ರಾಜ್ಯಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೆ, ಮಲೆನಾಡು-ಕರಾವಳಿ ಭಾಗಕ್ಕೆ ಗಟ್ಟಿ ಧ್ವನಿಯಾಗಿ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಡಾ.ಬಿ ಎಲ್ ಶಂಕರ್ ಅವರನ್ನು ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ ಒತ್ತಾಯ ಮಾಡಿದರು.
ಮಲೆನಾಡು-ಕರಾವಳಿ ಜನಪರ ಒಕ್ಕೂಟ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆಗೆ ಕರ್ನಾಟಕದಿಂದ ನಾಲ್ಕು ಜನರನ್ನು ಆಯ್ಕೆ ಮಾಡುವ ಅವಕಾಶ ರಾಜ್ಯ ವಿಧಾನಸಭೆಯ ಸದಸ್ಯರುಗಳಿಗೆ ಇರುವುದರಿಂದ ಬಿ ಎಲ್ ಶಂಕರ್ ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂದು ಹೇಳಿದರು.
‘ನಮ್ಮ ಮಲೆನಾಡು-ಕರಾವಳಿ ಜನಪರ ಒಕ್ಕೂಟವು ಒಟ್ಟು ಆರು ಜಿಲ್ಲೆಗಳು ಉತ್ತರ ಕನ್ನಡ, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲೂಕುಗಳನ್ನು ಒಳಗೊಳ್ಳುತ್ತದೆ ಮತ್ತು ಅಲ್ಲಿನ ಜನರ ಸಮಸ್ಯೆಗೆ ಗಟ್ಟಿ ಧ್ವನಿಯಾಗಿ ನಿಲ್ಲುತ್ತದೆ’ ಎಂದರು.
ಇನ್ನೂ ‘ಮಲೆನಾಡು ಕರಾವಳಿಗಳಲ್ಲಿನ ಪ್ರಾಣಿ-ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಜಾರಿಯನ್ನು ಮನುಷ್ಯ ವಿರೋಧಿಯಾಗಿ ಮಾಡುತ್ತಿರುವುದು, ಅರಣ್ಯ ಕಾಯಿದೆಗಳ ಸಮಸ್ಯೆಯ ವಿಚಾರಗಳು, ಸಾಂಸ್ಕೃತಿಕ- ಸಾಮಾಜಿಕ ಬದುಕುಗಳ ಬಗ್ಗೆ ಈ ವ್ಯಾಪ್ತಿಯಲ್ಲಿ ಬರುವ ಸಂಸದರು ಉತ್ತರ ಕನ್ನಡ ಜಿಲ್ಲೆಯ ಅನಂತ ಕುಮಾರ್ ಹೆಗ್ಡೆ, ಉಡುಪಿ ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಮಂಗಳೂರಿನ ನಳೀನ್ ಕುಮಾರ್ ಕಟೀಲ್, ಶಿವಮೊಗ್ಗದ ಬಿ ವೈ ರಾಘವೇಂದ್ರ, ಕೊಡಗಿನ ಪ್ರತಿನಿಧಿಯಾದ ಪ್ರತಾಪ್ ಸಿಂಹ ಅವರು ಮೇಲಿನ ಯಾವ ವಿಚಾರಗಳಿಗೂ ಗಮನ ಕೊಡುತ್ತಿಲ್ಲ’ ಎಂದು ಆರೋಪಿಸಿದರು.
ಮಲೆನಾಡು-ಕರಾವಳಿಯನ್ನು ಪ್ರತಿನಿಧಿಸುತ್ತಿರುವ ಶೋಭ ಕರಾಂದ್ಲಜೆ ವಿಫಲ ಸಂಸದರು. ಇಂತವರು ನಮ್ಮ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವುದಿಲ್ಲ. ಆದ್ದರಿಂದ ನಮ್ಮ ಭಾಗಕ್ಕೆ ಡಾ.ಬಿ ಎಲ್ ಶಂಕರ್ ಗಟ್ಟಿಧ್ವನಿಯಾಗಿ ನಿಲ್ಲುತ್ತಾರೆ ಎನ್ನುವ ಭರವೆಸೆ ಇದೆ ಎಂದು ಹೇಳಿದರು.