ನಿನ್ನೆ ರಾತ್ರಿ ದುನಿಯಾ ವಿಜಯ್’ರ ‘ಭೀಮಾ’ ಚಿತ್ರವನ್ನು ನೋಡಿ ಸುಸ್ತೆದ್ದು ಹೋಗಿ ಬಂದು, ಮಲಗಿ ಬೆಳಗ್ಗೆ ಎದ್ದು ನೋಡಿದರೆ ಅದೇ ವಿಜಯ್’ರ ಒಂದು ಲೈವ್ ವಿಡಿಯೋ ಇತ್ತು. ಕೈಯಲ್ಲಿ ಎರಡು ಮಾತ್ರೆಗಳ ಸಾಚೆಟ್ ಹಿಡಿದು ವಿಜಯ್ ‘ ಇದು ಇಂಥ ಬ್ರಾಂಡ್ ಮಾತ್ರೆ, ಇಂಥ ಕಾಯಿಲೆಗೆ ಬಳಸುತ್ತಾರೆ, ಮೆಡಿಕಲ್ ಶಾಪ್ ಅಲ್ಲಿ ಸಿಗುತ್ತದೆ, ಇದನ್ನು ಹುಡುಗರು ನಾರ್ಕಟಿಕ್ ನಶೆಗೆ ಬಳಸುತ್ತಾರೆ.. ಎಂದು ರಾಜ್ಯದ ಎಲ್ಲಾ ಹದಿವಯಸ್ಸಿನ ಹುಡುಗರಿಗೂ ಬಹಿರಂಗವಾಗಿ ಹೊಸ ಡ್ರಗ್’ನ ಜಾಹಿರಾತು ಕೊಡುತ್ತಿದ್ದರು.
ಅರೆ ಇದೇನು?? ಮಾದಕ ವ್ಯಸನಿಗಳನ್ನು ಎಚ್ಚರಿಸುವ ನೆಪದಲ್ಲಿ, ಇಂಥದೊಂದು ಅಮಲು ಬರಿಸುವ ಮಾತ್ರೆಯ ಬಗ್ಗೆ ಇಷ್ಟು ಬಹಿರಂಗವಾಗಿ ಅದರ ಬ್ರಾಂಡ್ ಸಹಿತ ಹೇಳಿ ಎಲ್ಲಿ ಸಿಗುತ್ತದೆ ಎಂದು ಹೇಳಿ, ಇನ್ನೊಂದಷ್ಟು ಜನ ಈ ಡ್ರಗ್ ಹಿಂದೆ ಬೀಳುವಂತೆ ಮಾಡುವಂತ ಹುಚ್ಚಾಟಕ್ಕೆ ಏಕೆ ಈ ಮನುಷ್ಯ ಇಳಿದಿದ್ದಾರೆ ಅನಿಸಿತು. ದುನಿಯಾ ವಿಜಯ್ ರ ಇಂಥ ಅತ್ಯಂತ ಅಸೂಕ್ಷ್ಮ ಪರಮ ಹುಚ್ಚಾಟದ ವರ್ತನೆಗೆ ದಿಗಿಲೂ ಆಯಿತು.
ಇಂಥ ಅಸೂಕ್ಷ್ಮ ಸಂಗತಿಗಳನ್ನೆಲ್ಲ ಒಟ್ಟು ಹಾಕಿಯೇ ಅಲ್ಲವೇ ಇವರು ಭೀಮ ಚಿತ್ರವನ್ನು ಮಾಡಿರುವುದು ಎಂದು ನೆನೆದು ಇನ್ನಷ್ಟು ದಿಗಿಲಾಯಿತು. ನಿಮಗೆ ನೆನಪಿದ್ದರೆ, ಥ್ರಿಲ್ಲರ್ ಮಂಜು, ಸಾಯಿಕುಮಾರ್, ಡೇವಿಡ್ ಎಂಬ ಬರಹಗಾರ.. ಈ ಮೂವರು ಸೇರಿ ಹುಟ್ಟು ಹಾಕಿದ *ಕ್ಕನ್ *ಮ್ಮನ್, ಎಂಬ ಮೂರನೇ ದರ್ಜೆ ಕಳಪೆ ಡೈಲಾಗುಗಳ ಸಹಿಸಲಸಾಧ್ಯ ಭಯಾನಕ ಸಿನಿಮಾಗಳು ಏಳೆಂಟು ವರ್ಷಗಳ ಕಾಲ ಕನ್ನಡ ಚಿತ್ರರಂಗದ ಕಮರ್ಷಿಯಲ್ ಸಿನಿಮಾಗಳ ಅಭಿರುಚಿಯನ್ನೇ ಸಾರಾಸಗಟಾಗಿ ತೆಗೆದು ಚರಂಡಿಗೆ ಎಸೆದಿದ್ದವು. ಭೀಮಾ ಚಿತ್ರ ಇಂತದೆ ಕಳಪೆ ಸಾಹಸದ ಮುಂದುವರಿದ ಭಾಗವಾಗಿ ಕಾಣುತ್ತದೆ.
ನಗರವೊಂದರ ನಿರ್ಮಾಣ ಮತ್ತು ಚಲನೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುವ ನಗರದ ಬಡಜನರು ವಾಸಿಸುವ ಸ್ಲಂಗಳು ಮತ್ತು ಅವರ ನಿವಾಸಿಗಳನ್ನು ರೌಡಿಗಳು, ಚಪ್ಪರ್ಗಳು, ಅಪರಾಧಿಗಳು, ದಿನ ಬೆಳಗಾದರೆ ಕ್ರೈಂ ಮಾಡಿಕೊಂಡು ತಿರುಗುವ ಸೈಕೋ ಪಾತ್’ಗಳು ಎಂದು ಬ್ರಾಂಡ್ ಮಾಡುವ ಕೆಟ್ಟ ಚಾಳಿ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಇದೆ. ಕನ್ನಡದಲ್ಲಿ ಅದು ತುಸು ಹೆಚ್ಚೇ ಇದೆ. ಭೀಮ ಈ ಕೆಟ್ಟ ಚಾಳಿಯನ್ನು ನಗರಗಳ ಬಡವರನ್ನು ಅಪರಾಧಿಗಳಾಗಿ ಅಷ್ಟೇ ನೋಡುವ ಕೆಟ್ಟ ಕಣ್ಣಿನ ಮೂಲಕ ಮುಂದುವರಿಸಿದೆ. ಮಾದಕ ಪದಾರ್ಥಗಳನ್ನು ಮಾರುವ, ಸರ್ಕ್ಯುಲೆಟ್ ಮಾಡುವ ಗುಂಪುಗಳು ಸ್ಲಂಗಳಷ್ಟೇ ಇರುತ್ತದೆ ಎಂದು ಹೇಳುವ ದುನಿಯಾ ವಿಜಯ್, ಸ್ಲಂಗಳ ಒಳಗಿನ ಅಂತರ್ಗತ ಲೋಕಕ್ಕೆ ಇಳಿಯದೆ ಇರುವುದನ್ನು ಎತ್ತಿ ತೋರಿಸುತ್ತದೆ.
ಐದು ವರ್ಷದಿಂದ ಹಿಡಿದು 70-80 ವರ್ಷದವರೆಗೂ ವಯಸ್ಸಿನ ಕೊಳಚೆ ಪ್ರದೇಶದ ಜೀವಗಳು ತಮ್ಮ ಹೊಟ್ಟೆಪಾಡಿಗಾಗಿ ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಬೇಸಿಕಲಿ ಸ್ಲಂ ಜನರು ಕುಂತಲ್ಲಿ ಕೂರದ, ನಿಂತಲ್ಲಿ ನಿಲ್ಲದ ಏನಾದರೂ ಒಂದು ದುಡಿಮೆ ಮಾಡುತ್ತಲೇ ಇರುವ ಶ್ರಮಜೀವಿಗಳು. ಈ ಕಡೆಗೆ ಕಣ್ಣೆತ್ತಿಯೂ ನೋಡದ ಚಿತ್ರದ ನಿರ್ದೇಶಕ ಕಟ್ಟಿರುವ ಚಿತ್ರದ ಕಥಾನಾಯಕನು ಗ್ಯಾರೇಜ್ ವರ್ಕರ್ ಎಂದು ಹೇಳಿಕೊಂಡು ಒಂದು ದಿನಕ್ಕೂ ಬೈಕ್, ಸ್ಕೂಟರ್ ರಿಪೇರಿ ಮಾಡದೆ, ಡಿಸ್ಕಿ ಡಿಸೈನ್ ಡ್ರೆಸ್ ಗಳನ್ನು ಹಾಕಿಕೊಂಡು ಊರು ಸುತ್ತುವ ಹುಟ್ಟು ಸೋಂಬೇರಿ. ಬೆಂಗಳೂರಿನ ಜೆಸಿ ರೋಡ್ ಅಕ್ಕ ಪಕ್ಕದ ಪೂರ್ಣಿಮಾ ಥಿಯೇಟರ್ ಸ್ಲಂ, ಸುಧಾಮನಗರ, ಪಳನಿ ಗಾರ್ಡನ್, ಪೀರ್ ಬೌಂಡ್ರಿಸ್ಲಾಂ, ಅಂಜಿನಪ್ಪ ಗಾರ್ಡನ್, ಫ್ಲವರ್ ಗಾರ್ಡನ್ಸ್ ಕಲಾಸಿಪಾಳ್ಯ, ಕೆ ಆರ್ ಮಾರ್ಕೆಟ್, ಇಂಥ ಸ್ಲಂಗಳಲ್ಲಿ ಯಾರಾದರೂ ಹೋಗಿ ಓಡಾಡಿದರೆ ಭೀಮಾ ಚಿತ್ರದ ಕಥಾನಾಯಕನಂತ ಹುಟ್ಟು ಸೋಂಬೇರಿಗಳು ಸಿಗುವುದು ಪರಮಕಷ್ಟ. ಸ್ಲಂ ನವರು ಶ್ರಮಜೀವಿಗಳು ಶ್ರಮವನ್ನಷ್ಟೇ ನಂಬಿಕೊಂಡು ಬದುಕುತ್ತಾರೆ ಎಂಬ ಮೂಲಭೂತ ಅಂಶವನ್ನೇ ಚಿತ್ರ ನಿರ್ದೇಶಕ ದುನಿಯಾ ವಿಜಯ್ ಮರೆತು ಬಿಟ್ಟು ಈ ಚಿತ್ರದ ನಿರ್ದೇಶನಕ್ಕೆ ಕೈ ಇಟ್ಟಿದ್ದಾರೆ.
ನಾಯಕನೇನೋ ಹುಟ್ಟು ಸೋಂಬೇರಿ, ಅದು ಹಾಳಾಗಿ ಹೋಗಲಿ, ಸಿನಿಮಾದಲ್ಲಿ ಬರುವ ಈ ಸ್ಲಂಗಳಲ್ಲಿ ಬರುವ ಕಥಾ ಪಾತ್ರಗಳೆಲ್ಲವೂ ಹೊಟ್ಟೆ ಪಾಡಿಗೆ ಒಂದು ಕೆಲಸವನ್ನೂ ಮಾಡುವುದಿಲ್ಲ, ಒಂದೋ ಗಾಂಜಾ ಕಟ್ಟುತ್ತಿರುತ್ತವೆ ಇಲ್ಲವೇ ಬೈಕ್ ನಲ್ಲಿ ವೀಲಿಂಗ್ ಮಾಡುತ್ತಿರುತ್ತವೆ. ಇಲ್ಲವೇ ಸಿಕ್ಕಸಿಕ್ಕವರಿಗೆಲ್ಲ *ಕ್ಕನ್ *ಮ್ಮನ್, ಸೂ*ಮಗನೆ ಎಂದು ಬೈದಾಡುತ್ತಿರುತ್ತವೆ. ಸ್ವತಹ ಕಥಾನಾಯಕ ಭೀಮನೆ ತನ್ನ ಅಣ್ಣನಿಗೆ ‘ಹೋಗೋ ನನ್ನ ಮಗನೇ’ ಎನ್ನುತ್ತಾನೆ. ಕೈಯಲ್ಲಿ ‘ಅವ್ವನ ಅಭಿಮಾನಿ’ ಎಂದು ಹಚ್ಚೆ ಹಾಕಿಸಿಕೊಂಡ ನಾಯಕ ಭೀಮ, ಎದುರಿಗೆ ಸಿಕ್ಕ ಖಳನಾಯಕರ ಅಮ್ಮಂದಿರನ್ನು ಅವಾಚ್ಯ ಶಬ್ದಗಳಿಂದ ಬೈಯುವುದು ಬಹಳಷ್ಟು ಸೀನ್ಗಳಲ್ಲಿ ಕಂಡು ಬರುತ್ತದೆ. ಚಿತ್ತದಲ್ಲಿನ ಮುಕ್ಕಾಲು ಪಾಲು ಪಾತ್ರಗಳು ಯಾರೋ ತಪ್ಪು ಮಾಡಿದರೆ ಅದಕ್ಕೆ ಸಂಬಂಧವೇ ಇರದ ಅವರ ಅಕ್ಕ, ಅಮ್ಮ, ತಂಗಿ ಎಲ್ಲರನ್ನು ವಾಚಾಮ ಗೋಚರವಾಗಿ ಅಪ್ಪಟ ಸಂಸ್ಕೃತದಲ್ಲಿ ನಿಂದಿಸುತ್ತವೆ. ತಾವು ಆರಾಧಿಸುವ ತಾಯಿಯ ಅಭಿಮಾನವನ್ನೇ ನಿರ್ದೇಶಕ ಚಿತ್ರದಲ್ಲಿ ಅವಮಾನಿಸುತ್ತಾರೆ. ಸ್ಲಂ ಜನರ ಭಾಷೆಯೇ ಇಷ್ಟು ಒರಟಾಗಿರುತ್ತದೆ ಎಂದು ಊರಿಗೆ ಡಂಗುರ ಸಾರುವುದು ನಿರ್ದೇಶಕ ದುನಿಯಾ ವಿಜಯ್ ಒಂದೇ ಉದ್ದೇಶವೇ ಎಂಬ ಅನುಮಾನ ಮೂಡಿಸುತ್ತದೆ ಭೀಮ ಚಿತ್ರ.
ತಮ್ಮ ಈ ಹಿಂದಿನ ಚಿತ್ರ ‘ಸಲಗ’ದಲ್ಲೇ ಈ ಎಲ್ಲಾ ಅಧ್ವಾನಗಳನ್ನು ಮಾಡಿ ಮುಗಿಸಿದ್ದ ನಿರ್ದೇಶಕ ಇತ್ತ ಸ್ಲಂ ಜನರನ್ನು ಅಪಮಾನಿಸುವ ಜೊತೆಗೆ, ಬುಡಕಟ್ಟು ಜನಪದವನ್ನು ಅದರ ಮೂಲಾರ್ಥಕ್ಕೆ ಸಂಬಂಧವೇ ಇಲ್ಲದ ನಾಯಕನ ಹಿಂಸೆಯ ಮೆರೆದಾಟಕ್ಕೆ ತಂದು ಸಿನಿಮಾ ಹಾಡುಗಳಾಗಿ ಅಳವಡಿಸಿ ಜನಪದ ಸಂಸ್ಕೃತಿಯನ್ನು ಹಾಳುಗೆಡವಿದ್ದು ನಡೆದಿತ್ತು. ಯಲ್ಲಾಪುರದ ಭೂಮಾಲೀಕರು ಮತ್ತು ಮಿಲ್ ಓನರ್ ಗಳ ದೌರ್ಜನ್ಯದ ಕಥೆ ಹೇಳುವ ಸಿದ್ಧಿಗಳ ಟಿಣಿ0ಗ ಮಿಣಿಂಗ ಟಿಶ್ಯ ಸಿದ್ಧಿಗಳ ಹಾಡನ್ನು, ಮೂಲಾರ್ಥಕ್ಕೆ ಸಂಬಂಧವೇ ಇಲ್ಲದ ರೌಡಿಗಳ ಹಿಂಸೆಯ ವಿಜೃಂಭಣೆಗೆ ಬಳಸಿದ್ದು ಸನ್ಮಾನ್ಯ ದುನಿಯಾ ವಿಜಯ್ ಅವರ ಕಳಪೆ ಸೃಜನಶೀಲತೆಗೆ ಸಾಕ್ಷಿ. ಭೀಮದಲ್ಲೂ ಇದು ಮುಂದುವರೆದಿದೆ, ಜೇನು ಕುರುಬರ ಹಾಡನ್ನು ತಂದು ಮತ್ತದೇ ಮೈಬಗ್ಗಿಸಿ ದುಡಿಯದ ಸೋಂಬೇರಿ ರೌಡಿಗಳ ಹಿಂಸೆಯ ವಿಜ್ರಂಭಣೆಗೆ ಈ ಪುಣ್ಯಾತ್ಮ ಬಳಸಿ ಗಬ್ಬೆಬ್ಬಿಸಿದ್ದಾನೆ.
ಇದರೊಡನೆ ಮಾದಕ ವ್ಯಸನಿಗಳ ಕಥೆ ಹೇಳುತ್ತೇನೆ ಎಂದು ಹೊರಟ ದುನಿಯಾ ವಿಜಯ್ ಮೇಲ್ಮಟ್ಟದಲ್ಲಿ ಹೊಡೆದ ಸ್ಲಂ ಟೂರಿಂಗಲ್ಲಿ ಸಿಕ್ಕ ಚೂರುಪಾರು ಅಂಶಗಳನ್ನೇ ಇದೇ ಸ್ಲಂಬದುಕು ಎಂದು ನಂಬಿಕೊಂಡು ಅದನ್ನು ತಲೆ ಬುಡವಿಲ್ಲದ ಆಶಡ್ದಾಳ ಕಥೆಯೊಂದರ ಮೂಲಕ, ದಿಕ್ಕು ದೆಸೆ ಇಲ್ಲದೆ ಸಾಗುವ ದೃಶ್ಯಗಳ ಮೂಲಕ, ಕಂಟಿನ್ಯೂಟಿಯ ತಂತು ಕಳೆದುಕೊಂಡ ಎಡಿಟಿಂಗ್ ಮೂಲಕ ಇದೇ ಬೆಂಗಳೂರಿನ ಸ್ಲಂ ಜನರ ಬದುಕು ಎಂದು ಘೋಷಿಸುವ ದುಷ್ಟತನಕ್ಕೂ ಇಳಿದಿದ್ದಾರೆ. ದುನಿಯಾ ವಿಜಯ್ ಇಂದಿನ ಚಿತ್ರಗಳ ನಿರ್ದೇಶಕ ದುನಿಯಾ ಸೂರಿಗೆ ಸ್ಲಂ ಬದುಕಿನ ಕರಾಳ ಲೋಕದ ಜೊತೆ ಜೊತೆಗೆ ಅಲ್ಲಿರುವ ಪ್ರೀತಿ ಪ್ರೇಮ ಮಮತೆ ವಾತ್ಸಲ್ಯ, ಅದ್ಭುತವಾದ ಶ್ರಮಜೀವನ, ಮನುಷ್ಯತ್ವ ತುಂಬಿದ ಸಂಬಂಧಗಳು ಇವೆಲ್ಲವನ್ನೂ ಕಲಾತ್ಮಕ ರೀತಿಯಲ್ಲಿಯೇ ಜನರಿಗೆ ಹೇಳುವ ಕಲೆ ಕೈಗೆ ಒಲಿದಿತ್ತು. ದುನಿಯಾ ಸೂರಿಗಿರುವ ಓದು, ಸಮಾಜದ ಗ್ರಹಿಕೆ, ಯಾವುದನ್ನು, ಯಾರನ್ನು ಅಪರಾಧಿಗಳೆಂದು ಬ್ರಾಂಡ್ ಮಾಡಬಾರದು, ಎಂಬ ಎಚ್ಚರದ ಪ್ರಜ್ಞೆ ರವೆ ಕಾಳಿನಷ್ಟು ಇಲ್ಲದ ದುನಿಯಾ ವಿಜಯ್ ಮತ್ತೆ ಅವರ ಭೀಮ ಚಿತ್ರ ಸ್ಲಂಜನರನ್ನು ಕಳ್ಳ ಕಾಕರು, ಗಾ*ಜಾವ್ಯಸನಿಗಳು ರೌಡಿಗಳು, ಲಂಪಟರು ಎಂದು ಬ್ರಾಂಡ್ ಮಾಡಿ ಬಿಸಾಕುತ್ತಾರೆ.
ಲೇಖನದ ಆರಂಭದಲ್ಲಿ ಹೇಳಿದ ದುನಿಯಾ ವಿಜಯ್ ಫೇಸ್ಬುಕ್ ಲೈವ್’ನಲ್ಲಿ ‘ಡ್ರಗ್ಸ್ ತೆಗೆದುಕೊಳ್ಳುವ ಸ್ಟೂಡೆಂಟ್ಸ್ ಇರುವ ಪ್ರೈವೇಟ್ ಕಾಲೇಜ್ ಒಂದರ ಹೆಸರನ್ನು ವಿಜಯ್ ಉದ್ದೇಶಪೂರ್ವಕವಾಗಿ ಹೇಳುವುದಿಲ್ಲ. ಶ್ರೀಮಂತರ ಮಕ್ಕಳು ನೋಡಿ, ಅವರಿಗೆ ಮಾನ ಮರ್ಯಾದೆ ಇರುತ್ತದೆ ಅದು ಹೋಗಿಬಿಡುತ್ತದೆ ಎಂಬ ಭಯ. ಇದೇ ಕಾಳಜಿಯನ್ನು ವಿಜಯ್ ಸ್ಲಂ ಜನರ ವಿಷಯದಲ್ಲಿ- ಸಿನಿಮಾದಲ್ಲಿ ಪ್ರದರ್ಶಿಸುವುದಿಲ್ಲ, ರಾಜಾರೋಷವಾಗಿ ಬೆಂಗಳೂರಿನ ಇಂತಿಂಥದೇ ಸ್ಲಂ ನಲ್ಲಿ ಇಂತಿಂಥ ರೌಡಿಗಳು ಗಾ*ಜಾ ವ್ಯಾಪಾರಿಗಳು, ರೌಡಿಗಳು ಇದ್ದಾರೆ ಎಂದು ರಾಜಾರೋಷವಾಗಿ ಎದೆತಟ್ಟಿಕೊಂಡು ಹೇಳುತ್ತಾರೆ. ಏಕೆಂದರೆ ಇವರನ್ನು ಹೇಳುವವರು ಕೇಳುವವರು ಯಾರು ಇಲ್ಲವಲ್ಲ, ಸ್ಲಂ ಜನರ ಮಾನ ಮರ್ಯಾದೆಯನ್ನು ಯಾರು ಬೇಕಾದರೂ ಎಷ್ಟು ಬೇಕಾದರೂ ತೆಗೆಯಬಹುದು ಎಂಬ ಧೋರಣೆಯಲ್ಲವೇ ಇದು?
ಸ್ಲಂ ಜನರ ಮಾನ ತೆಗೆಯುವ ಸಿನಿಮಾಗಳನ್ನು ತೆಗೆದು ಇವರೇನೋ ಕೋಟಿ ಕೋಟಿ ಲಾಭ ಮಾಡಿಕೊಳ್ಳುತ್ತಾರೆ. ಇವರ ಸಿನಿಮಾಗಳಲ್ಲಿ ಮಾನ ತೆಗೆಸಿಕೊಂಡ ರಾಜ್ಯದ ಕೋಟ್ಯಂತರ ಸ್ಲಂ ಜನರ ಆತ್ಮಗೌರವದ ಪ್ರಶ್ನೆ ಏನು? ಎಂಬ ಪ್ರಶ್ನೆಯನ್ನು ಈ ಸಿನಿಮಾ ತೆಗೆದ ನಿರ್ದೇಶಕನಾದಿಯಾಗಿ ಇಡೀ ಚಿತ್ರತಂಡ ತಮ್ಮನ್ನು ತಾವು ಕೇಳಿಕೊಳ್ಳಬೇಕು. ಅಕ್ಕ ಪಕ್ಕದ ರಾಜ್ಯಗಳ ತಲೆಯಲ್ಲಿ ಮೆದುಳಿರುವ ನಿರ್ದೇಶಕರು ತೆಗೆಯುತ್ತಿರುವ ದಲಿತ ಸಂವೇದನೆಗಳ ಸಿನಿಮಾ ಕಥೆಗಳನ್ನಾದರೂ ನೋಡಿ ನಗರ ಬಡ ಜನರ ಬದುಕುಗಳನ್ನು ಅಪಮಾನಿಸದೆ ಸಿನಿಮಾಗೆ ಅಳವಡಿಸುವುದು ಹೇಗೆ ಎಂಬ ಎಬಿಸಿಡಿಗಳನ್ನಾದರೂ ಇಲ್ಲಿನವರು ದುನಿಯಾ ವಿಜಯ್ ‘ ಅಂಥವರು ಕಲಿತರೆ ಅದು ಕನ್ನಡ ಸಿನಿಮಾ ಪ್ರೇಕ್ಷಕರ ಅತಿದೊಡ್ಡ ಪುಣ್ಯ.
M. G. ಶೇಖರ್