ಮಡಿಕೇರಿ: ಆನೆಗಳಿಗೆ ಮೇವು ಹಾಗೂ ನೀರನ್ನು ಕಾಡಿನಲ್ಲೇ ಒದಗಿಸಿಕೊಡಲು ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಇದರಿಂದಾಗಿ ಆನೆಗಳು ಹೊರಬರುವುದು ಕಡಿಮೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೊಡಗಿನಲ್ಲಿ ಮಾಧ್ಯಮದವರೊಂದಿಗೆ ಆನೆ – ಮಾನವ ಸಂಘರ್ಷದ ಬಗ್ಗೆ ಮಾತನಾಡಿದ ಅವರು, ಈ ಬಾರಿ ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ 600 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಪೂರ್ಣವಾಗಿ ತಡೆಗೋಡೆ ನಿರ್ಮಾಣವಾದರೆ ಆನೆ ಮಾನವ ಸಂಘರ್ಷ ತಪ್ಪಿಸಬಹುದು ಎಂದರು.
ಜನರ ಸಮಸ್ಯೆಗಳಿಗೆ ನ್ಯಾಯ ಕೊಡಿಸುವುದು ಬಹಳ ಮುಖ್ಯ
ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮದ ವತಿಯಿಂದ 12 ಕೋಟಿ ರೂ.ಗಳ ವೆಚ್ಚದಲ್ಲಿ ಕೊಡಗಿನಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸ್ಥಳೀಯ ಸಂಪ್ರದಾಯದಂತೆ ನಿರ್ಮಾಣವಾಗಿದೆ. ಕಚೇರಿ ಮುಖ್ಯವಲ್ಲ ಜನರ ಸಮಸ್ಯೆಗಳಿಗೆ ನ್ಯಾಯ ಕೊಡಿಸುವುದು ಬಹಳ ಮುಖ್ಯ ಎಂದರು.
ಚಿಕ್ಕಹೆಜ್ಜಾಲದಲ್ಲಿ ಪೊಲೀಸ್ ತರಬೇತಿ ಶಾಲೆ ಸ್ಥಾಪಿಸುವ ಬಗ್ಗೆ ಬೇಡಿಕೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಬಂದರೆ ಪರಿಶೀಲಿಸಲಾಗುವುದು ಎಂದರು.
ತಡೆಯಾಜ್ಞೆ ತೆರವಿನ ನಂತರ ಕಟ್ಟಡ ನಿರ್ಮಾಣ
ಹಿಂದಿನ ಸರ್ಕಾರದ ಅವಧಿಯಲ್ಲಿ ಗುಂಡೂರಾವ್ ಬಡಾವಣೆಯಲ್ಲಿನ ಪೊಲೀಸ್ ಇಲಾಖೆ ಕಟ್ಟಡಕ್ಕೆ ಅಡಿಪಾಯ ಹಾಕಿದ್ದು, ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವುಗೊಂಡ ನಂತರ ಕ್ರಮ ವಹಿಸಲಾಗುವುದು ಎಂದರು.