ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ಮುಖಂಡರು ಕಾರ್ಪೊರೇಟ್ ಕಂಪೆನಿಗಳನ್ನು ಜಾರಿ ನಿರ್ದೇಶನಾಲಯದ ಮೂಲಕ ಬೆದರಿಸಿ 8000 ಕೋಟಿಗೂ ಹೆಚ್ಚು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್ ಐ ಟಿ) ರಚಿಸುವ ಸಾಧ್ಯತೆ ಇದೆ.
ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ ಸೇರಿ ಹಲವರ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಆದರೆ ಈ ಹಗರಣ ದೊಡ್ಡ ಪ್ರಮಾಣದ್ದಾದ್ದರಿಂದ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಮುಖಂಡರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಅಲ್ಲದೆ, ಸುಲಿಗೆಗೆ ಒಳಗಾದ ಹಲವಾರು ಕಾರ್ಪೊರೇಟ್ ಕಂಪೆನಿಗಳ ಉದ್ಯಮಿಗಳ ಹೇಳಿಕೆಗಳನ್ನೂ ಪಡೆಯಬೇಕಿದೆ. ಹೀಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವ ಸಾಧ್ಯತೆ ಹೆಚ್ಚಾಗಿದೆ.
ಆರೋಪಿಗಳು ಪ್ರಭಾವಿಗಳಾಗಿರುವ ಹಿನ್ನೆಲೆಯಲ್ಲಿ, 8000 ಕೋಟಿ ರುಪಾಯಿಗೂ ಹೆಚ್ಚಿನ ಸುಲಿಗೆ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅವಕಾಶವೂ ಇದೆಯಾದರೂ, ಸಿಬಿಐ ಸಂಸ್ಥೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವುದರಿಂದ ರಾಜ್ಯ ಪೊಲೀಸರಿಂದಲೇ ತನಿಖೆ ಮಾಡಿಸುವ ಸಾಧ್ಯತೆ ಹೆಚ್ಚು.
ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿರುದ್ಧ ದೂರು ನೀಡಿದರೆ, ರಾಜ್ಯಪಾಲರ ಅನುಮತಿ ಅಗತ್ಯ. ಆದರೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ಈಗ ದಾಖಲಾಗಿರುವುದು ಸಿಆರ್ ಪಿಸಿ 384ರ ಅಡಿಯ ಪ್ರಕರಣ. ಸೆಕ್ಷನ್ 384ನ್ನು ಸುಲಿಗೆ (ಎಕ್ಸ್ ಟಾರ್ಷನ್ ) ಪ್ರಕರಣವು ಕ್ರಿಮಿನಲ್ ಸ್ವರೂಪದ ಪ್ರಕರಣವಾಗಿದ್ದು ಇದನ್ನು ದಾಖಲಿಸಲು ಪೂರ್ವಾನುಮತಿಯ ಅಗತ್ಯವಿರುವುದಿಲ್ಲ. ಹೀಗಾಗಿಯೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್ ಐ ಆರ್ ದಾಖಲಿಸುವಂತೆ ನೇರವಾಗಿ ತಿಲಕ ನಗರ ಪೊಲೀಸರಿಗೆ ಆದೇಶಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ರಾಜ್ಯ ಬಿಜೆಪಿ ಘಟಕದ ಹಿಂದಿನ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಆಗಿನ ಉಪಾಧ್ಯಕ್ಷ (ಈಗ ರಾಜ್ಯಾಧ್ಯಕ್ಷ) ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ ಅಂದಿನ ಪದಾಧಿಕಾರಿಗಳ ಮೇಲೆ 8000 ಕೋಟಿ ರುಪಾಯಿಗೂ ಹೆಚ್ಚು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಲಾಗಿದೆ. ಈ ಪೈಕಿ ನಿರ್ಮಲಾ ಸೀತಾರಾಮನ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ.
ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಆದೇಶಿಸಿದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಆದರ್ಶ್ ಅಯ್ಯರ್ ಅವರನ್ನು ನೀಡಿದ್ದ ದೂರನ್ನು ದಾಖಲಿಸಿಕೊಳ್ಳಲಾಗಿದೆ.
ಕಾರ್ಪೊರೇಟ್ ಅಲ್ಯುಮಿನಿಯಂ ಮತ್ತು ಕಾಪರ್ ಜೈಂಟ್, ಎಂ/ಎಸ್ ಸ್ಕ್ವೇರ್ ಲೈಟ್, ವೇದಾಂತ ಕಂಪೆನಿಗಳಿಂದ 2019 ಏಪ್ರಿಲ್ ನಿಂದ 2023ರ ನವೆಂಬರ್ ವರೆಗೆ 230.15 ಕೋಟಿ ಮತ್ತು ಅರವಿಂದ ಫಾರ್ಮಾ ಎಂಬ ಕಂಪೆನಿಯಿಂದ ಜುಲೈ 2022ರಿಂದ ನವೆಂಬರ್ 2023ರವರೆಗೆ 49.5 ಕೋಟಿ ಹೀಗೆ ಹಲವಾರು ಕಂಪೆನಿಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೂಲಕ ಬೆದರಿಸಿ ನಿರ್ಮಾಲಾ ಸೀತಾರಾಮನ್ ಮತ್ತು ಇತರ ಆರೋಪಿಗಳು ಸುಲಿಗೆ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಈ ಸುಲಿಗೆ ಪ್ರಕರಣಗಳ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಡಿಸಿಪಿಯವರಿಗೆ ದೂರು ನೀಡಿದ್ದರು. ನಂತರವೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಇರುವ ಆರೋಪ ಸತ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಎಫ್ ಐ ಆರ್ ದಾಖಲಿಸುವಂತೆ ತಿಲಕನಗರ ಪೊಲೀಸರಿಗೆ ಆದೇಶಿಸಿತ್ತು.
ಆದರ್ಶ್ ಐಯ್ಯರ್ ಅವರು ಕರ್ನಾಟಕದಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಿರುವ ಕಂಪೆನಿಗಳಿಂದ ನಡೆದ ಸುಲಿಗೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದು, ಸರಿಯಾದ ತನಿಖೆ ನಡೆದರೆ ಭಾರತೀಯ ಜನತಾ ಪಕ್ಷ ಕಂಪೆನಿಗಳನ್ನು ಜಾರಿ ನಿರ್ದೇಶನಾಲಯದ ಮೂಲಕ ಬೆದರಿಸಿ ಸಾವಿರಾರು ಕೋಟಿ ರುಪಾಯಿಗಳ ಬಾಂಡ್ ಗಳನ್ನು ಪಡೆದಿರುವ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.