೆ ಕೇವಲ ರ್ಯಾಂಕ್ ಗಳನ್ನು ಪಡೆಯುವಂತೆ ಉತ್ತೇಜಿಸಿ ರೋಬೋಟ್ ಗಳಂತೆ ಮಕ್ಕಳನ್ನು ತಯಾರಿಸುತ್ತಿದ್ದೇವೆ.

ಭಾರತದಲ್ಲಿ ಲೈಂಗಿಕ ಶಿಕ್ಷಣವೆಂದರೆ ಅದೊಂದು ವಿವಾದಾತ್ಮಕ ವಿಷಯ. ಕೆಲವೊಮ್ಮೆ ನಿಷೇಧಿತ ವಿಷಯವಾಗಿಯೂ ನೋಡಲಾಗುತ್ತದೆ.  ಲೈಂಗಿಕ ಅಪರಾಧಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿಯೊಂದು 2011ರಲ್ಲಿ ಸಲಹೆ ನೀಡಿತ್ತು.

ಅದರನ್ವಯ ಕರ್ನಾಟಕದಲ್ಲಿ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ಗುಜರಾತ್, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದವು. ಕರ್ನಾಟಕದಲ್ಲಿ ಈ ವಿಷಯದ ಬಗ್ಗೆ ಸಹಜವಾಗಿಯೇ ಪರ-ವಿರೋಧ ಕೂಗುಗಳು ಎದ್ದಿದ್ದವು. ಆದರೆ, ಅಭಿವೃದ್ಧಿಯಾಗದ ಮತ್ತು ಗಮನಾರ್ಹವಾಗಿ ಚಿಕ್ಕ ದೇಶಗಳಾದ ಸುಡಾನ್ ಮತ್ತು ಕಾಂಗೋ ರಿಪಬ್ಲಿಕ್ ದೇಶಗಳಲ್ಲಿ ಲೈಂಗಿಕ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ಮೊದಲು ಕಲಿಸಲಾಗುತ್ತದೆ. ಲೈಂಗಿಕ ಅಪರಾಧಗಳ ಬಗೆಗೆ, ಲೈಂಗಿಕ ಶಿಕ್ಷಣದ ಬಗೆಗೆ ಮಾಹಿತಿ ನೀಡುವಲ್ಲಿ ಕೇವಲ ಶಾಲೆ ಮನೆ ಅಷ್ಟೇ ಅಲ್ಲದೆ ಸರ್ಕಾರದ ಪಾತ್ರವೂ ಬಹಳ ಮುಖ್ಯವಾದದದ್ದು.

ಇದರೊಟ್ಟಿಗೆ ಆಪ್ತ ಸಮಾಲೋಚನಾ ಕಾರ್ಯಾಗಾರಗಳನ್ನು ಅಥವಾ ತರಗತಿಗಳನ್ನು ಕೂಡ ಶಾಲೆಗಳಲ್ಲಿ, ಮನೆಗಳಲ್ಲಿ ಹದಿಹರೆಯದ ಮಕ್ಕಳಿಗೆ  ಬಹುಮುಖ್ಯವಾಗಿ ನೀಡಬೇಕಾಗುತ್ತದೆ. ಇದರಿಂದ, ಬಾಲ್ಯದಲ್ಲಿ ಆಘಾತಗಳೇನಾದರೂ ನಡೆದಿದ್ದು ಅದು ಒಳಗೊಳಗೇ ಸುಡುತ್ತಿದ್ದರೆ  ಆ ಯಾತನೆಗಳನ್ನು ಮರೆತು ಅದರಿಂದ ಹೊರಬಂದು ಗಟ್ಟಿಯಾದ ಬದುಕನ್ನು, ಚೆಂದದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಎಷ್ಟೋ ಜನ ತಮ್ಮ ಬಾಲ್ಯದ ಕಹಿ ಘಟನೆಗಳಿಂದ ನೊಂದು ಮದುವೆಯೇ ಆಗದೆ ಉಳಿದ ಎಷ್ಟೋ ಪ್ರಕರಣಗಳಿವೆ. ಇಂತಹವರಿಗೆಲ್ಲ‌ ತುಂಬಾ ಪ್ರೀತಿ, ಧೈರ್ಯ ಮತ್ತು ಸಹಾನುಭೂತಿ ನೀಡಬೇಕಾಗುತ್ತದೆ. ಲೈಂಗಿಕ ಶಿಕ್ಷಣದ ಬಗೆಗಿನ ಅರಿವು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲು ಸಹಕಾರಿ.

ಶೃಂಗಶ್ರೀ.ಟಿ.

ಇವರು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ʼಶೃಂಗಾತರಂಗʼ ಅಂಕಣದಲ್ಲಿ ಬರೆಯಲಿದ್ದಾರೆ.

ಇದನ್ನೂ ಓದಿ-ಸ್ತ್ರೀವಾದವನ್ನು ಬೋಧಿಸುವುದು ಪರಮ ಸಂಕಟದ ಕೆಲಸ

More articles

Latest article