ಟಿವಿ ಚರ್ಚೆಗಳಲ್ಲಿ ಬಿಜೆಪಿ ಬಲೆಗೆ ಬೀಳಬೇಡಿ; ಪಕ್ಷವನ್ನು ಬಲವಾಗಿ ಸಮರ್ಥಿಸಿ: ವಕ್ತಾರರಿಗೆ ರಾಹುಲ್ ಗಾಂಧಿ ಕರೆ

Most read

ನವದೆಹಲಿ: ಟಿ.ವಿ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಬಿಜೆಪಿಯವರ ಬಣ್ಣ ಬಯಲು ಮಾಡಿಬೇಕೇ ಹೊರತು ಅವರ ಬಲೆಗೆ ಬೀಳಬಾರದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ವಕ್ತಾರರಿಗೆ ಕಿವಿಮಾತು ಹೇಳಿದ್ದಾರೆ. ಪಕ್ಷದ ಅಭಿಪ್ರಾಯಗಳನ್ನು ಆಕ್ರಮಣಕಾರಿಯಾಗಿ ಮಂಡಿಸುವಂತೆಯೂ ಸಲಹೆ ನೀಡಿದ್ದಾರೆ.

ನವದೆಹಲಿಯ ಇಂದಿರಾ ಭವನದಲ್ಲಿ ಆಯೋಜಿಸಲಾಗಿದ್ದ ಪಕ್ಷದ ವಕ್ತಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದು ಜಾತಿ ಜನಗಣತಿ ನಡೆಸಲು ಒಪ್ಪಿಗೆ ಸೂಚಿಸಿದೆ. ಇದರ ಲಾಭ ಸಂಪೂರ್ಣವಾಗಿ ಕಾಂಗ್ರೆಸ್ಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ವಕ್ತಾರರಿಗೆ ಕರೆ ನೀಡಿದ್ದಾರೆ.

ಟಿ.ವಿಗಳಲ್ಲಿ ನಡೆಯುವ ಚರ್ಚೆಗಳು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಕೆಲವು ಕಾರ್ಯಕ್ರಮಗಳನ್ನು ಬಿಜೆಪಿಗೆ ಅನುಕೂಲವಾಗಲೆಂದೇ ಸಿದ್ಧಪಡಿಸಲಾಗಿರುತ್ತದೆ. ಜತೆಗೆ, ಚರ್ಚೆಯ ಸಮಯದಲ್ಲಿ ಬಿಜೆಪಿ ಪರವಾದ ಪತ್ರಕರ್ತರು ಅಥವಾ ವಿಶ್ಲೇಷಕರೇ ಇರುತ್ತಾರೆ. ಆದರೆ, ಇಂತಹ ಸಂದರ್ಭಗಳಲ್ಲಿ ನಮ್ಮ ಪಕ್ಷದ ವಕ್ತಾರರು ವಿಚಲಿತರಾಗಬೇಕಿಲ್ಲ. ಧೈರ್ಯವಾಗಿ ಬಿಜೆಪಿಯನ್ನು ಎದುರಿಸಿ ಮತ್ತು ಪಕ್ಷವನ್ನು ಸಮರ್ಥಿಸಿ ಎಂದು ಧೈರ್ಯ ತುಂಬಿದ್ದಾರೆ.

ನಾವು ಬಿಜೆಪಿಯವರಿಗಿಂತ ಭಿನ್ನವಾಗಿ ನಿಲುವು ಹೊಂದಿದ್ದೇವೆ. ಏಕೆಂದರೆ, ನಮಗೆ ಸತ್ಯ ಮತ್ತು ಇತಿಹಾಸದ ಬಗ್ಗೆ ಅರಿವಿದೆ. ಇದೇ ವಿಚಾರವನ್ನು ಎಲ್ಲಾ ಸಂದರ್ಭಗಳಲ್ಲೂ ಅನುಸರಿಸಬೇಕು. ಒಮ್ಮೊಮ್ಮೆ ನೀವು ಕಡಿಮೆ ಜ್ಞಾನವುಳ್ಳ ನಾಯಕರೊಂದಿಗೆ ಚರ್ಚೆ ನಡೆಸಬೇಕಾಗುತ್ತದೆ. ಆದರೆ, ನೀವು ಅವರ ಮಟ್ಟಕ್ಕೆ ಇಳಿಯುವ ಅಗತ್ಯವಿಲ್ಲ. ಬದಲಾಗಿ ಪಕ್ಷದ ನಿಲುವನ್ನು ಬಲವಾಗಿ ಮಂಡಿಸಬೇಕು. ಕೆಲವೊಮ್ಮೆ ದೊಡ್ಡ ಗೆಲುವು ಸಾಧಿಸಬೇಕಾದರೆ ಕೆಲವು ವೈಯಕ್ತಿಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದೂ ರಾಹುಲ್ ಕಿವಿಮಾತು ಹೇಳಿದ್ದಾರೆ.

More articles

Latest article