ಚುನಾವಣಾ ಅಕ್ರಮಗಳು; ಸುಪ್ರೀಂಕೋರ್ಟ್‌ ನ್ಯಾಯ ಒದಗಿಸುವ ಭರವಸೆ ಇದೆ: ಪ್ರದೇಶ ಕಾಂಗ್ರೆಸ್‌ ವಿಶ್ವಾಸ

Most read

ಬೆಂಗಳೂರು: ಚುನಾವಣಾ ಆಯೋಗದ ಆಕ್ರಮಗಳು ಹಾಗೂ ಕರ್ತವ್ಯ ಲೋಪಗಳನ್ನು ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದಾಖಲೆ ಸಹಿತ ದೇಶದ ಮುಂದಿಟ್ಟಿರುವಾಗ, ಸಾಂವಿಧಾನಿಕ ಸಂಸ್ಥೆಯಾದ ಆಯೋಗವು ಉತ್ತರ ನೀಡದೆ ನುಣುಚಿಕೊಳ್ಳುತ್ತಿದೆ. ಆದರೆ ಈ ಪ್ರಕಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನ್ಯಾಯ ನೀಡಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಕೆಪಿಸಿಸಿ ವಕ್ತಾರರಾದ ರಮೇಶ್ ಬಾಬು ಮತ್ತು ಐಶ್ವರ್ಯ ಮಹದೇವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್‌ ಬಾಬು, ಪಾರದರ್ಶಕ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗದ ವೈಫಲ್ಯಗಳನ್ನು ರಾಹುಲ್ ಗಾಂಧಿ ದಾಖಲೆ ಸಮೇತ ಬಯಲು ಮಾಡಿದ್ದಾರೆ. ದುರಂತ ಎಂದರೆ ಚುನಾವಣಾ ಆಯೋಗ, ತನ್ನ ವೈಫಲ್ಯಗಳಿಂದ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡುವ ಕೆಲಸ ಮಾಡುತ್ತಿದೆ. ಇದನ್ನು ಪ್ರಶ್ನೆ ಮಾಡುವವರಿಗೆ ನೋಟಸ್ ನೀಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆಪಾದಿಸಿದರು.

ಇದು ದೇಶದ ಸಂವಿಧಾನದ ಅಡಿಯಲ್ಲಿ ಪಾರದರ್ಶಕ ಚುನಾವಣೆಗೆ ಆಗ್ರಹಿಸುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೂ ಇದೆ. ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿ ಉತ್ತರ ನೀಡಬೇಕಿತ್ತು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನ್ಯಾಯ ನೀಡಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದರು.

ಚುನಾವಣಾ ಆಯೋಗ ರಾಜಕೀಯ ಪಕ್ಷವೊಂದರ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಕರ್ನಾಟಕ ಕಾಂಗ್ರೆಸ್ ಖಂಡಿಸುತ್ತದೆ. ಆಯೋಗಕ್ಕೆ ಸಂವಿಧಾನದ ಮೂಲಕ ನೀಡಿರುವ ಹಕ್ಕು ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಚುನಾವಣಾ ಪ್ರಕ್ರಿಯೆ ಬಗ್ಗೆ ಯಾವುದೇ ವ್ಯಕ್ತಿ ಪ್ರಶ್ನೆ ಎತ್ತಿದರೆ ಆಯೋಗ ಉತ್ತರ ನೀಡಬೇಕು ಎಂದರು.

ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ಐಶ್ವರ್ಯ ಮಹದೇವ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಅಡಿಪಾಯವಾದರೆ ಪಾರದರ್ಶಕ ಚುನಾವಣೆ ಅದರ ಆಧಾರ ಸ್ತಂಭ. ಈ ಚುನಾವಣಾ ಪ್ರಕ್ರಿಯೆ ಪಾವಿತ್ರತ್ಯೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಚುನಾವಣೆ ಸಾರ್ವಜನಿಕರ ಪರವಾಗಿರಬೇಕು. ದುರಂತ ಎಂದರೆ ಇತ್ತೀಚಿನ ಚುನಾವಣೆಗಳಲ್ಲಿನ ಅಕ್ರಮಗಳು ಆಯೋಗದ ಮೇಲೆ ಅನುಮಾನ ಮೂಡುವಂತೆ ಮಾಡಲಾಗಿದೆ ಎಂದು ಹೇಳಿದರು.

ಚುನಾವಣಾ ಅಕ್ರಮ ಕೇವಲ ಮಹದೇವಪುರದಲ್ಲಿ ಮಾತ್ರವಲ್ಲ. ಬಿಹಾರದಲ್ಲೂ 65 ಲಕ್ಷ ಮತದಾರರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ ಪರಿಷ್ಕರಣೆ ಹೆಸರಿನಲ್ಲಿ ಅಧಿಕಾರದಲ್ಲಿರುವ ಸರ್ಕಾರಕ್ಕೆ ಮತ ಹಾಕದ ಬಡವರು, ದಲಿತರು, ಆದಿವಾಸಿಗರ, ಹಿಂದುಳಿದ ವರ್ಗಗಳ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನ ಮಾಡಲಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಮತದಾನದ ಕಡೇಯ 1 ಗಂಟೆಯಲ್ಲಿ 70 ಲಕ್ಷ ಮತದಾನ ನಡೆದಿವೆ. ಈ ಎಲ್ಲಾ ಸಂದರ್ಭಗಳಲ್ಲೂ ರಾಹುಲ್ ಗಾಂಧಿ ಅವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಿಸಿಟಿವಿ ಮಾಹಿತಿ ಕೇಳಿದ್ದೆವು. ಆದರೆ ಚುನಾವಣಾ ಆಯೋಗ ಅವುಗಳನ್ನು ನಾಶ ಮಾಡಿವೆ. ಯಾವುದೇ ಹೊಣೆಗಾರಿಕೆ ಇಲ್ಲದೆ ಲಕ್ಷಾಂತರ ಮತಗಳನ್ನು ಹಾಕಲಾಗಿದೆ ಎಂದರು.

ಈ ಹೋರಾಟ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಅವರ ನಡುವಣ ಸಂಘರ್ಷವಲ್ಲ. ಇದು ದೇಶದ ಸಾಂವಿಧಾನಿಕ ಸಂಸ್ಥೆ, ಮತದಾನದ ಪಾವಿತ್ರ್ಯತೆ ರಕ್ಷಣೆಯ ವಿಚಾರ. ರಾಹುಲ್ ಗಾಂಧಿ ಅವರು ಈ ಆರೋಪದ ಬಗ್ಗೆ ಯಾಕೆ ಪ್ರಮಾಣ ಸಲ್ಲಿಸುತ್ತಿಲ್ಲ ಎಂದು ಕೇಳುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರತಿಜ್ಞೆ ಸ್ವೀಕರಿಸಿ ಅಧಿಕಾರ ಪಡೆದಿದ್ದು, ಅದೇ ಪ್ರತಿಜ್ಞೆ ಮೇಲೆ ಮಾತನಾಡುತ್ತಿದ್ದಾರೆ. ಚುನಾವಣಾ ಆಯೋಗದ ನಿಯಮದಲ್ಲೇ ಇದಕ್ಕೆ ಅವಕಾಶವಿಲ್ಲ. ಆದರೂ ಚುನಾವಣಾ ಆಯೋಗ ಇದನ್ನು ಕೇಳುತ್ತಿದೆ ಎಂದು ಆಪಾದಿಸಿದರು.

More articles

Latest article