ಅತಿರೇಕದ ಅಪಹಾಸ್ಯದಲಿ ಅಗೋಚರವಾದ ʼತಾಜಮಹಲ್ ಟೆಂಡರ್ʼ ನಾಟಕದಾಶಯ

Most read

ರಂಗ ಪ್ರಯೋಗ ವಿಮರ್ಶೆ

ಅತಿಯಾದರೆ ಅಮೃತವೂ ವಿಷವೆನ್ನಿಸುವುದಂತೆ. ಅದೇ ರೀತಿ ನಾಟಕದಲ್ಲಿ ಕೇವಲ ಹಾಸ್ಯವೇ ಹೆಚ್ಚಾದಷ್ಟೂ ಅಪಹಾಸ್ಯವೆನ್ನಿಸುತ್ತದೆ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿ ಕಂಪನಿಯ ಈ ಪ್ರೊಡಕ್ಷನ್ ನೋಡಿದವರಿಗೆ ಹಾಗನ್ನಿಸದೇ ಇರದು.

ಬೆಂಗಳೂರಿನ ಕಲಾಗ್ರಾಮದಲ್ಲಿ  ಕೇಂದ್ರ ಹಾಗೂ ರಾಜ್ಯಗಳ ಸಾಂಸ್ಕೃತಿಕ ಸರಕಾರಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಭಾರತ ರಂಗ ಮಹೋತ್ಸವದಲ್ಲಿ ಫೆಬ್ರವರಿ 4 ರಂದು ಅಜಯ್ ಶುಕ್ಲರವರು ರಚಿಸಿದ “ತಾಜ್ ಮಹಲ್ ಕಾ ಟೆಂಡರ್” ನಾಟಕವನ್ನು ಎನ್ ಎಸ್ ಡಿ ಯ ನಿರ್ದೇಶಕರಾಗಿರುವ ಚಿತ್ತರಂಜನ್ ದಾಸ್ ರವರು ರೆಪರ್ಟರಿ ಕಂಪನಿಗೆ ನಿರ್ದೇಶಿಸಿದ್ದಾರೆ. ಕಳೆದ 25 ವರ್ಷಗಳಿಂದ ಈ ನಾಟಕವನ್ನು ಎನ್ ಎಸ್ ಡಿ ಪ್ರಯೋಗಿಸುತ್ತಲೇ ಬಂದಿದೆ. ಪ್ರೇಕ್ಷಕರನ್ನು ನಕ್ಕುನಗಿಸಲು ಪ್ರಯತ್ನಿಸುತ್ತಲೇ ಇದೆ.

ಸರಕಾರಿ ಅಧಿಕಾರಶಾಹಿ ವ್ಯವಸ್ಥೆಯನ್ನು ಲೇವಡಿ ಮಾಡುವ ಈ ಹಾಸ್ಯ ನಾಟಕವು ಹಲವಾರು ಭಾಷೆಗಳಿಗೂ ಅನುವಾದವಾಗಿ ನಾಟಕ ಪ್ರಸ್ತುತಿಯನ್ನು ಪಡೆಯುತ್ತಲೇ ಬಂದಿದೆ. ಕನ್ನಡದಲ್ಲಿ ಶಾಯರಿ ಕವಿ ಇಟಗಿ ಈರಣ್ಣನವರೂ ಸೇರಿದಂತೆ ಅನೇಕರು ಈ ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಹಲವಾರು ರಂಗತಂಡಗಳು ಅಭಿನಯಿಸಿವೆ.

ಪ್ರಸ್ತುತ ನಡೆಯುತ್ತಿರುವ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ʼತಾಜಮಹಲ್ ಟೆಂಡರ್ʼ ನಾಟಕದ ಬಗ್ಗೆ ಕುತೂಹಲ ಮತ್ತು ಅಪಾರವಾದ ನಿರೀಕ್ಷೆಗಳಿದ್ದವು. ಯಾಕೆಂದರೆ ಈ ನಾಟಕ ಬರೆದವರು, ನಿರ್ದೇಶಿಸಿದವರು ಎನ್ ಎಸ್ ಡಿ ಯ ದಿಗ್ಗಜರೇ ಆಗಿದ್ದರು. ಆಡುವವರು ಎನ್ ಎಸ್ ಡಿಯಿಂದ ತರಬೇತಾದ ಕಲಾವಿದರೇ ಆಗಿದ್ದರು. ಸಕಲ ಸರಕಾರಿ ಸಂಪನ್ಮೂಲಗಳನ್ನು ಬಳಸಿ ಅತ್ಯಂತ ಶ್ರಿಮಂತವಾಗಿ ಈ ಜನಪ್ರಿಯ ನಾಟಕವನ್ನು ಕಟ್ಟಲಾಗಿರಬಹುದು ಎನ್ನುವ ನಂಬಿಕೆಯೂ ಇತ್ತು. ಆದರೆ.. ಪ್ರದರ್ಶನ ನೋಡಿದ ಮೇಲೆ ನಿರಾಸೆಯಾಗಿದ್ದಂತೂ ನಿಜ. ಎನ್ ಎಸ್ ಡಿ ಬ್ರ್ಯಾಂಡ್ ಮೇಲೆ ಬೆಂಗಳೂರಿನ ರಂಗಾಸಕ್ತರು ಇಟ್ಟಿದ್ದ ಅತಿಯಾದ ನಿರೀಕ್ಷೆ ಹುಸಿಯಾಗಿದ್ದು ಸತ್ಯ.

ಯಾಕೆಂದರೆ ಈ ನಾಟಕದಲ್ಲಿ ಆರಂಭದಿಂದ ಅಂತ್ಯದವರೆಗೆ ಹಾಸ್ಯವನ್ನೇ ಹಾಸಿ ಹೊದಿಸುವ ಪ್ರಯತ್ನ ಮಾಡಲಾಗಿದೆ. ತಪ್ಪೇನಿಲ್ಲ. ಆದರೆ ಪ್ರೇಕ್ಷಕರನ್ನು ನಗಿಸುವುದೊಂದೇ ಗುರಿ ಇಟ್ಟುಕೊಂಡಿದ್ದರಿಂದ ನಾಟಕದ ಅಸಲಿ ಆಶಯವೇ ಡೈಲ್ಯೂಟ್ ಆದಂತಿದೆ. ಭ್ರಷ್ಟ ಅಧಿಕಾರಶಾಹಿಗಳ ಮುಖವಾಡಗಳನ್ನು ಕಳಚುವ ನೆಪದಲ್ಲಿ ಇಡೀ ನಾಟಕವನ್ನು ಹುಚ್ಚರ ಸಂತೆಯನ್ನಾಗಿಸಲಾಗಿದೆ. ಯಾವುದೋ ಹುಚ್ಚಾಸ್ಪತ್ರೆಯಲ್ಲಿರುವ ಹುಚ್ಚರನ್ನೆಲ್ಲಾ ಸೇರಿಸಿ ಅವರಿಷ್ಟದಂತೆ ನಾಟಕ ಮಾಡಲು ಬಿಟ್ಟರೆ ಹೇಗೆಲ್ಲಾ ವಿಕ್ಷಿಪ್ತ ದೃಶ್ಯಗಳು ಸೃಷ್ಟಿಯಾಗಬಹುದೋ ಅವೆಲ್ಲವೂ ಈ ಎನ್ ಎಸ್ ಡಿ ಗರ ನಾಟಕದಲ್ಲಿ ಕಲಸುಮೇಲೋಗರವಾಗಿವೆ.

ಇಷ್ಟಕ್ಕೂ ನಾಟಕದ ಕಥೆ ಹೀಗಿದೆ. ಚಕ್ರವರ್ತಿ ಷಹಜಹಾನ್ ಗೆ ತನ್ನ ಮೃತ ಪತ್ನಿ ಮಮ್ತಾಜಳ ನೆನಪಲ್ಲಿ ಅದ್ದೂರಿ ಸ್ಮಾರಕವೊಂದನ್ನು ನಿರ್ಮಿಸುವ ಮಹದಾಸೆ. ತನ್ನ ಮುಖ್ಯ ಇಂಜಿನೀಯರ್ ಗುಪ್ತಾನನ್ನು ಕರೆದು ತಾಜಮಹಲ್ ನಿರ್ಮಿಸಲು ಆಜ್ಞಾಪಿಸುತ್ತಾನೆ. ತಾಜಮಹಲ್ ನಿರ್ಮಾಣದ ನೆಪದಲ್ಲಿ ಈ ಆಧಿಕಾರಿ ಹಣ ಮಾಡುವ ಮಾರ್ಗಗಳನ್ನು ಅನುಸರಿಸುತ್ತಾನೆ. ಭೂಮಿ ಖರೀದಿಯಿಂದ ಹಿಡಿದು ತಾಜಮಹಲ್ ಕಾರ್ಪೊರೇಶನ್ ಕಟ್ಟಡ ಕಟ್ಟುವವರೆಗೂ ಕಮಿಷನ್ ಪಡೆಯುತ್ತಾ, ರಾಜನ ಖಜಾನೆಯಿಂದಲೂ ಹಣ ಪಡೆಯುತ್ತಾನೆ. ಆದರೆ ಸ್ಮಾರಕದ ಕಾಮಗಾರಿ ಮಾತ್ರ ಶುರುವಾಗುವುದೇ ಇಲ್ಲ. ಅದಕ್ಕೆ ಭೂವ್ಯಾಜ್ಯ, ಜನರ ಸ್ಥಳಾಂತರ ಸಮಸ್ಯೆ, ನ್ಯಾಯಾಲಯದ ತಡೆ ಆದೇಶ ಹೀಗೆ ಅನೇಕಾನೇಕ ನೆಪಗಳನ್ನು ಬಾದಶಹನಿಗೆ ಹೇಳುತ್ತಾ ಇಪ್ಪತ್ತೈದು ವರ್ಷಗಳೇ ಉರುಳುತ್ತವೆ. ತಾಜಮಹಲ್ ಕನಸು ನನಸಾಗದ ಕೊರಗಲ್ಲಿ ದೊರೆ ಅಸುನೀಗುತ್ತಾನೆ. ಇತ್ತ ಅಧಿಕಾರಿಗಳು, ದಲ್ಲಾಳಿಗಳು, ನಕಲಿ ಹೋರಾಟಗಾರರು, ಗುತ್ತಿಗೆದಾರರು ಅಕ್ರಮ ಮಾರ್ಗದಲ್ಲಿ ಸಂಪಾದನೆ ಮಾಡುತ್ತಲೇ ಇರುತ್ತಾರೆ. ಕೊನೆಗೆ “ದೊರೆಗಳು ಬದಲಾಗುತ್ತಾರಾದರೂ ಭ್ರಷ್ಟ ಅಧಿಕಾರಿಗಳು ಇದ್ದೇ ಇರುತ್ತಾರೆ” ಎನ್ನುವ ಸಾರ್ವಕಾಲಿಕ ಸಂದೇಶವನ್ನು ಸಾರುವ ಮೂಲಕ ನಾಟಕ ಕೊನೆಗೊಳ್ಳುತ್ತದೆ.

ಅಧಿಕಾರಿಗಳ ಭ್ರಷ್ಟತೆಯನ್ನು ಅನಾವರಣಗೊಳಿಸುವ ಗುರಿಯನ್ನು ತಲುಪಲು ಈ ನಾಟಕ ಹಿಡಿದ ದಾರಿಯ ಬಗ್ಗೆ ತಕರಾರಿದೆ. ಈ ನಾಟಕದ ನಿರ್ಮಾತೃಗಳು 7 ನೇ ಶತಮಾನದ ಮಧ್ಯಪೂರ್ವ ದೇಶದ ಅಲೆಮಾರಿ ಬುಡಕಟ್ಟು ಜನಾಂಗದ ದಂಪತಿಗಳ ಕಥೆಯಾಧರಿಸಿದ ನಾಟಕ ಇದೆಂದು ಅದೆಷ್ಟೇ ವ್ಯರ್ಥ ಸಮರ್ಥನೆ ಕೊಡಲಿ. ಇಡೀ ನಾಟಕ ಮುಸಲ್ಮಾನ ದೊರೆ ಷಹಜಹಾನ್ ಹಾಗೂ ಆತನ ತಾಜ್ ಮಹಲ್ ಬಯಕೆಯ ಸುತ್ತಲೇ ಕಟ್ಟಲಾಗಿದೆ ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗುತ್ತದೆ.  ಹಾಸ್ಯದ ಹೆಸರಲ್ಲಿ ಇತಿಹಾಸವನ್ನು ಹೇಗೆಲ್ಲಾ ವಿಕೃತಗೊಳಿಸಿ ತಿರುಚಿ ಹೇಳಬಹುದು ಎನ್ನುವುದಕ್ಕೆ ಈ ನಾಟಕವೇ ಸಾಕ್ಷಿಯಾಗಿದೆ. ಚರಿತ್ರೆ ಗೊತ್ತಿಲ್ಲದವರು ಈ ನಾಟಕ ನೋಡಿದರೆ ಇದೇ ಸತ್ಯ ಎಂದು ತಿಳಿಯುವ ಅಪಾಯವೂ ಇದೆ.

ಈಗಾಗಲೇ ಪ್ರಭುತ್ವ ಪ್ರಾಯೋಜಿತ ಮತಾಂಧತೆ ಈ ದೇಶದಲ್ಲಿ ಅತಿಯಾಗಿದೆ. ಇಸ್ಲಾಮೋಫೋಬಿಯಾ ಕಾಯಿಲೆಯನ್ನು ಮನುವಾದಿ ಸಂಘಿ ಪರಿವಾರ ದೇಶಾದ್ಯಂತ ಹರಡುತ್ತಿದೆ. ಧಾರ್ಮಿಕ ದ್ವೇಷ ಹಾಗೂ ಮತಾಂಧತೆಯ ಆವೇಶ ಹಿಂದುತ್ವವಾದಿ ರಾಜಕಾರಣದ ಭಾಗವೇ ಆಗಿದೆ. ಆಕ್ರಮಣಕೋರ ಘಜನಿ ಮಹಮದ್ ನಿಂದ ಹಿಡಿದು ಔರಂಗಜೇಬ್, ತುಘಲಕ್ ಅಷ್ಟೇ ಯಾಕೆ ದೇಶಪ್ರೇಮಿ  ಟಿಪ್ಪು ಸುಲ್ತಾನನನ್ನೂ ಸಹ ದ್ವೇಷಿಸುವ ವಾತಾವರಣ ನಿರ್ಮಾಣವಾಗಿದೆ. ಸನಾತನ ಹಿಂದುತ್ವ ರಾಷ್ಟ್ರ ಸ್ಥಾಪನೆಗಾಗಿ ಮುಸ್ಲಿಂ ಸಮುದಾಯವನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ನಾಟಕ ಮುಸ್ಲಿಂ ವಿರೋಧಿತನಕ್ಕೆ ಪ್ರೇರಣೆ ಕೊಡುವಂತಿದೆ.

ತುಘಲಕ್ ನನ್ನು ಹುಚ್ಚು ದೊರೆಯಾಗಿ ಪ್ರತಿಬಿಂಬಿಸಿದ್ದಾಯ್ತು. ಟಿಪ್ಪುವನ್ನು ಮತಾಂಧ ಎಂದು ಅಪಪ್ರಚಾರ ಮಾಡಿದ್ದಾಯ್ತು, ಇಂತಹ ತಿರುಚಲ್ಪಟ್ಟ ನಾಟಕದ ಮೂಲಕ ಷಹಜಹಾನ್ ದೊರೆಯನ್ನೂ ತಿಕ್ಕಲು ತಿಕ್ಕಲಾಗಿ ತೋರಿಸಿ ಹುಚ್ಚು ರಾಜನೆಂದು ಅಪಪ್ರಚಾರ ಮಾಡುವ ವಿಕ್ಷಿಪ್ತತೆಗೆ ರಂಗಭೂಮಿಯನ್ನು ಬಳಸಿಕೊಳ್ಳಲಾಗಿದೆ.

ಈ ….ಟೆಂಡರ್ ನಾಟಕದಲ್ಲಿ ದೆಹಲಿಯ ಚಕ್ರವರ್ತಿಯನ್ನು ಒಬ್ಬ ಬಲಹೀನ ತಿಕ್ಕಲು ರಾಜನನ್ನಾಗಿ ತೋರಲಾಗಿದೆ. ಆತನ ಮಗ ಔರಂಗಜೇಬನನ್ನು ಗಿಟಾರ್ ನುಡಿಸುತ್ತಾ ಬೀದಿ ಅಲೆಯುವ ಅಲೆಮಾರಿಯನ್ನಾಗಿಸಲಾಗಿದೆ. ದೊರೆಯ ಕನಸಲ್ಲಿ ಬಂದು ತಾಜಮಹಲ್ ಕಟ್ಟಿಸಲು ಒತ್ತಾಯಿಸುವ ಮಮ್ತಾಜ್ ಳನ್ನು ಲೇವಡಿ ಮಾಡಲಾಗಿದೆ. ಒಟ್ಟಾರೆಯಾಗಿ ಅಧಿಕಾರಶಾಹಿಯ ಭ್ರಷ್ಟತೆಯನ್ನು ಬೆತ್ತಲೆಗೊಳಿಸುವ ನೆಪದಲ್ಲಿ ಇತಿಹಾಸವನ್ನು ವಿಕೃತವಾಗಿ ತಿರುಚಿರುವುದು, ಒಬ್ಬ ಚಕ್ರವರ್ತಿಯನ್ನು ಕಾಮಿಡಿಯನ್ ರೀತಿ ಪಾತ್ರ ಪೋಷಣೆ ಮಾಡಿರುವುದು ಇತಿಹಾಸಕ್ಕೆ ಮಾಡಿದ ಅಪಚಾರ. ಇದೇ ರೀತಿ ಹಿಂದೂ  ದೊರೆಗಳಾದ ಪ್ರತಾಪ್ ಸಿಂಹ ಇಲ್ಲವೇ ಶಿವಾಜಿ ಹೋಗಲಿ ಮೈಸೂರು ದೊರೆಗಳನ್ನು ತೋರಿಸಿದ್ದರೆ ಸಂಘಿಗಳ ಬೆಂಕಿ ರಂಗಮಂದಿರವನ್ನೇ ಆಹುತಿ ತೆಗೆದುಕೊಳ್ಳುತ್ತಿತ್ತು.

ಪ್ರತಿ ಸಲ ಈ ನಾಟಕ ಪ್ರದರ್ಶನದ ಮೊದಲು “ಇದೊಂದು ಕಾಲ್ಪನಿಕ ವಿಡಂಬನಾತ್ಮಕ ನಾಟಕ. ಇದ್ದವರು ಹಾಗೂ ಇಲ್ಲವಾದವರಿಗೆ ಸಂಬಂಧಿಸಿದ್ದಲ್ಲ” ಎಂಬ ಘೋಷಣೆಯನ್ನು ಮಾಡುವುದರ ಮೂಲಕ ಇತಿಹಾಸವನ್ನು ತಿರುಚಿದ ಅಪರಾಧದಿಂದ ನಾಟಕ ತಂಡ ಮುಕ್ತವಾಗಬಹುದಾಗಿದೆ.

ಹೋಗಲಿ.. ಅಧಿಕಾರಗಳು ಹೇಗೆ ಪ್ರಭುತ್ವವನ್ನು ನಿಯಂತ್ರಿಸುತ್ತಾರೆ ಎನ್ನುವುದನ್ನು ತೋರಿಸಲು ಷಹಜಹಾನ್ ಹಾಗೂ ತಾಜ್ ಮಹಲ್ ನ್ನು ರೂಪಕವಾಗಿ ಬಳಸಿಕೊಳ್ಳಲಾಗಿದೆ ಎಂದುಕೊಳ್ಳೋಣ. ಈ ನಾಟಕದ ಸಮರ್ಥಕರೂ ಸಹ ಇದೇ ಕಾರಣವನ್ನು ಮುಂದಿಡುತ್ತಾರೆ. ಆದರೆ.. ದೊರೆ ಮೇಲೆ ದಬ್ಬಾಳಿಕೆ ಮಾಡುವ ಅಧಿಕಾರಿಗಳನ್ನು ಈ ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ. ಅಧಿಕಾರಿಗಳು ಪ್ರಭುತ್ವಕ್ಕೆ ಸದಾ ಅತೀ ವಿನಯವಂತಿಕೆಯನ್ನು ತೋರಿಸುತ್ತಲೇ ತಾವು ಅಂದುಕೊಂಡಂತೆ ಮಾಡುವುದು ವಾಸ್ತವ. ಇಲ್ಲಿ ಎಲ್ಲವೂ ಕಲಸುಮೇಲೋಗರ.  ಚಪ್ರಾಸಿಯೊಬ್ಬ ಕಚೇರಿಯ ಸಹಾಯಕನಿಗೆ ಎದುರಾಡಿದರೆ, ಆ ಸಹಾಯಕ ಮುಖ್ಯ ಎಂಜಿನೀಯರ್ ಮೇಲೆಯೇ ಸವಾರಿ ಮಾಡಲು ನೋಡುತ್ತಾನೆ. ಆ ಇಂಜಿನೀಯರ್ ಚಕ್ರವರ್ತಿಯನ್ನೇ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾನೆ. ಈ ವಿಕ್ಷಿಪ್ತ ನಾಟಕದಲ್ಲಿ ಎಲ್ಲವೂ ವಿಲಕ್ಷಣ. ಎಲ್ಲವೂ ಅತಿರೇಕ. ದೇಶ ಭಾಷೆ ಕಾಲಗಳ ಗಡಿ ಮೀರಿದ, ಪಾತ್ರಗಳ ಔಚಿತ್ಯಗಳ ಇತಿಮಿತಿಮೀರಿದ ದೃಶ್ಯ ಸಂಯೋಜನೆಗಳ ದಾರಿ ಗುರಿ ಒಂದೇ- ಅದು ಪ್ರೇಕ್ಷಕರನ್ನು ರಂಜಿಸುವುದು. ಆದರೆ ಹಾಸ್ಯ ರಸವೂ ಅತಿಯಾದರೆ ನೋಡುಗರಿಗೆ ವಾಕರಿಕೆ ತರಿಸುವ ಸಾಧ್ಯತೆಗಳಿಗೂ ಈ ನಾಟಕವೇ ಸಾಕ್ಷಿಯಾಗಿದೆ.

ಇಂತಹ ಅತಾರ್ಕಿಕ ನಾಟಕದಲ್ಲಿ ತರ್ಕಗಳನ್ನು ಹುಡುಕುವುದೇ ವ್ಯರ್ಥ. ಇಂತಹ ತಿಕ್ಕಲು ವ್ಯಕ್ತಿ ದೊರೆಯಾಗಲು ಸಾಧ್ಯವೇ? ಆತನ ಮಗ ಔರಂಗಜೇಬ ಅಲೆಮಾರಿಯಾಗುವುದು ಅಗತ್ಯವೇ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳುವಂತಿಲ್ಲ. ಲೈಲಾ ಮಜ್ನು ಪಾತ್ರಗಳನ್ನು ನಡುನಡುವೆ ಹರಿಯಬಿಟ್ಟಿದ್ದು ಯಾಕೆಂಬುದೂ ಅರ್ಥವಾಗುವುದಿಲ್ಲ. ಪ್ರಭುತ್ವದ ಮಹತ್ವಾಂಕಾಕ್ಷಿ ಯೋಜನೆಯೊಂದರ ಸುತ್ತ ಹುತ್ತಕಟ್ಟುವ ಭ್ರಷ್ಟತೆಯ ಸಾಮ್ರಾಜ್ಯವೊಂದನ್ನು ವಿಡಂಬನಾತ್ಮಕವಾಗಿ ತೋರುವುದೇ ಈ ತಾಜ್ ಮಹಲ್ ಕಾ ಟೆಂಡರ್ ನಾಟಕದ ಉದ್ದೇಶವಾಗಿದೆ. ಆದರೆ ಅತಿರೇಕಗಳೇ ಅತಿಯಾಗಿ, ಹಾಸ್ಯ ಅಪಹಾಸ್ಯಗಳ ಭಾರಕ್ಕೆ ಆಶಯವೇ ಲಯವಾಗಿದೆ.

ದೊರೆಯನ್ನು ದೊರೆಯ ಗಾಂಭೀರ್ಯತೆಯಲ್ಲೇ ತೋರಿದ್ದರೆ, ಅಧಿಕಾರಿಗಳ ನಾಜೂಕುತನದ ವಂಚನೆಯನ್ನು ಅತಿರೇಕವಿಲ್ಲದಂತೆ ಪ್ರಸ್ತುತ ಪಡಿಸಿದ್ದರೆ, ಕಥೆಗೆ ಪೂರಕವಲ್ಲದ ದೃಶ್ಯಗಳನ್ನು ಎಡಿಟ್ ಮಾಡಿದ್ದರೆ, ಪ್ರತಿ ಪಾತ್ರವೂ ಪಾಜ಼್ (pause) ಗಳಿಲ್ಲದೇ ಅತೀ ವೇಗವಾಗಿ ಹೇಳುವ ಸಂಭಾಷಣೆಗಳನ್ನು ನಿಯಂತ್ರಿಸಿದ್ದರೆ. ಓವರ್ ಆಕ್ಟಿಂಗ್ ಮಾದರಿಯ ಅಭಿನಯದಲ್ಲೂ ಪಾತ್ರೋಚಿತ ಸಂಯಮ ಕಾಪಾಡಿಕೊಂಡಿದ್ದರೆ ಈ ನಾಟಕದ ಲೆವಲ್ಲೇ ಬೇರೆಯದೇ ಆಗಿರುತ್ತಿತ್ತು.

ಈ ರೀತಿಯ ನಾಟಕವನ್ನು ಯಾವುದೇ ಒಂದು ರಂಗ ತಂಡ ಮಾಡಿದ್ದರೆ ಪರವಾಗಿಲ್ಲ ಪ್ರಯತ್ನ ಮಾಡಿದ್ದಾರೆ ಎನ್ನಬಹುದಾಗಿತ್ತು. ಆದರೆ ಈ .. ಟೆಂಡರ್ ನಾಟಕವನ್ನು ಕಳೆದ 25 ವರ್ಷಗಳಿಂದ ದೇಶಾದ್ಯಂತ ಪ್ರದರ್ಶನಗೊಳಿಸುತ್ತಾ ಬಂದಿರುವುದು ಕೇಂದ್ರ ಸರಕಾರ ಪ್ರಾಯೋಜಿತ ಎನ್ ಎಸ್ ಡಿ ರೆಪರ್ಟರಿ ಕಂಪನಿ. ಈ ನಾಟಕದ ನಿರ್ಮಾಣಕ್ಕೆ ಬಳಸಿರುವ ಲಕ್ಷಾಂತರ ಹಣ ಜನರ ತೆರಿಗೆ ಹಣದಿಂದ ಬಂದಂತಹುದು. ಹೀಗಿರುವಾಗ ಇತಿಹಾಸವನ್ನು ತಿರುಚುವಂತಹ, ವಿಕೃತ ಇತಿಹಾಸವನ್ನು ಸೃಷ್ಟಿಸುವಂತಹ, ಹಾಸ್ಯದ ಅತಿರೇಕದಲ್ಲಿ ಚಾರಿತ್ರಿಕ ವಾಸ್ತವಗಳನ್ನು ಮರೆಮಾಚುವಂತಹ ಪ್ರಯತ್ನ ಖಂಡಿತಾ ಅಕ್ಷಮ್ಯ. ಇಟಗಿ ಈರಣ್ಣನವರು ಕನ್ನಡಕ್ಕೆ ಅನುವಾದಿಸಿದ ಇದೇ ನಾಟಕದಲ್ಲಿ ಈ ಎಲ್ಲಾ ಅತಿರೇಕಗಳನ್ನು ಬದಿಗಿರಿಸಿ ಅಧಿಕಾರಿಗಳ ನಯವಂಚನೆಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಆದರೆ ಆ ಸೂಕ್ಷ್ಮತೆ ಎನ್ ಎಸ್ ಡಿ ಯವರಿಗೆ ಇರಬೇಕಾಗಿತ್ತು ಎಂಬುದು ಅಪೇಕ್ಷಣೀಯ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- http://ಕಣ್ಮನ ಸೆಳೆದ ಎನ್ ಎಸ್ ಡಿ ನಾಟಕ “ಮಾಯ್ ರಿ ಮೇ ಕಾ ಸೇ ಕಹೂ” https://kannadaplanet.com/eye-catching-nsd-drama/

More articles

Latest article