Wednesday, May 22, 2024

ಮಾಧ್ಯಮಗಳ ಬೇಜವಾಬ್ದಾರಿ ವರದಿಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಬೇಸರ

Most read

“ನಾಸಿರ್ ಸಾಬ್ ಜಿಂದಾಬಾದ್” ಎಂಬ ಜೈಕಾರವನ್ನು ತಿರುಚಿ “ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದಾರೆಂದು ವರದಿ ಮಾಡಿರುವ ಮಾಧ್ಯಮ ಸಂಸ್ಥೆಗಳ ನಡೆ ಬೇಜವಾಬ್ದಾರಿಯುತವಾದುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ರಾಜ್ಯಸಭಾ ಚುನಾವಣೆ ಫಲಿತಾಂಶದ ಬಳಿಕ ನಾಸಿರ್ ಹುಸೇನ್ ಅವರ ಕೆಲವು ಬೆಂಬಲಿಗರು ವಿಧಾನಸೌಧದ ಪ್ರವೇಶಕ್ಕೆ ಅನುಮತಿ ಪಡೆದಿದ್ದರು. ಈ ಸಂದರ್ಭದಲ್ಲಿ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಪರ ಅವರ ಬೆಂಬಲಿಗರು ಜೈಕಾರಗಳನ್ನು ಕೂಗಿದ್ದಾರೆ. ಇದನ್ನು ತಿರುಚಿ ವರದಿ ಮಾಡಿದ ಬಹುತೇಕ ಎಲ್ಲ ಕನ್ನಡದ ಮಾಧ್ಯಮಗಳು “ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್” ಘೋಷಣೆಗಳನ್ನು ಕೂಗಿದ್ದಾರೆ ಎಂದು ಸುಳ್ಳು ವರದಿ ಮಾಡಿದ್ದವು. ಬುಧವಾರ ತಮ್ಮ ಫೇಸ್ಬುಕ್ ಪುಟದಲ್ಲಿ ಮಾಧ್ಯಮಗಳ ಈ ನಡೆಯನ್ನು ಟೀಕಿಸಿರುವ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮೈ ಡಿಯರ್ ಮಾಧ್ಯಮಗಳಿಗೊಂದು ಟಿಪ್ಪಣಿ ಎನ್ನುವ ಒಕ್ಕಣೆಯೊಂದಿಗೆ ಆರಂಭಿಸಿ, “ಚುನಾವಣೆ ಹತ್ತಿರವಿರುವಾಗಂತೂ ಸದಾ, ಫ್ಯೂಡಲ್ ಮತ್ತು ಜಾತಿವಾದಿಗಳ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುವಂತೆ ತೋರುವ ಮಾಧ್ಯಮಗಳು, ಈ ದೇಶದ ಸ್ವಾತಂತ್ರ್ಯದ ಆಶಯಗಳ ಹಕ್ಕಿಯ ರೆಕ್ಕೆಗಳನ್ನು ಕತ್ತರಿಸಲು ಪ್ರಯತ್ನ ಮಾಡುತ್ತಿರುವಂತೆ ತೋರುತ್ತಿದೆ” ಎಂದು ಟೀಕಿಸುವ ಜೊತೆಗೆ ಕೆಲವು ವರ್ಷಗಳಿಂದ ತಮ್ಮಅನುಭವಕ್ಕೆ ಬಂದ ಮಾಧ್ಯಮಗಳ ಇಂತಹ ನಡೆಯನ್ನು ಬಿಚ್ಚಿಟ್ಟಿದ್ದಾರೆ.

ಮಾಧ್ಯಮಗಳ ಕಹಿ ಅನುಭವ ಹಂಚಿಕೊಂಡ ಸಚಿವರು

‘ಮೊದಲು ಇವರು “ಸಿದ್ದರಾಮಯ್ಯ ಮತ್ತು ಮಹದೇವಪ್ಪನವರಿಗೆ ಮನಸ್ಥಾಪ’ ಎಂದು ಪದೇ ಪದೇ ಸುಳ್ಳು ಹಬ್ಬಿಸಲು ಆರಂಭಿಸಿದರು.

ನಂತರ ಅದು ಫಲ ಕೊಡದ ಕಾರಣಕ್ಕೆ ಸುಮ್ಮನಾದರು.

ಅದಾದ ಬಳಿಕ ಕಳೆದ ವಾರ ಕೆಪಿಸಿಸಿ ಅಧ್ಯಕ್ಷರ ಮನೆಗೆ ಊಟಕ್ಕೆ ಹೋಗಿ ಬಂದ ನಂತರ, “ಔತಣಕೂಟಕ್ಕೆ ಮಹದೇವಪ್ಪ, ಬರಲಿಲ್ಲ” “ಬಹಿರಂಗ ಮುನಿಸು” ಎಂದು ವರದಿ ಮಾಡಿದರು.

“ಇಲ್ಲ ಕಣ್ರಯ್ಯಾ ಅಲ್ಲಿಗೆ ಹೋಗಿ ಬರಲಾಗಿತ್ತು” ಎಂದರೂ ಕನಿಷ್ಠ ಪಕ್ಷ ಅದನ್ನು ತಿದ್ದಿಕೊಳ್ಳುವ ಸೌಜನ್ಯವನ್ನೂ ಇವರು ತೋರಲಿಲ್ಲ.

ಹಾಗಿದ್ದ ಮೇಲೆ ಇವರ ಉದ್ದೇಶ ಏನೆಂದು ನಾವು ಅರ್ಥ ಮಾಡಿಕೊಳ್ಳುವುದು?’ ಎಂದು ಮಾಧ್ಯಮಗಳೊಂದಿಗಿನ ತಮ್ಮ ಕಹಿ ಅನುಭವಗಳನ್ನು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

ಮಾಧ್ಯಮಗಳ ಜವಾಬ್ದಾರಿ ನೆನಪಿಸಿದ ಸಚಿವರು

‘ಇಂದು ದೇಶದ ಸುರಕ್ಷತೆ ಮುಖ್ಯ ಎಂದೆಲ್ಲಾ ಭಾಷಣ ಮಾಡುವ ಮಾಧ್ಯಮಗಳು, ಪುಲ್ವಾಮ ಗಡಿಯೊಳಗೆ, ವಿಶ್ವಗುರು ಎಂದು ಹೇಳುವ ವ್ಯಕ್ತಿಯೇ ಪ್ರಧಾನಿ ಆಗಿ ಇರುವಾಗ ಅಮಾಯಕ ಸೈನಿಕರ ಸಾವಿಗೆ ಕಾರಣವಾದ ಆ 300 ಕೆಜಿ RDX ಹೇಗೆ ಗಡಿಯ ಒಳಗೆ ಬಂತು? ಎಂದು ಪ್ರಶ್ನಿಸಿದ್ದಾರಾ? ಭಾರತ ಚೀನಾದ ಗಡಿಯನ್ನು ಮೀರಿ, ಚೀನಾವು ಒಂದೂರನ್ನೇ ಆಕ್ರಮಿಸಿರುವಾಗ, ಪ್ರಧಾನಿಗಳು ಏಕೆ ಸುಮ್ಮನಿದ್ದಾರೆ ಎಂದು ಕೇಳುವ ನೈತಿಕತೆ ತೋರಿದ್ದಾರಾ? ಅಷ್ಟೇ ಏಕೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 55 ನೇ ಸ್ಥಾನದಲ್ಲಿದ್ದ ದೇಶವು 102 ನೇ ಸ್ಥಾನಕ್ಕೆ ಕುಸಿದಿದೆ. ರೂಪಾಯಿಯ ಮೌಲ್ಯ ಡಾಲರ್ ಎದುರಿಗೆ ಕುಸಿಯುತ್ತಲೇ ಇದೆ, ನಿರುದ್ಯೋಗದ ಪ್ರಮಾಣವೂ ಹೆಚ್ಚಾಗಿದೆ. ಇವುಗಳ ಬಗ್ಗೆ ಪ್ರಶ್ನೆ ಇಲ್ಲವೇ? ಅಥವಾ ಗೊತ್ತಿದ್ದೂ ಕುರುಡುತನ ಪ್ರದರ್ಶನವೇ? ತೀವ್ರವಾದಿ ಸಂಘಟನೆಗಳಾಗಿ ಗುರುತಿಸಿಕೊಂಡಿರುವ ತಾಲಿಬಾನಿಗಳಿಗೆ 200 ಕೋಟಿ ನೆರವು ನೀಡುವುದಾಗಿ ಹೇಳಿದ್ದ ಪ್ರಧಾನಿಗಳು, ಏಕೆ ಹಾಗೆ ಮಾಡಿದರು? ತೀವ್ರವಾದಿ ತಾಲಿಬಾನಿಗಳ ಮೇಲೆ ಇವರಿಗೇಕೆ ಅಷ್ಟು ಪ್ರೀತಿ ಎಂದು ಇವರು ಎಂದಾದರೂ ಪ್ರಶ್ನಿಸಿದ್ದಾರಾ? ಚುನಾವಣಾ ಹೊತ್ತಿನಲ್ಲಿ ಮಾತ್ರ ಪಾಕಿಸ್ತಾನ ಎಂದು ಜಪ ಮಾಡುವ ಮಾಧ್ಯಮಗಳು, ಹೆಚ್ಚಾದ ಪೆಟ್ರೋಲ್ ಬೆಲೆಯ ಕುರಿತು ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕುರಿತು ಪ್ರಶ್ನೆ ಮಾಡುವ ಧೈರ್ಯ ತೋರಿದ್ದಾರೆಯೇ?’ ಎಂದು ಸಚಿವರು ಮಾಧ್ಯಮಗಳಿಗೆ ತಮ್ಮ ನಿಜವಾದ ಜವಾಬ್ದಾರಿಯನ್ನು ನೆನಪಿಸಿದ್ದಾರೆ.

‘ಮಾಧ್ಯಮಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸಿದ ಸಂವಿಧಾನದ ಕುರಿತು ಅರಿವಿನ ಅಭಿಯಾನ ಕಾರ್ಯಕ್ರಮ ಮಾಡುವಾಗ, ಆ ಅಭಿಯಾನಕ್ಕೂ ಸರ್ಕಾರಿ ಜಾಹೀರಾತು ನೀಡುವಂತಹ ಪರಿಸ್ಥಿತಿ ಇದೆ’ ಎಂದಿರುವ ಸಚಿವರು ಜಾಹಿರಾತಿಗಾಗಿ ಮಾಧ್ಯಮಗಳು ಸರಕಾರದ ಮೇಲೆ ಒತ್ತಡ ಹೇರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ.

‘ಇಷ್ಟೆಲ್ಲಾ ಸಂಗತಿಗಳು ಸ್ಪಷ್ಟವಾಗಿ ಇರುವಾಗ ಇಲ್ಲದ ಸುಳ್ಳೊಂದನ್ನು ಇಟ್ಟುಕೊಂಡು ದೇಶಪ್ರೇಮದ ಬಗ್ಗೆ ಇವರು ಪ್ರತಿಪಾದಿಸುತ್ತಿದ್ದಾರಲ್ಲಾ ಇವರಿಗೆ ಏನು ಹೇಳುವುದು? ಸರ್ಕಾರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಲಿದೆ. ಒಬ್ಬ ಮಾರಿಕೊಂಡ ಪತ್ರಕರ್ತ ನೂರು ಭಯೋತ್ಪಾದಕರಿಗೆ ಸಮ ಎಂದು ಬಾಬಾ ಸಾಹೇಬರು ಹೇಳುತ್ತಿದ್ದರು. ದೇಶದ ಬಹುತ್ವಕ್ಕೆ ಜನರಿಂದ ಆರಿಸಿ ಬಂದ ಪ್ರಭುತ್ವವೇ ಕಂಟಕಪ್ರಾಯ ಆಗಿರುವ ಈ ವೇಳೆ ಮಾಧ್ಯಮಗಳು ಬಾಬಾ ಸಾಹೇಬರ ಮಾತನ್ನು ನಿಜ ಮಾಡುವ ಕೆಲಸ ಮಾಡದಿರಲಿ ಮತ್ತು ಪ್ರಜಾಪ್ರಭುತ್ವವೇ ಇಲ್ಲದಿರುವಾಗ ಅವರ ಅಸ್ತಿತ್ವವೂ ಸಹಜವಾಗಿ ಹೋಗುತ್ತದೆ ಎಂಬುದನ್ನು ನೆನಪಿಡಲಿ’ ಎಂದ ಸಚಿವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

More articles

Latest article