ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಂತರ ರುಪಾಯಿ ಸುಲಿಗೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರರ ವಿರುದ್ಧ FIR ದಾಖಲಿಸು ವಂತೆ 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಜನಾಧಿಕಾರಸಂಘರ್ಷ ಪರಿಷತ್‌ನ ಆದರ್ಶ ಆರ್. ಐಯ್ಯರ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಶುಕ್ರವಾರ ನ್ಯಾಯಾಲಯ FIR ದಾಖಲಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿಕೆ ಮಾಡಿದೆ.
ತಿಲಕ್‌ನಗರ ಪೊಲೀಸರಿಗೆ FIR ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿ ಮತ್ತು ಇ.ಡಿ. ಇಲಾಖೆ ವಿರುದ್ಧ ದೂರು ದಾಖಲಿಸುವಂತೆ ಆದೇಶಿಸಿದೆ.
2019 ಏಪ್ರಿಲ್ ತಿಂಗಳಿನಿಂದ 2022ರ ಆಗಸ್ಟ್ ತಿಂಗಳವರೆಗೆ ಉದ್ಯಮಿ ಅನಿಲ್ ಅಗರ್ ವಾಲ್ ಅವರ ಸಂಸ್ಥೆಯಿಂದ ಸುಮಾರು 230 ಕೋಟಿ ರುಪಾಯಿ ಮತ್ತು ಅರೊಬಿಂದೋ ಫಾರ್ಮಸಿ ಸಂಸ್ಥೆಯಿಂದ 49 ಕೋಟಿ ರೂ.ನಷ್ಟು ಚುನಾವಣಾ ಬಾಂಡ್ ಗಳ ಮೂಲಕ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಚುನಾವಣೆ ಬಾಂಡ್ ಮೂಲಕ ಸುಲಿಕೆ ಆರೋಪದಲ್ಲಿ ನಿರ್ಮಾಲ ಸೀತಾರಾಮನ್ ವಿರುದ್ಧ FIR ದಾಖಲು ಮಾಡಲು ಕೋರ್ಟ್ ಆದೇಶ ನೀಡಿದೆ. ಅವರು ರಾಜಿನಾಮೆ ಕೊಡ್ತಾರ? ಅವರು ಮೊದಲು ರಾಜಿನಾಮೆ ಕೊಡಲಿ ನಂತರ ಬಾಂಡ್ ದುರುಪಯೋಗ ಮಾಡಿಕೊಂಡಿರುವುದರಿಂದ ಪ್ರಧಾನಿ ಮೋದಿ ಸಹ ರಾಜಿನಾಮೆ ನೀಡಲಿ ಎಂದು ಹೇಳಿದ್ದಾರೆ.