ಖ್ಯಾತಿಯಲ್ಲಿ ಕಳೆದು ಹೋಗದಿರಲಿ ಮೊನಾಲಿಸಾ

Most read

ಮೊನಾಲಿಸಾ ಫೇಮಸ್ ಆಗುತ್ತಿದ್ದಂತೆ  ಇನ್ಸ್ಟಾಗ್ರಾಮ್ ನಲ್ಲಿ ಅವಳದಲ್ಲದ ಸಾಕಷ್ಟು ಹೊಸ ಹೊಸ  ಫೇಕ್ ಅಕೌಂಟುಗಳು ಜನ್ಮ  ತಾಳಿವೆ. ನಿನ್ನೆ ಮೊನ್ನೆ ಯಾವುದೋ ಹೆಸರಿನಲ್ಲಿದ್ದ ಅಕೌಂಟುಗಳು ಈಗ ಮೊನಾಲಿಸಾಳ ಹೆಸರು ಬದಲಿಸಿ ಫೋಟೋ ಹಾಕಿ ಲಕ್ಷಾಂತರ  ಮಂದಿ ಫಾಲೋವರ್ಸ್‌ಗಳನ್ನೂ ಮಾಡಿಕೊಂಡಿದ್ದಾರೆ. ಒಂದು ಅಕೌಂಟಿನಲ್ಲಿ 9,40,೦೦೦ ಕ್ಕೂ ಅಧಿಕ ಮಂದಿ ಈಕೆಯನ್ನು ಫಾಲೋ ಮಾಡುತ್ತಿದ್ದಾರೆ! – ರಾಹುಲ್‌ ಆರ್‌ ಸುವರ್ಣ, ಪತ್ರಿಕೋದ್ಯಮ ವಿದ್ಯಾರ್ಥಿ.

ಕುಂಭ ಮೇಳ ಆರಂಭವಾಗಿ ಕೆಲವು ದಿನಗಳಾಗಿವೆ. ಈ ನಡುವೆ ಹಲವಾರು ಮಂದಿ ನಾಗಸಾಧುಗಳ ಹಿಂದಿನ ಕಥೆ ಸಾಮಾಜಿಕ ಜಾಲತಾಣದಲ್ಲಿ  ಹೊರ ಪ್ರಪಂಚಕ್ಕೆ ಬಯಲಾಗಿದೆ. ಅದರ ಜೊತೆಗೆ  ಮೊನಾಲಿಸಾ ಎಂಬ ರುದ್ರಾಕ್ಷಿ, ಮುತ್ತಿನ ಸರ ಮಾರುವ  ಹುಡುಗಿಯೊಬ್ಬಳು  ಇದೀಗ ಇನ್ಸ್ಟಾಗ್ರಾಮ್, ಯುಟ್ಯೂಬ್ ನ ಮೂಲಕ  ಏನೂ ಮಾಡದೆಯೇ ತನ್ನ ಕಣ್ಣಿನ ಚೆಲುವೊಂದರಿಂದಲೇ ದಿನ ಕಳೆಯುವುದರೊಳಗೆ ಅಪರಿಮಿತ ಅಭಿಮಾನಿಗಳನ್ನು ಕಣ್ಣಿನಲ್ಲಿ ಕಟ್ಟಿಹಾಕಿದ್ದಾಳೆ. 

ಈಕೆಯ ಫೋಟೋ, ವಿಡಿಯೋವನ್ನು ಮೊದಲು ವೈರಲ್ ಮಾಡಿದ್ದು ಶಿವು ಎಂಬ ಯುಟ್ಯೂಬರ್ . ಈ ನೀಲಿ ಕಣ್ಣಿನ ಸುಂದರಿಯ ಪೂರ್ಣ ಹೆಸರು ಮೊನಾಲಿಸಾ ಬೋಸ್ಲೆ. ಈಕೆ ಬಂಜಾರ ಜನಾಂಗಕ್ಕೆ ಸೇರಿದವಳಾಗಿದ್ದು, ರುದ್ರಾಕ್ಷಿ, ಮುತ್ತಿನಸರ, ಮಣಿಮಾಲೆ ಮಾರುವುದು ಈಕೆ ಮತ್ತು ಈಕೆಯ ಕುಟುಂಬದವರ ಕುಲ ಕಸುಬಾಗಿದೆ. ಕಣ್ಣಿಗೆ ಕಾಡಿಗೆ, ಹಣೆಯಲ್ಲೊಂದು ಸಣ್ಣ ಬೊಟ್ಟು, ಕೊರಳಿನಲ್ಲಿ ನಾಲ್ಕೈದು ಮಣಿ ಮಾಲೆ ಧರಿಸಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ  ಕುಂಭ ಮೇಳದಲ್ಲಿ ಎಲ್ಲರನ್ನು ತನ್ನ ಕಣ್ಣು ಮತ್ತು ನಗುವಿನಿಂದಲೇ  ಆಕರ್ಷಿಸುತ್ತಿದ್ದಾಳೆ. ಮೂಲತಃ ಇಂಧೋರಿನ ಹತ್ತಿರದ ಮಹೇಶ್ವರದವಳಾದ ಈಕೆ, ಎಲ್ಲೇ ಜಾತ್ರೆ ನಡೆದರೂ ತನ್ನ ಮಣಿ ಮಾಲೆಗಳನ್ನು ಕೈಗೆ ಸಿಗಿಸಿ ಕುಟುಂಬಸ್ಥರೊಂದಿಗೆ ಹಾಜರಿರುತ್ತಾಳೆ. 

ಮೊನಾಲಿಸಾ ಫೇಮಸ್ ಆಗುತ್ತಿದ್ದಂತೆ  ಇನ್ಸ್ಟಾಗ್ರಾಮ್ ನಲ್ಲಿ ಅವಳದಲ್ಲದ ಸಾಕಷ್ಟು ಹೊಸ ಹೊಸ  ಫೇಕ್ ಅಕೌಂಟುಗಳು ಜನ್ಮ  ತಾಳಿವೆ.ಎಲ್ಲಿಯವರೆಗೆಂದರೆ ನಿನ್ನೆ ಮೊನ್ನೆ ಯಾವುದೋ ಹೆಸರಿನಲ್ಲಿದ್ದ ಅಕೌಂಟುಗಳು ಈಗ ಮೊನಾಲಿಸಾಳ ಹೆಸರು ಬದಲಿಸಿ ಫೋಟೋ ಹಾಕಿ ಲಕ್ಷಾಂತರ  ಮಂದಿ ಫಾಲೋವರ್ಸ್‌ಗಳನ್ನೂ ಮಾಡಿಕೊಂಡಿದ್ದಾರೆ. ಇಂತ ಅಕೌಂಟ್ ಮಾಡಿದವರಿಂದ ಬಾಕಿಯವರ ಹೆಸರು ಬದಲಿಸಲು ಸಾಧ್ಯವೇ ಹೊರತು ಅವರ ಬದುಕನ್ನು ಅವರು ಬದಲಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಈಗ ಇರುವ ಹಲವಾರು ಅಕೌಂಟುಗಳಲ್ಲಿ, ಒಂದರಲ್ಲಿ 9,40,೦೦೦ ಸಾವಿರಕ್ಕೂ ಅಧಿಕ ಮಂದಿ ಈಕೆಯನ್ನು ಫಾಲೋ ಮಾಡುತ್ತಿದ್ದಾರೆ.

ಎಲ್ಲರಿಗೂ ಅವರವರ ಸೌಂದರ್ಯ ವರವಾದರೆ ಈಕೆಗೆ ಮಾತ್ರ ಒಂದು ರೀತಿಯಲ್ಲಿ  ಅದು ಶಾಪವಾಗಿ ಕಾಡುತ್ತಿದೆ. ಕುಂಭ ಮೇಳದಲ್ಲಿ ಎಲ್ಲೇ  ಮಣಿ ಮಾಲೆಗಳನ್ನು ಮಾರುವುದಕ್ಕೆ ಜನರ ಬಳಿ ಹೋದರೂ, ಅವರು ಇವಳ ಸೆಲ್ಫಿ, ವಿಡಿಯೋ ತೆಗೆದುಕೊಳ್ಳುತ್ತಾರೆ ಬಿಟ್ಟರೆ ಇವಳ  ಮಣಿ ಸರಗಳನ್ನು ಯಾರೂ  ಖರೀದಿ ಮಾಡುತ್ತಿಲ್ಲ. ಹಾಗಾಗಿ ಈಕೆ  ” ನೀವು ನನ್ನಿಂದ ಸೆಲ್ಫಿ ತೆಗೆದುಕೊಳ್ಳುವುದರಿಂದ ನನ್ನ  ಹೊಟ್ಟೆ ತುಂಬುವುದಿಲ್ಲ ” ಎಂದು ವಿಡಿಯೋ ಸೆಲ್ಫಿ ತೆಗೆದು ಕೊಳ್ಳಲು ಬಂದಂತ ಒಂದಷ್ಟು ಮಂದಿಗೆ ಹೇಳಿಬಿಟ್ಟಿದ್ದಾಳೆ. 

ಸಿನಿಮಾ ಆಫರ್ 

ಮೊನಾಲಿಸಾ ಕುಂಭ ಮೇಳಕ್ಕೆ ಬರುವುದಕ್ಕೂ ಮುನ್ನವೇ ಸಿನಿಮಾ ಆಫರ್ ಬಂದಿತ್ತಾದರೂ, ಈಕೆ ಸಣ್ಣ ಪ್ರಾಯದವಳಾಗಿದ್ದರಿಂದ ಬಣ್ಣ ಹಚ್ಚುವುದಕ್ಕೆ ಮನಸ್ಸು ಮಾಡಿರಲಿಲ್ಲ. ಇದೀಗ ಕುಂಭ ಮೇಳಕ್ಕೆ ಬಂದು ಸುದ್ದಿಯಲ್ಲಿರುವ ಈಕೆಗೆ ಸನೋಜ್ ಮಿಶ್ರ ನಿರ್ದೇಶನದ “ಡೈರಿ ಆಫ್ ಮಣಿಪುರ್” ನಿಂದ ಮತ್ತೆ ಸಿನಿಮಾ  ಆಫರ್ ಬಂದಿದೆ ಎನ್ನುವ ಮಾಹಿತಿಯಿದೆ.

ಮನೆಯ ದಾರಿ ಹಿಡಿದಳಾ ಮೋನಾಲಿಸಾ …?

ಸಾಕಷ್ಟು ಮಂದಿ ಮಾಧ್ಯಮದವರು ಮತ್ತು ಅಲ್ಲಿನ ಪುಂಡರು ಆಕೆಯ ಫೋಟೋ ಕ್ಲಿಕ್ಕಿಸುವುದಕ್ಕೆ ಮುಗಿ ಬೀಳುತ್ತಿರುವುದು ಮತ್ತು ಕೆಲವರು ಈಕೆಯ ಟೆಂಟ್ ಒಳಗೆ ನುಗ್ಗಿ ರಂಪ ಮಾಡುವುದನ್ನು ಕಂಡ ಮೊನಾಲಿಸಾ ತಂದೆ ಈಕೆಯನ್ನು ಕುಂಭ ಮೇಳದಿಂದ ಮನೆಗೆ ಕಳುಹಿಸಿದ್ದಾರೆ ಎನ್ನುವ ಮಾಹಿತಿಯಿದೆ. 

ಒಟ್ಟಾರೆಯಾಗಿ 2024ರಲ್ಲಿ  ರಾತ್ರೋ ರಾತ್ರಿ ಸುದ್ದಿಗೆ ಬಂದು ಮರು ದಿನ ಕಾಣೆಯಾದವರು ಒಂದಷ್ಟು ಮಂದಿಯಿದ್ದಾರೆ. ಅವರನ್ನು ಮಾಧ್ಯಮ, ಟಿ ವಿ ಚಾನೆಲ್ ಗಳು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು, ಅವರಿಗೆ ಚೂರೋ ಪಾರೋ ಕೊಟ್ಟು ಖುಷಿ ಪಡಿಸಿ ತಮ್ಮ ಬೊಕ್ಕಸ ಭರ್ತಿ ಮಾಡಿಕೊಳ್ಳುತ್ತವೆ. ಮತ್ತು ಒಂದಷ್ಟು ಸಮಯ ಕಳೆದ ಬಳಿಕ ಅವರ ಸುಳಿವೇ ಸಿಗುವುದಿಲ್ಲ. ಇಂತವರ ಸಾಲಿಗೆ ಈ ಹೆಣ್ಣು ಮಗಳು  ಸಿಲುಕದಿರಲಿ. ಆಕೆಯ ಭವಿಷ್ಯ ಉಜ್ವಲವಾಗಲಿ.

ರಾಹುಲ್ ಆರ್. ಸುವರ್ಣ 

ಪತ್ರಿಕೋದ್ಯಮ ವಿಭಾಗ 

ಆಳ್ವಾಸ್ ಕಾಲೇಜು ಮೂಡುಬಿದಿರೆ

ಇದನ್ನೂ ಓದಿ- ಅಂದು ಆ ಮೊನಾಲಿಸಾ ಇಂದು ಈ ಮೊನಾಲಿಸಾ ….






More articles

Latest article