ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್

Most read

ನಾಳೆ ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನ. ದೇಶಕ್ಕೆ ಬಲಿಷ್ಠ  ಮತ್ತು ಶ್ರೇಷ್ಠ ಸಂವಿಧಾನವನ್ನು ನೀಡಿ ಜೀವನಪರ್ಯಂತ ಸಮಾಜದ ಅಭ್ಯುದಯಕ್ಕಾಗಿ ಚಿಂತಿಸಿದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣದ ಹಿನ್ನೆಲೆಯಲ್ಲಿಅವರನ್ನು ಸ್ಮರಿಸಿದ್ದಾರೆ ನಿವೃತ್ತ ಪ್ರಾಧ್ಯಾಪಕರಾದ ಡಾ. ಗಂಗಾಧರಯ್ಯ ಹಿರೇಮಠ.

ಭಾರತೀಯ ಸಾಮಾಜಿಕತೆಯಲ್ಲಿ ‘ಸಮಾನತೆ’ ಎನ್ನುವುದು, ಭಾಷಣ ಮತ್ತು ಬರವಣಿಗೆಯಲ್ಲಿ ಮಾತ್ರ ಉಳಿದು, ಕೃತಿರೂಪಕ್ಕೆ ಬಾರದ ತತ್ವ ಎಂಬಂತಾಗಿದೆ. ಕತ್ತಲ ಸಾಮಾಜಿಕ ವ್ಯವಸ್ಥೆಯ ನೋವನ್ನು ಮೌನವಾಗಿ ನುಂಗಿರುವ ಬಹುಸಂಖ್ಯಾತ ಶೋಷಿತರ ಭವಿಷ್ಯಕ್ಕಾಗಿ ಹೊಸ ಹೊಸ ಆಶಯಗಳ ಹಾಗೂ ಬದುಕಿನ ಆಯಾಮಗಳನ್ನು ಗಳಿಸಿಕೊಡಲು ಹೋರಾಡಿದ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರರು. ಅಸ್ಪೃಶ್ಯರ ಸ್ಥಿತಿ-ಗತಿಗಳನ್ನು, ಅವರು ಅನುಭವಿಸುತ್ತಾ ಬಂದ ಅವಮಾನ, ಅಪಮಾನಗಳನ್ನು, ಶೋಷಣೆಗಳನ್ನು, ಅಸಮಾನತೆಯನ್ನು ಹಾಗು ಅಮಾನವೀಯ ಸಂದರ್ಭಗಳನ್ನು ಅಧ್ಯಯನ ಮಾಡಿದರು. ತಮ್ಮ ಜೀವನದುದ್ದಕ್ಕೂ ದಮನಕಾರಿ ಸಂಸ್ಕೃತಿ ವ್ಯವಸ್ಥೆ, ಸಿದ್ಧಾಂತದ ವಿರುದ್ಧ ಸಮರವನ್ನೇ ಸಾರಿದವರು. ಹೀಗಾಗಿ ದೀನ-ದಲಿತರ ಮನದಲ್ಲಿ ಕರುಣೆ ಹಾಗು ಮಾನವೀಯತೆ ಕಂಡುಬಂದಿತು. ಆದರೆ ಪ್ರಸ್ತುತ ದಲಿತ ಸಮುದಾಯಗಳು ಡಾ. ಅಂಬೇಡ್ಕರರನ್ನು ಆಚರಣೆಗೆ ಮಾತ್ರ ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಅವರ ತತ್ವ, ಆದರ್ಶಗಳನ್ನು, ಚಿಂತನೆಗಳನ್ನು ತಳ ಸಮುದಾಯ ಎಲ್ಲಿಯವರೆಗೆ ಅನುಸರಿಸುವುದಿಲ್ಲವೋ ಅಲ್ಲಿಯವರೆಗೆ ಸ್ವಾಭಿಮಾನ ಬದುಕಿನಿಂದ ದೂರವಾಗಿರುವುದು ಸತ್ಯದ ಸಂಗತಿ.

ಡಾ.ಬಿ.ಆರ್. ಅಂಬೇಡ್ಕರ್ ಅವರ ಹಿನ್ನೆಲೆ

ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಜೀವನಪರ್ಯಂತ ಹೋರಾಟ ನಡೆಸಿ ನೂತನ ದಿಕ್ಕೊಂದನ್ನು ಸೂಚಿಸಿದ ಸ್ವತಂತ್ರ ಭಾರತದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೆಡ್ ತಾಲೂಕಿನ ಅಂಬೇವಾಡೆ ಗ್ರಾಮದಲ್ಲಿ 1891ನೇ ಎಪ್ರಿಲ್ 14ರಂದು ರಾಮ್‍ಜಿ ಸಕ್ರಾಲ್ ಮತ್ತು ಭೀಮಾಬಾಯಿ ದಂಪತಿಗಳಿಗೆ 14ನೇ ಮಗನಾಗಿ ಜನಿಸಿದರು. 6ನೇ ವಯಸ್ಸಿಗೆ ತಾಯಿ ನಿಧನ ಹೊಂದಿದರು. 1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪಾಸಾದರು. ತಮ್ಮ 14ನೇ ವಯಸ್ಸಿಗೆ ಒಂಬತ್ತು ವರ್ಷದ ‘ರಮಾಬಾಯಿ’ಯೊಂದಿಗೆ ವಿವಾಹವಾದರು.

1912ರಲ್ಲಿ ಅಂಬೇಡ್ಕರ್ ಅವರು ಬಾಂಬೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಹಾಗೂ ರಾಜಕೀಯ ವಿಜ್ಞಾನದಲ್ಲಿ ತಮ್ಮ ಪದವಿಯನ್ನು ಪಡೆದರು. ಬರೋಡ ಮಹಾರಾಜರಾದ ಸಯ್ಯಾಜಿರಾವ್ ಗಾಯಕವಾಡ ಅವರು ನೀಡಿದ 25 ರೂ. ವಿದ್ಯಾರ್ಥಿವೇತನ ಮತ್ತು ಪ್ರಾಧ್ಯಾಪಕ ಮುಲ್ಲರ್ ಸಹಾಯದಿಂದ ಅಮೇರಿಕಾದ ಕೊಲಂಬಿಯಾ ವಿ.ವಿ. ಯಿಂದ ಅರ್ಥಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿ ಮತ್ತು ಲಂಡನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಮತ್ತು 1927 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಮತ್ತೊಂದು ಡಾಕ್ಟರೇಟ್ ಪದವಿಯನ್ನು ಪಡೆದರು. 1916ರಲ್ಲಿ ಲಂಡನ್ನಿನ ಸ್ಕೂಲ್ ಆಪ್ ಎಕಾನಾಮಿಕ್ಸ್ ಸೇರಿ ಎಂ.ಎಸ್ಸಿ ಪದವಿ, 1922ರಲ್ಲಿ ಬ್ಯಾರಿಸ್ಟರ್ ಆಫ್ ಲಾ ಪದವಿಯನ್ನು ಪಡೆದರು.

ಆಧುನಿಕ ಭಾರತದ ಸಂವಿಧಾನ ಶಿಲ್ಪಿ

ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಹಿಂದಿರುಗಿದ ಡಾ. ಅಂಬೇಡ್ಕರ್ ಮುಂಬೈ ಉಚ್ಚನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದರು. 1928ರಲ್ಲಿ ಮುಂಬೈ ಸರ್ಕಾರಿ ‘ಲಾ’ ಕಾಲೇಜು ಪ್ರಾಧ್ಯಾಪಕರಾಗಿ 1935ರಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ, 1937ರಲ್ಲಿ ಲೇಬರ್ ಪಾರ್ಟಿ ಸ್ಥಾಪಿಸಿ, ಅಸೆಂಬ್ಲಿಗೆ 15 ಸದಸ್ಯರ ತಂಡವನ್ನು ಕೊಂಡೊಯ್ದರು. 1946ರಲ್ಲಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ರಚನೆಯ ಹೊಣೆಯನ್ನು ವಹಿಸಿಕೊಂಡು, ಯಶಸ್ವಿಯಾಗಿ ನಿರ್ವಹಿಸಿದ್ದರಿಂದ ಇವರನ್ನು ಆಧುನಿಕ ‘ಭಾರತದ ಸಂವಿಧಾನ ಶಿಲ್ಪಿ’ ಎನ್ನಲಾಗಿದೆ.  ಸ್ವತಂತ್ರ ಭಾರತದಲ್ಲಿ ಕಾನೂನು ಸಚಿವರಾಗಿ ಸೇವೆಸಲ್ಲಿಸಿ, ರಾಜೀನಾಮೆ ನೀಡಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದರು. ರಾಜ್ಯಸಭೆಗೆ 1952ರಲ್ಲಿ ಪುನಃ ಆಯ್ಕೆಯಾದರು. ತಮ್ಮ ಜೀವಿತದ ಕೊನೆಯ ದಿನಗಳಲ್ಲಿ 1956 ಅಕ್ಟೋಬರ್ 14ರಂದು ಬೌದ್ಧ ಧರ್ಮಕ್ಕೆ ಮತಾಂತರವಾದರು.  1956 ಡಿಸೆಂಬರ್ 6 ರಂದು 65ನೇ ವಯಸ್ಸಿಗೆ ನಿಧನ ಹೊಂದಿದರು.

ಪಾಂಡಿತ್ಯ ಪ್ರಖರತೆಯ ಮಹಾನ್‍ವ್ಯಕ್ತಿ

ಡಾ. ಬಿ.ಆರ್. ಅಂಬೇಡ್ಕರ್ ಅಪಾರವಾದ ಅಧ್ಯಯನ, ಚಿಂತನೆಗಳು, ಅವರ ಸಂಶೋಧನೆ ಮತ್ತು ಪಾಂಡಿತ್ಯಗಳಿಂದ ಬೌದ್ಧಿಕ ಪ್ರಖರತೆಯನ್ನು ಹೊಂದಿದ್ದ ಮಹಾನ್ ವ್ಯಕ್ತಿ ಆಗಿದ್ದರು. ಛಲ, ಶ್ರದ್ಧೆ ಮತ್ತು ಪರಿಶ್ರಮದಿಂದ ಪ್ರತಿಕೂಲ ಸನ್ನಿವೇಶದಲ್ಲೂ ಒಬ್ಬ ಸಾಮಾನ್ಯ ಮನುಷ್ಯ ಏನೆಲ್ಲವನ್ನು ಸಾಧಿಸಬಲ್ಲ ಎನ್ನುವುದಕ್ಕೆ ಅವರ ಜೀವನವೇ ಸಾಕ್ಷಿ. ಅತ್ಯಂತ ಹೀನಾಯ ಸ್ಥಿತಿಯಿಂದ ‘ಸಂವಿಧಾನ ಶಿಲ್ಪಿ’ಯಾಗಿ ಮೇಲೇರಿದ ವಿಷಯ ಎಂಥವರನ್ನೂ ದಂಗು ಬಡಿಸುತ್ತದೆ. ಅವರ ಪಾಂಡಿತ್ಯ, ಪ್ರತಿಭೆ, ದಲಿತರಿಗಾಗಿ, ಮಹಿಳೆಯರಿಗಾಗಿ, ಕಾರ್ಮಿಕರಿಗಾಗಿ ಮಾಡಿದ ಹೋರಾಟ, ಮಾನವತಾಗುಣಗಳು ನಿಜಕ್ಕೂ ಪ್ರಶಂಸನೀಯವಾಗಿವೆ.

ಜಾತಿಪದ್ಧತಿ ಕುರಿತು ಅವರ ಚಿಂತನೆ

ಪ್ರೊ. ಗೋಲ್ಡನ್‍ವೈಸರ್ ಎಂಬ ಮಾನವ ಶಾಸ್ತ್ರಜ್ಞರ ಸ್ಮರಣಾರ್ಥ 1935 ಅಕ್ಟೋಬರ್ 13ರಂದು ಯೆವೋಲಾ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಭಾರತದಲ್ಲಿನ ಜಾತಿಗಳು’ ಎಂಬ ವಿಷಯ ಕುರಿತು ಲೇಖನ ಮಂಡಿಸಿ ಭಾರತದ ಸಾಮಾಜಿಕತೆಯನ್ನು ಪರಿಚಯಿಸಿ, ಜಾತಿ ಪದ್ಧತಿಯಿಂದಾಗಿ ನಾವು ಸದೃಢ ಸಮಾಜ ನಿರ್ಮಿಸಲು ಸಾಧ್ಯವಿಲ್ಲವೆಂದು ತಿಳಿಸಿದರು. ಜಾತಿಯು ನಮ್ಮನ್ನು ನೀತಿಭ್ರಷ್ಟರನ್ನಾಗಿಸಿ ಸಾಮಾಜಿಕ ನಿಯಮವನ್ನು ನಾಶಗೊಳಿಸಿ ಮನುಷ್ಯನನ್ನು ಹೃದಯ ವೈಶಾಲಿಯಾಗಿ ಬೆಳೆಯಲು ಬಿಡುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು. ಜನರ ಮೂಲ ಮನೋಭಾವದ ಬದಲಾವಣೆಯಾಗಬೇಕು, ಕೌಟಂಬಿಕ ಪದ್ಧತಿಯ ಸುಧಾರಣೆ, ಶಿಕ್ಷಣ ಪದ್ಧತಿಯ ಬೆಳವಣಿಗೆಗೆ, ಮಹಿಳೆಯರ ಸಬಲೀಕರಣ, ಅಂತರ್ಜಾತಿ ವಿವಾಹ, ವೈಚಾರಿಕತೆ, ವೈಜ್ಞಾನಿಕ ಬೆಳವಣಿಗೆಗೆ ಸಲಹೆ ನೀಡಿದರು.

ಅಸ್ಪೃಶ್ಯತೆ ನಿವಾರಣೆಗೆ ಸಲಹೆಗಳು

ಡಾ. ಬಿ.ಆರ್. ಅಂಬೇಡ್ಕರರು ಅಸ್ಪೃಶ್ಯತೆ ಕುರಿತು ಸುದೀರ್ಘವಾಗಿ ಚಿಂತಿಸಿದ್ದಾರೆ. ಕ್ರಿ.ಶ.400 ರಲ್ಲಿ ಈ ಪದ್ಧತಿ ಬೆಳೆದು, ವರ್ಣಸಂಕರದಿಂದ ಹುಟ್ಟಿದ ಸಂತಾನ, ಯುದ್ಧದಲ್ಲಿ ಸೆರೆ ಸಿಕ್ಕ ಕೈದಿಗಳು ಅಸ್ಪೃಶ್ಯರಾಗಿ ಪರಿವರ್ತನೆಯಾಗಿದ್ದಾರೆಂದು ತಿಳಿಸಿ, ಪರಿಹಾರೋಪಾಯಕ್ಕೆ, ಅಸ್ಪೃಶ್ಯರ ಏಳ್ಗೆಗಾಗಿ ಪಂಚಸೂತ್ರಗಳನ್ನು ತಿಳಿಸಿದರು. ಸ್ವ-ಸುಧಾರಣೆ, ಸ್ವ-ಏಳಿಗೆ, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಸ್ವ-ನಂಬಿಕೆಗಳ ಆಧಾರದ ಮೇಲೆಯೇ ಶಿಕ್ಷಣದ ಮೂಲಕ ದಲಿತರು ಜೀವನ ರೂಪಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಅವರಿಗಾಗಿ ಅನೇಕ ಶಾಲಾ-ಕಾಲೇಜುಗಳನ್ನು, ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. 1928ರಲ್ಲಿ ನಿಮ್ನವರ್ಗೀಕ ಶಿಕ್ಷಣ ಸಂಸ್ಥೆ, 1946ರಲ್ಲಿ ಸಿದ್ಧಾರ್ಥ ಕಾಲೇಜು ಆರಂಭಿಸಿ ಶಿಕ್ಷಣದ ಜಾಗೃತಿ ತುಂಬಿದರು.  ‘ಮೂಕನಾಯಕ’ ಎಂಬ ಪತ್ರಿಕೆ ಆರಂಭಿಸಿ ಅಸ್ಪೃಶ್ಯರಲ್ಲಿ ಜಾಗೃತಿಯನ್ನು ಮೂಡಿಸಿದರು.

ಶಿಕ್ಷಣ, ಸಂಘಟನೆ, ಹೋರಾಟದ ಸೂತ್ರ

ಪತ್ನಿ ರಮಾಬಾಯಿ ಜತೆಗೆ

ಅಸ್ಪೃಶ್ಯರು ಸ್ವ-ಸುಧಾರಣೆಯಿಂದ, ಸ್ವ-ಏಳಿಗೆಯ ಮೂಲಕ ತಮ್ಮನ್ನು ತಾವು ಸುಧಾರಿಸಿಕೊಂಡು ಇತರ ಜಾತಿಗಳ ಸರಿಸಮನಾಗಿ ಮನ್ನಣೆ ಪಡೆಯಬೇಕು.  ಈ ಏಳಿಗೆಗೆ ಶಿಕ್ಷಣವು ‘ರಾಜಮಾರ್ಗ’ವಾಗಿದೆ. 1942ರಲ್ಲಿ ಅವರು ಜನತೆಯಲ್ಲಿ ‘ಶಿಕ್ಷಣ ಪಡೆಯಿರಿ’, ಹೋರಾಟ ನಡೆಸಿರಿ’, ಸಂಘಟಿತರಾಗಿ ನಿಮ್ಮಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳಿ ಎಂಬುದಾಗಿ ಕರೆನೀಡಿದರು. ದಲಿತರ ಏಳಿಗೆಯನ್ನು ದಲಿತರೇ ಸಾಧಿಸಲು ಕಲಿಯಬೇಕು ಎಂದು ತಿಳಿಸಿ, ದಲಿತರ ಉದ್ಧಾರಕ್ಕಾಗಿ ಸ್ವತಂತ್ರ ಕಾರ್ಮಿಕ ಪಕ್ಷವೊಂದನ್ನು ಸಂಘಟಿಸಿದರು. ಅಸ್ಪೃಶ್ಯರ ಸಮಸ್ಯೆ, ಸವಾಲುಗಳನ್ನು ಪರಿಹರಿಸುವಲ್ಲಿ ಸಂಘಟನೆಯೊಂದೇ ಸೂಕ್ತಮಾರ್ಗವೆಂದು ತಿಳಿಸಿದರು. ಸ್ವಾವಲಂಬನೆಯನ್ನು ರೂಢಿಸಿಕೊಳ್ಳಬೇಕು, ಸ್ವಾಭಿಮಾನ ಮತ್ತು ಸ್ವ-ನಂಬಿಕೆಯಿಂದ ಜೀವನ ನಡೆಸಬೇಕೆಂದು ಕರೆನೀಡಿದರು.

ಮಹಿಳೆಯರ ಸಬಲೀಕರಣಕ್ಕೆ ಒತ್ತು

ಡಾ. ಬಿ.ಆರ್. ಅಂಬೇಡ್ಕರರು ದಲಿತರು, ಕಾರ್ಮಿಕರ ಸುಧಾರಣೆಯೊಂದಿಗೆ ದೇಶದ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದರು. 1942 ಜುಲೈ 20ರಂದು ನಾಗಪುರದಲ್ಲಿ ನಡೆದ ಸ್ತ್ರೀ-ಸಮಾವೇಶವನ್ನು ಉದ್ಘಾಟಿಸಿ ಮಹಿಳೆಯರು ವಿಮೋಚನೆಗೊಂಡರೆ ಸಮಾಜದ ಸ್ಥಿತಿಗತಿಗಳನ್ನು ಸುಧಾರಿಸಬಲ್ಲರು. ಜಾತಿ ಪದ್ಧತಿಯನ್ನು ಹೋಗಲಾಡಿಸಲು ಮಹಿಳೆಯರು ಶಿಕ್ಷಿತರಾಗಬೇಕು,. ಎಲ್ಲ ವರ್ಗದ ಸ್ತ್ರೀಯರು ಪರಿಪೂರ್ಣ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ, ವೈಜ್ಞಾನಿಕ ಶಿಕ್ಷಣವನ್ನು ಪಡೆಯಬೇಕೆಂದು ಹೇಳಿದರು. ಜಾತಿ ನಿರ್ಮೂಲನೆಗಾಗಿ ಅಂತರ್ಜಾತಿ ವಿವಾಹದ ಸೂತ್ರವನ್ನು ಪ್ರತಿಪಾದಿಸಿದರು. ಅಂತರ್ಜಾತಿ ವಿವಾಹವು ಪ್ರತ್ಯೇಕತೆಯ ಭಾವನೆಯನ್ನು ನಾಶಗೊಳಿಸುತ್ತದೆಂದು, ಸಹಪಂಕ್ತಿ ಭೋಜನವು ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಮುಖ್ಯ ಸೂತ್ರವಾಗಿದೆ ಎಂದು ತಿಳಿಸಿದರು.

ಯುವಜನತೆಗೆ ಬೇಕು ಅಧ್ಯಯನ

ಇಂದಿನ ವಿದ್ಯಾರ್ಥಿ-ಯುವ ಜನತೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಅರಿಯುವ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಏಕೆಂದರೆ ಈ ದೇಶದ ಭವಿಷ್ಯ ಮತ್ತು ಭರವಸೆ ಯುವ ಜನರೇ ಆಗಿದ್ದಾರೆ. ಈ ದೇಶದ ದಮನಿತ-ಶೋಷಿತ ಜನತೆಗೆ ವರ್ತಮಾನದ ಪ್ರಜಾತಂತ್ರವು ನಮ್ಮ ಸಂವಿಧಾನ. ಈ ದೇಶದ ಭವಿಷ್ಯವಾಗಿರುವ ಯುವಜನತೆಯು ಅಂಬೇಡ್ಕರ್ ಕಟ್ಟಿಕೊಟ್ಟಿರುವ ಪ್ರಬುದ್ಧ ಪ್ರಜಾತಂತ್ರ ಮತ್ತು ನೈಜ ಸಮಾಜವಾದದ ದರ್ಶನವನ್ನು ಗಂಭೀರವಾಗಿ ಅಧ್ಯಯನ ಮಾಡುವ ಅಗತ್ಯವಿದೆ.  ಹೀಗೆ ಜಡವಾದ ಸಮಾಜವನ್ನು ಪುನರುಜ್ಜೀವನಗೊಳಿಸಲು ಡಾ. ಬಿ.ಆರ್. ಅಂಬೇಡ್ಕರರು ಮಾಡಿದ ಚಿಂತನೆಗಳು, ಪ್ರಯೋಗಗಳು, ಹೋರಾಟಗಳು ಮಹತ್ವ ಪಡೆದು ಸಮ-ಸಮಾಜಕ್ಕೆ, ಸಹಬಾಳ್ವೆಗೆ ಪೂರಕವಾಗಿವೆ.  ಅವರ 68 ನೇ ಮಹಾ ಪರಿನಿರ್ವಾಣದ ಪ್ರಯುಕ್ತ (ಡಿಸೆಂಬರ್-6) ಅವರ ಚಿಂತನೆಗಳನ್ನು ಓದುಗರಿಗಾಗಿ ಹಂಚಿಕೊಂಡ ಸಂತಸ ನನ್ನದಾಗಿದೆ.

ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು,

ಇದನ್ನೂ ಓದಿ- ಎಪ್ಪತ್ತೈದರ ಸಂಭ್ರಮದಲ್ಲಿ ಸಂವಿಧಾನ; ಬೇಕಿದೆ ಆತ್ಮಾವಲೋಕನ

More articles

Latest article