ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಅಜಿತ್ ಪವಾರ್ ನೇತೃತ್ವದಲ್ಲಿ ಬಿಜೆಪಿ- ಶಿವಸೇನಾ (ಶಿಂಧೆ) ಬಣವನ್ನು ಸೇರಿಕೊಂಡಿದ್ದ ಶಾಸಕರು, ಈಗ ವಾಪಸ್ ಶರದ್ ಪವಾರ್ ಬಣಕ್ಕೆ ಜಿಗಿಯಲು ಮುಂದಾಗಿದ್ದಾರೆ.
ಈ ನಡುವೆ ಸಿಎಂ ಏಕನಾಥ್ ಶಿಂಧೆ ಬಣದಲ್ಲಿಯೂ ಕೆಲವರು ಅಸಮಾಧಾನಗೊಂಡಿದ್ದು, 5- 6 ಶಾಸಕರು ಉದ್ಧವ್ ಠಾಕ್ರೆ ಅವರ ಜತೆ ವಾಪಸ್ ಸೇರಿಕೊಳ್ಳಲು ಬಯಸಿದ್ದಾರೆ ಎಂದು ವರದಿಯಾಗಿದೆ.
ಉದ್ಧವ್‌ಗೆ ಕೈ ಕೊಟ್ಟು ಶಿಂಧೆ ಜತೆ ತೆರಳಿದ್ದ ಶಾಸಕರ ಪೈಕಿ ಕೆಲವರು, ಈಗ ಯುಬಿಟಿ (ಉದ್ಧವ್ ಠಾಕ್ರೆ ಶಿವಸೇನಾ ಬಣ) ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಅವರು ಪಕ್ಷಕ್ಕೆ ಮರಳುವುದರ ಬಗ್ಗೆ ಉದ್ಧವ್ ಠಾಕ್ರೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
“ಶಾಸಕರು ನನ್ನ ಸಂಪರ್ಕದಲ್ಲಿ ಇಲ್ಲ. ಆದರೆ ನಮ್ಮ ಪಕ್ಷದ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅವರ ಸೋಲಿನ ಬಳಿಕ, ಅವರು (ಶಿಂಧೆ ಬಣದ ಶಾಸಕರು) ತಾವು ಎಲ್ಲಿದ್ದೇವೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಅವರು ನಮ್ಮ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ” “ಆದರೆ ಅವರನ್ನು ವಾಪಸ್ ಸೇರಿಸಿಕೊಳ್ಳುವ ಬಗ್ಗೆ ನಾವು ಇನ್ನೂ ನಿರ್ಧಾರ ಕೈಗೊಂಡಿಲ್ಲ” ಎಂದು ರಾವತ್ ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.