ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಮಧ್ಯಾಹ್ನ ನೆರವೇರಿತು. ಮಧ್ಯಾಹ್ನ ಒಂದು ಗಂಟೆಗೆ ಸಿಖ್ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿತು.
ಮೂರನೇ ಮೋತಿಲಾಲ್ ಮಾರ್ಗದಲ್ಲಿರುವ ಡಾ. ಸಿಂಗ್ ಅವರ ನಿವಾಸದಿಂದ ಅವರ ಪಾರ್ಥೀವ ಶರೀರವನ್ನು ಭಾರಿ ಬಿಗಿ ಭದ್ರತೆಯ ನಡುವೆ ಎಐಸಿಸಿ ಕಚೇರಿಗೆ ತರಲಾಯಿತು. ಕಾಂಗ್ರೆಸ್ ಮುಖಂಡರು ಅಂತಿಮ ದರ್ಶನ ಪಡೆದ ನಂತರ ನಿಗಮ್ ಬೋಧ್ ಘಾಟ್‌ಗೆ ತರಲಾಯಿತು. ಅಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿದವು. ನಿಗಮ್ ಬೋಧ್ ಘಾಟ್‌ನಲ್ಲಿ ಮೂರು ಸೇನೆಗಳ ಮುಖ್ಯಸ್ಥರು ಪುಷ್ಪ ನಮನ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೂತಾನ್ ದೊರೆ ಜಿಗ್ಮ್ ಕೇಸರ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ರಾಜಕೀಯ ಧುರೀಣರು ಉಪಸ್ಥಿತರಿದ್ದರು.