Thursday, December 12, 2024

ಎಎಪಿ, ಕನ್ನಡ ಪರ, ರೈತ ಪರ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನೂ ಕೈಬಿಡಿ: ಸರ್ಕಾರಕ್ಕೆ ಮುಖ್ಯಮಂತ್ರಿ ಚಂದ್ರು ಒತ್ತಾಯ

Most read

ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಜನಪರ ಹೋರಾಟಗಳನ್ನು ನಡೆಸಿದ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು, ಕನ್ನಡ ಪರ ಹೋರಾಟಗಾರರು, ರೈತ ಪರ ಹೋರಾಟಗಾರರು, ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ರಾಜ್ಯ ಸರ್ಕಾರವು ಹಿಂತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆದಿರುವ ವಿಚಾರಕ್ಕೆ ಸಂಬಂಧಿಸಿ ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಚಂದ್ರು ಅವರು, ರಾಜ್ಯ ಸರ್ಕಾರ ತಾರತಮ್ಯ ಧೋರಣೆಯನ್ನು ತಳೆಯಬಾರದು. ಕಳೆದ 10 ವರ್ಷಗಳಿಂದ ನಮ್ಮ ಪಕ್ಷ ಸೇರಿದಂತೆ ಕನ್ನಡ ಪರ ಹೋರಾಟಗಾರರು ಹಾಗೂ ರೈತ ಪರ ಹೋರಾಟಗಾರರು ನಡೆಸಿದ ಸಾಕಷ್ಟು ಪ್ರತಿಭಟನೆಗಳಿಗೆ ಸಂಬಂಧಿಸಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಕರ್ನಾಟಕ ಲೋಕಾಯುಕ್ತ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದ ಮಾಜಿ ಲೋಕಾಯುಕ್ತ ವೈ. ಭಾಸ್ಕರ್‌ ರಾವ್‌ ಭ್ರಷ್ಟಾಚಾರವನ್ನು ವಿರೋಧಿ ನಡೆಸಿದ ಹೋರಾಟ, ರಸ್ತೆ ಗುಂಡಿಗಳ ಸಮಸ್ಯೆಗಳ ವಿರುದ್ಧ ನಡೆಸಿದ ನಿರಂತರ ಹೋರಾಟ, ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಖಂಡಿಸಿ ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನೆ, ಶಿವಾನಂದ ಫ್ಲೈಓವರ್‌ಗೆ ಸಂಬಂಧಿಸಿದ ಹೋರಾಟ, ಭ್ರಷ್ಟ ಅಧಿಕಾರಿ ಶ್ಯಾಮ್‌ ಭಟ್‌ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದರ ವಿರುದ್ಧ ಹೋರಾಟ ಹೀಗೆ ಅನೇಕ ಜನಪರ ಹೋರಾಟಗಳನ್ನು ನಡೆಸಿದವರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಈಗಲೂ ಪೊಲೀಸ್‌ ಠಾಣೆ, ಕೋರ್ಟು, ಕಚೇರಿ ಎಂದು ಅಲೆಯುತ್ತಿದ್ದಾರೆ. ರಾಜ್ಯ ಸರ್ಕಾರವು ಯಾವುದೋ ಒಂದು ಪ್ರಕರಣದ ಕುರಿತು ಅತೀವ ಕಾಳಜಿ ವಹಿಸುತ್ತ ಜನಪರ ಹೋರಾಟಗಾರರನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಜನಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಮನವಿ ಕೊಟ್ಟು ಸುಮಾರು 10 ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೆ ನಮ್ಮ ಮನವಿಯನ್ನು ಪುರಸ್ಕರಿಸದಿರುವುದು ಕನ್ನಡಿಗರಿಗೆ ರಾಜ್ಯ ಸರ್ಕಾರ ಮಾಡುತ್ತಿರುವ ಅಪಮಾನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಮಧ್ಯಪ್ರವೇಶಿಸಿ ಜನಪರ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸಬೇಕು. ಈ ಮೂಲಕ ಸರ್ಕಾರವು ರಾಜ್ಯದ ಜನತೆಯ ಪರವಾಗಿದೆ ಎಂಬುದನ್ನು ರುಜುವಾತು ಪಡಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

More articles

Latest article