ಬೆಂಗಳೂರು: ಲೋಕಸಭಾ ಚುನಾವಣೆಯ ಕಾವು ದೇಶದಾದ್ಯಂತ ಜೋರಾಗುತ್ತಿರುವಂತೆ ಮತದಾರರನ್ನು ಸೆಳೆಯಬಲ್ಲ ನಾಯಕರಿಗೆ ಎಲ್ಲೆಡೆ ಡಿಮ್ಯಾಂಡ್ ಶುರುವಾಗಿದೆ. ವಿಶೇಷವೆಂದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನೆರೆಯ ರಾಜ್ಯಗಳಲ್ಲೂ ಅಪಾರ ಅಭಿಮಾನಿಗಳಿದ್ದು, ಅಲ್ಲಿಂದಲೂ ಪ್ರಚಾರಕ್ಕೆ ಬರಲು ಕೋರಲಾಗಿದೆ.
ಭಾರತೀಯ ಜನತಾ ಪಕ್ಷಕ್ಕೆ ದಕ್ಷಿಣ ಭಾರತದ ಗೇಟ್ ಬಂದ್ ಮಾಡಿದ ಸಿದ್ಧರಾಮಯ್ಯ ಅವರ ನೀತಿ, ನಿಲುವುಗಳ ಬಗ್ಗೆ ಹೊರರಾಜ್ಯಗಳಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರಿಗೂ ಅಭಿಮಾನವಿದೆ. ಹಲವು ಗ್ಯಾರಂಟಿಗಳನ್ನು ನೀಡಿ, ಮಹಿಳೆಯರು, ಬಡವರಿಗೆ ಹತ್ತಿರವಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲಿಗರು ಹೆಚ್ಚಾಗಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಸಿದ್ದರಾಮಯ್ಯ ಅವರಿಗೆ ಬೇರೆ ರಾಜ್ಯದಲ್ಲೂ ಡಿಮ್ಯಾಂಡ್ ಜಾಸ್ತಿಯಾಗಿದೆ.
ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮಹಾರಾಷ್ಟ್ರ, ಕೇರಳ, ತಮಿಳುನಾಡಿಗೆ ಪ್ರಚಾರಕ್ಕೆಂದು ಬರಲು ಮನವಿ ಮಾಡಲಾಗಿದೆ. ಮಹಾರಾಷ್ಟ್ರ ಉಸ್ತುವಾರಿ ಚೆನ್ನಿತ್ತಲ್ಲರಿಂದ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದೆ. ಒಂದು ದಿನದ ಮಟ್ಟಿಗೆ ಪ್ರಚಾರ ಮಾಡಲು ಅವರು ಕೋರಿದ್ದಾರೆ.
ಇನ್ನು ರಾಹುಲ್ ಗಾಂಧಿ ಸ್ಪರ್ಧೆ ಮಾಡಿರುವ ಕೇರಳದ ವಯನಾಡು ಕ್ಷೇತ್ರದಲ್ಲಿಯೂ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಕರ್ನಾಟಕ ಗ್ಯಾರಂಟಿ ಯೋಜನೆಗಳು ಸಕ್ಸಸ್ ಆಗಿದ್ದು, ರಾಜ್ಯದ ಗ್ಯಾರಂಟಿಯನ್ನೇ ಮಾದರಿಯನ್ನಾಗಿಸಿ ತಂತ್ರ ರೂಪಿಸಲಿದ್ದಾರೆ. ಜೊತೆಗೆ ಹಿಂದುಳಿದ ಮತಗಳ ಟಾರ್ಗೆಟ್ ಮಾಡುವ ಪ್ಲ್ಯಾನ್ ಮಾಡಲಾಗಿದೆ. ಅಹಿಂದ ಮತಗಳನ್ನೆಲ್ಲಾ ಸೆಳೆಯುವ ತಂತ್ರಗಾರಿಕೆ ಇರುವುದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಬೇರೆ ರಾಜ್ಯಗಳಿಂದಲೂ ಆಹ್ವಾನ ನೀಡಲಾಗಿದೆ.