ಪೌರತ್ವ ನಿರ್ಣಯಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ: ಸಿಪಿಐ(ಎಂಎಲ್‌) ಮುಖಂಡ ದೀಪಂಕರ್‌ ಭಟ್ಟಾಚಾರ್ಯ

Most read

ಕೋಲ್ಕತ್ತ: ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐಆರ್‌) ನಡೆಸಬೇಕೆಂಬ ಕೇಂದ್ರ ಚುನಾವಣಾ ಆಯೋಗದ ಕ್ರಮವನ್ನು ಸಿಪಿಐ(ಎಂಎಲ್‌) ಪ್ರಧಾನ ಕಾರ್ಯದರ್ಶಿ ದೀಪಂಕರ್‌ ಭಟ್ಟಾಚಾರ್ಯ ತೀವ್ರವಾಗಿ ಖಂಡಿಸಿದ್ದಾರೆ.

ಮಾದ್ಯಮ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಇದು ಚುನಾವಣಾ ಆಯೋಗದ ಈ ನಿರ್ಧಾರದಿಂದ ಸಾಮೂಹಿಕ ಮತದಾನದ ಹಕ್ಕು ನಿರಾಕರಣೆ ಮತ್ತು ಮತ ಕಳ್ಳತನಕ್ಕೆ ಕಾರಣವಾಗಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಎಸ್‌ ಐ ಆರ್‌ ಪ್ರಕ್ರಿಯೆಯು ನೋಟು ರದ್ದತಿಯಂತೆ ವಿಫಲ ಕಸರತ್ತಾಗಿದೆ. ಪೌರತ್ವವನ್ನು ನಿರ್ಣಯಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ. ಸ್ವಾತಂತ್ರ್ಯ ಲಭಿಸಿ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗ ಪೌರತ್ವವನ್ನು ಸಾಬೀತುಪಡಿಸುವಂತೆ ಜನರಿಗೆ ಸೂಚಿಸಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆ ಮೂಲಕ ಚುನಾವಣಾ ಆಯೋಗವು ಚುನಾವಣಾ ಕಾರ್ಯವಿಧಾನಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.

ಬಿಹಾರದಲ್ಲಿ ಮಹಾಘಟಬಂಧನ್‌ ಮೈತ್ರಿಕೂಟದ ಭಾಗವಾಗಿರುವ ಸಿಪಿಐ (ಎಂಎಲ್‌) ಸೇರಿದಂತೆ ಇತರೆ ಪಕ್ಷಗಳ ತೀವ್ರ ವಿರೋಧದ ಹೊರತಾಗಿಯೂ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಯಿಂದಾಗಿ ಬೃಹತ್ ಪ್ರಮಾಣದಲ್ಲಿ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಎಡ ಪಕ್ಷಗಳ ಮೇಲೂ ಪರಿಣಾಮ ಬೀರುವುದರಲ್ಲಿ ಸಂದೇಹವೇ ಇಲ್ಲ. ಜತೆಗೆ ಕೋಟ್ಯಂತರ ಮತದಾರರು ಎಸ್‌ ಐಆರ್‌ ಪ್ರಕ್ರಿಯೆಯಿಂದ ಪ್ರಭಾವಿತರಾಗುವ ಸಾಧ್ಯತೆಗಳಿವೆ ಎಂದು ಭಟ್ಟಾಚಾರ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿ ಬಾಂಗ್ಲಾದೇಶ, ನೇಪಾಳ ಅಥವಾ ಮ್ಯಾನ್ಮಾರ್‌ ದೇಶಗಳಿಂದ ಆಗಮಿಸಿರುವ ನುಸುಳುಕೋರರು ಮತದಾನದ ಹಕ್ಕು ಹೊಂದಿರುವುದಕ್ಕೆ ಸಾಕ್ಷ್ಯಗಳಿಲ್ಲ. ಈ ಮಾಹಿತಿಯನ್ನು ಚುನಾವಣಾ ಆಯೋಗದ ಅಂಕಿಅಂಶಗಳೇ ಹೇಳುತ್ತವೆ ಎಂದು ಟೀಕಿಸಿದ್ದಾರೆ.

More articles

Latest article