ಮುನಿರತ್ನ ಮೇಲೆ ಮೊಟ್ಟೆ ದಾಳಿ; ಶುರುವಾಯ್ತು ಕೆಸರೆರಚಾಟದ ಹಾವಳಿ

Most read

ಮಾಡಬಾರದ ಹಲ್ಕಾ ಕೆಲಸ ಮಾಡಿ ಹೆಸರು ಕೆಡಿಸಿಕೊಂಡಿರುವ ಮುನಿರತ್ನ ಹೇಗಾದರೂ ಮಾಡಿ ಸಿಂಪತಿ ಗಳಿಸಲು ಮೊಟ್ಟೆ ತಂತ್ರವನ್ನು ತಮ್ಮ ಮೇಲೆ ತಾವೇ ಪ್ರಯೋಗಿಸುವಂತೆ ಮಾಡಿಕೊಂಡ್ರಾ? ಗನ್ ಮ್ಯಾನ್ ರಕ್ಷಣೆ ಬೇಕೆಂದು ರಾಜ್ಯಪಾಲರು, ಪೊಲೀಸ್ ಆಯುಕ್ತರಿಂದ ಹಿಡಿದು ರಾಷ್ಟ್ರಪತಿಗಳವರೆಗೆ  ಪತ್ರ ಬರೆದಿದ್ದ ಇವರಿಗೆ ಇಲ್ಲಿಯವರೆಗೂ ಗನ್ ಮ್ಯಾನ್ ಸೆಕ್ಯೂರಿಟಿ ಸಿಗದೇ ಇರುವುದರಿಂದ ಮೊಟ್ಟೆ ದಾಳಿ ನಡೆಸಿಕೊಂಡು, ಕೊಲೆಗೆ ಯತ್ನ ಎಂದು ಆರೋಪಿಸಿಕೊಂಡು ಸೆಕ್ಯೂರಿಟಿ ಪಡೆಯಲು ಈ ಮೊಟ್ಟೆ ಪ್ರಕರಣವನ್ನು ಸೃಷ್ಟಿಸಿದರಾ? – ಶಶಿಕಾಂತ ಯಡಹಳ್ಳಿ, ಪತ್ರಕರ್ತರು.

ಸೆಕ್ಸ್ ವೆಪನ್ ಪ್ರಯೋಗ ಪಟು ಮುನಿರತ್ನ ಎನ್ನುವ ಶಾಸಕನ ಮೇಲೆ ಮೊಟ್ಟೆ ಅಸ್ತ್ರ ಪ್ರಯೋಗಿಸಲಾಗಿದೆ. ರಾಜಕೀಯದವರ ಆರೋಪ ಪ್ರತ್ಯಾರೋಪಗಳ ಕೆಸರೆರಚಾಟ ಶುರುವಾಗಿದೆ. ಆರ್ ಆರ್ ನಗರದ ಬಿಜೆಪಿ ಪ್ರಾಯೋಜಿತ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಕಳಂಕಿತ ಶಾಸಕನ ತಲೆಗೆ ಮೊಟ್ಟೆ ಹೊಡೆಯಲಾಗಿದೆ. ನೂರಾರು ಪೊಲೀಸರ ಭದ್ರತೆಯ ನಡುವೆ, ನೂರಾರು ಬಿಜೆಪಿ ಕಾರ್ಯಕರ್ತರ ಗುಂಪು ಜೊತೆ ಇರುವಾಗ ಮೊಟ್ಟೆ ದಾಳಿ ಹೇಗೆ? ಯಾಕೆ? ಯಾರಿಂದ ನಡೆದಿದೆ ಎಂಬುದು ಪ್ರಶ್ನೆಯಾಗಿದೆ.

ಈ ಶಾಸಕನ ಕ್ರಿಮಿನಲ್ ಹಿನ್ನೆಲೆಯನ್ನು ಗಮನಿಸಿದಾಗ ಈ ರೀತಿಯ ದಾಳಿಯನ್ನು ಪ್ರಚಾರಕ್ಕಾಗಿ ಮುನಿರತ್ನರವರೇ ಪ್ಲಾನ್ ಮಾಡಿದ್ರಾ? ಮಾಡಬಾರದ ಹಲ್ಕಾ ಕೆಲಸ ಮಾಡಿ ಹೆಸರು ಕೆಡಿಸಿಕೊಂಡಿರುವ ಈ ವ್ಯಕ್ತಿ ಹೇಗಾದರೂ ಮಾಡಿ ಸಿಂಪತಿ ಗಳಿಸಲು ಮೊಟ್ಟೆ ತಂತ್ರವನ್ನು ತಮ್ಮ ಮೇಲೆ ತಾವೇ ಪ್ರಯೋಗಿಸುವಂತೆ ಮಾಡಿಕೊಂಡ್ರಾ? ಗನ್ ಮ್ಯಾನ್ ರಕ್ಷಣೆ ಬೇಕೆಂದು ರಾಜ್ಯಪಾಲರು, ಪೊಲೀಸ್ ಆಯುಕ್ತರಿಂದ ಹಿಡಿದು ರಾಷ್ಟ್ರಪತಿಗಳವರೆಗೆ  ಪತ್ರ ಬರೆದಿದ್ದ ಮುನಿರತ್ನರಿಗೆ ಇಲ್ಲಿಯವರೆಗೂ ಗನ್ ಮ್ಯಾನ್ ಸೆಕ್ಯೂರಿಟಿ ಸಿಗದೇ ಇರುವುದರಿಂದ ಮೊಟ್ಟೆ ದಾಳಿ ನಡೆಸಿಕೊಂಡು, ಕೊಲೆಗೆ ಯತ್ನ ಎಂದು ಆರೋಪಿಸಿಕೊಂಡು ಸೆಕ್ಯೂರಿಟಿ ಪಡೆಯಲು ಈ ಮೊಟ್ಟೆ ಪ್ರಕರಣವನ್ನು ಸೃಷ್ಟಿಸಿದರಾ? ಸ್ವಪಕ್ಷೀಯ ನಾಯಕರಿಗೆ ಏಡ್ಸ್ ಅಂಟಿಸಲು ಹನಿಟ್ರ್ಯಾಪ್ ಮಾಡಲು ಹೋಗಿದ್ದರಿಂದಾಗಿ ಬಿಜೆಪಿ ನಾಯಕರುಗಳ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಮುನಿರತ್ನ ತಮ್ಮ ಪಕ್ಷದವರ ಗಮನ ಸೆಳೆಯಲು, ಅನುಕಂಪ ಗಿಟ್ಟಿಸಲು ಈ ರೀತಿ ಅಪಾಯಕಾರಿಯಲ್ಲದ ದಾಳಿಯನ್ನು ರೂಪಿಸಿಕೊಂಡರಾ?

ಈ ಯಾವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಈ ವ್ಯಕ್ತಿ ಏನು ಬೇಕಾದರೂ ಮಾಡಬಲ್ಲ ಎಂದು ಅವರ ಹೀನ ಚರಿತ್ರೆಯೇ ಹೇಳುತ್ತದೆ. ಅದರಲ್ಲೂ ಹಲವಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಜೈಲಿಗೂ ಹೋಗಿ ಬಂದಾಗಿದೆ. ವಿಷಕನ್ಯೆಯರಂತೆ ಏಡ್ಸ್ ಪೀಡಿತ ಹೆಣ್ಣುಮಕ್ಕಳನ್ನು ಅಕ್ರಮವಾಗಿ ಬಳಸಿಕೊಂಡು ತನ್ನ ರಾಜಕೀಯ ಎದುರಾಳಿಗಳನ್ನು ನಾಶ ಮಾಡಲು ಹೊರಟ ಕುರಿತು ಸಂತ್ರಸ್ತ ಮಹಿಳೆಯರೇ ದೂರಿತ್ತಿದ್ದಾರೆ. ಮಹಿಳೆಯರನ್ನು ಸೆಕ್ಸ್ ಪ್ರಕರಣಗಳಲ್ಲಿ ಸಿಲುಕಿಸಿ, ಬ್ಲಾಕ್‌ಮೇಲ್‌ ಮಾಡಿ, ಅವರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಹನಿಟ್ರ್ಯಾಪ್ ಮಾಡಿದ್ದರ ಕುರಿತು ಸ್ವತಃ ಸಂತ್ರಸ್ತ ಮಹಿಳೆಯರೇ ಆರೋಪಿಸಿದ್ದಾರೆ. ಜಾತಿನಿಂದನೆ ಹಾಗೂ ಜೀವಬೆದರಿಕೆ ಆರೋಪಗಳೂ ಮುನಿರತ್ನ ಮೇಲಿವೆ.  ಅನೈತಿಕತೆಯ ಸರಹದ್ದನ್ನು ಮೀರಿದ ಈ ವ್ಯಕ್ತಿ ಯಾವುದೇ ರೀತಿಯ ನಂಬಿಕೆಗೆ ಅರ್ಹನಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಂತಹ ಸಂಗತಿ.

ಮುನಿರತ್ನ ಮೇಲೆ ಮೊಟ್ಟೆ ದಾಳಿ

ಹೀಗಿರುವಾಗ ಯಾರೋ ಮೊಟ್ಟೆ ದಾಳಿ ಮಾಡಿದರು, ಕಾಂಗ್ರೆಸ್ಸಿಗರು ಮಾಡಿಸಿದರು ಎಂದು ಬಿಜೆಪಿಗರು ಆರೋಪಿಸುತ್ತಿರುವುದನ್ನು ಯಾರೂ ನಂಬಲು ಸಾಧ್ಯವಿಲ್ಲ. ಡಿಕೆ ಸಹೋದರರು, ಇಲ್ಲವೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಕುಸುಮಾರವರೇ ಈ ಮೊಟ್ಟೆ ದಾಳಿ ಹಿಂದಿದ್ದಾರೆ ಎಂದು ಮುನಿರತ್ನ ಆರೋಪಿಸುತಿದ್ದರಾದರೂ ಅದನ್ನು ನಂಬುವವರು ಯಾರೂ ಇಲ್ಲ. ಯಾಕೆಂದರೆ ಈ ಶಾಸಕ ಅಷ್ಟೊಂದು ಹೆಸರು ಕೆಡಿಸಿಕೊಂಡಾಗಿದೆ, ಅದನ್ನು ಹೇಗಾದರೂ ಮಾಡಿ ಮತ್ತೆ ಗಳಿಸಲು ಯಾವುದೇ ರೀತಿಯ ಕುತಂತ್ರಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ.

ಆಗ, ಮುನಿರತ್ನ ಎನ್ನುವ ರೌಡಿ ರಾಜಕಾರಣಿ ಸೆಕ್ಸ್ ಹಗರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿ ಜೈಲು ಪಾಲಾದಾಗ ಯಾವೊಬ್ಬ ಬಿಜೆಪಿ ನಾಯಕನೂ ಖಂಡಿಸಲಿಲ್ಲ. ಮಾಡಬಾರದ ಅಪರಾಧ ಮಾಡಿದ ಆರೋಪ ಕೇಳಿಬಂದಾಗ ಪಕ್ಷದಿಂದ ಅಮಾನತ್ತು ಮಾಡುವ ಕನಿಷ್ಠ ಕ್ರಮವನ್ನೂ ಬಿಜೆಪಿ ಪಕ್ಷ ಮಾಡಲಿಲ್ಲ. ಈಗ ಮೊಟ್ಟೆ ದಾಳಿಯಾದಾಗ ಇದ್ದಕ್ಕಿದ್ದಂಗೆ ಎಚ್ಚರವಾದ ಬಿಜೆಪಿಗರು ಮುನಿರತ್ನ ಪರ ಮಾತಾಡ ತೊಡಗಿದ್ದಾರೆ. ಕಾಂಗ್ರೆಸ್ ಪಿತೂರಿ ಎಂದು ಆರೋಪಿಸಲಾರಂಭಿಸಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕರುಗಳು ನಾವು ಮಾಡಿಲ್ಲ, ನಮ್ಮವರು ಮೊಟ್ಟೆ ಹೊಡೆದಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದರ ಬದಲಾಗಿ ಈ ಮುನಿರತ್ನ ಎನ್ನುವವನ ಸ್ತ್ರೀಪೀಡಕತನವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿ ಬೆತ್ತಲಾಗಿಸಬೇಕಾಗಿತ್ತು. ತನಿಖೆಯನ್ನು ಚುರುಕುಗೊಳಿಸಿ ಈ ಪೀಡಕನಿಗೆ ಆದಷ್ಟು ಬೇಗ ಶಿಕ್ಷೆ ನೀಡುವಂತೆ ಪ್ರಾಸಿಕ್ಯೂಶನ್ ಮೇಲೆ ಒತ್ತಡ ತರಬೇಕಿತ್ತು. ಈಗಾಗಲೇ ಸಾಕ್ಷಿಗಳ ಮೇಲೆ ಧಮಕಿ ಹಾಕಿಸಿದ ಪ್ರಕರಣವನ್ನು ಕೋರ್ಟ್ ಗಮನಕ್ಕೆ ತರಬೇಕಿತ್ತು. ಹೈಕೋರ್ಟ್ ಕೊಟ್ಟ ಜಾಮೀನನ್ನು ರದ್ದು ಮಾಡಬೇಕೆಂದು ಸುಪ್ರೀಂ ಕೋರ್ಟಲ್ಲಿ ಸರಕಾರ  ಪ್ರಯತ್ನಿಸಬೇಕಿತ್ತು. ಇಂತಹುದೇ ಸ್ತ್ರೀಪೀಡಕ ಪ್ರಜ್ವಲ್ ರೇವಣ್ಣ ಇನ್ನೂ ಜೈಲಲ್ಲಿ ಇರುವಾಗ, ಅಂತಹುದೇ ಅಕ್ಷಮ್ಯ ಅಪರಾಧ ಮಾಡಿದ ಮುನಿರತ್ನ ಹೇಗೆ ಬೇಲ್ ಪಡೆದು ಹೊರಗೆ ಬರಲು ಸಾಧ್ಯವಾಯಿತು ಎಂಬುದನ್ನಾದರೂ ಈ ಕಾಂಗ್ರೆಸ್ ನೇತೃತ್ವದ ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು.

ಆಯ್ತು, ಯಾರೋ ಮೊಟ್ಟೆ ಹೊಡೆದರು. ಯಾರು ಎಂದು ತನಿಖೆಯಿಂದ ತಿಳಿಯಲೂ ಬಹುದು. ಆದರೆ ಮೊಟ್ಟೆ ಹೊಡೆಸಿಕೊಂಡವ ಏನೂ ಸಾಚಾ ಚರಿತ್ರೆಯ ವ್ಯಕ್ತಿಯಂತೂ ಅಲ್ಲವೇ ಅಲ್ಲವಲ್ಲ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಅದೇನೋ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹಿಂದುತ್ವವಾದಿ ಕಿಡಿಗೇಡಿಗಳನ್ನು ಸಮರ್ಥಿಸಿಕೊಂಡಿದ್ದರಲ್ಲಾ.. ಈಗಲೂ ಅದೇ ರೀತಿ ಈ ಮುನಿರತ್ನನ ದುಷ್ಕೃತ್ಯಗಳ ಕ್ರಿಯೆಗೆ ರೋಸಿಹೋದವರು ಮೊಟ್ಟೆ ದಾಳಿಯ ಮೂಲಕ ಪ್ರತಿಕ್ರಿಯೆ ತೋರಿಸಿರಬಹುದು. “ಮಾಡಿದ್ದುಣ್ಣೋ ಮಹರಾಯ” ಎನ್ನುವ ಗಾದೆಗೆ ಅನುಗುಣವಾಗಿ ಇಂತಹ ಕ್ರಿಯೆ ಪ್ರತಿಕ್ರಿಯೆಗಳು ನಡೆದಿವೆ. ಹೀಗೆ ದಾಳಿಯನ್ನು ಯಾರೇ ಮಾಡಿರಲಿ ಇಲ್ಲವೇ ಮಾಡಿಸಿರಲಿ ಅದು ಕಾನೂನು ವಿರೋಧಿ ಕೆಲಸವೇ ಆಗಿದೆ.  ಆದರೂ ಮುನಿರತ್ನ ಮಾಡಿದ ಅನೈತಿಕ ಕೆಲಸಗಳನ್ನು ನೆನಪಿಸಿಕೊಂಡರೆ ಈ ಘಟನೆಯಿಂದ ಒಂದು ಸಣ್ಣ ಅನುಕಂಪವೂ ಯಾರಲ್ಲೂ ಹುಟ್ಟಲು ಸಾಧ್ಯವಿಲ್ಲವಾಗಿದೆ. ನಾಗರೀಕ ಸಮಾಜದಲ್ಲಿ ನಾಯಕನಾಗಿ ಇರುವ ಯೋಗ್ಯತೆ ಕಳೆದುಕೊಂಡಿರುವ ಈ ಪುಂಡ ರಾಜಕಾರಣಿಯನ್ನು ಕಾರಾಗೃಹದಲ್ಲಿಡುವುದೇ ಸೂಕ್ತವಾದದ್ದು. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ವಿಳಂಬ ವಿಚಾರಣೆ ಹಾಗೂ ಸಾಕ್ಷಿಗಳನ್ನೇ ಬುಡಮೇಲು ಮಾಡುವ ನ್ಯಾಯವಾದಿಗಳ ಚಾಕಚಕ್ಯತೆ ಮತ್ತು ಅಧಿಕಾರ ಹಾಗೂ ಹಣದ ಪ್ರಭಾವಗಳು ಮುನಿರತ್ನನಂತಹ ಸಮಾಜಘಾತುಕರನ್ನು ರಕ್ಷಣೆ ಮಾಡುತ್ತವೆ. ಇಂತವರಿಂದ ಸಂತ್ರಸ್ತರಾದವರು ನೋವನ್ನು ಅನುಭವಿಸುತ್ತಲೇ ಇರುತ್ತಾರೆ. ಮೊಟ್ಟೆ ರಾಜಕೀಯ ಗಂಟೆಗೊಂದು ಬಣ್ಣ ಬದಲಾಯಿಸುತ್ತಿರುತ್ತದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ಚಿಂತಕರು

ಇದನ್ನೂ ಓದಿ- ವಿಶ್ವ ಹವ್ಯಕ ಸಮ್ಮೇಳನ : ಇತಿಹಾಸ ಮತ್ತು ಭವಿಷ್ಯ

More articles

Latest article