ಚುನಾವಣೆ 2026: ಕೇರಳ , ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಏಪ್ರಿಲ್ 9 ರಂದು ವಿಧಾನಸಭಾ ಚುನಾವಣೆ ನೆಡೆದಿದೆ. ಪುದುಚೇರಿಯ ವಿಧಾನಸಭಾ ಚಹುನಾವಣೆಯಲ್ಲಿ ದಾಖಲೆಯ ಮತದಾನ ಅಗಿದೆ ಎಂದು ಚುನಾವಣಾ ಆಯೋಗ (ECI) ತಿಳಿಸಿದೆ, ನಂತರದ ಸ್ಥಾನದಲ್ಲಿ ಅಸ್ಸಾಂ ಮತ್ತು ಕೇರಳ ರಾಜ್ಯಗಳಿವೆ. ಚುನಾವಣಾ ಆಯೋಗ ಸಂಜೆ 7.30 ನೀಡಿರುವ ಮಾಹಿತಿಯ ಪ್ರಕಾರ , ಪುದುಚೇರಿಯಲ್ಲಿ ಅತಿ ಹೆಚ್ಚು ಅಂದರೆ ಶೇಕಡಾ 89.83 ರಷ್ಟು ಮತದಾನವಾಗಿದೆ. ಅಸ್ಸಾಂನ 126 ಕ್ಷೇತ್ರಗಳಲ್ಲಿ ಶೇಕಡಾ 85.83 ರಷ್ಟು ಹೆಚ್ಚಿನ ಮತದಾನವಾಗಿದ್ದು ಎರಡನೇ ಸ್ಥಾನದಲ್ಲಿದೆ. ಕೇರಳದಲ್ಲೂ ಮತದಾರರು ಹೆಚ್ಚಿನ ಉತ್ಸಾಹ ತೋರಿದ್ದು ಶೇಕಡಾ 78.03 ರಷ್ಟು ಮತದಾನ ದಾಖಲಾಗಿದೆ.
ಪುದುಚೇರಿ, ಅಸ್ಸಾಂ ಮತ್ತು ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದೊಂದಿಗೆ ಮೇ 4 ರಂದು ನಡೆಯಲಿದೆ. ಇದೇ ದಿನ ಉಪಚುನಾವಣೆಗಳ ಮತ ಎಣಿಕೆಯೂ ನಡೆಯಲಿದೆ.
ಅಸ್ಸಾಂ ಮತ್ತು ಪುದುಚೇರಿ ಇಂದು ತಮ್ಮ ಈವರೆಗಿನ ದಾಖಲೆಯ ಮತದಾನದ ಪ್ರಮಾಣವನ್ನು ಮೀರಿವೆ. ಈ ಹಿಂದೆ ಅಸ್ಸಾಂನಲ್ಲಿ 2016 ರಲ್ಲಿ ಶೇಕಡಾ 84.67 ರಷ್ಟು ಮತ್ತು ಪುದುಚೇರಿಯಲ್ಲಿ 2011 ರಲ್ಲಿ ಶೇಕಡಾ 86.19 ರಷ್ಟು ಮತದಾನವಾಗಿದ್ದು ಇದುವರೆಗಿನ ಗರಿಷ್ಠ ಪ್ರಮಾಣವಾಗಿತ್ತು.
ಮತದಾನ ಮುಗಿದ ತಕ್ಷಣ ಎಲ್ಲಾ ಮತಗಟ್ಟೆಗಳ ಚುನಾವಣಾ ಅಧಿಕಾರಿಗಳು ಇವಿಎಂ (EVM) ಮತ್ತು ವಿವಿಪ್ಯಾಟ್ (VVPAT) ಯಂತ್ರಗಳನ್ನು ಸೀಲ್ ಮಾಡಿದರು. ನಂತರ ಇವಿಎಂಗಳನ್ನು ಸ್ಟ್ರಾಂಗ್ ರೂಮ್ಗಳಿಗೆ ಕೊಂಡೊಯ್ಯಲಾಯಿತು.
ಅಸ್ಸಾಂನ 126 ಸ್ಥಾನಗಳಿಗೆ, ಕೇರಳದ 140 ಸ್ಥಾನಗಳಿಗೆ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ 30 ಸ್ಥಾನಗಳಿಗೆ ವಿಧಾನಸಭಾ ಮತದಾನ ನಡೆದಿದೆ. ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಪಿಣರಾಯಿ ವಿಜಯನ್ ಸೇರಿದಂತೆ ಪ್ರಮುಖ ನಾಯಕರು ಆರಂಭದಲ್ಲೇ ಮತ ಚಲಾಯಿಸಿದರು. ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಅವರು ಮೋಟಾರ್ ಸೈಕಲ್ ಚಲಾಯಿಸಿಕೊಂಡು ಮತಗಟ್ಟೆಗೆ ಬಂದು ಮತ ಹಾಕುವ ತಮ್ಮ ಹಳೆಯ ಸಂಪ್ರದಾಯವನ್ನು ಮುಂದುವರಿಸಿದರು.

ಕೇರಳದಲ್ಲಿ 140 ಕ್ಷೇತ್ರಗಳ 883 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 2.6 ಕೋಟಿಗೂ ಹೆಚ್ಚು ಮತದಾರರು ಅರ್ಹರಾಗಿದ್ದರು. ಒಟ್ಟು 2,69,53,644 ನೋಂದಾಯಿತ ಮತದಾರರಲ್ಲಿ 1,38,27,319 ಮಹಿಳೆಯರು ಮತ್ತು 1,31,26,048 ಪುರುಷರಿದ್ದಾರೆ. ರಾಜ್ಯದಲ್ಲಿ 277 ತೃತೀಯಲಿಂಗಿ ಮತದಾರರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 4,24,518 ಮತದಾರರು 18-19 ವಯಸ್ಸಿನವರಾಗಿದ್ದರೆ, 2,04,608 ಮತದಾರರು 85 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಸುರಕ್ಷಿತ ಮತದಾನಕ್ಕಾಗಿ ಒಟ್ಟು 30,471 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಕೇರಳದಲ್ಲಿ ಯುಡಿಎಫ್ (UDF) ಮೈತ್ರಿಕೂಟವು ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ (LDF) ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಗುರಿ ಹೊಂದಿದೆ. ಬಿಜೆಪಿ ಕೂಡ ತನ್ನ ನೆಲೆಯನ್ನು ವಿಸ್ತರಿಸಿದ್ದು ಉಭಯ ಮೈತ್ರಿಕೂಟಗಳಿಗೆ ಸವಾಲು ಹಾಕಿದೆ.
ಅಸ್ಸಾಂನ 126 ಸದಸ್ಯರ ವಿಧಾನಸಭೆಗೆ 2.5 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದರು. ಅಸ್ಸಾಂನಲ್ಲಿ ಒಟ್ಟು 722 ಅಭ್ಯರ್ಥಿಗಳು ಕಣದಲ್ಲಿದ್ದರು. 2,50,54,463 ನೋಂದಾಯಿತ ಮತದಾರರಲ್ಲಿ 1,25,31,552 ಪುರುಷರು ಮತ್ತು 1,25,22,593 ಮಹಿಳೆಯರಿದ್ದಾರೆ. 300 ಕ್ಕೂ ಹೆಚ್ಚು ತೃತೀಯಲಿಂಗಿ ಮತದಾರರಿದ್ದಾರೆ. ಈ ಕದನವು ಮುಖ್ಯವಾಗಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ನಡುವೆ ನಡೆದಿದೆ.
ಪುದುಚೇರಿಯಲ್ಲಿ 30 ವಿಧಾನಸಭಾ ಸ್ಥಾನಗಳಿಗೆ 10,14,070 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದರು. ಇವರಲ್ಲಿ 5,39,125 ಮಹಿಳಾ ಮತದಾರರು, 4,74,788 ಪುರುಷ ಮತದಾರರು ಮತ್ತು 157 ತೃತೀಯಲಿಂಗಿ ಮತದಾರರಿದ್ದಾರೆ. 18-19 ವರ್ಷ ವಯಸ್ಸಿನ 24,156 ಮತದಾರರಿದ್ದಾರೆ. ಅಖಿಲ ಭಾರತ ಎನ್ಆರ್ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಒಳಗೊಂಡಿರುವ ಆಡಳಿತಾರೂಢ ಎನ್ಡಿಎ ಮೈತ್ರಿಕೂಟಕ್ಕೆ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಸವಾಲು ಹಾಕುತ್ತಿದೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಕೂಡ ಸ್ಪರ್ಧೆಯಲ್ಲಿದ್ದು ಈ ಕದನವನ್ನು ತ್ರಿಕೋನವಾಗಿಸಲು ಪ್ರಯತ್ನಿಸುತ್ತಿದೆ.

