ಸೋಲನ್ನೇ ಗೆಲುವಿನ ಮೆಟ್ಟಲಾಗಿಸಿಕೊಂಡ ನಟ ದ್ವಾರಕೀಶ್

Most read

‘ದ್ವಾರಕೀಶ್ ಇನ್ನಿಲ್ಲ’ ಎನ್ನುವ ಸುದ್ದಿ ನಂಬಲು ಸಾಧ್ಯವಾಗಲಿಲ್ಲ. ಯಾಕೆಂದರೆ ವಾಟ್ಸಾಪ್ ಯೂನಿವರ್ಸಿಟಿಯ ವಿಘ್ನ ಸಂತೋಷಿಗಳು ಈಗಾಗಲೇ ಕೆಲವಾರು ಸಲ ದ್ವಾರಕೀಶರವರ ಸಾವಿನ ಸುದ್ದಿಯನ್ನು ಪ್ರಚಾರ ಮಾಡಿದ್ದಾರೆ. ಪ್ರತಿ ಸಲವೂ ‘ನಾನಿನ್ನು ಸತ್ತಿಲ್ಲಾ ಬದುಕಿಯೇ ಇದ್ದೇನೆ’ ಎಂದು ದ್ವಾರಕೀಶರವರು ಬದುಕಿದ್ದಕ್ಕೆ ಸಮರ್ಥನೆ ಕೊಡುತ್ತಲೇ ಬಂದಿದ್ದಾರೆ. ಈ ಸಲದ ಸುದ್ದಿಯೂ ಹಿಂದಿನ ಹಾಗೆಯೇ ಸುಳ್ಳಾಗಲಿ ಎಂದು ಅಂದುಕೊಳ್ಳುವಷ್ಟರಲ್ಲಿಯೇ ದ್ವಾರಕೀಶರವರು ನಿಜಕ್ಕೂ ತೀರಿಕೊಂಡ ಸುದ್ದಿ ಬೇಸರವನ್ನುಂಟು ಮಾಡಿತು.

ಕನ್ನಡ ಸಿನೆಮಾ ಕ್ಷೇತ್ರದಲ್ಲಿ ದ್ವಾರಕೀಶರಂತಹ ಛಲಗಾರ ಇನ್ನೊಬ್ಬರಿಲ್ಲ. ಪ್ರತಿ ಸಲ ಸೋಲನ್ನೇ ಗೆಲುವಿನ ಮೆಟ್ಟಲಾಗಿಸಿಕೊಂಡು ಮೇಲೇರಿದ ಸಾಧನೆ ಕಡಿಮೆಯೇನಲ್ಲ. ಎತ್ತರ ಕಡಿಮೆ ಇರುವ ನ್ಯೂನತೆಯನ್ನೇ ತಮ್ಮ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು, ಬದುಕು ಹಾಗೂ ವೃತ್ತಿಯಲ್ಲಿ ಅನೇಕಾನೇಕ ಅಪಮಾನಗಳನ್ನು ಸಹಿಸಿಕೊಂಡು ತಮ್ಮ ಪ್ರತಿಭೆ ಹಾಗೂ ಛಲದ ಮೂಲಕವೇ ಯಶಸ್ಸನ್ನು ಪಡೆದ ಅಪರೂಪದ ಕಲಾವಿದ ದ್ವಾರಕೀಶ್.

ಚಿಕ್ಕ ವಯಸ್ಸಿನಲ್ಲೇ ಸಿನೆಮಾದಲ್ಲಿ ಬಣ್ಣ ಹಚ್ಚಿ ಹಾಸ್ಯ ಪಾತ್ರಗಳಿಗೆ ಜೀವ ತುಂಬಿದ ದ್ವಾರಕೀಶ್ ಕನ್ನಡದ ದಿಗ್ಗಜ ನಟರಾದ ರಾಜಕುಮಾರ್, ವಿಷ್ಣುವರ್ಧನ್ ರವರ ಸಿನೆಮಾಗಳಲ್ಲಿ ತಮ್ಮ ಮ್ಯಾನರಿಸಂ ಮೂಲಕವೇ ಗಮನ ಸೆಳೆದವರು. ತಮ್ಮ 25 ನೇ ವಯಸ್ಸಿಗೆ ಸಿನೆಮಾ ನಿರ್ಮಾಣದ ಸಾಹಸಕ್ಕೆ ಚಾಲನೆ ಇತ್ತವರು.  300 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದರು. 40 ಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ಮಿಸಿದರು. 15 ಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ದೇಶಿಸಿದರು. ಹಲವಾರು ಸಿನೆಮಾಗಳಿಗೆ ವಿತರಕರೂ ಆಗಿದ್ದರು. ಹೀಗೆ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಆರು ದಶಕಗಳ ಕಾಲ ಕನ್ನಡ ಸಿನೆಮಾ ರಂಗದಲ್ಲಿ ಸಕ್ರಿಯರಾಗಿದ್ದರು.

ಕೋಟಿಗಳ ಲೆಕ್ಕದಲ್ಲಿ ಹಣ ಸಂಪಾದಿಸಿದರು ಹಾಗೂ ಹಲವು ಕೋಟಿಗಳಷ್ಟು ಹಣವನ್ನೂ ಸಿನೆಮಾ ನಿರ್ಮಾಣದಲ್ಲಿ ಕಳೆದುಕೊಂಡರು. ಕಳೆದುಕೊಂಡಲ್ಲೇ ಮತ್ತೆ ಹುಡುಕಲು ಪ್ರಯತ್ನಿಸಿದರು. ಆರ್ಥಿಕ ಸ್ಥಿತಿವಂತಿಕೆ ಹಾಗೂ ದುಸ್ಥಿತಿ ಎರಡನ್ನೂ ಅನುಭವಿಸಿದರು. ವಾಸವಿದ್ದ ಮನೆಯನ್ನೂ ಮಾರುವಂತಹ ಆರ್ಥಿಕ ಸಮಸ್ಯೆಯನ್ನೂ ಅನುಭವಿಸಿದರು. ಆದರೆ ಯಾವತ್ತೂ ನೊಂದುಕೊಂಡು ಹತಾಶೆಯಿಂದ ಕೈಚೆಲ್ಲಿ ಕೂರಲಿಲ್ಲ. ನಿರಾಸೆಯಿಂದ ಸಿನೆಮಾ ಕ್ಷೇತ್ರ ಬಿಟ್ಟು ಹೋಗಲಿಲ್ಲ. ಸಾಲ ಮಾಡಿ ಮತ್ತೆ ಮತ್ತೆ ಸಿನೆಮಾ ನಿರ್ಮಾಣ ಮಾಡುತ್ತಲೇ ಇದ್ದರು. ಕೊನೆಯ ಉಸಿರಿರುವವರೆಗೂ ಸಿನೆಮಾವನ್ನು ಧ್ಯಾನಿಸಿದರು.

ಆಗ ವರನಟ ರಾಜಕುಮಾರರವರ ಹೆಸರು ಉತ್ತುಂಗದಲ್ಲಿತ್ತು. ಅವರ ಜೊತೆ ಅದ್ಯಾಕೋ ದ್ವಾರಕೀಶರವರು ಮನಸ್ತಾಪ ಮಾಡಿಕೊಂಡಿದ್ದರು. ರಾಜ್ ವಿರೋಧಿ ಶಕ್ತಿಗಳ ಜೊತೆ ಸೇರಿ ವರನಟನ ಬಗ್ಗೆ ಅಪಪ್ರಚಾರ ಮಾಡಿದ ಆರೋಪ ದ್ವಾರಕೀಶರವರ ಮೇಲಿತ್ತು. ಆದರೂ ತಮ್ಮ ನಿರ್ಮಾಣದ ಸಿನೆಮಾಗೆ ಡೇಟ್ಸ್ ಕೇಳಲು ರಾಜಕುಮಾರರವರ ಹತ್ತಿರ ಹೋದರು. ಆದರೆ ದೊಡ್ಡಮನೆಯವರು ನಿರಾಕರಿಸಿದರು. ಅದರಿಂದ ಕೋಪಗೊಂಡ ದ್ವಾರಕೀಶ್ ಪತ್ರಿಕಾಗೋಷ್ಟಿ ಕರೆದು ‘ರಾಜಕುಮಾರರವರ ಮಗನನ್ನೇ ನಾಯಕನನ್ನಾಗಿಸಿ ನನ್ನ ಮುಂದಿನ ಸಿನೆಮಾ ಮಾಡುತ್ತೇನೆ” ಎಂದು ಸವಾಲು ಹಾಕಿದರು. ಈ ಘೋಷಣೆ ಎಲ್ಲರಂತೆ ದೊಡ್ಡಮನೆಯವರಿಗೂ ಅಚ್ಚರಿ ಹುಟ್ಟಿಸಿತ್ತು. ರಾಜಕುಮಾರರಾಗಲೀ ಇಲ್ಲಾ ಅವರ ಮಕ್ಕಳಾಗಲೀ ದ್ವಾರಕೀಶರವರ ಸಿನೆಮಾದಲ್ಲಿ ನಟಿಸುವುದಿಲ್ಲ ಎಂದು ನಿರ್ಧರಿಸಿಯಾಗಿತ್ತು. ಅದು ಪತ್ರಿಕೆಗಳ ಮೂಲಕ ಬಹಿರಂಗವಾಗಿ ಎಲ್ಲರಿಗೂ ಗೊತ್ತಾಗಿತ್ತು. ಆದರೂ ಅದು ಹೇಗೆ ರಾಜಕುಮಾರ್ ರವರ ಮಗನನ್ನು ನಾಯಕನನ್ನಾಗಿಸಿ ಸಿನೆಮಾ ಮಾಡುತ್ತಾರೆ? ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡತೊಡಗಿತ್ತು.

ಆಗಲೇ  ಹೆಸರಾಂತ ಹಿರಿಯ ನಟಿ ಲೀಲಾವತಿಯವರ ಮಗ ವಿನೋದ್ ರಾಜಕುಮಾರ್ ಹೆಸರನ್ನು ದ್ವಾರಕೀಶರವರು ಮುನ್ನಲೆಗೆ ತಂದರು. ವಿನೋದ ರವರನ್ನು ನಾಯಕ ನಟನನ್ನಾಗಿಸಿ “ಡಾನ್ಸ್ ರಾಜಾ ಡಾನ್ಸ್” ಸಿನೆಮಾ ನಿರ್ಮಿಸಿ ದೊಡ್ಡಮನೆಯವರಿಗೆ ಸವಾಲು ಹಾಕಿದರು. ವಿನೋದರವರ ನೃತ್ಯ ಪ್ರತಿಭೆಯಿಂದಾಗಿ ಹಾಗೂ ಹೀಗೂ ಆ ಸಿನೆಮಾ ಯಶಸ್ವಿಯೂ ಆಯಿತು. ರಾಜಕುಮಾರ್ ಹಾಗೂ ಲೀಲಾವತಿಯವರ ನಡುವೆ ಗುಟ್ಟಾಗಿದ್ದ ಖಾಸಗೀ ಸಂಬಂಧ ಸಂತೆಯ ಮಾತಾಯಿತು.

ದ್ವಾರಕೀಶರವರ ಧೈರ್ಯ ಅಂದರೆ ಇದು. ದೊಡ್ಡಮನೆಯವರ ವಿರುದ್ಧ ಒಂದೇ ಒಂದು ಅಪಸ್ವರದ ನುಡಿಯಾಡಲೂ ಹಿಂದೆ ಮುಂದೆ ನೋಡುತ್ತಿದ್ದ ಕಾಲದಲ್ಲಿ ದ್ವಾರಕೀಶರವರು ಬಹಿರಂಗವಾಗಿ ಸಮರ ಸಾರಿದ್ದರು.

ಅದೇ ರೀತಿ ಇನ್ನೊಬ್ಬ ಪ್ರಸಿದ್ದ ಸ್ಟಾರ್ ನಟ ವಿಷ್ಣುವರ್ಧನ್ ರವರ ವಿರುದ್ಧವೂ ದ್ವಾರಕೀಶ್ ಮುನಿಸಿ ಕೊಂಡರು.  ಕೇಳಿದಾಗ ಡೇಟ್ಸ್ ಕೊಡದೇ ಇರುವ ಕಾರಣಕ್ಕೆ  ತಿರುಗಿ ಬಿದ್ದಿದ್ದರು. ಅದಕ್ಕೂ ಮೊದಲು ಕನ್ನಡ ಸಿನೆಮಾ ಕ್ಷೇತ್ರದಲ್ಲಿ ವಿಷ್ಣು ಹಾಗೂ ದ್ವಾರಕೀಶ್ ಜೋಡಿ ಹಲವಾರು ಯಶಸ್ವೀ ಚಿತ್ರಗಳನ್ನು ಕೊಟ್ಟಿತ್ತು. ಆದರೆ ಯಾವಾಗ ವಿಷ್ಣುರವರು ದ್ವಾರಕೀಯವರ ಸಿನೆಮಾದಲ್ಲಿ ನಟಿಸಲು ನಿರಾಕರಿಸಿದರೋ ಆಗ ಹಠಕ್ಕೆ ಬಿದ್ದು ಬೇರೆಯವರನ್ನು ಹಾಕಿಕೊಂಡು ಸಿನೆಮಾ ನಿರ್ಮಿಸಿದರಾದರೂ ಯಶಸ್ವಿಯಾಗಲಿಲ್ಲ. ಸತತ ಸೋಲುಗಳಿಂದ ದ್ವಾರಕೀಶ್ ರವರು ಆರ್ಥಿಕವಾಗಿ ಜರ್ಜರಿತರಾದರು. ಅನಾರೋಗ್ಯ ಪೀಡಿತರಾದರು. ಮತ್ತೆ ವಿಷ್ಣುವರ್ಧನ್ ರವರ ಬಳಿ ಹೋಗಿ ತಮ್ಮ ದುಸ್ಥಿತಿಯನ್ನು ವಿವರಿಸಿ ರಾಜಿಯಾದರು. ಆಗಲೇ ಈ ಇಬ್ಬರೂ ನಟರ ಕಾಂಬಿನೇಶನ್ನಿನಲ್ಲಿ ಆಪ್ತಮಿತ್ರ ಸಿನೆಮಾ ಸಿದ್ಧವಾಯ್ತು. ವಿಷ್ಣುರವರ ಮೇಲೆ ನಂಬಿಕೆ ಇಟ್ಟು ಸಾಲ ಮಾಡಿ ಹಣ ತಂದು ಸಿನೆಮಾ ನಿರ್ಮಿಸಿದ್ದರು. ಈ ಸಿನೆಮಾ ಬಿಡುಗಡೆ ಆಗುವುದಕ್ಕೂ ಈ ಚಲನಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸೌಂದರ್ಯರವರು ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಕ್ಕೂ ಕಾಕತಾಳೀಯವಾಯ್ತು. ಸಿನೆಮಾ ಸೂಪರ್ ಹಿಟ್ ಆಯ್ತು. ದ್ವಾರಕೀಶರವರ ಸಾಲವೆಲ್ಲಾ ತೀರಿ ಹಣ ಹರಿದು ಬರತೊಡಗಿತು.

ಸಿನೆಮಾಗೋಸ್ಕರ ಎಂತಹ ಹೆಸರಾಂತರ ವಿರೋಧವನ್ನೂ ಕಟ್ಟಿಕೊಳ್ಳುತ್ತಿದ್ದ ದ್ವಾರಕೀಶರವರು ಅದೇ ಸಿನೆಮಾಗೋಸ್ಕರ ರಾಜಿಯೂ ಆಗುತ್ತಿದ್ದರು.  ಸಿನೆಮಾವೇ ಅವರ ಬದುಕಾಗಿತ್ತು. ಅವರ ಉಸಿರಾಗಿತ್ತು. ಅವರ ಕಣ್ಣ ಬೆಳಕಾಗಿತ್ತು.

ಇಂತಹ ಪ್ರತಿಭಾನ್ವಿತ ಛಲಗಾರ ಕಲಾವಿದ ತನ್ನ 81 ನೇ ವಯಸ್ಸಿನಲ್ಲಿ ಎಪ್ರಿಲ್ 16 ರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅದೆಷ್ಟೇ ಏರಿಳಿತಗಳು ಇರಲಿ, ಲಾಭ ನಷ್ಟಗಳು ಬರಲಿ, ಅಪಮಾನ ಸನ್ಮಾನಗಳು ಸಿಗಲಿ ಎಂದೂ ಆಯ್ಕೆ ಮಾಡಿಕೊಂಡ ದಾರಿ ಬದಲಾಯಿಸದ, ಹಿಡಿದ ಕಾಯಕದಿಂದ ವಿಮುಖನಾಗದ ದ್ವಾರಕೀಶ್ ರವರ ವ್ಯಕ್ತಿತ್ವ ಮಾದರಿಯಾಗಿದೆ. ಇಂತಹ ಹಿರಿಯ ನಟನಿಗೆ ವಿದಾಯ ಹೇಳೋಣ. ಅವರ ಸಾಧನೆಯ ಬದುಕನ್ನು ನೆನಪಿನಲ್ಲಿಟ್ಟು ಕೊಳ್ಳೋಣ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article