ಲೋಕಸಭಾ ಚುನಾವಣೆಯ ಹಣಾಹಣಿ ರಂಗೇರುತ್ತಿದ್ದು, ಮಹತ್ವದ ಬೆಳವಣಿಯಲ್ಲಿ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಚುನಾವಣೆಗೆ ಸ್ಪರ್ಧಿಸಲು ಮಂಜುನಾಥ್ ಅವರನ್ನು ಮನವೊಲಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿರುವಂತೆಯೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಮುಖಂಡರ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಸಭೆಯಲ್ಲಿ, ಜಯದೇವ ಹೃದ್ರೋಗ ಸಂಸ್ಥೆಯ ವಿಶ್ರಾಂತ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರನ್ನೇ ಬೆಂಗಳೂರು ಗ್ರಾಮಾಂತರ ನಿಲ್ಲಿಸಬೇಕು ಎಂಬುದು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರ ಒತ್ತಾಸೆ ಇದೆ. ನಮ್ಮ ಪಕ್ಷದ ನಾಯಕರು, ಮುಖಂಡರು ಅದೇ ಅಭಿಲಾಷೆ ಹೊಂದಿದ್ದಾರೆ. ಎನ್ ಡಿಎ ಮೈತ್ರಿಕೂಟದ ಒಮ್ಮತ ಅಭ್ಯರ್ಥಿ ಆಗಬೇಕು ಎರಡೂ ಪಕ್ಷಗಳೂ ಬಯಸಿವೆ. ಅವರು ಚುನಾವಣೆಗೆ ನಿಲ್ಲಬೇಕೋ ಬೇಡವೋ ಎನ್ನುವ ತೀರ್ಮಾನವನ್ನು ಮುಖಂಡರಾದ ನಿಮಗೆ ಬಿಡುತ್ತೇನೆ ಎಂದು ಸಭೆಯಲ್ಲಿ ಕುಮಾರಸ್ವಾಮಿ ಅವರು ಹೇಳಿದರು.
ಸಿ.ಪಿ.ಯೋಗೇಶ್ವರ್ ಅವರು ಎನ್ ಡಿಎ ಅಭ್ಯರ್ಥಿ ಆಗಬೇಕು ಎಂದು ನಾನು ಹೇಳಿದ್ದೇನೆ. ಸ್ವತಃ ಯೋಗೇಶ್ವರ್ ಅವರಿಗೂ ಹೇಳಿದ್ದೇನೆ. ಆದರೆ; ಯೋಗೇಶ್ವರ್ ಅವರು ಕೂಡ ಡಾ.ಮಂಜುನಾಥ್ ಅವರೇ ನಿಲ್ಲಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಮಿತ್ರ ಪಕ್ಷದ ವರಿಷ್ಠರು, ರಾಜ್ಯದ ಬಿಜೆಪಿ ನಾಯಕರ ಭಾವನೆಗಳನ್ನು ನಾವು ಗೌರವಿಸಬೇಕಿದೆ ಎಂದು ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದರು.
ಭಾನುವಾರ ನಾನು ನಮ್ಮ ತಂದೆಯವರ ಜತೆ ಎರಡು ಗಂಟೆ ಕಾಲ ಚರ್ಚೆ ಮಾಡಿದೆ. ಡಾ.ಮಂಜುನಾಥ್ ಅವರ ಸ್ಪರ್ಧೆ ವಿಚಾರವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನನ್ನ ಸಹೋದರಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ನಮ್ಮನ್ನು ಯಾಕೆ ರಾಜಕೀಯಕ್ಕೆ ಎಳೆಯುತ್ತೀರಿ, ನೆಮ್ಮದಿಯಿಂದ ಇದ್ದೇವೆ, ನಮಗೆ ರಾಜಕೀಯ ಬೇಡ ಅಂತ ಅಳ್ತಾ ಕೂತಿದ್ದಾರೆ. ಇದು ನಮ್ಮ ಮನೆಯ ಪರಿಸ್ಥಿತಿ. ನನ್ನ ನೋವು ನನಗೇ ಗೊತ್ತು. ಆದರೆ, ವಿರೋಧಿಗಳನ್ನು ಮಣಿಸಲೇಬೇಕು. ಇದು ನನ್ನ ಗುರಿ ಎಂದು ನೇರ ಮಾತುಗಳಲ್ಲಿ ಹೇಳಿದರು ಮಾಜಿ ಮುಖ್ಯಮಂತ್ರಿಗಳು.
ಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ. ರಾಮನಗರ ಜನರು ನಿಖಿಲ್ ರನ್ನು ಸೋಲಿಸಿದ್ದಾರೆ ಎಂದು ನಾನು ದೋಷ ಕೊಡಲ್ಲ. ನಮ್ಮದೇ ತಪ್ಪುಗಳಿಂದ ನಿಖಿಲ್ ಸೋತಿದ್ದಾರೆ, ಆ ತಪ್ಪುಗಳನ್ನು ಸರಿ ಮಾಡೋಣ ಎಂದವರು ಅವರು.