Monday, May 20, 2024

ಉ. ಕ. ಲೋಕಸಭಾ ಚುನಾವಣೆ| ʼಅಭಿವೃದ್ಧಿʼ ಕನಸುಗಳ ಮೂಟೆ ಹೊತ್ತ ಡಾ.ಅಂಜಲಿ ನಿಂಬಾಳ್ಕರ್

Most read

ಮರಾಠಿ ಸಮುದಾಯದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯಿಂದ ಸ್ಪರ್ಧೆಯಲ್ಲಿ ಇರುವ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಜನಪರ ಯೋಜನೆಗಳೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿ ಚುನಾವಣಾ ಕಣದಲ್ಲಿ ಇದ್ದಾರೆ ; ಗೆಲುವಿನ ಪರೀಕ್ಷೆಗೆ ಸಜ್ಜಾಗಿದ್ದಾರೆ- ಪ್ರವೀಣಕುಮಾರ ಕೆ.ಎಸ್, ಉತ್ತರ ಕನ್ನಡ.

ಮಹಿಳಾ ಅಭ್ಯರ್ಥಿಯಾಗಿ ಮಹಿಳೆಯ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕನಸು ಕಾಣುತ್ತಾ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದೆ ಇಟ್ಟುಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ಮರಾಠಿ ಸಮುದಾಯದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಣದಲ್ಲಿ ಇರುವ ಅಂಜಲಿ ನಿಂಬಾಳ್ಕರ್ ಕ್ಷೇತ್ರದ ತುಂಬಾ ಅಡ್ಡಾಡಿ ಪ್ರಚಾರ ಕೈಗೊಂಡಿದ್ದಾರೆ. ಇವರು ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಜನಪರ ಯೋಜನೆಗಳೊಂದಿಗೆ  ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿ, ಮಹಿಳಾ ಮಿಸಲಾತಿಯ ಸಮರ್ಪಕ ಅನುಷ್ಠಾನಕ್ಕೆ  ಬೆಂಬಲವಾಗಿ ನಿಂತು ಜನಸಾಮಾನ್ಯರ, ಮಹಿಳೆಯರ ಧ್ವನಿಯನ್ನು ರಾಷ್ಟ್ರ ಮಟ್ಟಕ್ಕೆ ತಲಪಿಸಲು ಚುನಾವಣಾ ಕಣದಲ್ಲಿ ಇದ್ದಾರೆ. ಕ್ಷೇತ್ರದಲ್ಲಿ ಗೆಲುವಿನ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಇವರು ಡಾ. ಅಂಜಲಿ ನಿಂಬಾಳ್ಕರ್…‌

ನೆರೆಯ ಮಹಾರಾಷ್ಟ್ರದ ಮುಂಬೈನಲ್ಲಿ ವೈದ್ಯೆಯಾಗಿದ್ದ ಅಂಜಲಿ ನಿಂಬಾಳ್ಕರ್, ಪತಿ ಹೇಮಂತ್ ನಿಂಬಾಳ್ಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬೆಳಗಾವಿಗೆ ಬಂದಾಗ ಅವರೊಂದಿಗೆ ಬಂದು ಖಾನಾಪುರ ದಲ್ಲಿ ನೆಲೆನಿಂತರು. ಅಂಜಲಿ ತಾಯಿ ಫೌಂಡೇಷನ್‌ ರಚಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕೊಂಡರು. ಹಳ್ಳಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿದರು. ಶಾಲೆಗೆ ಹೋಗುವ ಮಕ್ಕಳಿಗೆ ಪಠ್ಯ ಪುಸ್ತಕ, ಬ್ಯಾಗ್ ಹಾಗೂ ಇತರ ಕಲಿಕಾ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸಿದರು. ಖಾನಾಪುರ ಕ್ಷೇತ್ರವು ಪಶ್ಚಿಮ ಘಟ್ಟ ವ್ಯಾಪ್ತಿ ಹೊಂದಿದ್ದು, ಹಲವೆಡೆ ಅರಣ್ಯವಾಸಿಗಳಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರಬೇಕು ಹಾಗೂ ಇವರ ಜೀವನ ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎನ್ನುವ ಉಮೇದು ಹೊಂದಿದ್ದಾರೆ.

ರಾಜಕೀಯ ಹೆಜ್ಜೆಗಳು

2018 ರಲ್ಲಿ ಕರ್ನಾಟಕ ವಿಧಾನಸಭಾ ಕ್ಷೇತ್ರದ ಖಾನಾಪುರದಿಂದ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ವಿಠಲ್ ಹಲಗೇಕರ ವಿರುದ್ಧ ಜಯ ಗಳಿಸಿ ಶಾಸಕಿಯಾಗಿ ರಾಜಕೀಯ ಜೀವನ ಪ್ರಾರಂಭಿಸಿದರು.

2020 ದಿಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಚುನಾವಣೆಗೆ ಸ್ಪರ್ಧಿಸಿ ಸೋಲುಂಡರು

2023 ರ  ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ವಿಠಲ್ ಹಲಗೇಕರ ವಿರುದ್ಧ ಪರಾಜಿತರಾದರು.

2024 ರ ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಅಭ್ಯರ್ಥಿಯಾಗಿದ್ದಾರೆ.

ಅಂಜಲಿಯವರ ಅಭಿವೃದ್ಧಿಯ ಕನಸುಗಳು

ಕೆನರಾ ಲೋಕಸಭಾ ಕ್ಷೇತ್ರವು  ವಿಶೇಷ ಭೂ ಪ್ರದೇಶವನ್ನು ಹೊಂದಿದೆ ಹಾಗೂ ಬೇರೆ ಕ್ಷೇತ್ರಕ್ಕೆ ಹೋಲಿಸಿದರೆ ಪ್ರಚಾರಕ್ಕೆ ಕಾಡು ಮೇಡು ಅಡ್ಡಬರುತ್ತದೆ. ನೈಸರ್ಗಿಕ ಸಂಪನ್ಮೂಲಗಳನ್ನು ಧಾರಾಳ ಹೊಂದಿದ್ದರೂ ಅಭಿವೃದ್ಧಿ ವಿಷಯದಲ್ಲಿ ಇದು ಹಿಂದುಳಿದಿದೆ. ಇಲ್ಲಿ ಆರೋಗ್ಯದ ದೃಷ್ಟಿಯಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆ ತೀರಾ ಇದೆ. ಹೀಗಿರುವಾಗಲೇ ತಮ್ಮ ಕ್ಷೇತ್ರದ ಬಡ ನಿರ್ಲಕ್ಷಿತ ಸಮುದಾಯಗಳ ಸಮಸ್ಯೆಗಳನ್ನು ಎತ್ತಿ ಹಿಡಿಯಲು ಅಂಜಲಿ ಪಾದಯಾತ್ರೆ ಕೈಗೊಂಡಿದ್ದಾರೆ.

“ನನ್ನ ಕ್ಷೇತ್ರದ ಹಲವು ಹಳ್ಳಿಗಳು ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಗ್ರಾಮಸ್ಥರಲ್ಲದೆ, ಹಲವು ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ. ಅವರಿಗೆ ಮೂಲ ಸೌಕರ್ಯ ಒದಗಿಸುವುದು, ಸೌರ ವಿದ್ಯುತ್, ಶಿಕ್ಷಣ‌, ಆರೋಗ್ಯ ಸೇವೆ, ಪುನರ್‌ ವಸತಿ ಕಲ್ಪಿಸುವುದು ನನ್ನ ಆದ್ಯತೆಯಾಗಿದೆ. ಇವರಿಗೆ ನಗರ ಪ್ರದೇಶಗಳಲ್ಲಿ ಉಚಿತ ಭೂಮಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ, ಹಲವು ಪ್ರದೇಶಗಳಲ್ಲಿ ಸರ್ಕಾರಿ ಶಾಲೆ ನಿರ್ಮಾಣ, ಶೌಚಾಲಯ, ಕುಡಿಯುವ ನೀರು ಸರಬರಾಜು ಯೋಜನೆ ಇತ್ಯಾದಿಗಳಿಗೆ ಆದ್ಯತೆ ನೀಡಲಾಗುವುದು. ಪಶ್ಚಿಮ ಘಟ್ಟಗಳ ಅರಣ್ಯವಾಸಿಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುವ ಬೇಡಿಕೆ ಒಂದೆಡೆ ಇದ್ದರೆ, ಕಸ್ತೂರಿ ರಂಗನ್ ವರದಿ ಶಿಫಾರಸ್ಸಿನಂತೆ ಅರಣ್ಯ ವಾಸಿಗಳನ್ನು ನಾಡಿನಿಂದ ಹೊರಗೆ ತರಬೇಕು ಎನ್ನುವುದು ಇನ್ನೊಂದೆಡೆ ಇದೆ. ಇದನ್ನೂ ಗಮನಿಸಲಾಗುವುದು” ಎನ್ನುತ್ತಾರೆ ಅಭಿವೃದ್ಧಿಯ ನೂರಾರು ಕನಸುಗಳನ್ನು ಹೊತ್ತ ಅಂಜಲಿ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮಹಿಳೆಯರ ಆಶೋತ್ತರಗಳಿಗೆ ಸ್ಪಂದಿಸುವ ಹಂಬಲವೂ ಅಂಜಲಿಯವರದ್ದಾಗಿದೆ. ಮತದಾರರು ಅಂಜಲಿಯವರ ಕನಸುಗಳನ್ನು ಬೆಂಬಲಿಸುತ್ತಾರಾ ಯಾ ತಿರಸ್ಕರಿಸುತ್ತಾರಾ ಕಾದು ನೋಡಬೇಕಿದೆ.

ಪ್ರವೀಣಕುಮಾರ ಕೆ.ಎಸ್

ಉತ್ತರ ಕನ್ನಡ

ಇದನ್ನೂ ಓದಿ-http://ಕೆನರಾ ಕ್ಷೇತ್ರದಲ್ಲಿ ಯಾಕೆ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರೇ ಗೆಲ್ಲಬೇಕು ಎಂದರೆ…..‌https://kannadaplanet.com/why-anjali-hemant-nimbalkar-should-win/

More articles

Latest article