ಸೊಹ್ರಾಬುದ್ಧೀನ್ ಶೇಖ್‌ ನಕಲಿ ಎನ್‌ ಕೌಂಟರ್‌ ಆರೋಪಿಯಿಂದಲೂ ಚುನಾವಣಾ ಬಾಂಡ್‌ ಖರೀದಿ!

Most read

ಹೊಸದಿಲ್ಲಿ: ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ, ಘಟನಾನುಘಟಿ ನಾಯಕರು, ಅಧಿಕಾರಿಗಳು ಪಾಲ್ಗೊಂಡಿದ್ದ ಸೊಹ್ರಾಬುದ್ಧೀನ್‌ ಶೇಖ್ ನಕಲಿ ಎನ್‌ ಕೌಂಟರ್‌ ಪ್ರಕರಣದ ಆರೋಪಿಯಾಗಿದ್ದ ವಿಮಲ್‌ ಪಟ್ನಿ ಹೆಸರೂ ಕೂಡ ಚುನಾವಣಾ ಬಾಂಡ್‌ ಹೆಸರಲ್ಲಿ ದೇಣಿಗೆ ಕೊಟ್ಟವರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ!

ವಿಮಲ್‌ ಪಟ್ನಿ ವಂಡರ್‌ ಸಿಮೆಂಟ್‌ ಎಂಬ ಕಂಪೆನಿಯ ಮಾಲೀಕರಾಗಿದ್ದು, ಸೊಹ್ರಾಬುದ್ಧೀನ್‌ ಶೇಖ್‌ ನಕಲಿ ಎನ್‌ ಕೌಂಟರ್‌ ಪ್ರಕರಣದಲ್ಲಿ ಆರೋಪಿಯಾಗಿದ್ದು, ನಂತರ ಸಿಬಿಐನಿಂದ ಕ್ಲೀನ್‌ ಚಿಟ್‌ ಪಡೆದಿದ್ದರು.

ಗ್ಯಾಂಗ್‌ ಸ್ಟರ್‌ ಆಗಿದ್ದ ಸೊಹ್ರಾಬುದ್ಧೀನ್‌ ಶೇಖ್‌ ನಕಲಿ ಎನ್‌ ಕೌಂಟರ್‌ ಪ್ರಕರಣದಲ್ಲಿ ಹಲವಾರು ಬಿಜೆಪಿ ನಾಯಕರು, ಗುಜರಾತ್-ರಾಜಸ್ತಾನದ ಪೊಲೀಸ್‌ ಅಧಿಕಾರಿಗಳು ಆರೋಪಿಗಳಾಗಿದ್ದರು. ಆಗಿನ ಗುಜರಾತ್‌ ಗೃಹ ಸಚಿವ ಮತ್ತು ಈಗಿನ ಕೇಂದ್ರ ಸಚಿವ ಅಮಿತ್ ಶಾ ಕೂಡ ಪ್ರಕರಣದ ಆರೋಪಿಯಾಗಿ ಗಡೀಪಾರಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ನಂತರ ಎಲ್ಲರೂ ಪ್ರಕರಣದ ವಿಚಾರಣೆಯ ವಿವಿಧ ಹಂತಗಳಲ್ಲಿ ಖುಲಾಸೆಯಾಗಿದ್ದರು.

ಆರಂಭದಲ್ಲಿ ತನಿಖೆ ಕೈಗೊಂಡಿದ್ದ ಸಿಬಿಐ, ಸೊಹ್ರಾಬುದ್ಧೀನ್‌ ಶೇಖ್‌ ರಾಜಸ್ತಾನದ ಮಾರ್ಬಲ್‌ ವ್ಯಾಪಾರಿ ವಿಮಲ್‌ ಪಟ್ನಿ ಎಂಬಾತನಿಂದ ಹಣ ಸುಲಿಗೆ ಮಾಡಲು ಯತ್ನಿಸಿದ್ದ. ನಂತರ ಸೊಹ್ರಾಬುದ್ಧೀನ್‌ ಗಾಂಧಿನಗರ ಸಮೀಪ ಪೊಲೀಸ್‌ ಎನ್‌ ಕೌಂಟರ್‌ ನಲ್ಲಿ ಸಾವಿಗೀಡಾದ. ಆತನ ಪತ್ನಿ ಕಾಣೆಯಾದಳು. ಆತನ ಸಹಚರ ತುಳಸಿರಾಮ್‌ ಪ್ರಜಾಪತಿ ಕೂಡ ಪೊಲೀಸರಿಂದ ಕೊಲೆಯಾದ ಎಂದು ಚಾರ್ಜ್‌ ಶೀಟ್‌ ನಲ್ಲಿ ತಿಳಿಸಿತ್ತು. ವಿಮಲ್‌ ಪಟ್ನಿಗೆ ಸೊಹ್ರಾಬುದ್ಧೀನ್‌ ಬೆದರಿಕೆ ಒಡ್ಡಿದ್ದರಿಂದಲೇ ಕೊಲೆಗೀಡಾದ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ಹೇಳಲಾಗಿತ್ತು.

ಇದೀಗ ಮತ್ತೆ ವಿಮಲ್‌ ಪಟ್ನಿ ಹೆಸರು ಮುನ್ನೆಲೆಗೆ ಬಂದಿದ್ದು, ಈತ ಉದಯ್‌ ಪುರ ಮೂಲಕದ ವಂಡರ್‌ ಸಿಮೆಂಟ್ ಎಂಬ ಕಂಪೆನಿಗೆ ಮಾಲೀಕನಾಗಿದ್ದಾರೆ. 2022-23ನೇ ಸಾಲಿನ ಹಣಕಾಸು ವರ್ಷದಲ್ಲಿ 20 ಕೋಟಿ ರುಪಾಯಿಗಳನ್ನು ಈತ ಚುನಾವಣಾ ಬಾಂಡ್‌ ಮೂಲಕ ದೇಣಿಗೆಯಾಗಿ ಕೊಟ್ಟಿದ್ದಾರೆ.

ವಿಮಲ್‌ ಪಟ್ನಿಯ ಕಂಪೆನಿಯನ್ನು ಆತನ ಕುಟುಂಬ ಸದಸ್ಯರೇ ನಡೆಸುತ್ತಾರೆ. ಸಂಸ್ಥೆಯ ಚೇರ್‌ ಮನ್‌ ಅಶೋಕ್‌ ಪಟ್ನಿ ಆಗಿದ್ದರೆ, ಸುರೇಶ್‌ ಪಟ್ನಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದಾರೆ. ವಿವೇಕ್‌ ಪತ್ನಿ ನಿರ್ದೇಶಕರಾಗಿಯೂ ವಿನೀತ್‌ ಪಟ್ನಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಸ್ಥೆಯ ವೆಬ್‌ ಸೈಟ್‌ ಹೇಳುತ್ತದೆ. ವಿನೀತ್‌ ಪಟ್ನಿ ವಿಮಲ್‌ ಪಟ್ನಿಯ ಹಿರಿಯ ಮಗ.

2017ರಲ್ಲಿ ಜಾರಿಗೆ ಬಂದು ಈಗ ಸುಪ್ರೀಂಕೋರ್ಟ್‌ ನಿಂದ ಅಸಂವಿಧಾನಿಕ ಎಂದು ಘೋಷಣೆಯಾಗಿ ರದ್ದುಗೊಂಡಿರುವ ಚುನಾವಣಾ ಬಾಂಡ್‌ ಯೋಜನೆಯನ್ವಯ ಮೋದಿ ಸರ್ಕಾರ ಖಾಸಗಿ ಸಂಸ್ಥೆಗಳು ಮಾತ್ರವಲ್ಲದೆ, ನಾಗರಿಕರು, ಎನ್‌ ಜಿಓಗಳು, ಟ್ರಸ್ಟ್‌ ಗಳು, ಧಾರ್ಮಿಕ ಕೇಂದ್ರಗಳು, ಹಲವು ವ್ಯಕ್ತಿಗಳ ಗುಂಪುಗಳಿಗೂ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡುವ ಅವಕಾಶ ಕಲ್ಪಿಸಿತ್ತು.

ಇದೀಗ ಚುನಾವಣಾ ಆಯೋಗ ತನ್ನ ವೆಬ್‌ ಸೈಟ್‌ ನಲ್ಲಿ ಪ್ರಕಟಿಸಿರುವ ಚುನಾವಣಾ ಬಾಂಡ್‌ ಕುರಿತ ದಾಖಲೆಗಳಲ್ಲಿ ಕಂಡು ಬರುತ್ತಿರುವ ಹೆಸರುಗಳು ಹೊಸ ಕಥೆಗಳನ್ನು ಹೇಳುತ್ತಿದ್ದು, ವಂಡರ್‌ ಸಿಮೆಂಟ್‌ ಹೆಸರಿನ ಮೂಲಕ ರಾಜಕೀಯ ತಲ್ಲಣವನ್ನೇ ಸೃಷ್ಟಿಸಿದ್ದ ಸೊಹ್ರಾಬುದ್ಧೀನ್‌ ಪ್ರಕರಣ ಗೋರಿಯಿಂದ ಎದ್ದು ಬಂದಂತಾಗಿದೆ.

More articles

Latest article