ಲೋಕಸಭಾ ಚುನಾವಣೆಗೆ(Lok Sabha Elections 2024) ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ, ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸುತ್ತಿರುವುದು ಐದು ಲೋಕಸಭಾ ಕ್ಷೇತ್ರಗಳಲ್ಲಿ ಹಾವೇರಿ ಲೋಕಸಭಾ ಕ್ಷೇತ್ರ. ಈ ಕ್ಷೇತ್ರಕ್ಕೆ ಈಶ್ವರಪ್ಪ ಮಗ ಕಾಂತೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಗೆ ಬಿಜೆಪಿ ಟಿಕೆಟ್ ನೀಡಿದ್ದು ಈಶ್ವರಪ್ಪ ಕೋಪಗೊಂಡಿದ್ದಾರೆ.
ಕಳೆದ ಹಲವು ತಿಂಗಳಿನಿಂದ ಈಶ್ವರಪ್ಪ ತಮ್ಮ ಮಗ ಕಾಂತೇಶ್ಗೆ ಲೋಕಸಭಾ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ. ಇತ್ತ ಬಿಸಿ ಪಾಟೀಲ್ ಕೂಡ ಟಿಕೆಟ್ ಬೇಕೆ ಬೇಕು ಎಂದು ಪಣತೊಟ್ಟಿದ್ದರು. ಆದರೆ ಇಬ್ಬರಿಗೂ ಟಿಕೆಟ್ ಕೈತಪ್ಪಿ ಬಸವರಾಜ್ ಬೊಮ್ಮಾಯಿಗೆ ಟಿಕೆಟ್ ಫೈನಲ್ ನೀಡಿರುವುದು ಈಗ, ಈಶ್ವರಪ್ಪ ಅವರನ್ನು ಕೆರಳಿಸಿದೆ.
ಹೌದು, ಹಾವೇರಿ ಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡದಿದ್ದರೆ ಶಿವಮೊಗ್ಗ ಲೋಕಸಭಾ ಕ್ಷೇತೃದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ತಾವೇ ಕಣಕ್ಕಿಳಿಯುವುದಾಗಿ ಕೆ.ಎಸ್ ಈಶ್ವರಪ್ಪ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಇಂದು ಮಾತುಕತೆಯೂ ಸಹ ನಡೆಯುತ್ತಿದೆ. ಎಂದು ತಿಳಿದುಬಂದಿದೆ. ಕಾಂತೇಶ್ ಕೂಡ ಹಾವೇರಿ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ.
ಮಗನಿಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪ ಮತ್ತವರ ಪುತ್ರರ ಕೈವಾಡವಿದೆ. ಯಡಿಯೂರಪ್ಪ ಅವರು ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ನನ್ನ ಮಗನ ರಾಜಕೀಯ ಭವಿಷ್ಯವನ್ನು ತುಳಿಯುತ್ತಿದ್ದಾರೆ ಎಂದು ಕೆಂಡಾಮಂಡಲವಾಗಿರುವ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಬಿ ವೈ ರಾಘವೇಂದ್ರ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.