ʼಪಶ್ಚಾತ್ತಾಪʼ ಗ್ಯಾರಂಟಿಯೂ.. ಪ್ರಧಾನಿಗಳ ಸಮರ್ಥನೆಯೂ..

Most read

ಮತ್ತೊಮ್ಮೆ ಮೋದಿ ಮುಖ ನೋಡಿ ಮತ ಹಾಕಿ ಬಹುಮತದಿಂದ ಬಿಜೆಪಿ ಪಕ್ಷವನ್ನು ಆರಿಸಿದ್ದೇ ಆದರೆ ಈ ದೇಶದ ಜನರಿಗೆ ಪಶ್ಚಾತ್ತಾಪ ಪಡಲೂ ಅವಕಾಶ ಸಿಗುವುದಿಲ್ಲ. ಅಷ್ಟರಲ್ಲಿ ಕಾಲ ಮಿಂಚಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲ ಗೊಳಿಸಲಾಗಿರುತ್ತದೆ. ಸಂವಿಧಾನ ಬದಲಾಗಿರುತ್ತದೆ. ಸರ್ವಾಧಿಕಾರ ಘೋಷಣೆಯಾಗಿರುತ್ತದೆ. ಆಗ ಈ ದೇಶದ ಜನತೆ ಅದೆಷ್ಟೇ ಪಶ್ಚಾತ್ತಾಪ ಪಟ್ಟರೂ ಕಾಲ ಮೀರಿ ಹೋಗಿರುತ್ತದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ನೀವೇ ಪಶ್ಚಾತ್ತಾಪ ಪಡುತ್ತೀರಿ” ಎಂದು ಸಾರ್ವಜನಿಕವಾಗಿ ಸಂದರ್ಶನವೊಂದರಲ್ಲಿ ಇಡೀ ದೇಶಕ್ಕೆ ಪ್ರಧಾನಿಗಳು ಎಚ್ಚರಿಸಿದ್ದಾರೆ. ಮೋದಿಯವರು ಜಾರಿಗೆ ತಂದ ಎಲೆಕ್ಟೋರಲ್‌ ಬಾಂಡ್ ತಿದ್ದುಪಡಿ ಕಾಯಿದೆಯೇ ‘ಅಸಾಂವಿಧಾನಿಕ ಹಾಗೂ ಅಕ್ರಮ’ ಎಂದು ಸುಪ್ರೀಂಕೋರ್ಟ್ ಆದೇಶಿಸಿ ಬಾಂಡ್ ಹಗರಣದಲ್ಲಿ ನಡೆದ ಕಾನೂನಾತ್ಮಕ ಭ್ರಷ್ಟಾಚಾರವನ್ನು ಬಯಲಿಗೆಳೆದಿತ್ತು. ಈಗ ಸುಪ್ರೀಂಕೋರ್ಟ್ ನಡೆಯನ್ನೇ ಪ್ರಶ್ನಿಸಿದ ಮೋದಿ ‘ಬಾಂಡ್ ರದ್ದಾಗಿದ್ದರಿಂದಾಗಿ ಎಲ್ಲರೂ ಪಶ್ಚಾತ್ತಾಪ ಪಡುತ್ತೀರಿ’ ಎಂದು ಹೇಳಿದ್ದರ ಹಿಂದೆ ಸರ್ವಾಧಿಕಾರದ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

‘ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮೋದಿ ಪಕ್ಷಕ್ಕೆ 400 ಕ್ಕಿಂತ ಹೆಚ್ಚು ಸಂಸದರು ಆಯ್ಕೆಯಾಗುತ್ತಾರೆ, ಅಮೋಘ ಬಹುಮತದ ಮೂಲಕ ಸಂವಿಧಾನವನ್ನೇ ಬದಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಮಾನ್ಯಗೊಳಿಸಿ ಸರ್ವಾಧಿಕಾರಿ ಪ್ರಭುತ್ವವನ್ನು ಜಾರಿಗೆ ತರುತ್ತೇನೆ, ಆಗ ಎಲ್ಲರೂ ಪಶ್ಚಾತ್ತಾಪ ಪಡಲೇ ಬೇಕಾಗುತ್ತದೆ’ ಎನ್ನುವುದು ಮೋದಿಯವರ ಈ ಆತ್ಮವಿಶ್ವಾಸದ ಮಾತುಗಳ ಹಿಂದಿರುವ ಮರ್ಮವಾಗಿದೆ.

400 ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಇಷ್ಟೊಂದು  ವಿಶ್ವಾಸದಿಂದ ಹೇಳಲು ಅದು ಹೇಗೆ ಸಾಧ್ಯ? ಸಾಧ್ಯವಿದೆ. ಈಗಾಗಲೇ ಶಾಸಕಾಂಗ ಕಾರ್ಯಾಂಗಗಳನ್ನು ಕೈಗೊಂಬೆ ಮಾಡಿಕೊಳ್ಳಲಾಗಿದೆ. ಪತ್ರಿಕಾಂಗದ ಬಹುಭಾಗ ಮೋದಿ ವಶವಾಗಿವೆ. ಚುನಾವಣಾ ಆಯೋಗಕ್ಕೂ ಹೌದಪ್ಪಗಳನ್ನು ಆಯ್ಕೆ ಮಾಡಲಾಗಿದೆ. ಎದುರಾಡಿದವರ ಧ್ವನಿ ಅಡಗಿಸಲು ತನಿಖಾ ಸಂಸ್ಥೆಗಳು ಸನ್ನದ್ಧವಾಗಿವೆ. ಇವಿಎಂ ಯಂತ್ರಗಳ ತಿರುಚಿ ಮತಗಳ ಪಡೆಯುವ ಕಲೆ ಸಿದ್ಧಿಯಾಗಿದೆ. ಇವೆಲ್ಲವನ್ನೂ ಬಳಸಿ “ಇಸ್ ಬಾರ್ ಚಾರ್ ಸೌ ಪಾರ್” ಆಗಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಪ ಸ್ವಲ್ಪ ಪ್ರತಿರೋಧ ತೋರುತ್ತಿರುವ ಸರ್ವೋಚ್ಚ ನ್ಯಾಯಾಲಯಕ್ಕೂ ಚುನಾವಣೆಯ ನಂತರ ಕೇಸರಿ ನ್ಯಾಯಾಧೀಶರನ್ನು ನೇಮಕ ಮಾಡಿದರೆ ಮುಗೀತು ಮೋದಿಯವರು ಹೇಳಿದಂತೆ ಎಲ್ಲರೂ ಪಶ್ಚಾತ್ತಾಪ ಪಡುವ ಕಾಲ ಬಂದಂತೆ. ಇದೆಲ್ಲದರ ಸ್ಪಷ್ಟ ಅರಿವು ಇದ್ದವರು ಮಾತ್ರ ಈ ರೀತಿಯ ಆತ್ಮವಿಶ್ವಾಸದ ಮಾತುಗಳನ್ನು ಹೇಳಲು ಸಾಧ್ಯ.

ANI ಗೆ ಮೋದಿ ಸಂದರ್ಶನ

ಚುನಾವಣೆಯ ಸಂದರ್ಭದಲ್ಲಿ ANI ಎನ್ನುವ ಸುದ್ದಿ ಸಂಸ್ಥೆಗೆ ಮೋದಿಯವರು ಸಂದರ್ಶನ ಕೊಡುವುದರ ಹಿಂದಿನ ಉದ್ದೇಶವೇ ತಮ್ಮ ಎಲ್ಲಾ ತಪ್ಪುಗಳನ್ನು ಸರಿ ಎಂದು ಸಮರ್ಥಿಸಿ ಕೊಳ್ಳುವುದಾಗಿದೆ. ಪ್ರಿ ಸ್ಕ್ರಿಪ್ಟೆಡ್ ಮಾದರಿಯಲ್ಲಿ ಮೊದಲೇ ಸಿದ್ಧಗೊಳಿಸಿ ಕೊಟ್ಟ ಪ್ರಶ್ನೆಗಳಿಗೆ ಸಿದ್ಧ ಉತ್ತರಗಳನ್ನು ಮೋದಿ ಕೊಡುತ್ತಾ ಹೋದರು. ಚುನಾವಣಾ ಬಾಂಡ್ ಹಗರಣದ ಬಗ್ಗೆ ಇಲ್ಲಿಯವರೆಗೂ ಎಲ್ಲೂ ಬಾಯಿಬಿಡದ ವಿಶ್ವಗುರು ಈಗ ಅದರ ಸಮರ್ಥನೆಗೆ ಇಳಿದರು.

ಇಷ್ಟಕ್ಕೂ ಮೋದಿ ಹೇಳಿದ್ದಾದರೂ ಏನು? “ಈ ಚುನಾವಣಾ ಬಾಂಡ್ ಅಮಾನ್ಯಗೊಳಿಸಿ ಇಡೀ ದೇಶವನ್ನು ಕಪ್ಪುಹಣದತ್ತ ತಳ್ಳಲಾಗುತ್ತಿದೆ. ಇದರಿಂದ ಹೇಳ್ತೇನೆ ಎಲ್ಲರೂ ಪಶ್ಚಾತ್ತಾಪ ಪಡ್ತೀರಾ! ಚುನಾವಣೆಯಲ್ಲಿ ಕಪ್ಪುಹಣ ಎನ್ನುವುದು ಬಹು ದೊಡ್ಡ ಅಪಾಯಕಾರಿ ಆಟವಾಗಿದೆ. ಚುನಾವಣಾ ಬಾಂಡ್ ಇರದೇ ಹೋಗಿದ್ದರೆ  ಹಣ ಎಲ್ಲಿಂದ ಬಂತು? ಎಲ್ಲಿಗೆ ಹೋಯ್ತು? ಅಂತಾ ಹುಡುಕಿ ತೆಗೆಯುವ ತಾಕತ್ತು ಯಾವ ವ್ಯವಸ್ಥೆಯಲ್ಲಿ ಸಾಧ್ಯವಿದೆ?. ಇದೇ ಚುನಾವಣಾ ಬಾಂಡ್ ನ ಯಶಸ್ಸಿನ ಕಥೆ” ಎಂದು ಸ್ವಲ್ಪವೂ ಪಶ್ಚಾತ್ತಾಪ ಇಲ್ಲದೆ ಶತಮಾನದ ಹಗರಣವನ್ನು ಸಮರ್ಥನೆ ಮಾಡಿಕೊಂಡ ಮೋದಿಯವರ ಧೈರ್ಯವನ್ನು ಮೆಚ್ಚಲೇಬೇಕು. ಸರ್ವಾಧಿಕಾರಿಗೆ ಇರಬೇಕಾದ ಸರ್ವಸಂಪನ್ನ ಗುಣಗಳಿಗಾಗಿ ಅಚ್ಚರಿ ಪಡಬೇಕು.

ಇವರು ಹೇಳಿದಂತೆ ಕಪ್ಪು ಹಣ ನಿಯಂತ್ರಿಸಲು ಚುನಾವಣಾ ಬಾಂಡ್ ತಿದ್ದುಪಡಿ ಕಾಯಿದೆ ತಂದಿದ್ದೇ ಆಗಿದ್ದರೆ ಅದರಲ್ಲಿ ರಹಸ್ಯವನ್ನು ಅಳವಡಿಸಿದ್ದೇಕೆ? ಕಾರ್ಪೋರೇಟ್ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಕೊಟ್ಟ ಹಣ ಕಪ್ಪೋ ಬಿಳುಪೋ ಎಂಬುದನ್ನು ತನಿಖೆ ಮಾಡದೆ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದಾದರೂ ಯಾಕೆ? ‘ಯಾರು ಯಾವ ಪಕ್ಷಕ್ಕೆ ಹಣ ಕೊಟ್ಟರು, ಎಷ್ಟು ಕೊಟ್ಟರು, ಎಲ್ಲಿಂದ ತಂದು ಕೊಟ್ಟರು. ಯಾರಿಗೆ ಕೊಟ್ಟರು’ ಎನ್ನುವ ಮಾಹಿತಿಗಳನ್ನು ಬಹಿರಂಗ ಪಡಿಸಲಾಗದು ಎಂದು ತಿದ್ದುಪಡಿ ಕಾಯಿದೆಯಲ್ಲಿ ನಿರ್ಬಂಧಿಸಿದ್ದಾದರೂ ಯಾಕೆ?  ಇಡಿ ಐಟಿ ಸಿಬಿಐ ಮುಂತಾದ ತನಿಖಾ ಸಂಸ್ಥೆಗಳ ಮೂಲಕ ಕಂಪನಿಗಳ ಮೇಲೆ ದಾಳಿ ಮಾಡಿಸಿ ಹೆದರಿಸಿ ಅವರಿಂದ ಚುನಾವಣಾ ಬಾಂಡ್ ಮೂಲಕ ಹಣವನ್ನು ಬಿಜೆಪಿ ಪಕ್ಷ ಪಡೆದಿದ್ದಾದರೂ ಯಾಕೆ? ನಷ್ಟದಲ್ಲಿರುವ ಕಂಪನಿಗಳೂ ಸಹ ನೂರಾರು ಕೋಟಿ ಹಣವನ್ನು ಚುನಾವಣಾ ಬಾಂಡ್ ಮೂಲಕ ಮೋದಿ ಪಕ್ಷಕ್ಕೆ ಕೊಟ್ಟಿವೆಯಲ್ಲಾ ಅದು ಕಡುಕಪ್ಪು ಹಣವಲ್ಲದೆ ಮತ್ತೇನು? ಕಪ್ಪು ಹಣವನ್ನು ಕಾನೂನಾತ್ಮಕ ರೀತಿಯಲ್ಲಿ ಚುನಾವಣಾ ಬಾಂಡ್ ಮೂಲಕ ಪಡೆದುಕೊಂಡು ಕಪ್ಪು ಹಣ ನಿಯಂತ್ರಣಕ್ಕಾಗಿ ಈ ಕಾನೂನು ತರಲಾಗಿತ್ತು ಎಂದು ಹೇಳುವ ಮೋದಿ ಮಾತಲ್ಲಿ ಏನಾದರೂ ಸ್ವಲ್ಪವಾದರೂ ಸತ್ಯ ಇದೆಯಾ? ದೊಡ್ಡ ದೊಡ್ಡ ಕಂಪನಿಗಳಿಂದ ಬಾಂಡ್ ರೂಪದಲ್ಲಿ ನೂರಾರು ಕೋಟಿ ಹಣ ಪಡೆದು ಅವುಗಳಿಗೆ ಸಾವಿರಾರು ಕೋಟಿಗಳ ಸರಕಾರಿ ಕಾಮಗಾರಿಗಳ ಗುತ್ತಿಗೆ ನೀಡಿದ್ದರ ಹಿಂದೆ ಅದ್ಯಾವ ಪ್ರಾಮಾಣಿಕತೆ ಇದೆ?

ಈ ಯಾವ ಪ್ರಶ್ನೆಗಳಿಗೂ ಉತ್ತರಿಸದ ಮೋದಿಯವರು ‘ಚುನಾವಣಾ ಬಾಂಡ್ ಕಾಯಿದೆ ಸಮಸ್ಯೆಯಲ್ಲಾ, ಕಪ್ಪು ಹಣ ನಿಯಂತ್ರಣದ ಪರಿಹಾರ’ ಎಂದು ಸ್ವಲ್ಪವೂ ಹಿಂಜರಿಕೆ ಇಲ್ಲದೇ ಹೇಳಿದ್ದು ಬಂಡತನವಲ್ಲವೇ? ‘ಈ ಯೋಜನೆ ರದ್ದು ಪಡಿಸಿದ್ದಕ್ಕೆ ಮುಂದಿನ ದಿನಗಳಲ್ಲಿ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ’ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆಯನ್ನು ಮಾಡಿದರು ಹಾಗೂ ಇಡೀ ದೇಶವಾಸಿಗಳಿಗೆ ಬಹಿರಂಗ ಚಿತಾವಣೆಯನ್ನೂ ಕೊಟ್ಟರು.

“ಚುನಾವಣಾ ಬಾಂಡ್ ತಿದ್ದುಪಡಿಯು ಈ ಹಿಂದಿದ್ದಕ್ಕಿಂತಲೂ ಅತೀ ಹೆಚ್ಚು ಪಾರದರ್ಶಕವೂ ಹಾಗೂ ಈ ನೀತಿಯನ್ನು ಸುಧಾರಿಸಲು ಅವಕಾಶವೂ ಇತ್ತು” ಎಂದೂ ಸಂದರ್ಶನದಲ್ಲಿ ಪ್ರಧಾನಿಗಳು ಹೇಳಿದರು. ಈ ಮೋದಿ ನೀತಿ ಅಷ್ಟೊಂದು ಪಾರದರ್ಶಕವಾಗಿದ್ದರೆ ಚುನಾವಣಾ ಬಾಂಡ್ ವಿವರಗಳನ್ನ ಯಾರಿಗೂ ತಿಳಿಯದಂತೆ ಗುಪ್ತವಾಗಿಡಬೇಕೆಂಬ ನಿಯಮ ಮಾಡಿದ್ದಾದರೂ ಯಾಕೆ? ಸುಪ್ರೀಂಕೋರ್ಟ್ ಬಾಂಡ್ ವಿವರವನ್ನು ಸಲ್ಲಿಸಲು SBI ಬ್ಯಾಂಕಿಗೆ ಆದೇಶಿಸಿದಾಗ ಮೂರು ತಿಂಗಳು ಸಮಯ ಕೇಳಿದ್ದಾದರೂ ಯಾಕೆ? ಪಾರದರ್ಶಕತೆ ಅಂದ್ರೆ ಬಚ್ಚಿಟ್ಟಿದ್ದನ್ನು ಮುಚ್ಚಿಡುವುದಾ?

ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಸುಳ್ಳುಗಳ ಸಮರ್ಥನೆಯ ಎಕ್ಸ್‌ಪರ್ಟ್ ಚೌಕೀದಾರರಿಗೆ ಕೇಳಬಹುದಾಗಿದೆ. ಆದರೆ ಕೇಳುವುದಾದರೂ ಹೇಗೆ? ಕಳೆದ ಹತ್ತು ವರ್ಷಗಳ ಅವರ ಆಡಳಿತದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಸುದ್ದಿಗೋಷ್ಠಿಯನ್ನೂ ಕರೆಯದ ಪ್ರಧಾನ ಮಂತ್ರಿಗಳಿಗೆ ಪ್ರಶ್ನೆ ಕೇಳುವುದಾದರೂ ಯಾವಾಗ? ಪೂರ್ವಯೋಜಿತ ಸಂದರ್ಶನದಲ್ಲಿ ಸುಳ್ಳು ಸಮರ್ಥನೆಗಳಿಗೆ ಕೌಂಟರ್ ಪ್ರಶ್ನೆ ಕೇಳುವ ಅವಕಾಶವಾದರೂ ಎಲ್ಲಿದೆ? ಇಂತಹ ಏಕಪಕ್ಷೀಯ ಪ್ರಧಾನಿಯನ್ನು ಭಾರತ ಹಿಂದೆಂದೂ ಕಂಡಿದ್ದೇ ಇಲ್ಲ.

ಇದನ್ನೂ ಓದಿ- ಸಿದ್ದರಾಮಯ್ಯ ದೀಪಗಳು!!

ಹೌದು.. ಎಲ್ಲರೂ ಖಂಡಿತವಾಗಿ ಪಶ್ಚಾತ್ತಾಪ ಪಡಲೇಬೇಕಿದೆ. ಚುನಾವಣಾ ಬಾಂಡ್ ರದ್ದತಿಯಾಗಿದ್ದಕ್ಕಲ್ಲ, ಇಂತಹ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯನ್ನು ಈ ದೇಶದ ಪ್ರಧಾನಿಯನ್ನಾಗಿಸಿದ್ದಕ್ಕೆ. ಮತ್ತೊಮ್ಮೆ ಮೋದಿ ಮುಖ ನೋಡಿ ಮತ ಹಾಕಿ ಬಹುಮತದಿಂದ ಬಿಜೆಪಿ ಪಕ್ಷವನ್ನು ಆರಿಸಿದ್ದೇ ಆದರೆ ಈ ದೇಶದ ಜನರಿಗೆ ಪಶ್ಚಾತ್ತಾಪ ಪಡಲೂ ಅವಕಾಶ ಸಿಗುವುದಿಲ್ಲ. ಅಷ್ಟರಲ್ಲಿ ಕಾಲ ಮಿಂಚಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲ ಗೊಳಿಸಲಾಗಿರುತ್ತದೆ. ಸಂವಿಧಾನ ಬದಲಾಗಿರುತ್ತದೆ. ಸರ್ವಾಧಿಕಾರ ಘೋಷಣೆಯಾಗಿರುತ್ತದೆ. ಆಗ ಈ ದೇಶದ ಜನತೆ ಅದೆಷ್ಟೇ ಪಶ್ಚಾತ್ತಾಪ ಪಟ್ಟರೂ ಕಾಲ ಮೀರಿ ಹೋಗಿರುತ್ತದೆ.

ಮುಂದಾಗುವುದನ್ನು ಈಗಲೇ ಮನಗಂಡು ಸುಳ್ಳು ಸಮರ್ಥನೆಗಳ ಹಿಂದಿರುವ ಸತ್ಯವನ್ನು ಅರಿತುಕೊಂಡು, ಭಾವತೀವ್ರತೆಯ ಪ್ರಚೋದನೆಗೊಳಗಾಗದೇ ವಾಸ್ತವವನ್ನು ತಿಳಿದುಕೊಂಡು ಈ ಚುನಾವಣೆಯಲ್ಲಿ ಈ ದೇಶವಾಸಿಗಳು ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸದೇ ಇದ್ದರೆ ಮುಂದೆ ಪಶ್ಚಾತ್ತಾಪ ಪಡಲೂ ಅವಕಾಶ ಇಲ್ಲವಾಗುತ್ತದೆ. ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಹಕ್ಕು ಬಾಧ್ಯತೆಗಳೇ ಇಲ್ಲವಾಗುತ್ತವೆ. ಮುಂದಿನ ತಲೆಮಾರು ಆತಂಕದಲ್ಲೇ ಬದುಕಬೇಕಾಗುತ್ತದೆ. ಸಂವಿಧಾನದ ಅಳಿವು ಉಳಿವು ಈಗ ಈ ದೇಶದ ಜನತೆಯ ಬೆರಳ ತುದಿಯಲ್ಲಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article