ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಬಹುತೇಕ ಸಿದ್ಧವಾಗಿದ್ದು, ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಮತ್ತು ಒ೦ದು ದೇಶ –ಒಂದು ಚುನಾವಣೆ ಪ್ರಸ್ತಾಪವು ಮುಖ್ಯವಾಗಿ ಕಾಣಿಸಿಕೊಳ್ಳಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ, 2029ರಲ್ಲಿ ಇಡೀ ದೇಶದಾದ್ಯಂತ ಒಂದೇ ಸಮಯಕ್ಕೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಉದ್ದೇಶಿಸಿದ್ದು, ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಷಯ ಪ್ರಧಾನವಾಗಿ ಪ್ರಸ್ತಾಪಿಸಲಾಗುತ್ತಿದೆ. ದೇಶದಲ್ಲಿ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ಈಗಾಗಲೇ ರಾಷ್ಟ್ರಪತಿಗಳಿಗೆ ತನ್ನ ವರದಿ ನೀಡಿದೆ. ಬಿಜೆಪಿ ಸರ್ಕಾರ ಮರುಆಯ್ಕೆಗೊಂಡರೆ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡು ಜಾರಿಗೊಳಿಸುವ ಪ್ರಯತ್ನ ನಡೆಸಲಿದೆ.
ಭಾರತೀಯ ಜನತಾ ಪಕ್ಷದ ಹಿಂದುತ್ವ ಅಜೆಂಡಾದ ಭಾಗವಾಗಿರುವ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ವಿಷಯವನ್ನೂ ಸಹ ಈ ಬಾರಿಯ ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತಿದೆ. 2019ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲೂ ಸಮಾನ ನಾಗರಿಕ ಸಂಹಿತೆ ಮತ್ತು ಏಕಕಾಲಕ್ಕೆ ಚುನಾವಣೆಯ ಪ್ರಸ್ತಾಪವನ್ನು ಭಾರತೀಯ ಜನತಾ ಪಕ್ಷ ಮಾಡಿತ್ತು.
2029ರಲ್ಲಿ ಒಂದು ದೇಶ-ಒಂದು ಚುನಾವಣೆ ನೀತಿಯನ್ವಯ ಏಕಕಾಲಕ್ಕೆ ಚುನಾವಣೆ ನಡೆಸಬೇಕಾದಲ್ಲಿ, ಕೆಲವು ರಾಜ್ಯಗಳ ಸರ್ಕಾರಗಳ ಅವಧಿಯನ್ನು ಮುಂದುವರೆಸಬೇಕಾಗುತ್ತದೆ, ಅದೇ ರೀತಿ ಅವಧಿ ಮುಗಿಯದೇ ಇದ್ದರೂ ಕೆಲ ರಾಜ್ಯಗಳ ಸರ್ಕಾರಗಳ ಅವಧಿಯನ್ನು ಮೊಟಕುಗೊಳಿಸಬೇಕಾಗುತ್ತದೆ. ಏಕಕಾಲದ ಚುನಾವಣೆ ಸಂಬಂಧ ಎಲ್ಲ ರಾಜಕೀಯ ಪಕ್ಷಗಳ ಜೊತೆ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರಲಾಗುವುದು ಎಂದು 2019ರ ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿತ್ತು. ಖರ್ಚು ಕಡಿಮೆ ಮಾಡುವ ಉದ್ದೇಶದಿಂದ, ಸರ್ಕಾರದ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ, ಭದ್ರತಾ ಸಿಬ್ಬಂದಿಗಳ ಕೆಲಸಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಒಂದು ದೇಶ-ಒಂದು ಚುನಾವಣೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ತೃಣಮೂಲ ಕಾಂಗ್ರೆಸ್ ಪಕ್ಷ, ದ್ರಾವಿಡ ಮುನ್ನೇತ್ರ ಕಳಗಂ ಸೇರಿದಂತೆ ದೇಶದ ಹದಿನೈದು ರಾಜಕೀಯ ಪಕ್ಷಗಳು ಒಂದು ದೇಶ-ಒಂದು ಚುನಾವಣೆ ಪ್ರಸ್ತಾಪವನ್ನು ವಿರೋಧಿಸುತ್ತಿವೆ.
ಇನ್ನೊಂದೆಡೆ 2019ರ ಚುನಾವಣೆಯ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆಯ ಪ್ರಸ್ತಾಪ ಮಾಡಿದ್ದ ಬಿಜೆಪಿ, ಇದು ಜಾರಿಯಾಗದ ಹೊರತು ದೇಶದಲ್ಲಿ ಲಿಂಗಭೇದವನ್ನು ಅಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತ್ತು. ಇತ್ತೀಚಿಗಷ್ಟೆ ಬಿಜೆಪಿ ಅಧಿಕಾರದಲ್ಲಿರುವ ಉತ್ತರಖಂಡದಲ್ಲಿ ಸಮಾನ ನಾಗರಿಕ ಸಂಹಿತೆ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಮೋದಿ ಮೂರನೇ ಅವಧಿಗೆ ಗೆದ್ದುಬಂದಲ್ಲಿ, ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲೂ ಸಮಾನ ನಾಗರಿಕ ಸಂಹಿತೆ ಕಾಯ್ದೆಗಳನ್ನು ಜಾರಿಗೊಳಿಸಲಾಗುವುದು. ಅದರ ಜೊತೆಗೆ ಇಡೀ ದೇಶಕ್ಕೆ ಅನ್ವಯವಾಗುವಂತೆ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ.