ಎಂಪುರಾನ್ ನಂತಹ ಸಿನೆಮಾಗಳ ಗೆಲುವಿನಲ್ಲಿ ಕೋಮುವಾದಿ ಶಕ್ತಿಗಳ ಸೋಲಿದೆ. ಮನುಷ್ಯತ್ವದ ಮೇಲೆ ಹಲ್ಲೆ ಮಾಡುವ ಮತಾಂಧತೆಯ ನಾಶವಿದೆ. ಎಂಪುರಾನ್ ಸಿನೆಮಾ ಎಲ್ಲಾ ದೇಶ ವಿದೇಶಗಳ ಭಾಷೆಗಳಿಗೂ ಡಬ್ಬಿಂಗ್ ಆಗಲಿ. ಹಿಂಸಾವಾದಿ ಭಯೋತ್ಪಾದಕರ ಕರಾಳ ಮುಖವಾಡ ಕಳಚಲಿ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಇದು ನಿರೀಕ್ಷಿತವಾಗಿತ್ತು. ವಿರೋಧಿಸಿದವರ ಮೇಲೆ ಸಾಕು ನಾಯಿಗಳ ದಾಳಿ ನಿಶ್ಚಿತವಾಗಿತ್ತು. ಗೋದ್ರೋತ್ತರ ಹತ್ಯಾಕಾಂಡವನ್ನು ಆಧರಿಸಿ ಸಿನೆಮಾ ಮಾಡಿದರೆ ನರಹಂತಕರ ಅಧಿನಾಯಕ ಸುಮ್ಮನಿರಲು ಸಾಧ್ಯವಾ?
ಅದು ಜನಪ್ರಿಯ ನಟ ಮೋಹನ್ ಲಾಲ್ ಅಭಿನಯದ ಮಲಯಾಳಿ ಚಲನಚಿತ್ರ ಎಲ್ 2 ಎಂಪುರಾನ್. ಗುಜರಾತಿನ ಗೋದ್ರಾ ದುರಂತದ ನಂತರ ಧರ್ಮಾಂಧರಿಂದ ಮುಸ್ಲಿಂ ಸಮುದಾಯದವರ ಮೇಲೆ ನಡೆದ ಅಮಾನವೀಯ ಹತ್ಯೆಗಳನ್ನು ಹೋಲುವ ಚಿತ್ರಣವನ್ನು ತೋರುವ ಧೈರ್ಯ ಮಾಡಿದ್ದು ಈ ಸಿನೆಮಾ ನಿರ್ದೇಶಕ ಪೃಥ್ವಿರಾಜ್ ಸುಕುಮಾರ್.
ಇಂತಹ ಕೋಮು ಹಿಂಸಾ ಕ್ರೌರ್ಯವನ್ನು ಅನಾವರಣಗೊಳಿಸುವ ಸಿನೆಮಾ ನಿರ್ಮಾಣವಾದರೆ ಕೇಸರಿ ಮತಾಂಧ ಪಡೆ ಸುಮ್ಮನಿರಲು ಸಾಧ್ಯವೇ? ಬಿಜೆಪಿ ಹಾಗೂ ಸಂಘಪರಿವಾರದ ಮಂದಿಗಳು ಸಿನೆಮಾ ವಿರುದ್ಧ ತೀವ್ರವಾದ ಅಭಿಯಾನ ಆರಂಭಿಸಿದವು. ಅದರಲ್ಲೂ ಸಿನೆಮಾದ ಖಳನಾಯಕನ ಹೆಸರನ್ನು ಭಜರಂಗಿ ಬಾಬಾ ಅಂತಾ ಇಟ್ಟರೆ ಭಜರಂಗಿ ಉಗ್ರ ಪಡೆ ಸುಮ್ಮನಿದ್ದೀತೆ? ಗಲಾಟೆ ಮಾಡಿಸಲಾಯ್ತು. ಬ್ಯಾನ್ ಮಾಡಿ ಎಂದು ಕೂಗಾಡಿದ್ದೂ ಆಯ್ತು. ಸಾಮಾಜಿಕ ಜಾಲತಾಣಗಳಲ್ಲಿ ರಾಡಿ ಎಬ್ಬಿಸಲಾಯ್ತು. ಯಾವಾಗ ಈ ಸಂಘಿಗಳ ವಿರೋಧ ಹೆಚ್ಚಾಯಿತೋ ನಟ ಮೋಹನ್ ಲಾಲ್ ಕ್ಷಮೆ ಕೇಳಿ ಆಕ್ರೋಶದ ಬೆಂಕಿಯ ತೀವ್ರತೆಯಿಂದ ಪಾರಾಗುವ ಪ್ರಯತ್ನ ಮಾಡಿದರು. ಈ ವಿವಾದಿತ ಸಿನೆಮಾವನ್ನು ಅದೆಷ್ಟು ಎಡಿಟ್ ಮಾಡ್ತೀರೋ ಮಾಡಿಕೊಳ್ಳಿ ಎಂದು ನಿರ್ದೇಶಕ ಸೇಫ್ ಆಗಲು ನೋಡಿದರು. ಸೆನ್ಸಾರ್ ಬೋರ್ಡಿನಿಂದ ಒಟ್ಟು 24 ಕಡೆ ಈ ಸಿನೆಮಾ ಕತ್ತರಿ ಪ್ರಯೋಗಕ್ಕೆ ಒಳಗಾಯ್ತು ಹಾಗೂ ಬಾಬಾ ಬಜರಂಗಿ ಹೆಸರನ್ನು ಬಲದೇವ್ ಎಂದೂ ಬದಲಾಯಿಸಿ ಸಂಘಿಗಳ ಮುಂದೆ ಶರಣಾಗತಿ ತೋರಲಾಯ್ತು.
ಇಷ್ಟಕ್ಕೆ ಸಂಘ ಪರಿವಾರಿಗರ ಅಸಹನೆ ಹಾಗೂ ಸಿಟ್ಟು ಕಡಿಮೆಯಾದರೂ, ಗೋದ್ರಾ ದುರಂತದ ಅಧಿನಾಯಕನ ಕೋಪವು ನೆತ್ತಿಗೇರಿತ್ತು. ನೇರವಾಗಿ ಸಿನೆಮಾ ಬ್ಯಾನ್ ಮಾಡಿದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಪ್ರತಿ ಪಕ್ಷಗಳು ವಿರೋಧಿಸುತ್ತವೆ . ನಾಯಕ ನಟನ ಮೇಲೆ ಕ್ರಮ ತೆಗೆದುಕೊಂಡರೆ ಆತನ ಅಭಿಮಾನಿ ಬಳಗದ ವಿರೋಧ ಎದುರಿಸಬೇಕಾಗುತ್ತದೆ. ಅದಕ್ಕೆ ಎಂಪುರಾನ್ ಸಿನೆಮಾದ ನಿರ್ಮಾಪಕರ ಮೇಲೆ ಇಡಿ ತನಿಖಾ ಸಂಸ್ಥೆಯನ್ನು ಛೂ ಬಿಡಲಾಯ್ತು. ಈ ಸಿನೆಮಾದ ನಿರ್ಮಾಪಕರಾದ ಗೋಪಾಲಂ ಮಾಲೀಕತ್ವದ ಗೋಕುಲಂ ಚಿಟ್ಸ್ ಕಂಪನಿಯ ಕಚೇರಿಗಳ ಮೇಲೆ ದಾಳಿ ಮಾಡಿಸಲಾಯ್ತು. ವಿದೇಶೀ ವಿನಿಮಯ ನಿರ್ವಹಣಾ ಕಾಯ್ದೆಯ ಉಲ್ಲಂಘನೆಯ ಆರೋಪದ ಮೇರೆಗೆ ಗೋಪುರಂ ಗ್ರೂಪ್ ಕಂಪನಿಯ ಕಚೇರಿಗಳಲ್ಲಿ ಎಪ್ರಿಲ್ 4 ರಂದು ವ್ಯಾಪಕವಾದ ಶೋಧ ಕಾರ್ಯ ಮಾಡಲಾಯ್ತು. ಈಗ ಈ ದಾಳಿ ಯಾಕಾಯ್ತು, ಇದರ ಹಿಂದಿರುವ ರೂವಾರಿಗಳು ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಯಾವುದೋ ನೆಪದಲ್ಲಿ ಸಿನೆಮಾ ನಿರ್ಮಾಪಕನ ಮೇಲೆ ಪ್ರತೀಕಾರ ತೆಗೆದುಕೊಳ್ಳುವುದು ಮೊದಲ ಗುರಿಯಾದರೆ, ಇನ್ಮೇಲೆ ಸಂಘಿ ಭಜರಂಗಿ ಹಾಗೂ ಸನಾತನಿಗಳ ವಿರುದ್ಧ ಸಿನೆಮಾ ತಯಾರಿಸುವ ಸಾಹಸವನ್ನು ಯಾರಾದರೂ ಮಾಡಿದರೆ ಅವರ ಮೇಲೆಯೂ ಇಂತಹ ದಾಳಿ ಶತಸಿದ್ಧ ಎನ್ನುವ ಸಂದೇಶವನ್ನು ರವಾನಿಸುವುದು ಇಂತಹ ದಾಳಿಯ ಹಿಂದಿರುವ ಭಯೋತ್ಪಾದಕ ಉದ್ದೇಶವಾಗಿದೆ.
ಇದೇ ಸಂಘಿಗಳು ಕಾಶ್ಮೀರಿ ಫೈಲ್ಸ್ ನಂತಹ ದ್ವೇಷಪೂರಿತ ಕಾಲ್ಪನಿಕ ಕಥೆಯನ್ನು ತಲೆಯ ಮೇಲಿಟ್ಟುಕೊಂಡು ಮೆರೆಸಿದ್ದರು. ಕೇಂದ್ರ ಸರಕಾರವೇ ಸಬ್ಸಿಡಿ ಘೋಷಿಸಿತ್ತು. ಸ್ವತಃ ಪ್ರಧಾನಿಗಳೇ ಈ ಸಿನೆಮಾದ ಪ್ರಚಾರಕ್ಕೆ ನಿಂತಿದ್ದರು. ಕೊನೆಗೆ ಈ ಸಿನೆಮಾದಲ್ಲಿ ಊಹಾತ್ಮಕ ಅಂಶಗಳಿವೆ ಎಂದು ನಿರ್ದೇಶಕರೇ ಒಪ್ಪಿಕೊಳ್ಳಬೇಕಾಯ್ತು.
ಸಂಘಿಗಳು ಅದೆಷ್ಟೇ ಕೇಡಿನಾಟ ಆಡಲಿ ಜನರು ಮಾತ್ರ ಈ ಸಿನೆಮಾವನ್ನು ಗೆಲ್ಲಿಸಿದ್ದಾರೆ. ಎಂಪುರಾನ್ ಬಾಕ್ಸಾಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಲಿಯಾಳಿ ಸಿನೆಮಾ ರಂಗದ ಗಳಿಕೆಯ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದೆ. ಬಿಡುಗಡೆಯಾದ ಮೊದಲ ದಿನವೇ 21 ಕೋಟಿ ಬಾಚಿದೆಯಂತೆ. ಮೂರೇ ದಿನಕ್ಕೆ ನೂರು ಕೋಟಿ ಕಲೆಕ್ಷನ್ ಮಾಡಿ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಎಷ್ಟೇ ಪ್ರತಿರೋಧ ಬರಲಿ, ಅದೆಷ್ಟೇ ಕತ್ತರಿ ಪ್ರಯೋಗ ಮಾಡಲಿ ಜನರು ಮಾತ್ರ ಇಂತಹ ಸತ್ಯ ಘಟನೆಯಾಧಾರಿತ ಸಿನೆಮಾವನ್ನು ಸೋಲಿಸಲು ಬಿಡುವುದಿಲ್ಲ. ಈ ಸಿನೆಮಾದ ಅಮೋಘ ಗೆಲುವಿಗೆ ಸಂಘಿಗಳ ಕೊಡುಗೆಯೂ ಬೇಕಾದಷ್ಟಿದೆ. ಈ ಕಮಂಗಿಗಳು ವಿವಾದ ಸೃಷ್ಟಿಸಿದಷ್ಟೂ ಪ್ರಚಾರ ಹೆಚ್ಚಾಗಿ ಪ್ರೇಕ್ಷಕರು ಥೇಟರುಗಳತ್ತ ಬರುತ್ತಿದ್ದಾರೆ. ಇಂತಹ ಸಿನೆಮಾಗಳ ಗೆಲುವಿನಲ್ಲಿ ಕೋಮುವಾದಿ ಶಕ್ತಿಗಳ ಸೋಲಿದೆ. ಮನುಷ್ಯತ್ವದ ಮೇಲೆ ಹಲ್ಲೆ ಮಾಡುವ ಮತಾಂಧತೆಯ ನಾಶವಿದೆ. ಎಂಪುರಾನ್ ಸಿನೆಮಾ ಎಲ್ಲಾ ದೇಶ ವಿದೇಶಗಳ ಭಾಷೆಗಳಿಗೂ ಡಬ್ಬಿಂಗ್ ಆಗಲಿ. ಹಿಂಸಾವಾದಿ ಭಯೋತ್ಪಾದಕರ ಕರಾಳ ಮುಖವಾಡ ಕಳಚಲಿ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಭಾರತದ ʼಆರ್ಥಿಕತೆ ಏರುವಿಕೆʼಯ ಹಿಂದಿನ ಕರಾಳ ಕಥೆ | ಭಾಗ 2