ಬೆಳಗಾವಿ: ಸಂತ್ರಸ್ಥೆ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಕೋರಿದ್ದರು. ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ಅವರನ್ನು ಬಂಧಿಸಲಾಗಿದೆ. ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದರೂ ಹಾಜರಾಗಿರಲಿಲ್ಲ. SIT ತನಿಖೆ ನಡೆಸುತ್ತಿದೆ. ನಾವ್ಯಾರೂ ಸಹ ಹಸ್ತಕ್ಷೇಪ ಮಾಡಲ್ಲ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತೀಂದ್ರ, ರೇವಣ್ಣ ಅವರ ಮೇಲೆ ಲೈಂಗಿಕ ಕಿರುಕುಳ ಪ್ರಕರಣವಲ್ಲದೆ ಸಂತ್ರಸ್ಥೆಯನ್ನು ಕಿಡ್ನಾಪ್ ಮಾಡಿದ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ಅವರಿಗೆ ಜಾಮೀನು ನೀಡಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಎಸ್ಐಟಿ ತನಿಖೆ ಪ್ರಾರಂಭ ಮಾಡಿದೆ. ಶೀಘ್ರದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದ ಜನ ಕಾಂಗ್ರೆಸ್ ಪರವಾಗಿದ್ದಾರೆ. ಇಷ್ಟೆ ಗೆಲ್ತೀವಿ ಅಂತ ಹೇಳೋಕೆ ಆಗಲ್ಲ. ಆದರೆ 15 ರಿಂದ 20 ಸ್ಥಾನ ಗೆದ್ದೇ ಗೆಲ್ತೀವಿ ಎಂದ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬುದು ಬಿಜೆಪಿಯವರ ಆರೋಪ ಅಷ್ಟೆ. ಪ್ರತಿಪಕ್ಷದವರು ಪ್ರತಿಬಾರಿಯೂ ಹೀಗೆ ಹೇಳುತ್ತಾರೆ. ಅದು ಸತ್ಯ ಇದ್ದರೆ ಅವರ ಮೇಲೆ ಎಲೆಕ್ಷನ್ ಕಮಿಷನ್ ಕ್ರಮ ಕೈಗೊಳ್ಳುತ್ತೆ. ಬಿಜೆಪಿಯವರು ಈ ಮಾತು ಹೇಳ್ತಿರೋದು ಹಾಸ್ಯಾಸ್ಪದ ಎಂದರು.
ಸ್ವತಃ ಪ್ರಧಾನಿಗಳೇ ತಮ್ಮ ಭಾಷಣಗಳಲ್ಲಿ ಸುಳ್ಳು ಹೇಳ್ತಾರೆ. ಧರ್ಮದ ಆಧಾರದ ಮೇಲೆ ಭಾಷಣ ಕೋಮು ದ್ವೇಷ ಹಚ್ಚುವ ಭಾಷಣ ಮಾಡ್ತಾರೆ. ಎಲೆಕ್ಷನ್ ಕಮಿಷನ್ ಗೆ ದೂರು ಕೊಟ್ಟರೂ ಸಹ ಕ್ರಮ ಆಗಿಲ್ಲ. ಪ್ರಧಾನಿಗಳಿಗೆ ನೋಟಿಸ್ ಕೊಡೋಕೂ ಸಹ ಎಲೆಕ್ಷನ್ ಕಮಿಷನ್ ಗೆ ಆಗಿಲ್ಲ ಎಂದು ಅವರು ಟೀಕಿಸಿದರು.
ಚುನಾವಣೆ ನಂತರವೂ ನಮ್ಮ ಸರ್ಕಾರ ಸುಭದ್ರವಾರುತ್ತದೆ. ಅವರು ಮಾಡುವ ಆರೋಪಗಳಲ್ಲಿ ಹುರುಳಿರಲ್ಲ. ಬಿಜೆಪಿ ಪಕ್ಷ ನಾಚಿಕೆಗೆಟ್ಟ ಪಕ್ಷ, ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಆಪರೇಷನ್ ಕಮಲ ಮಾಡಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಕರ್ನಾಟಕದಲ್ಲಿ ನಾವು ಸಂಪೂರ್ಣ ಬಹುಮತದೊಂದಿಗೆ ಆರಿಸಿ ಬಂದಿದ್ದೇವೆ. ನಮ್ಮ ಸರ್ಕಾರ ಸುಭದ್ರವಾಗಿರುತ್ತೆ ಎಂದು ಡಾ.ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು.