ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದ್ರೆ ಜನರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ?: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ

Most read

ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದ್ರೆ ಜನರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ..? ಕೋರ್ಟ್‌ನಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಅಂದ್ರೆ ಎಲೆಕ್ಷನ್‌ ಕೆಲಸ ಇತ್ತು ಅಂತ ಸಾಬೂಬು ಹೇಳ್ತೀರ ಎಂದು ಉಪ ವಿಭಾಗಾಧಿಕಾರಿಗಳನ್ನು (ಎಸಿ) ಸಚಿವ ಕೃಷ್ಣ ಬೈರೇಗೌಡ ಅವರು ತರಾಟೆಗೆ ತೆಗೆದುಕೊಂಡರು.

ಎಸಿ ನ್ಯಾಯಾಲಯಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸದೆ ಬಾಕಿ ಉಳಿಸಿಕೊಂಡಿರುವ ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ಆಯ್ದ 30 ಉಪ-ವಿಭಾಧಿಕಾರಿಗಳು ಹಾಗೂ ವಲಯ ಆಯುಕ್ತರ ಜೊತೆ ಇಂದು ವಿಕಾಸಸೌಧದಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಯಿತು.

ಈ ವೇಳೆ ಉಪ-ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ ಅವರು, “ಹಲವು ವರ್ಷಗಳಿಂದ ಎಸಿ ನ್ಯಾಯಾಲಯಗಳಿಗೆ ಅಲೆದಾಡಿ ಜನ ಬಸವಳಿಸಿದ್ದಾರೆ. ಹೀಗಾಗಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ನಾವು ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಓಡಾಡಿ ಸಭೆ ನಡೆಸಿ ಎಲ್ಲಾ ಅಧಿಕಾರಿಗಳಿಗೂ ಗುರಿ ನಿಗದಿ ಮಾಡಲಾಗಿದೆ. ಆದರೆ, ಕಳೆದ ಮಾರ್ಚ್‌ನಿಂದ ಪ್ರಕರಣ ವಿಲೇವಾರಿ ಕೆಲಸ ಮತ್ತೆ ನಿಂತ ನೀರಾಗಿದೆ” ಎಂದ ತೀವ್ರ ಅಸಮಾಧಾನ ಹೊರಹಾಕಿದರು.

“ಮಾರ್ಚ್‌ ತಿಂಗಳವರೆಗೆ ಎಸಿ ನ್ಯಾಯಾಲಯಗಳಲ್ಲಿ ತಕರಾರು ಪ್ರಕರಣಗಳ ವಿಲೇವಾರಿ ವೇಗವಾಗಿಯೇ ಇತ್ತು. ಆದರೆ, ತದನಂತರ ಈ ವೇಗ ಇಳಿಮುಖವಾಗಿ ಅಧಿಕಾರಿಗಳು ಮತ್ತೆ ಹಳೆಯ ರೀತಿಯೇ ವರ್ತಿಸುತ್ತಿದ್ದಾರೆ. ಯಾಕೆ ಹೀಗೆ..? ಎಂದು ಪ್ರಶ್ನಿಸಿದರೆ ಚುನಾವಣೆ ನೆಪ ಹೇಳುತ್ತಾರೆ. ಇವರಿಗೆ ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದ್ರೆ ಜನಪರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ..?” ಎಂದು ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ರಾಜ್ಯಾದ್ಯಂತ ಎಸಿ ನ್ಯಾಯಾಲಯಗಳಲ್ಲಿ ಒಟ್ಟಾರೆ 36,430 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಅತ್ಯಧಿಕ ಬೆಂಗಳೂರು ಉತ್ತರ ವಲಯದಲ್ಲಿ 5419 ಹಾಗೂ ಬೆಂ.ದಕ್ಷಿಣ ವಲಯದಲ್ಲಿ 4351 ಪ್ರಕರಣಗಳು ಬಾಕಿ ಇವೆ. ಅಲ್ಲದೆ, ಈ ಎರಡೂ ವಿಭಾಗದಲ್ಲಿ ಅಧಿಕಾರಿಗಳು ಶೇ.65ಕ್ಕಿಂತ ಹೆಚ್ಚು ತನ್ನ ಕಾರ್ಯಕ್ಷೇತ್ರದ (ಜ್ಯೂರಿ ಸೆಕ್ಷನ್) ಹೊರಗಿನ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದಾರೆ. ಪ್ರಕರಣಗಳ ಇತ್ಯರ್ಥವೂ ಆಮೆ ಗತಿಯಲ್ಲಿ ಸಾಗಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸಚಿವರ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡರು.

ಬೆಂ.ಉತ್ತರ ವಿಭಾಗಾಧಿಕಾರಿ ಪ್ರಮೋದ್‌ ಪಾಟೀಲ್‌ ಹಾಗೂ ಬೆಂ.ದಕ್ಷಿಣ ವಿಭಾಗಾಧಿಕಾರಿ ರಜನೀಕಾಂತ ಚೌಹ್ಹಾಣ್‌ ವಿರುದ್ಧ ಆಕ್ರೋಶ ಹೊರಹಾಕಿದ ಸಚಿವರು, “ನಿಮ್ಮ ಕಾರ್ಯಕ್ಷೇತ್ರದ ಹೊರಗಿನ ಪ್ರಕರಣಗಳನ್ನೂ ಕಾನೂನು ಬಾಹೀರವಾಗಿ ದಾಖಲಿಸಿಕೊಂಡಿದ್ದೀರ. ಹೀಗೆ ಮಾಡಲು ಎಷ್ಟು ಹಣ ತೆಗೆದುಕೊಂಡಿರಿ” ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೆ, “ನಾವು ಒಳ್ಳೆಯ ಮಾತಿನಿಂದ ಹೇಳಿದರೆ ನಿಮ್ಮ ತಲೆಗೆ ಹೋಗೋದೆ ಇಲ್ಲ, ನಿಮಗೆ ನಿಮ್ಮ ಭಾಷೆಯಲ್ಲೇ ಉತ್ತರ ನೀಡಬೇಕು” ಎಂದು ಎಚ್ಚರಿಸಿದರು.

ಇನ್ನೂ ತುಮಕೂರು ಜಿಲ್ಲೆಯ ಎಸಿ ಕೋರ್ಟ್‌ನಲ್ಲಿ ಕಳೆದ ಮಾರ್ಚ್‌ನಲ್ಲಿ 1373 ಪ್ರಕರಣಗಳು ದಾಖಲಾಗಿದ್ದರೆ, ಮಧುಗಿರಿಯಲ್ಲಿ 898 ಪ್ರಕರಣಗಳು ದಾಖಲಾಗಿದೆ. ಆದರೆ, ಇಷ್ಟೂ ಪ್ರಕರಣಗಳ ಪೈಕಿ ಕಳೆದ ಐದು ತಿಂಗಳಿನಿಂದ ಯಾವೊಂದು ಪ್ರಕರಣದಲ್ಲೂ ಮಧುಗಿರಿ ಉಪ-ವಿಭಾಗಾಧಿಕಾರಿ ಶಿವಪ್ಪ ಹಾಗೂ ತುಮಕೂರು ಉಪ-ವಿಭಾಗಾಧಿಕಾರಿ ಗೌರವ್‌ ಶೆಟ್ಟಿ ಯಾವುದೇ ಕ್ರಮ ಜರಿಗಿಸಿಲ್ಲ. ಇವರ ವಿರುದ್ಧವೂ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಅಸಮಾಧಾನ ಹೊರಹಾಕಿದರು. ಅಲ್ಲದೆ, ಎಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳಿಗೆ ನೋಟೀಸ್‌ ಜಾರಿಗೊಳಿಸಿ ಕಠಿಣ ಕ್ರಮ ಜರುಗಿಸುವಂತೆಯೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸೂಚಿಸಿದರು.

More articles

Latest article