ಹೊಸದಿಲ್ಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ದೇಶದದ 96 ಕ್ಷೇತ್ರಗಳಲ್ಲಿ ಇಂದು ನಡೆಯುತ್ತಿದ್ದು, ಒಂಭತ್ತು ಗಂಟೆಯ ವೇಳಗೆ ಶೇ.10ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಂಭತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ಒರಿಸ್ಸಾ ವಿಧಾನಸಭೆ ಚುನಾವಣೆ ಕೂಡ ಇಂದು ನಡೆಯುತ್ತಿದೆ.
ಆಂಧ್ರಪ್ರದೇಶ 25, ಬಿಹಾರದ 5, ಜಾರ್ಖಂಡ್ ನ 4, ಮಧ್ಯಪ್ರದೇಶದ 8, ಮಹಾರಾಷ್ಟ್ರದ 11, ಒರಿಸ್ಸಾದ 4, ತೆಲಂಗಾಣದ 17, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳದ 8, ಜಮ್ಮು ಕಾಶ್ಮೀರದ 1 ಲೋಕಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, 9 ಗಂಟೆಯ ವೇಳೆಗೆ ಶೇ. 10.35ರಷ್ಟು ಮತದಾನ ನಡೆದಿದೆ.
96 ಕ್ಷೇತ್ರಗಳ ಪೈಕಿ ಶೇ. 44ರಷ್ಟು ಚುನಾವಣೆಗಳು ಅವಿಭಜಿತ ಆಂಧ್ರಪ್ರದೇಶದಲ್ಲಿ (ಆಂಧ್ರ ಮತ್ತು ತೆಲಂಗಾಣ) ನಡೆಯುತ್ತಿವೆ. ಇದರೊಂದಿಗೆ ದಕ್ಷಿಣ ಭಾರತದ ಎಲ್ಲ ಕ್ಷೇತ್ರಗಳಿಗೂ ಮತದಾನ ಸಂಪೂರ್ಣಗೊಳ್ಳಲಿದೆ.
2019ರ ನಂತರ ಜಮ್ಮು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಶ್ರೀನಗರ ಲೋಕಸಭಾ ಕ್ಷೇತ್ರದ ಮತದಾನ ನಡೆಯುತ್ತಿದೆ. ಅನಂತ ನಾಗ್-ರಾಜೌರಿ ಕ್ಷೇತ್ರದ ಚುನಾವಣೆ ಮೇ 25ರಂದು ನಡೆಯಲಿದೆ.
ಒರಿಸ್ಸಾದಲ್ಲಿ ನವೀನ್ ಪಟ್ನಾಯಕ್ ಅವರ ನೇತೃತ್ವದ ಬಿಜು ಜನತಾ ದಳ ಮತ್ತು ಆಂಧ್ರಪ್ರದೇಶದಲ್ಲಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ NDA ಒಕ್ಕೂಟ ಅಥವಾ INDIA ಒಕ್ಕೂಟದ ಭಾಗವಾಗಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೈತ್ರಿಕೂಟಕ್ಕೆ ವಿಷಯಾಧಾರಿತ ಬೆಂಬಲ ನೀಡುವುದಾಗಿ ಈ ಎರಡು ಪಕ್ಷಗಳು ಹೇಳಿವೆ. ಇಂದು ನಡೆಯಲಿರುವ ಚುನಾವಣೆಯಲ್ಲಿ ಈ ಎರಡು ಪಕ್ಷಗಳ ಶಕ್ತಿ ಪರೀಕ್ಷೆಗೆ ಒಳಪಡಲಿದೆ.
ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್, ಅಜಯ್ ಮಿಶ್ರಾ, ತೃಣಮೂಲ ಕಾಂಗ್ರೆಸ್ ನಾಯಕರಾದ ಮಹುವಾ ಮೊಯಿತ್ರಾ, ಶತ್ರುಘ್ನ ಸಿನ್ಹಾ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್., ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ, AIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರುಗಳು ಇಂದು ನಡೆಯುತ್ತಿರುವ ಚುನಾವಣಾ ಕಣದಲ್ಲಿರುವ ಪ್ರಮುಖ ಹುರಿಯಾಳುಗಳಾಗಿದ್ದಾರೆ.
ಇಂದು 4ನೇ ಹಂತದ ಲೋಕಸಭಾ ಚುನಾವಣೆ. ಬೆಳಗ್ಗೆ 9 ಗಂಟೆಗೆ ಶೇಕಡಾ 10.35ರಷ್ಟು ಮತದಾನವಾಗಿದ್ದು, ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ ಎಂಬ ವಿವರ ಈ ಕೆಳಕಂಡಂತಿದೆ.
ಆಂಧ್ರಪ್ರದೇಶ– 09.05%
ಬಿಹಾರ – 10.18%
ಜಾರ್ಖಂಡ್– 11.48%
ಮಹಾರಾಷ್ಟ್ರ– 6.45%
ಜಮ್ಮು& ಕಾಶ್ಮೀರ– 5.07%
ತೆಲಂಗಾಣ – 9.51%
ಮಧ್ಯಪ್ರದೇಶ– 14.97%
ಒಡಿಶಾ– 9.23%
ಉತ್ತರಪ್ರದೇಶ– 11.67%
ಪಶ್ಚಿಮ ಬಂಗಾಳದಲ್ಲಿ 15.24%