Saturday, December 7, 2024

ಮಂಗಳೂರಿನಲ್ಲಿ ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನ

Most read

ಮಂಗಳೂರು: ಡಿವೈಎಫ್ಐನ 12ನೇ ಕರ್ನಾಟಕ ರಾಜ್ಯ ಸಮ್ಮೇಳನವು ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ 2024ರ ಫೆಬ್ರವರಿ 25 – 27ರ ವರೆಗೆ ಮಂಗಳೂರಿನ ಉಳ್ಳಾಲದ ಕಲ್ಲಾಪು ಬಳಿ ಇರುವ ಯುನಿಟಿ ಸಭಾಂಗಣದಲ್ಲಿ ನಡೆಯಲಿದೆ. ಡಿವೈಎಫ್ಐನ ಕರ್ನಾಟಕ ರಾಜ್ಯ ಸಮ್ಮೇಳನವು ಮೂರು ವರ್ಷಗಳಿಗೊಮ್ಮೆ ನಡೆಯುತ್ತಿದ್ದು ಈ ಬಾರಿಯದು  12ನೇ ಸಮ್ಮೇಳನವಾಗಿದೆ.  ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಮೊದಲ ಎರಡು ದಿನ ಪ್ರತಿನಿಧಿ ಅಧಿವೇಶನ ನಡೆಯಲಿದ್ದು ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ಸದಸ್ಯತ್ವದ ಆಧಾರದ ಮೇಲೆ ಮುನ್ನೂರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಅಧ್ಯಕ್ಷರೂ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ  ಮುನೀರ್‌ ಕಾಟಿಪಳ್ಳ ಕನ್ನಡ ಪ್ಲಾನೆಟ್‌ ಗೆ ಮಾಹಿತಿ ನೀಡಿದರು.

ಡಿವೈಎಫ್ಐ ಭಾರತದ ಸ್ವಾತಂತ್ರ್ಯ ಹೋರಾಟದ ಹುತಾತ್ಮ ವೀರರಾದ ಭಗತ್ ಸಿಂಗ್,‌ ಚಂದ್ರಶೇಖರ್ ಆಜಾದ್, ಅಶ್ಪಾಕುಲ್ಲಾ ಖಾನ್   ಮೊದಲಾದ ಕ್ರಾಂತಿಕಾರಿಗಳ ಆಶಯದೊಂದಿಗೆ ಪಂಜಾಬಿನ ಲೂಧಿಯಾನದಲ್ಲಿ 1980 ರಲ್ಲಿ ಸ್ಥಾಪನೆಯಾಯಿತು. ಕಳೆದ 44 ವರ್ಷಗಳಿಂದ “ಸರ್ವರಿಗೂ ಶಿಕ್ಷಣ ಸರ್ವರಿಗೂ ಉದ್ಯೋಗ” ಎಂಬ ಘೋಷಣೆ ಅಡಿಯಲ್ಲಿ ಮಾನವ ಪ್ರೇಮಿ ಸಂಘಟನೆಯಾಗಿ ಅಲ್ಪಸಂಖ್ಯಾತ, ದಲಿತ, ಆದಿವಾಸಿ ಸಮುದಾಯಗಳು ಸೇರಿದಂತೆ ದಮನಿತರ ಪರವಾಗಿ ಅಧಿಕಾರಶಾಹಿಗಳ ಎದುರಾಗಿ ಅಸಂಖ್ಯ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಕೋಮುವಾದಕ್ಕೆ ಎದುರಾಗಿ ಸೌಹಾರ್ದತೆ, ಜಾತ್ಯತೀತ ಮೌಲ್ಯಗಳ  ರಕ್ಷಣೆಗಾಗಿ ರಾಜಿ ರಹಿತ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣವನ್ನು ವಿರೋಧಿಸಿ,‌ ಉದ್ಯೋಗ ಮತ್ತು ಆರೋಗ್ಯದ ಹಕ್ಕುಗಳಿಗಾಗಿ, ಕುಡಿಯುವ ನೀರಿನ ಖಾಸಗಿಕರಣದ ವಿರುದ್ಧ, ಜಿಲ್ಲೆಯ ಬೃಹತ್ ಕೈಗಾರಿಕೆಗಳು ಇಲ್ಲಿನ ನೆಲ, ಜಲ ಪರಿಸರವನ್ನು ಮಾಲಿನ್ಯಗೊಳಿಸುವುದರ ವಿರುದ್ಧ , ಸುರತ್ಕಲ್ ಅಕ್ರಮ ಟೋಲ್ ಗೇಟ್ ನ ತೆರವಿಗಾಗಿ- ಹೀಗೆ ಅನೇಕ ಹೋರಾಟಗಳನ್ನು ನಡೆಸಿದೆ‌ ಎಂದೂ ಅವರು ಹೇಳಿದರು.

ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮಗಳ ವಿವರ ನೀಡಿದರು.

ಉದ್ಘಾಟನೆಯು ತಾರೀಕು 25/2/2024 ರಂದು ಬೆಳಿಗ್ಗೆ 10ಕ್ಕೆ ಯುನಿಟಿ ಹಾಲ್ ನ ಪ್ರೊಫೆಸರ್‌ ಅಮೃತ ಸೋಮೇಶ್ವರ ವೇದಿಕೆ,‌ ಡಾ. ವಿಠಲ್ ಭಂಡಾರಿ ಸಭಾಂಗಣದಲ್ಲಿ ಕಾಂ. ನಾಗೇಶ್ ಕುಮಾರ್ ನಗರದಲ್ಲಿ ನಡೆಯಲಿದೆ. ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ರವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಕಾಂ.ಎಎ ರಹೀಮ್ ರವರು ಭಾಗವಹಿಸಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿರುವ ವಿಶ್ರಾಂತ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಸ್ವಾಗತ ಭಾಷಣ ಮಾಡಲಿದ್ದು ಅಧ್ಯಕ್ಷತೆಯನ್ನು ಡಿವೈಎಫ್ಐ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ವಹಿಸಲಿದ್ದಾರೆ. ಕಾರ್ಯದರ್ಶಿ ಬಸವರಾಜ್ ಪೂಜಾರ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜೇಶ್ ವೆಲ್ಲಾಟ್, ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಕಹರ್ ಭಾಗವಹಿಸಲಿದ್ದಾರೆ.

ವಿಶೇಷ ಉಪನ್ಯಾಸ

ಫೆಬ್ರವರಿ 26 ರಂದು ಬೆಳಗ್ಗೆ 10:30 ಕ್ಕೆ ದೆಹಲಿ ಜೆಎನ್ ಯು ವಿವಿ ಯ ವಿಶ್ರಾಂತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆಯವರಿಂದ “ಕರಾವಳಿ ಕಟ್ಟಿದ ಬಗೆ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನಡೆಯಲಿದೆ

ಯೂತ್ ಮಾರ್ಚ್

ಸಮ್ಮೇಳನದ ಸಮಾರೋಪವು 27.02.2024 ರಂದು  ನಡೆಯಲಿದ್ದು ಆ ದಿನ ಸಂಜೆ 3 ಗಂಟೆಗೆ ಕುತ್ತಾರ್ ಜಂಕ್ಷನ್ ನಿಂದ ಕಲ್ಲಾಪು ಯುನಿಟಿ ಹಾಲ್ ಮೈದಾನದ ವರೆಗೆ ಯುವಜನರ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಸೌಹಾರ್ದತೆಯನ್ನು ಸಾರುವ ಟ್ಯಾಬ್ಲೋಗಳು. ಡಾ. ಅಂಬೇಡ್ಕರ್, ಮಹಾತ್ಮ ಗಾಂಧಿ, ಭಗತ್ ಸಿಂಗ್,  ನಾರಾಯಣ ಗುರು, ಕೋಟಿ-ಚೆನ್ನಯ, ಕುದ್ಮಲ್ ರಂಗರಾವ್,  ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಅಮರ ಸುಳ್ಯ ವೀರರ ಭಾವಚಿತ್ರಗಳ ಮೆರವಣಿಗೆ, ಚೆಂಡೆ, ಬ್ಯಾಂಡ್ ಸೆಟ್, ವೇಷಭೂಷಣಗಳ ಜೊತೆಗೆ ಯುವಜನರ ಆಕರ್ಷಕ ಪಥ ಸಂಚಲನ ನಡೆಯಲಿದೆ.

ಬಹಿರಂಗ ಸಭೆ

ಸಮ್ಮೇಳನದ ಬಹಿರಂಗ ಸಭೆಯು ತೊಕ್ಕೊಟ್ಟು ಯುನಿಟಿ  ಮೈದಾನದ ಭಾಸ್ಕರ ಕುಂಬಳೆ ವೇದಿಕೆ, ಶ್ರೀನಿವಾಸ್ ಬಜಾಲ್ ನಗರದಲ್ಲಿ  ನಡೆಯಲಿದ್ದು ಇದರ ಪ್ರಧಾನ ಭಾಷಣಕಾರರಾಗಿ ಸಿಪಿಐಎಂ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಕಾಂ. ಸೀತಾರಾಮ್ ಯೆಚೂರಿ, ಬಹು ಭಾಷಾ ಚಲನಚಿತ್ರ ನಟ ಪ್ರಕಾಶ್ ರೈ, ರಾಜ್ಯಸಭಾ ಸದಸ್ಯರು ಹಾಗೂ ಡಿವೈಎಫ್ಐ ನ ಅಖಿಲ ಭಾರತ ಅಧ್ಯಕ್ಷರಾಗಿರುವ ಎಎ ರಹೀಂ ರವರುಗಳು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ಅಮೃತ ಸ್ಮರಣೆ ಸಾಂಸ್ಕೃತಿಕ ಕಾರ್ಯಕ್ರಮವೂ ಸೇರಿದಂತೆ ಸಮ್ಮೇಳನದ ಮೂರು ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

More articles

Latest article