ನೂರಾರು ಚುನಾವಣಾ ಬಾಂಡ್ ಹಗರಣಗಳು ಕಂತು ಕಂತಾಗಿ ಹೊರ ಬರುತ್ತಿವೆ. ಚುನಾವಣಾ ಬಾಂಡ್ ಗಳ ಸಂಪೂರ್ಣ ಮಾಹಿತಿ ಹಂಚಿಕೊಳ್ಳದ ಎಸ್.ಬಿ.ಐ ಬ್ಯಾಂಕನ್ನು ಮಾರ್ಚ್ 15 ರಂದು ಸುಪ್ರೀಂ ಕೋರ್ಟ್ ಮತ್ತೆ ತರಾಟೆಗೆ ತೆಗೆದು ಕೊಂಡಿದೆ. ಎಲೆಕ್ಟೋರಲ್ ಬಾಂಡ್ ಗಳ ಸಂಖ್ಯೆಯನ್ನು ಮರೆಮಾಚಲಾಗಿದ್ದು ಬಹಿರಂಗ ಪಡಿಸಲೇಬೇಕೆಂದು ಅದು ಆದೇಶಿಸಿದೆ. ಕಾರ್ಪೋರೇಟ್ ಕಂಪನಿಗಳ ಕಾವಲು ಕಾಯುತ್ತಿರುವ ಚೌಕೀದಾರರ ಬಣ್ಣ ಬಯಲಾಗುತ್ತಿದೆ.– ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ಹೇಗಾದರೂ ಮಾಡಿ ಚುನಾವಣೆ ಮುಗಿಯುವವರೆಗೂ ಚುನಾವಣಾ ಬಾಂಡ್ ವಿವರ ಬಹಿರಂಗವಾಗದಂತೆ ತಡೆಯಲು ಮೋದಿ ಸರಕಾರ ಹರಸಾಹಸ ಮಾಡಿತು. ವಿವರಗಳನ್ನು ಸಲ್ಲಿಸಲು ಜೂನ್ 30 ರ ವರೆಗೂ ಸಮಯಾವಕಾಶ ಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಮೂಲಕ ಹೇಳಿಸಲಾಯ್ತು. ಈ ಎಲೆಕ್ಟೋರಲ್ ಬಾಂಡ್ ಎನ್ನುವುದೇ ಅಸಂವಿಧಾನಿಕ ಎಂದು ಹೇಳಿದ ಸುಪ್ರೀಂ ಕೋರ್ಟ್, ಮಾರ್ಚ್ 12 ರ ಒಳಗೆ ದತ್ತಾಂಶ ಸಲ್ಲಿಸಿ ಇಲ್ಲವೇ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಿ ಎಂದು ಎಸ್.ಬಿ.ಐ ಗೆ ಮಾರ್ಚ್ 11 ರಂದು ಆದೇಶಿಸಿತು. ಕೋರ್ಟ್ ಆದೇಶಕ್ಕೆ ಹೆದರಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರು ತಿಂಗಳ ಬದಲು ಒಂದೇ ದಿನದಲ್ಲಿ ದತ್ತಾಂಶಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತು. ರಾಜಕೀಯ ಪಕ್ಷಗಳು 2019 ಎಪ್ರಿಲ್ 1 ರಿಂದ 2024 ಫೆಬ್ರುವರಿ 15 ರ ನಡುವೆ ಎಸ್.ಬಿ.ಐ ಬ್ಯಾಂಕ್ ಮೂಲಕ ಖರೀದಿಸಿದ ಬಾಂಡ್ ಗಳ ವಿವರಗಳನ್ನು ಚುನಾವಣಾ ಆಯೋಗವು ತನ್ನ ವೆಬ್ ಸೈಟಲ್ಲಿ ಅನಿವಾರ್ಯವಾಗಿ ಮಾರ್ಚ್ 14 ರಂದು ಪ್ರಕಟಿಸ ಬೇಕಾಯಿತು.
ಯಾವಾಗ ರಹಸ್ಯವಾಗಿಟ್ಟ ದೇಣಿಗೆ ದತ್ತಾಂಶದ ವಿವರಗಳು ಬಹಿರಂಗವಾದವೋ ಆಗ ಮೋದಿಯವರು ಬಿಜೆಪಿ ಪಕ್ಷಕ್ಕೆ ದೇಣಿಗೆ ಪಡೆಯಲು ಏನೆಲ್ಲಾ ವಾಮಮಾರ್ಗಗಳನ್ನು ಬಳಸಿದ್ದಾರೆ ಎನ್ನುವುದು ಒಂದೊಂದೆ ಹೊರ ಬರತೊಡಗಿದವು. ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬ್ಲಾಕ್ಮೇಲ್ ಮಾಡಿ ಹಲವಾರು ಕಂಪನಿಗಳಿಂದ ದೇಣಿಗೆ ರೂಪದಲ್ಲಿ ಹಣ ಪಡೆಯಲಾಯ್ತು ಎಂಬುದೆಲ್ಲಾ ಈಗ ಒಂದೊಂದಾಗಿ ಬಟಾಬಯಲಾಗತೊಡಗಿತು. ಚುನಾವಣಾ ಬಾಂಡ್ ಗಳ ಮೂಲಕ 1,300 ಕ್ಕೂ ಹೆಚ್ಚು ಕಂಪನಿಗಳು ಹಾಗೂ ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದು, 2019 ರ ನಂತರ ಬಿಜೆಪಿ ಪಕ್ಷ 6,000 ಕೋಟಿಗೂ ಅಧಿಕ ದೇಣಿಗೆ ಸ್ವೀಕರಿಸಿದೆ.
ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವಿಸಸ್ ಎನ್ನುವ ಕಂಪನಿ ಬಿಜೆಪಿ ಪಕ್ಷಕ್ಕೆ 1,368 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ಚುನಾವಣಾ ಬಾಂಡ್ ಮೂಲಕ ಕೊಟ್ಟಿದೆ ಅಂದರೆ ಈ ಕಂಪನಿ ಅದೆಷ್ಟು ದೊಡ್ಡದಾಗಿರಬೇಕು? ಆದರೆ ಇಂತಹುದೊಂದು ಕಂಪನಿಯ ವೆಬ್ ಸೈಟ್ ಕೂಡಾ ಕೆಲಸ ಮಾಡುತ್ತಿಲ್ಲ ಎಂದರೆ ಇದೆಂತಾ ಫ್ರಾಡ್ ಕಂಪನಿ ಎಂಬುದು ಅರ್ಥವಾಗದ ಸತ್ಯವೇನಲ್ಲ. ಈ ಫ್ಯೂಚರ್ ಗೇಮಿಂಗ್ ಕಂಪನಿ ಮಾಲೀಕ ಲಾಟರಿ ಕಿಂಗ್ ಸ್ಯಾಂಟಿಯಾಗೋ ಮಾರ್ಟಿನ್. ಬಹುತೇಕ ರಾಜ್ಯಗಳಲ್ಲಿ ಲಾಟರಿ ನಡೆಸುವುದೇ ಈತನ ಮೂಲ ದಂಧೆ. ಈತನ ಕಂಪನಿಯ ಮೇಲೆ ಹಲವಾರು ಬಾರಿ ಇಡಿ, ಐಟಿ ದಾಳಿಗಳಾಗಿವೆ. ಹಲವಾರು ಕೇಸುಗಳು ದಾಖಲಾಗಿವೆ. ಈ ಎಲ್ಲಾ ಲಾಟರಿ ಹಗರಣಗಳಿಂದ ಹೊರಬರಲು ಈತ ಬಿಜೆಪಿ ಪಕ್ಷಕ್ಕೆ ಕೊಟ್ಟ ದೇಣಿಗೆ 1,368 ಕೋಟಿ. ಈತನ ಮಗ ಜೋಸ್ ಚಾರ್ಲ್ಸ್ ಮಾರ್ಟಿನ್ 2015ರಲ್ಲಿ ಬಿಜೆಪಿ ಪಕ್ಷ ಸೇರಿ ತನ್ನ ಕಂಪನಿಯ ಅವ್ಯವಹಾರಗಳಿಗೆ ಆಳುವ ಪಕ್ಷದ ಕೃಪಾ ಕಟಾಕ್ಷವನ್ನು ಪಡೆದಿದ್ದು ಗುಟ್ಟಾಗೇನೂ ಉಳಿದಿಲ್ಲ.
‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ ಎನ್ನುವ ಮೂರನೇ ಕ್ರಮಾಂಕದ ದೊಡ್ಡ ದೇಣಿಗೆದಾರ ಕಾರ್ಪೋರೇಟ್ ಕಂಪನಿಯೊಂದು 410 ಕೋಟಿ ಹಣವನ್ನು ದೇಣಿಗೆ ನೀಡಿದೆ. ಆದರೆ ಈ ಕಂಪನಿಯ ವಾರ್ಷಿಕ ಲಾಭಾದಾಯ ಕೇವಲ 109 ಕೋಟಿಯಷ್ಟೇ. ಅಂದರೆ 300 ಕೋಟಿಗೂ ಹೆಚ್ಚು ಹಣವನ್ನು ಎಲ್ಲಿಂದ ತಂದು ಈ ಕಂಪನಿ ದಾನ ಮಾಡಿತು? ಯಾರಿಗೂ ಗೊತ್ತಿಲ್ಲ. ಈ ಕಂಪನಿಯ ಶೇರ್ ಗಳ ಮಾಲೀಕತ್ವ ಅಂಬಾನಿಯವರ ರಿಲಯನ್ಸ್ ಕಂಪನಿಯದು ಎನ್ನುವುದು ಖಾತ್ರಿಯಾಗಿದೆ. ಕ್ವಿಕ್ ಸಪ್ಲೈ ಚೈನ್ ಕಂಪನಿಯು ರಿಲಯನ್ಸ್ ಕಾರ್ಪೋರೇಟ್ ನೆಟ್ವರ್ಕ್ ಮತ್ತು ಹೋಲ್ಡಿಂಗ್ ನೋಡಿಕೊಳ್ಳುತ್ತದೆ. ಹೀಗಾಗಿ ಮೋದಿ ಸರಕಾರದಿಂದ ಗರಿಷ್ಠ ಅನುಕೂಲಗಳನ್ನು ಪಡೆದ ಮುಖೇಶ್ ಅಂಬಾನಿಯವರ ಕಡೆಯಿಂದ ಬಂದ್ ಕಿಕ್ ಬ್ಯಾಕ್ ದೇಣಿಗೆ ಇದು ಎಂದು ವಿಶ್ಲೇಷಿಸಲಾಗುತ್ತಿದೆ.
ಹೈದರಾಬಾದ್ ಮೂಲದ ಮೇಘಾ ಇಂಜಿನೀಯರಿಂಗ್ ಗ್ರೂಪ್ ಕಂಪನಿಗಳು ಒಟ್ಟಾಗಿ 966 ಕೋಟಿ ರೂಪಾಯಿ ಮೊತ್ತದ ಚುನಾವಣಾ ಬಾಂಡ್ ಖರೀದಿಸಿ ದೇಣಿಗೆಯಾಗಿ ನೀಡಿವೆ. ಇದಕ್ಕೆ ಬದಲಾಗಿ ಮಹಾರಾಷ್ಟ್ರ ಸರಕಾರದಿಂದ 14,400 ಕೋಟಿ ಮೊತ್ತದ ಥಾಣೆ-ಬೊರಿವಿಲಿ ಅವಳಿ ಸುರಂಗ ಕಾಮಗಾರಿಯ ಗುತ್ತಿಗೆ ಹಾಗೂ 1.15 ಲಕ್ಷ ಕೋಟಿ ಮೊತ್ತದ ತೆಲಂಗಾಣ ಕಾಳೇಶ್ವರಂ ಏತ ನೀರಾವತಿ ಯೋಜನೆಯ ಗುತ್ತಿಗೆ ಪಡೆದಿದೆ. ದೇಶದ ಔಷಧ ತಯಾರಿಕಾ ಕಂಪನಿಗಳು ಹಾಗೂ ಆರೋಗ್ಯಸೇವಾ ಸಂಸ್ಥೆಗಳು ತಲಾ 5 ಕೋಟಿ ಮೊತ್ತದ 900 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿವೆ. ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ 152 ಕೋಟಿ, ಡಾ.ರೆಡ್ಡೀಸ್ ಲ್ಯಾಬರೇಟರಿ 80 ಕೋಟಿ, ರೋರೆಂಟ್ ಫಾರ್ಮಾಸೂಟಿಕಲ್ಸ್ 77.5 ಕೋಟಿ, ನ್ಯಾಟ್ಕೋ ಫಾರ್ಮಾ 69.25 ಕೋಟಿ, ಬಯೋಕಾನ್ ಲಿಮಿಟೆಡ್ 6 ಕೋಟಿ, ಸಿಪ್ಲಾ 39.2 ಕೋಟಿ ರೂಪಾಯಿಗಳ ಮೊತ್ತದ ಬಾಂಡ್ ಗಳನ್ನು ಖರೀದಿಸಿವೆ. ”ವಕೀಲರಾದ ಪ್ರಶಾಂತ ಭೂಷಣ್ ರವರು 2013 ಎಪ್ರಿಲ್ ನಲ್ಲಿ ಹೀಗೆ ಟ್ವೀಟ್ ಮಾಡಿದ್ದರು- “ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಮಾಲೀಕ ಆದಾರ್ ಪೂನಾವಾಲಾ “ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್” ಮೂಲಕ ಬಿಜೆಪಿ ಪಕ್ಷಕ್ಕೆ 2022 ಆಗಸ್ಟ್ ನಲ್ಲಿ 50 ಕೋಟಿ ದೇಣಿಗೆ ಕೊಟ್ಟಿದ್ದು, ಕರೋನಾ ಕಾಲದಲ್ಲಿ ಕೋವಿಶೀಲ್ಡ್ ಲಸಿಕೆ ತಯಾರಿಸಿ ಸರಕಾರಕ್ಕೆ ಸರಬರಾಜು ಮಾಡಿದ್ದು ಇದೇ ಕಂಪನಿಯಾಗಿದ್ದು ಈ ದೇಣಿಗೆ ಅದರ ಪ್ರತಿಫಲವಾಗಿದೆ”.
ಒಂದು ಕಡೆ ಕಂಪನಿಗಳ ಮೇಲೆ ದಾಳಿಯಾಗದಂತೆ ತಡೆಯಲು ಹಾಗೂ ದಾಳಿಯಾಗಿದ್ದರೆ ತನಿಖೆ ಆಗದಂತೆ ನೋಡಿಕೊಳ್ಳಲು ದೇಣಿಗೆ ರೂಪದ ಲಂಚ ಪಡೆಯುವುದು ಹಾಗೂ ಇನ್ನೊಂದು ಕಡೆ ಪಡೆದ ದೇಣಿಗೆಗಳಿಗೆ ಬದಲಾಗಿ ಸರಕಾರಿ ಪ್ರಾಜೆಕ್ಟ್ ಗಳನ್ನು ಕೊಟ್ಟು ಕಿಕ್ ಬ್ಯಾಕ್ ತೆಗೆದು ಕೊಳ್ಳುವುದು ಹಾಗೂ ಬೇನಾಮಿ ಶೆಲ್ ಕಂಪನಿಗಳ ಮೂಲಕ ದೇಣಿಗೆ ವಸೂಲಿ ಮಾಡುವುದು ಚುನಾವಣಾ ಬಾಂಡ್ ಹಿಂದಿರುವ ಬಿಜೆಪಿ ಪಕ್ಷದ ಹುನ್ನಾರವಾಗಿದೆ.
ಸರಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ನಷ್ಟದಲ್ಲಿದೆ. ಭಾರ್ತಿ ಏರ್ಟೆಲ್ ಪ್ರಾಫಿಟ್ ಹೆಚ್ಚುತ್ತಿದೆ. ಯಾಕೆಂದರೆ ಭಾರ್ತಿ ಏರ್ಟೆಲ್ ಕಂಪನಿಯ ಮೂರು ವರ್ಷದ ಸರಾಸರಿ ಲಾಭ 253 ಕೋಟಿಯಾಗಿದ್ದರೆ, ಅದು ಬಿಜೆಪಿಗೆ ಬಾಂಡ್ ಮೂಲಕ ಕೊಟ್ಟ ದೇಣಿಗೆ 183 ಕೋಟಿಯಾಗಿದೆ. ಡಿಸೆಂಬರ್ 2023 ರಲ್ಲಿ ರುಂಗ್ತಾ ಸನ್ಸ್ ಪ್ರೈ ಲಿ. ಎನ್ನುವ ಕಂಪನಿಯ ಮೇಲೆ ಐಟಿ ದಾಳಿಯಾಗುತ್ತದೆ. 2024 ಜನವರಿ 11 ರಂದು ಈ ಕಂಪನಿ 50 ಕೋಟಿಯ ಚುನಾವಣಾ ಬಾಂಡ್ ಖರೀದಿ ಮಾಡಿ ಬಿಜೆಪಿಗೆ ಕೊಡುತ್ತದೆ. ಹಾಗೆಯೇ ಹೈದರಾಬಾದ್ ಮೂಲದ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೇಲೆ 2020 ರ ಡಿಸೆಂಬರ್ ನಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ. 2021 ಅಕ್ಟೋಬರ್ ನಲ್ಲಿ ಬಿಜೆಪಿ ಪಕ್ಷಕ್ಕೆ 162 ಕೋಟಿ ರೂಗಳ ಬಾಂಡ್ ಸಂದಾಯವಾಗುತ್ತದೆ ಹಾಗೂ ತನಿಖೆ ನಿಂತು ಹೋಗುತ್ತದೆ. 2023 ಡಿಸೆಂಬರ್ 18 ರಂದು ಶಿರಡಿ ಸಾಯಿ ಎಲೆಕ್ಟ್ರಿಕಲ್ ಲಿಮಿಟೆಡ್ ಎನ್ನುವ ಹೈದರಾಬಾದ್ ಕಂಪನಿ ಮೇಲೆ ಐಟಿ ರೇಡ್ ಮಾಡುತ್ತದೆ. 2024 ಜನವರಿ 11 ರಂದು 40 ಕೋಟಿ ಚುನಾವಣಾ ಬಾಂಡ್ ಬಿಜೆಪಿ ಭಂಡಾರಕ್ಕೆ ಸೇರುತ್ತದೆ. ಮದನ್ ಲಾಲ್ ಲಿಮಿಟೆಡ್ ಎನ್ನುವ ಕಂಪನಿಯ ಮೂರು ವರ್ಷದ ಸರಾಸರಿ ಲಾಭ ಕೇವಲ 10 ಕೋಟಿ. ಆದರೆ ಬಿಜೆಪಿಗೆ ಕೊಟ್ಟ ದೇಣಿಗೆ ಮೊತ್ತ 185 ಕೋಟಿ,… ಇಂತಹ ನೂರಾರು ಚುನಾವಣಾ ಬಾಂಡ್ ಹಗರಣಗಳು ಕಂತು ಕಂತಾಗಿ ಹೊರ ಬರುತ್ತಿವೆ. ಕಾರ್ಪೋರೇಟ್ ಕಂಪನಿಗಳ ಕಾವಲು ಕಾಯುತ್ತಿರುವ ಚೌಕೀದಾರರ ಬಣ್ಣ ಬಯಲಾಗುತ್ತಿದೆ.
ಇದನ್ನೂ ಓದಿ-‘ಚುನಾವಣಾ ಬಾಂಡ್’ ಅಸಾಂವಿಧಾನಿಕ | ಕೇಂದ್ರಕ್ಕೆ ಪ್ರಹಾರ ನೀಡಿದ ಸುಪ್ರೀಂ ಕೋರ್ಟ್ ತೀರ್ಪು
2017ಕ್ಕೂ ಮೊದಲು ಯಾವುದೇ ಕಂಪನಿ ಯಾವುದೇ ಪಕ್ಷಕ್ಕೆ ಹಣವನ್ನು ದೇಣಿಗೆಯಾಗಿ ನೀಡಬೇಕೆಂದರೆ ಆ ಕಂಪನಿಯ ಮೂರು ವರ್ಷದ ಸರಾಸರಿ ಲಾಭಾಂಶ 7.5% ಮೀರಬಾರದು ಎನ್ನುವ ನಿಯಮ ಇತ್ತು. ಆದರೆ ಮೋದಿ ಸರಕಾರವು 2017 ರಲ್ಲಿ ತಿದ್ದುಪಡಿ ತಂದು ಈ ಲಿಮಿಟ್ ನ್ನು ರದ್ದು ಗೊಳಿಸಿತು. ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಯಾರು ಎಷ್ಟು ಹಣಕ್ಕೆ ಬೇಕಾದರೂ ಚುನಾವಣಾ ಬಾಂಡ್ ಗಳನ್ನು ಪಡೆದು ರಾಜಕೀಯ ಪಕ್ಷಗಳಿಗೆ ಕೊಡಬಹುದು ಎನ್ನುವ ಹೊಸ ನಿಯಮವನ್ನು ಜಾರಿ ಮಾಡಲಾಯಿತು. ಅಷ್ಟೇ ಅಲ್ಲ ಈ ದಾನಿಗಳ ಹಾಗೂ ದಾನ ಪಡೆದವರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗ ಗೊಳಿಸಲಾಗದು ಎಂದೂ ಸೇರಿಸಲಾಗಿತ್ತು. ಹೀಗಾಗಿ ಅಗಣಿತ ಹಣ ಬಿಜೆಪಿ ಪಕ್ಷದ ಪಾಲಾಯ್ತು.
ಇಷ್ಟಾದರೂ ಎಸ್.ಬಿ.ಐ ಸುಪ್ರೀಂ ಕೋರ್ಟಿಗೆ ಅಪೂರ್ಣ ಮಾಹಿತಿ ಕೊಟ್ಟು ಇನ್ನೂ ಹಲವಾರು ಸತ್ಯಗಳನ್ನು ಮರೆಮಾಚಿದೆ. ಚುನಾವಣಾ ಬಾಂಡ್ ಗಳ ಸಂಪೂರ್ಣ ಮಾಹಿತಿ ಹಂಚಿಕೊಳ್ಳದ ಎಸ್.ಬಿ.ಐ ಬ್ಯಾಂಕನ್ನು ಮಾರ್ಚ್ 15 ರಂದು ಸುಪ್ರೀಂ ಕೋರ್ಟ್ ಮತ್ತೆ ತರಾಟೆಗೆ ತೆಗೆದು ಕೊಂಡಿದೆ. ಎಲೆಕ್ಟೋರಲ್ ಬಾಂಡ್ ಗಳ ಸಂಖ್ಯೆಯನ್ನು ಮರೆಮಾಚಲಾಗಿದ್ದು ಬಹಿರಂಗಪಡಿಸಲೇ ಬೇಕೆಂದು ಆದೇಶಿಸಿದೆ. ಇನ್ನೂ ಈ ಹಗರಣದಲ್ಲಿ ಮುಚ್ಚಿಟ್ಟ ಸತ್ಯಗಳು ಎಷ್ಟಿವೆಯೋ? ಬಲ್ಲವರು ಯಾರು?
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಚುನಾವಣಾ ಬಾಂಡ್; ಕೇಂದ್ರದ ನಡೆಗೆ ಸುಪ್ರೀಂ ತಡೆ