ವಾಲ್ಮೀಕಿ ಸುತ್ತ ಅನುಮಾನಗಳ ಹುತ್ತ

Most read

ಇವತ್ತು ಅಕ್ಟೋಬರ್ 17, ವಾಲ್ಮೀಕಿ ಜಯಂತಿ. ರಾಮಾಯಣ ಮಹಾಕಾವ್ಯದ ಈ ಕರ್ತೃ ಈ ದಿನಾಂಕದಂದು ಹುಟ್ಟಿದ್ದರು ಎಂದು ನಂಬಿ ಈ ದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ವಾಲ್ಮೀಕಿ ನಿಜವಾಗಿಯೂ ದಲಿತ ಸಮುದಾಯದ ಅರಣ್ಯವಾಸಿ ಬೇಡನೇ? ಎಂಬ ಪ್ರಶ್ನೆಗೆ ಶಶಿಕಾಂತ ಯಡಹಳ್ಳಿಯವರು ಇಲ್ಲಿ ಉತ್ತರಿಸಿದ್ದಾರೆ.

ರಾಮಾಯಣ ಮಹಾಕಾವ್ಯವನ್ನು ಗಮನಿಸಿದಾಗ ಅದನ್ನು ರಚಿಸಿದವರ ಪ್ರತಿಭೆ, ಕಥಾನಕ ಕಟ್ಟುವ ಜಾಣ್ಮೆ, ಭಾಷಾ ಪರಿಣಿತಿ ಅದ್ಭುತ ಎನ್ನಿಸುವಂತಿದೆ. ಇಷ್ಟೊಂದು ಶತಮಾನಗಳ ನಂತರವೂ ಈ ಮಹಾಕಾವ್ಯ ಜನಮಾನಸದ ಭಾಗವಾಗಿದ್ದೇ ರಾಮಾಯಣದ ಕಾವ್ಯ ಸೃಷ್ಟಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಅಂದಿನಿಂದ ಇಂದಿನವರೆಗೂ ವ್ಯಾಸರ ಮಹಾಭಾರತವನ್ನು ಬಿಟ್ಟರೆ ಬೇರೆ ಯಾವ ಮಹಾಕಾವ್ಯಗಳೂ ರಾಮಾಯಣದಷ್ಟು ಪ್ರಸಿದ್ಧಿಯನ್ನು, ಆರಾಧನೆಯನ್ನು ಪಡೆದಿಲ್ಲ. ಮನುಕುಲ ಇರುವವರೆಗೂ ಇರಬಹುದಾದ ಈ ಮಹಾಕಾವ್ಯವನ್ನು ದಲಿತ ಸಮುದಾಯದ ಅನಕ್ಷರಸ್ಥ ಅರಣ್ಯವಾಸಿ ವ್ಯಕ್ತಿ ರಚಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಅಂದಿನಿಂದ ಇಂದಿನವರೆಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಯಾಕೆಂದರೆ ವಾಲ್ಮೀಕಿ ಸುತ್ತಲೂ ಊಹಾತ್ಮಕ ಪೌರಾಣಿಕ ಕಥಾನಕಗಳ ಹುತ್ತಗಳನ್ನೇ ಕಟ್ಟಲಾಗಿದೆ. “ಕಾಡುವಾಸಿ ಬೇಡನೊಬ್ಬ ಕೊಲೆ ಸುಲಿಗೆ ದರೋಡೆ ಮಾಡುತ್ತಿದ್ದ. ಕ್ರೌಂಚ ಪಕ್ಷಿಗಳ ಘಟನೆಯಿಂದಾಗಿ ಆತನ ಮನಪರಿವರ್ತನೆಯಾಯ್ತು. ನಾರದ ಮಹರ್ಷಿಗಳು ಬಂದು,  ಮಾಡಿದ ಪಾಪದಲ್ಲಿ ಹೆಂಡತಿ ಮಕ್ಕಳು ಪಾಲು ಪಡೆಯುತ್ತಾರಾ ಎಂದು ಪ್ರಶ್ನಿಸಿದರು. ಅತನ ಪತ್ನಿಯ ನಿರಾಕರಣೆಯಿಂದ ಬೇಡನಿಗೆ ಜ್ಞಾನೋದಯವಾಯ್ತು. ನಾರದರ ಉಪದೇಶದಂತೆ ರಾಮ ನಾಮ ಮಂತ್ರವನ್ನು ತಪ್ಪಾಗಿ ಮರಾ ಮರಾ ಎಂದು ಜಪಿಸುತ್ತಾ ತಪಸ್ಸಿಗೆ ಕೂತ ಬೇಡನ ಸುತ್ತಲೂ ಹುತ್ತ ಅಂದರೆ ಸಂಸ್ಕೃತದಲ್ಲಿ ವಲ್ಮೀಕ ಬೆಳೆಯಿತು. ಹೀಗಾಗಿ ಬೇಡ ವಾಲ್ಮಿಕಿ ಋಷಿಯಾಗಿ ಉದ್ಭವವಾಗಿ ರಾಮಾಯಣವನ್ನು ರಚಿಸಿದ” ಎನ್ನುವ ಕಥೆ ರಾಮಾಯಣದಷ್ಟೇ ಜನಜನಿತ.

ವಾಸ್ತವದಲ್ಲಿ ಇದು ಎಷ್ಟರ ಮಟ್ಟಿಗೆ ಸಾಧ್ಯ?. ಗುರುಕುಲದಲ್ಲಿ ಹಲವಾರು ವರ್ಷ ಸಂಸ್ಕೃತ ಪಾಠಗಳ ಅಭ್ಯಾಸ ಮಾಡಿದ ವೈದಿಕ ಪ್ರತಿಭೆಗಳಿಗೂ ಸಾಧ್ಯವಾಗದ ರಚನೆ ಎಂದೂ ಸಾಂಪ್ರದಾಯಿಕ ವಿದ್ಯೆ ಕಲಿಯದ ಬೇಡನಿಗೆ ಹೇಗೆ ಒಲಿಯಲು ಸಾಧ್ಯ? ರಾಮಮಂತ್ರ ಜಪಿಸಿ ತಪಸ್ಸು ಮಾಡಿದರೆ ಗೊತ್ತಿಲ್ಲದ ಭಾಷಾ ಪ್ರೌಢಿಮೆ ಕರಗತ ಮಾಡಿಕೊಳ್ಳಲು ಆಗುತ್ತದಾ? ಪಂಡಿತೋತ್ತಮರಿಗೆ ಗದ್ಯ ರಚನೆಯೇ ಕಷ್ಟದಾಯಕವಾಗಿರುವಾಗ ಪಾಮರನಾದ ಬೇಡನೊಬ್ಬ 24000 ಸಂಸ್ಕೃತ ಶ್ಲೋಕಗಳಿರುವ ಮಹಾಕಾವ್ಯವನ್ನು ರಚಿಸಿದ ಎಂದರೆ ನಂಬಬಹುದಾ? ಅದೂ ಶೂದ್ರರಿಗೆ ಅಕ್ಷರಾಭ್ಯಾಸ ನಿಷೇಧಿಸಲ್ಪಟ್ಟ ಕಾಲದಲ್ಲಿ ದಲಿತನೊಬ್ಬ ಸಂಸ್ಕೃತ ಭಾಷಾ ಪಾಂಡಿತ್ಯ ಹೊಂದಲು ಸಾಧ್ಯವಿತ್ತಾ? ದಲಿತರನ್ನು ಮುಟ್ಟಿದರೆ ಪಾಪ ಸುತ್ತಿಕೊಳ್ಳುತ್ತದೆ ಎನ್ನುವ ಕಾಲದಲ್ಲಿ ಯಾವ ಬ್ರಾಹ್ಮಣ ತಾನೇ ಬೇಡನಿಗೆ ವಿದ್ಯೆ ಹೇಳಿಕೊಡಲು ಸಾಧ್ಯ? ಕೇವಲ ಮಂತ್ರಗಳನ್ನು ಕಲಿತು ತಪಸ್ಸಿಗೆ ಕುಳಿತ ಶೂದ್ರ ಸಮುದಾಯದ ಶಂಭೂಕನನ್ನು ರಾಮನ ಕೈಯಿಂದಲೇ ಹತ್ಯೆ ಮಾಡಿಸಿದ ದ್ವಿಜರ ಪ್ರಾಬಲ್ಯದ ಕಾಲಘಟ್ಟದಲ್ಲಿ ದಲಿತನೊಬ್ಬ ಸಂಸ್ಕೃತ  ಕಲಿತು ಕಾವ್ಯರಚನೆ ಮಾಡಿದ್ದನ್ನು ನಂಬುವುದು ನಂಬಿಸಿದಷ್ಟು ಸುಲಭದ ಸಂಗತಿಯಲ್ಲ.

ಆಯ್ತು. ವಾಲ್ಮೀಕಿಯ ಸುತ್ತ ಕಟ್ಟಲ್ಪಟ್ಟ  ಕಥೆಗಳ ಆಚೆ ನಿಂತು ಯೋಚಿಸಿದರೂ, ದಲಿತ ಸಮುದಾಯದ ವ್ಯಕ್ತಿಯೊಬ್ಬ ಏಕಲವ್ಯನಂತೆ ಹೇಗೋ ವಿದ್ಯೆ ಕಲಿತು ತನ್ನ ಸ್ವ ಸಾಮರ್ಥ್ಯ ಹಾಗೂ ಅಸಾಧ್ಯ ಪ್ರತಿಭೆ ಪರಿಶ್ರಮದ ಮೂಲಕ ಕಾವ್ಯ ರಚನೆ ಮಾಡಿದ ಎಂದು ನಂಬಬಹುದಾದರೂ, ಅದಕ್ಕೆ ನಾರದರ ಉಪದೇಶ, ಈ ಮಂತ್ರ, ಆ ತಪಸ್ಸು ಎಂದೆಲ್ಲಾ ವೈದಿಕಾಚರಣೆಗಳನ್ನು ಆರೋಪಿಸುವುದಾದರೂ ಯಾಕೆ? ಯಾಕೆಂದರೆ ಶೂದ್ರ ದಲಿತ ಸಮುದಾಯದವರು ಎಂದೂ ಇಂತಹ ಸಾಧನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಬ್ರಾಹ್ಮಣರ ಮಾರ್ಗದರ್ಶನ, ಮಂತ್ರಗಳ ಸಹಾಯ ಹಾಗೂ ತಪಸ್ಸಿನಂತಹ ಪರಿಶ್ರಮಗಳು ಇರಲೇಬೇಕು ಎನ್ನುವ ವೈದಿಕಶಾಹಿ ಹುಟ್ಟು ಹಾಕಿರುವ ಸಂಕಥನಗಳು ಕಾರಣವಾಗಿವೆ.

ವಾಲ್ಮೀಕಿ ನಿಜವಾಗಿಯೂ ದಲಿತ ಸಮುದಾಯದ ಅರಣ್ಯವಾಸಿ ಬೇಡನೇ ಅಗಿದ್ದರೆ ಬ್ರಾಹ್ಮಣೇತರರಿಗೆ ನಿಷಿದ್ಧವಾದ ಸಂಸ್ಕೃತ ಕಲಿತು ರಾಮಾಯಣದಂತಹ ಮಹಾಕಾವ್ಯ ರಚಿಸಿದ ಎನ್ನುವ ಪ್ರಸಂಗವೇ ಕಟ್ಟುಕತೆ. ಅದೂ ಕೇವಲ ರಾಮ ಮಂತ್ರ ಜಪದಿಂದ ಇದೆಲ್ಲಾ ಸಾಧ್ಯವಾಯ್ತು ಎನ್ನುವುದಂತೂ ಅವಾಸ್ತವಿಕ. ರಾಮನಾಮವನ್ನೇ ಜಪಿಸಿ ಉಸಿರಾಡುತ್ತಿದ್ದ ವಿಪ್ರ ಕುಲ ಸಂಜಾತರಿಗೆ ಆಗದಂತಹ ಕೃತಿ ರಚನೆ ಬೇಡನಿಂದ ಸಾಧ್ಯವಾಯ್ತು ಎನ್ನುವುದು ನಂಬಲಾಗದ ಸುಳ್ಳು. ಇಡೀ ರಾಮಾಯಣದಲ್ಲಿ ಎಲ್ಲಿಯೂ ವಾಲ್ಮೀಕಿ ತನ್ನ ಬೇಡಕುಲದ ಹಿನ್ನೆಲೆಯನ್ನು ಪ್ರಸ್ತಾಪಿಸಿಲ್ಲ. ಮಂತ್ರ ತಪಸ್ಸಿನಿಂದ ಇದೆಲ್ಲಾ ಸಾಧ್ಯವಾಯ್ತು ಎಂದು ಹೇಳಿಲ್ಲ. ಇದೆಲ್ಲಾ ರಾಮಾಯಣದ ಕರ್ತೃವಿನ ಸುತ್ತ ಮನುವಾದಿಗಳು ಕಟ್ಟಿದ ಮಿಥ್ಯಾ ಪುರಾಣಗಳಷ್ಟೇ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.

ಯಾರೋ ಒಬ್ಬ ಋಷಿ, ಬ್ರಾಹ್ಮಣ, ಪುರೋಹಿತ ರಾಮಾಯಣ ರಚಿಸಿದ ಎಂದರೆ ಮುಂದಿನ ತಲೆಮಾರಿನ ಅಬ್ರಾಹ್ಮಣರಿಗೆ ಆ ಕೃತಿಯ ಕುರಿತು ಅಂತಹ ಆಸಕ್ತಿ ಬರುವುದು ಸಾಧ್ಯವಿರುತ್ತಿರಲಿಲ್ಲ. ಬ್ರಾಹ್ಮಣರು ಹೇಳಿದ್ದನ್ನು ಶೂದ್ರ ಸಮುದಾಯ ಅನುಮಾನದಿಂದಲೇ ನೋಡಬಹುದಾಗಿತ್ತು. ರಾಮಾಯಣವನ್ನು ಕೇವಲ ಕಥೆಯನ್ನಾಗಿ ನಿರೂಪಿಸಿದ್ದರೆ ಅದು ಇನ್ನೊಂದು ವೈದಿಕ ಪುರಾಣವಾಗುತ್ತಿತ್ತು. ಆದರೆ ಆಗಿನ ಮನುವಾದಿ ವೈದಿಕರಿಗೆ ಬಹುಸಂಖ್ಯಾತ ಶೂದ್ರ ಸಮುದಾಯವನ್ನು ನಿಯಂತ್ರಿಸಲು ದೇವರೊಂದರ ಅಗತ್ಯವಿತ್ತು. ಆಗಲೇ ಜನಮಾನಸದಲ್ಲಿ ಮೌಖಿಕವಾಗಿ ಹರಿದಾಡುತ್ತಿದ್ದ ರಾಮಾಯಣದ ಘಟನೆಗಳಿಗೆ ಪೌರಾಣಿಕ ರೂಪ ಕೊಟ್ಟು ಆರಾಧನಾ ಗ್ರಂಥವನ್ನಾಗಿ ಮಾಡಬೇಕಿತ್ತು. ಹೀಗಾಗಿ ತಮ್ಮ ವೈದಿಕ ಆಶಯಗಳಿಗೆ ತಕ್ಕಂತೆ, ಮನುವಾದಿ ವರ್ಣಾಶ್ರಮದ ಬೇರನ್ನು ಗಟ್ಟಿಗೊಳಿಸುವಂತೆ ರಾಮಾಯಣವನ್ನು ರಚಿಸಲಾಯ್ತು ಎಂಬುದು ನಂಬಿಕೆಗೆ ಹತ್ತಿರವಾಗಬಹುದಾದ ಸತ್ಯ.

ವಿಪ್ರರೇ ಮಹಾಕಾವ್ಯ ರಚಿಸಿ ಬ್ರಾಹ್ಮಣ ಸಂಜಾತ ವಾಲ್ಮೀಕಿ ಋಷಿಯ ಹೆಸರನ್ನು ಪ್ರಚಾರ ಪಡಿಸಬಹುದಾಗಿತ್ತು. ಆದರೆ ಶತಶತಮಾನಗಳ ಕಾಲ ಮನುಕುಲವನ್ನು ನಂಬಿಸಬೇಕಾದರೆ ಶೂದ್ರನೊಬ್ಬನ ಹೆಸರಲ್ಲಿ ಇಂತಹ ಮನುವಾದಿ ಕೃತಿಯನ್ನು ರಚಿಸುವುದು ಅಗತ್ಯವಾಗಿತ್ತು. ಬ್ರಾಹ್ಮಣ ಸಂಜಾತರಿಗಿಂತಾ ತಮ್ಮದೇ ಕುಲದ ವ್ಯಕ್ತಿ ರಚಿಸಿದ ಆರಾಧನಾ ಗ್ರಂಥವನ್ನು ಶೂದ್ರ ಜನಾಂಗ ಅಕ್ಕರೆಯಿಂದ ಆದರಿಸಿ ಆರಾಧಿಸುತ್ತದೆ ಎನ್ನುವ ವಿಶ್ವಾಸ ಆಗಿನ ವೈದಿಕಶಾಹಿಗಳದ್ದಾಗಿತ್ತು. ಹೀಗಾಗಿ ರಾಮಾಯಣದ ಕರ್ತೃ ವಾಲ್ಮೀಕಿಯ ಜೊತೆಗೆ ಪರಿವರ್ತನೆಗೊಂಡ ಬೇಡನ ಕಥೆಯನ್ನು ಸೃಷ್ಟಿಸಲಾಯಿತು. ಜೊತೆಗೆ ನಾರದನಂತಹ ಬ್ರಾಹ್ಮಣರ ಉಪದೇಶ, ಮಂತ್ರ, ತಪಸ್ಸುಗಳೇ ಬೇಡನೊಬ್ಬ ವಾಲ್ಮೀಕಿಯಾಗಲು ಕಾರಣ ಎಂದೂ ಕಥೆ ಕಟ್ಟಿ ಜನರನ್ನು ನಂಬಿಸಲಾಯ್ತು.

ವಾಲ್ಮೀಕಿ ಬೇಡನಲ್ಲಾ ಒಬ್ಬ ವೈದಿಕ ಋಷಿ ಎನ್ನುವುದರ ಕುರುಹು ರಾಮಾಯಣದ ಶ್ಲೋಕವೊಂದರಲ್ಲಿದೆ. ವಾಲ್ಮೀಕಿ ಆಶ್ರಮಕ್ಕೆ ಬಂದ ರಾಮನಿಗೆ ವಾಲ್ಮೀಕಿ ಹೇಳುವ ಶ್ಲೋಕ ಹೀಗಿದೆ.

‘ಪ್ರಚೇತಸಃ ಅಹಂ ದಶಮಃ ಪುತ್ರೋ ರಾಘವ ನಂದನ

ನ ಸ್ಮರಾಮಿ ಅನೃತಂ ವಾಕ್ಯಂ ಇಮೌ ತು ತವ ಪುತ್ರಕೌ.”

ಅಂದರೆ  “ನಾನು ಪ್ರಚೇತಸನ ಹತ್ತನೆಯ ಮಗನೆಂದು ತಿಳಿ. ನನಗೆ ನೆನಪಿರುವಂತೆ ನಾನು ಎಂದೂ ಸುಳ್ಳನ್ನು ಆಡಿದವನಲ್ಲ. ಇವರು ನಿನ್ನ ಪುತ್ರರು.” (ಉತ್ತರಕಾಂಡ, ಸರ್ಗ 69 ಶ್ಲೋಕ 19)

ಹಾಗಾದರೆ ಈ ಪ್ರಚೇತಸ ಯಾರು? ಪ್ರಚೇತಸನ  ಹತ್ತನೇ ಮಗ ತಾನೆಂದು ವಾಲ್ಮೀಕಿ ಹೇಳಿದಾಗ ಬೇಡಕುಲದವ ಹೇಗಾದಾನು. ಪ್ರಚೇತಸ ಎನ್ನುವ ಹೆಸರೇ ಆರ್ಯಕುಲ ಸಂಜಾತರವರದ್ದಾಗಿದೆ. ಪ್ರಚೇತಸನು ಮನುವಿನ ಮಗ ಎಂದು ವೈದಿಕ ಪುರಾಣಗಳಲ್ಲಿ ದಾಖಲಾಗಿದೆ. ಮನು ಬ್ರಾಹ್ಮಣ ಕುಲ ತಿಲೋತ್ತಮ. ಹೀಗಾಗಿ ವಾಲ್ಮೀಕಿ ಬೇಡನಾಗಿದ್ದ ಎಂದು ವೈದಿಕಶಾಹಿ ಹುಟ್ಟುಹಾಕಿದ ಸಂಕಥನಗಳೇ ಸುಳ್ಳಾಗಿವೆ ಎಂಬ ಅನುಮಾನ ಕಾಡದೇ ಇರದು. ಅಬ್ರಾಹ್ಮಣನಾದ ಬೇಡನೇ ರಾಮಾಯಣ ರಚಿಸಿದ್ದರೆ ಶೂದ್ರ ಶಂಭೂಕ ವಧೆ ಪ್ರಕರಣ ರಾಮಾಯಣದಲ್ಲಿ ಬರುತ್ತಲೇ ಇರಲಿಲ್ಲ. ತಪಸ್ಸಿಗೆ ಕುಳಿತ ತನ್ನದೇ ಕುಲದ ಶೂದ್ರ ವ್ಯಕ್ತಿಯನ್ನು ರಾಮನ ಮೂಲಕ ಸಂಹಾರ ಮಾಡಲಾಯ್ತು ಎನ್ನುವ ಮನುವಾದಿ ವರ್ಣಾಶ್ರಮ ಸಿದ್ಧಾಂತದ ಪ್ರತಿಪಾದನೆ ಮನುವಾದಿ ವೈದಿಕರಿಂದ ಮಾತ್ರ ಬರಲು ಸಾಧ್ಯವೇ ಹೊರತು ಶೂದ್ರ ಬೇಡನಿಂದಲ್ಲ.

ಹೀಗಾಗಿ ಏನೇ ಜಿಜ್ಞಾಸೆ ಮಾಡಿದರೂ, ಯಾವುದೇ ರೀತಿಯ ತರ್ಕಕ್ಕೆ ಅಳವಡಿಸಿದರೂ ವಾಲ್ಮೀಕಿ ಒಬ್ಬ ಸಂಸ್ಕೃತ ಬಲ್ಲ, ಮನುವಾದದ ಪ್ರತಿಪಾದಕ ಋಷಿಯೇ ಹೊರತು ಅನಕ್ಷರಸ್ಥ ಬೇಡ ಕುಲದವನಾಗಿರಲು ಸಾಧ್ಯವೇ ಇಲ್ಲಾ. ಆದರೂ ಬೇಡ ವಾಲ್ಮೀಕಿಯೇ ರಾಮಾಯಣದ ಕರ್ತೃ ಎಂದು ವೈದಿಕಶಾಹಿ ಆರ್ಯಕುಲದವರು ಪ್ರಚಾರ ಮಾಡುತ್ತಾ ದಲಿತ ಕವಿಯ ಹೆಸರಲ್ಲಿ ಮನುವಾದಿ ಮೌಲ್ಯಗಳನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಬಿತ್ತುತ್ತಲೇ ಇದ್ದಾರೆ.

ಕೆಳ ತಳ ಸಮುದಾಯಗಳಿಗೆ ಒಂದು ಅಸ್ಮಿತೆ ಬೇಕೆಂದರೆ ತಮ್ಮ ಕುಲದ ಸಾಧಕರನ್ನೇ ಆರಾಧ್ಯದೈವ ವಾಗಿಸುತ್ತಾರೆ. ಹೇಗೆ ವೃತ್ತಿಯಾಧಾರಿತವಾಗಿ ಶಿವಶರಣರನ್ನು ಜಾತಿಯಾಧಾರಿತ ಸಾಂಸ್ಕೃತಿಕ ನಾಯಕರನ್ನಾಗಿ ಮಾಡಲಾಯಿತೋ ಹಾಗೆಯೇ ವಾಲ್ಮೀಕಿ ಬೇಡ ಎನ್ನುವ ನಂಬಿಕೆಯನ್ನೇ ಆಧರಿಸಿ ಬೇಟೆಯಾಡಿ ಬದುಕುತ್ತಿದ್ದ ಬೇಡ ಸಮಾಜ ವಾಲ್ಮೀಕಿಯನ್ನು ತಮ್ಮ ಕುಲದ ಅಸ್ಮಿತೆಯನ್ನಾಗಿ ಸ್ವೀಕರಿಸಿ ಆರಾಧಿಸತೊಡಗಿತು. ರಾಮನನ್ನು ಅಜರಾಮರಗೊಳಿಸಲು, ರಾಮಾಯಣದ ವರ್ಣಾಶ್ರಮ ಮೌಲ್ಯಗಳನ್ನು ಕಾಪಾಡಿಕೊಳ್ಳಲು, ಶೂದ್ರ ದಲಿತರನ್ನು ನಿಯಂತ್ರಿಸಲು ವೈದಿಕಶಾಹಿ ಬೇಡ ಸಮುದಾಯದ ಐಕಾನ್ ಎಂಬಂತೆ ವಾಲ್ಮೀಕಿಯನ್ನು ಬಿಂಬಿಸತೊಡಗಿತು. ಅದಕ್ಕಾಗಿಯೇ ವಾಲ್ಮೀಕಿ ಜಯಂತಿಯನ್ನು ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ. ವಾಲ್ಮೀಕಿ ಹೆಸರನ್ನು ಹೆಚ್ಚು ಪ್ರಚಲಿತಗೊಳಿಸುತ್ತಾ ಬ್ರಾಹ್ಮಣೇತರ ಸಮುದಾಯವನ್ನು ರಾಮಾಯಣದ ಮೂಲಕ ಮನುವಾದಿ ಸಿದ್ಧಾಂತಕ್ಕೆ ಬದ್ದರಾಗುವಂತೆ ನೋಡಿಕೊಳ್ಳುವ ಹುನ್ನಾರ ಪುರೋಹಿತಶಾಹಿ ಸಿದ್ಧಾಂತದ ಸನಾತನವಾದಿ ಸಂಘಿಗಳದ್ದಾಗಿದೆ.

ವೈದಿಕಾಚರಣೆಯ ನಂಬಿಕೆಗಳು  ಈಗಲೂ ಬಹುಸಂಖ್ಯಾತ ಕೆಳ ತಳ ಶೂದ್ರ ಸಮುದಾಯಗಳ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದರೆ ಅದಕ್ಕೆ ರಾಮಾಯಣ ಮಹಾಭಾರತದಂತಹ ಪುರಾಣಗಳೇ ಕಾರಣವಾಗಿವೆ. ಆರ್ಯ ಸಂಸ್ಕೃತಿ ಶೂದ್ರ ಸಂಸ್ಕೃತಿಯ ಮೇಲೆ ನಿಯಂತ್ರಣ ಹೊಂದಿರುವುದಕ್ಕೂ ಇದೇ ವೈದಿಕರು ಕಟ್ಟಿದ ಪುರಾಣ ಪುಣ್ಯಕಥೆಗಳೇ ಪ್ರೇರಣೆಯಾಗಿವೆ. ಪುರಾಣಗಳನ್ನೇ ಇತಿಹಾಸ ಎಂದು ನಂಬಿಸುವ, ಮಹಾಕಾವ್ಯಗಳನ್ನು ಚರಿತ್ರೆಯೆಂದು ಬಿಂಬಿಸುವ ಹಾಗೂ ಈ ಮಹಾಕಾವ್ಯ ಪುರಾಣಗಳ ಮೂಲಕ ಬ್ರಹ್ಮನ ತಲೆಯಿಂದ ಹುಟ್ಟಿದವರು ಪಾದದಿಂದ ಜನಿಸಿದವರ ಮೇಲೆ ಹಿಡಿತ ಹೊಂದುವ ಪ್ರಯತ್ನ ಕಾಲಕಾಲಕ್ಕೆ ಜಾರಿಯಲ್ಲಿದೆ. ಜಾರಿಯಲ್ಲಿರುತ್ತದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ರಂಗಕರ್ಮಿ

ಇದನ್ನೂ ಓದಿ- ಮಹರ್ಷಿ ವಾಲ್ಮೀಕಿ ಎಲ್ಲ ಬುಡಕಟ್ಟುಗಳ ಐಕಾನ್‌ ಆಗಬಲ್ಲರೇ?

More articles

Latest article