ನವಭಾರತದ ಶಿಲ್ಪಿ ಡಾ.ಮನಮೋಹನ್ ಸಿಂಗ್, ಇತಿಹಾಸ ಅವರನ್ನು ಸದಾ ಸ್ಮರಿಸುತ್ತದೆ: ಟಿ.ಎ. ನಾರಾಯಣಗೌಡ

Most read

ಬೆಂಗಳೂರು: ನಿನ್ನೆ ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೊಸ ಭಾರತವನ್ನು ಕಟ್ಟಿದವರು, ಅವರನ್ನು ಇತಿಹಾಸ ಸದಾ ಸ್ಮರಿಸುತ್ತದೆ ಎಂದು ಕರ್ನಾಟಕ ರಕ್ಷಣಾ‌ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಬಣ್ಣಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಬರೆದಿರುವ ಅವರು ಡಾ. ಸಿಂಗ್ ಅವರು ಕರ್ನಾಟಕಕ್ಕೆ ನೀಡಿರುವ ಕೊಡುಗೆಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ.

ಟಿ.ಎ. ನಾರಾಯಣಗೌಡರ ಪೋಸ್ಟ್ ನ ಪೂರ್ಣಪಾಠ ಹೀಗಿದೆ:

ನಾನು ಎರಡು ಬಾರಿ ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿ‌ ಮಾಡಿದ್ದೆ. ಎರಡೂ ಬಾರಿಯೂ ಗಮನ ಸೆಳೆದಿದ್ದು ಅವರ ಸಜ್ಜನಿಕೆ, ಸರಳತೆ. ಅವರ ಮುಖದಲ್ಲಿ ಮೂಡುತ್ತಿದ್ದ ನಿಷ್ಕಲ್ಮಶ ಮಂದಹಾಸವನ್ನು ಮರೆಯುವಂತಿಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿಯೊಬ್ಬರು ಹೀಗೆ ಅಹಂ, ಒಣ ಬಿಗುಮಾನ ಇಲ್ಲದೆ ವಿನಯಶೀಲರಾಗಿ ಇರಲು ಸಾಧ್ಯವೇ ಎಂದು ಆಶ್ಚರ್ಯಚಕಿತನಾಗಿದ್ದೆ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕೆಂಬ ಕೂಗು ಆರಂಭವಾದಾಗ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕರ್ನಾಟಕ ರಕ್ಷಣಾ ವೇದಿಕೆ ಚಳವಳಿ ಸಂಘಟಿಸಿತ್ತು. ತಮಿಳು ಮತ್ತು ಸಂಸ್ಕೃತಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿ 4600 ವರ್ಷಗಳ ಇತಿಹಾಸದ ಕನ್ನಡವನ್ನು ಕಡೆಗಣಿಸಿದ್ದು ನಮ್ಮನ್ನು‌ ಕೆರಳಿಸಿತ್ತು. ಸಾಹಿತಿ ದೇಜಗೌ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಚಳವಳಿ ಕರ್ನಾಟಕದಲ್ಲಿ ನಡೆದರೆ ಸಾಲದು ಎಂದು ನಾವು ದಿಲ್ಲಿಗೆ ಕೊಂಡೊಯ್ಯಲು ತೀರ್ಮಾನಿಸಿದ್ದೆವು. ಅಲ್ಲಿಯವರೆಗೆ ಕರ್ನಾಟಕದ ಪರವಾಗಿ ದೊಡ್ಡದೊಂದು ಹೋರಾಟ ದಿಲ್ಲಿಯಲ್ಲಿ ನಡೆದೇ ಇರಲಿಲ್ಲ. ಆದರೂ ನಾವು ಆ ಸಾಹಸಕ್ಕೆ ಕೈಹಾಕಿದ್ದೆವು. ಸಾವಿರಾರು ಕರವೇ ಕಾರ್ಯಕರ್ತರನ್ನು ರೈಲಿನಲ್ಲಿ ಕರೆದೊಯ್ದಿದ್ದೆ. ಜಂತರ್ ಮಂತರ್ ನಲ್ಲಿ ನಮ್ಮ ಪ್ರತಿಭಟನೆ ನಡೆದಿತ್ತು. ನಂತರ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ನಮ್ಮ ಹಕ್ಕೊತ್ತಾಯವನ್ನು ಸಲ್ಲಿಸಿದ್ದೆವು.

ನಾನು ಮತ್ತೊಮ್ಮೆ ಡಾ.ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿದ್ದು ಕಾವೇರಿ ನ್ಯಾಯಮಂಡಳಿಯ ಐತೀರ್ಪು ಹೊರಬಿದ್ದ ಸಂದರ್ಭದಲ್ಲಿ. ಆಗಲೂ ಕರ್ನಾಟಕದಲ್ಲಿ ಚಳವಳಿ ಜೋರಾಗಿ ನಡೆದಿತ್ತು. ಕರ್ನಾಟಕ ಬಂದ್ ಕೂಡ ನಡೆದಿತ್ತು. ಕರ್ನಾಟಕದ ಮೇಲ್ಮನವಿ ಅರ್ಜಿ ತೀರ್ಪು ಬರುವವರೆಗೆ ಟ್ರಿಬ್ಯುನಲ್ ನೀಡಿದ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಬಾರದು ಎಂಬ ಹಕ್ಕೊತ್ತಾಯ ಇಟ್ಟುಕೊಂಡು ನಾವು ದೆಹಲಿಗೆ ಹೋದೆವು. ಆಗಲೂ ಸಾವಿರಾರು ಮಂದಿ ಹೋಗಿದ್ದೆವು. ದೆಹಲಿಯ ಬೀದಿಬೀದಿಯಲ್ಲಿ ಮೆರವಣಿಗೆಯನ್ನೂ ನಡೆಸಿದ್ದೆವು. ಮೊದಲ ಬಾರಿ ದೆಹಲಿ‌ ನಗರದಲ್ಲಿ ಕನ್ನಡ ಬಾವುಟಗಳು ರಾರಾಜಿಸಿದ್ದವು. ಆಗಲೂ ನಮಗೆ ಡಾ.ಮನಮೋಹನ ಸಿಂಗ್ ಅವರ ಭೇಟಿಯ ಅವಕಾಶ ದೊರೆತಿತ್ತು.

ನಮ್ಮ ಈ ಎರಡೂ ಚಳವಳಿಗಳು ಯಶಸ್ವಿಯಾದವು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಲಾಯಿತು. ಕಾವೇರಿ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸುವುದನ್ನು ಕೇಂದ್ರ ಸರ್ಕಾರ ತಡೆಹಿಡಿಯಿತು. ನಮ್ಮ‌ ಕೂಗು ದಿಲ್ಲಿ ತಲುಪಿದ್ದಷ್ಟೇ ಅಲ್ಲ, ಕೇಂದ್ರ ಸರ್ಕಾರವೂ ನಮ್ಮ ಕೂಗಿಗೆ ಮನ್ನಣೆ ನೀಡಿತು. ಡಾ.ಮನಮೋಹನ ಸಿಂಗ್ ಅವರಿಗಿದ್ದ ವಿಶಾಲ ಹೃದಯತೆಗೆ ಇದು ಸಾಕ್ಷಿ.

ದೆಹಲಿಗೆ ಹೋದಾಗ ನಮ್ಮನ್ನು ಪ್ರಧಾನಿ ನಿವಾಸಕ್ಕೆ ಸಂಪರ್ಕಿಸುವವರು ಬೇಕಲ್ಲವೇ? ಅನಂತ ಕುಮಾರ್ ಒಮ್ಮೆ, ಆಸ್ಕರ್ ಫರ್ನಾಂಡಿಸ್ ಒಮ್ಮೆ ನಮ್ಮ ಬೆಂಬಲಕ್ಕೆ ನಿಂತಿದ್ದರು. ದುರದೃಷ್ಟವಶಾತ್ ಈ ಇಬ್ಬರೂ ದಿಗ್ಗಜ ನಾಯಕರೂ ಈಗ ನಮ್ಮೊಂದಿಗಿಲ್ಲ. ಅನಂತ ಕುಮಾರ್ ವಿರೋಧ ಪಕ್ಷದಲ್ಲಿದ್ದರೂ ಡಾ.ಸಿಂಗ್ ಅವರೊಂದಿಗೆ ಮಧುರ ಸಂಬಂಧ ಇಟ್ಟುಕೊಂಡಿದ್ದರು. ಅವರೇ ನಮ್ಮನ್ನು ಪ್ರಧಾನಿ‌ ನಿವಾಸಕ್ಕೆ ಮುತುವರ್ಜಿಯಿಂದ ಕರೆದೊಯ್ದಿದ್ದರು. ಇದರಿಂದ ನನಗೆ ಅರ್ಥವಾಗಿದ್ದು, ವಿರೋಧ ಪಕ್ಷದ‌ ನಾಯಕರಿಗೂ ಡಾ.ಸಿಂಗ್ ಎಷ್ಟು ಗೌರವ ನೀಡುತ್ತಾರೆಂಬುದು. ಇಂದಿನ ರಾಜಕಾರಣದಲ್ಲಿ ಅದು ಅಸಾಧ್ಯವೆಂಬ ಸನ್ನಿವೇಶವಿದೆ, ಅದು‌ಬೇರೆಯ ವಿಷಯ.

ತೊಂಭತ್ತರ ದಶಕದ ಆರಂಭದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಭಾರತವನ್ನು ಹಣಕಾಸು ಸಚಿವರಾಗಿ ಡಾ.ಮನಮೋಹನ್ ಸಿಂಗ್ ಪಾರು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರ ದೂರದರ್ಶಿತ್ವವನ್ನು ಊಹಿಸಲೂ ಅಸಾಧ್ಯ. ಭವಿಷ್ಯದ ಭಾರತವನ್ನು ಅವರು ಅಂದೇ ಕಂಡಿದ್ದರು. ಅವರು ಹಾಕಿದ ಬುನಾದಿಯ‌ ಮೇಲೆಯೆ ಭಾರತ ಹೊಸ ದಾರಿ ಹಿಡಿಯಿತು.

ಸತತ ಎರಡು ಅವಧಿಗೆ ಅವರು ಪ್ರಧಾನಿಯಾಗಿದ್ದರು. ಮಾಹಿತಿ ಹಕ್ಕು ಕಾಯ್ದೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣದ ಹಕ್ಕು ಕಾಯ್ದೆಗಳನ್ನು ಜಾರಿಗೊಳಿಸಿದ್ದು ಅವರ ಅಸಮಾನ್ಯ ಸಾಧನೆಗಳು. ಮನರೇಗಾ (ಈಗ ನರೇಗಾ)ದಂಥ ಯೋಜನೆಗಳು ಬಡತನ ನಿವಾರಣೆಗೆ ಯತ್ನಿಸಿದ ಕ್ರಾಂತಿಕಾರಿ ಪ್ರಯೋಗವಾಗಿತ್ತು. ಉದಾರೀಕರಣದ ಹೊತ್ತಿನಲ್ಲಿ ಬಂಡವಾಳಶಾಹಿಗಳನ್ನು ತೃಪ್ತಿಪಡಿಸುತ್ತಲೇ ಜನಕಲ್ಯಾಣ‌ ಯೋಜನೆಗಳನ್ನೂ ಜಾರಿಗೊಳಿಸಿ ಸಾಮಾಜದ ಎಲ್ಲ ವರ್ಗದ ಜನರ ಏಳಿಗೆಗೆ ಅವರು ಕಟಿಬದ್ಧರಾಗಿದ್ದರು.

ಡಾ.ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆಗಳನ್ನು ಮರೆತರೆ ನಾವು ಕೃತಘ್ನರೆನಿಸಿಕೊಳ್ಳುತ್ತೇವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ‌ ಅವರ ಅವಧಿಯಲ್ಲೇ ದೊರೆಯಿತು. ಕಲ್ಯಾಣ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆ ಆ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆಯಬೇಕು ಎಂಬುದಾಗಿತ್ತು.‌ ನಾವು‌ ಇದಕ್ಕಾಗಿ ಹಲವು ಹೋರಾಟ ನಡೆಸಿದ್ದೆವು. ಮಲ್ಲಿಕಾರ್ಜುನ ಖರ್ಗೆಯವರ ಪರಿಶ್ರಮ ಮತ್ತು ಡಾ.ಮನಮೋಹನ್ ಸಿಂಗ್ ಅವರ ಕಾಳಜಿಯಿಂದ ಇದು ಸಾಧ್ಯವಾಯಿತು. ಸಂವಿಧಾನಕ್ಕೆ 371 ಜೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕಕ್ಕೆ ವಿಶೇಷ‌ ಸ್ಥಾನಮಾನ ದೊರೆಯಿತು. ಬೆಂಗಳೂರಿನ ನಮ್ಮ‌ ಮೆಟ್ರೋ ಡಾ.ಸಿಂಗ್ ಅವರ ಕಾಲದಲ್ಲೇ ವೇಗ ಪಡೆದು, ಅವರೇ ಮೊದಲ ಮಾರ್ಗವನ್ನು ಉದ್ಘಾಟಿಸಿದರು.

ಡಾ.ಮನಮೋಹನ್ ಸಿಂಗ್ ಅಪಾರ ಬುದ್ಧಿಮತ್ತೆಯ ಆರ್ಥಿಕ ತಜ್ಞರಾಗಿದ್ದರು. ಅವರ ಜ್ಞಾನಕ್ಕೆ ವಿಶ್ವನಾಯಕರು ಮಾರುಹೋಗಿದ್ದರು. ಅಮೆರಿಕದ ಅಂದಿನ ಪ್ರಧಾನಿ ಬರಾಕ್ ಒಬಾಮಾ ಅವರು ಮುಕ್ತಕಂಠದಿಂದ ಅವರನ್ನು ಹೊಗಳಿದ್ದನ್ನು ನಾವೆಲ್ಲ ನೋಡಿದ್ದೇವೆ. ಇಷ್ಟಾದರೂ ಅವರು ಅಹಮಿಕೆ ಇಟ್ಟುಕೊಂಡಿರಲಿಲ್ಲ. “ನನಗಿಂತ ಮೊದಲು ಆರ್ಥಿಕ ಸುಧಾರಣೆಗಳನ್ನು ಜಾರಿ ಮಾಡಲು (ಕರ್ನಾಟಕದಲ್ಲಿ) ಆರಂಭಿಸಿದ್ದು ಎಸ್.ಎಂ‌.ಕೃಷ್ಣ ಎಂದು ಅವರು ತಮ್ಮ ಎಂದಿನ ವಿನಯಶೀಲತೆಯಿಂದ ಹೇಳಿದ್ದರು. ಕರ್ನಾಟಕದ ಮತ್ತೊಬ್ಬ ಆರ್ಥಿಕ ತಜ್ಞ ಡಾ.ವೆಂಕಟಗಿರಿಗೌಡ ಅವರಿಂದಲೂ ಸಲಹೆ ಪಡೆದಿದ್ದೇನೆ ಎಂದು ಅವರು ಒಮ್ಮೆ ಹೇಳಿದ್ದರು. ಮನಮೋಹನ ಸಿಂಗ್ ಅವರ ಹಿಂದೆಯೇ ಅವರ ಶಿಷ್ಯ‌, ದೇಶ‌‌ಕಂಡ ಶ್ರೇಷ್ಠ ಆರ್ಥಿಕ ತಜ್ಞ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಕೂಡ ಇರುತ್ತಿದ್ದರು. ಡಾ.ಮನಮೋಹನ ಸಿಂಗ್ ಗುಣಕ್ಕೆ ಮತ್ಸರ ಪಟ್ಟವರಲ್ಲ. ತಾವೆಷ್ಟೇ ಮೇಧಾವಿಯಾಗಿದ್ದರೂ ಇತರರ ಮಾತು‌ ಕೇಳಿಸಿಕೊಳ್ಳುವ ಗುಣ ಅವರಿಗಿತ್ತು‌ ಅನ್ನುವುದಕ್ಕೆ ಇದು ಸಾಕ್ಷಿ.

ಪ್ರಧಾನಿಯಾಗಿ ಡಾ. ಮನಮೋಹನ ಸಿಂಗ್ ಅವರ ಎರಡನೇ ಅವಧಿ ಆಹ್ಲಾದಕರವಾಗಿರಲಿಲ್ಲ. ಅವರ ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರದ ಆರೋಪ‌ ಎದುರಿಸಿದರು. ದೇಶದೆಲ್ಲೆಡೆ ಕೋಮು‌ಧ್ರುವೀಕರಣ ಎಗ್ಗಿಲ್ಲದಂತೆ ನಡೆಯಿತು. ಟೀವಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಸಮೂಹ ಸನ್ನಿ‌ಸೃಷ್ಟಿಸುವ, ಜನಾಭಿಪ್ರಾಯ ತಯಾರಿಸುವ ಕಾರ್ಖಾನೆಗಳಾದವು. ಮಾತಿನ ಮಲ್ಲರು ಜನಪ್ರಿಯಗೊಳ್ಳತೊಡಗಿದರು. ಸಹಜವಾಗಿಯೇ ಆಡಳಿತ ವಿರೋಧಿ ಅಲೆಯೂ ಎದ್ದಿತು. ಹೊಸ ಭಾರತದ ಶಿಲ್ಪಿ ಡಾ.ಮನಮೋಹನ ಸಿಂಗ್ ಅದೇ ಹೊಸ ಭಾರತಕ್ಕೆ ಅಪ್ರಸ್ತುತರಾದರು. ಇದರಿಂದ ನೊಂದು ಅವರು ” ವರ್ತಮಾನ ನನ್ನ‌ ಬಗ್ಗೆ ಕ್ರೂರವಾಗಿ ನಡೆದುಕೊಂಡಿರಬಹುದು,‌ ಆದರೆ ಇತಿಹಾಸ ನನ್ನನ್ನು ಕರುಣೆಯಿಂದ ನೋಡಲಿದೆ'” ಎಂದು ನುಡಿದಿದ್ದರು.

ಅವರ ಮಾತುಗಳು ಅಕ್ಷರಶಃ‌ ಸತ್ಯ. ಭಾರತದ‌ ಇತಿಹಾಸ ಡಾ.ಮನಮೋಹನ ಸಿಂಗ್ ಅವರನ್ನು ಎಂದೂ‌ ಮರೆಯದು. ಯಾಕೆಂದರೆ ಅವರು ಬದಲಾದ ಭಾರತವನ್ನು ಸೃಷ್ಟಿಸಿದವರು. ಇಡೀ ಜಗತ್ತು‌ ತಿರುಗಿನೋಡುವಂತೆ ಬದಲಾವಣೆಗಳನ್ನು ಸೃಷ್ಟಿಸಿದವರು.

  • ಟಿ.ಎ. ನಾರಾಯಣಗೌಡ
    ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

More articles

Latest article