ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಇಂದು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಮೆರಿಕದ ಕಾಲಮಾನದ ಪ್ರಕಾರ ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10.30ಕ್ಕೆ) ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಭವ್ಯ ಸಮಾರಂಭದಲ್ಲಿ ಭಾಗವಹಿಸಲು ಮುಂಜಾನೆಯಿಂದಲೇ ಸಾರ್ವಜನಿಕರು ಕಿಕ್ಕಿರಿದು ಸೇರುತ್ತಿದ್ದಾರೆ. ಭಾರತ ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಟ್ರಂಪ್ ಬೇರೆ ದೇಶಗಳ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಟ್ರಂಪ್ ಶ್ವೇತಭವನದಲ್ಲಿ 100ಕ್ಕೂ ಅಧಿಕ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಹಲವು ಭರವಸೆಗಳನ್ನು ಈಡೇರಿಸುವ ನಿರೀಕ್ಷೆಗಳಿವೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ದಾಖಲೆ ಪ್ರಮಾಣದ ಆದೇಶಗಳಿಗೆ ಸಹಿ ಹಾಕಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ದೇಶದ ಅಧ್ಯಕ್ಷರು ಕೈಗೊಳ್ಳುವ ಏಕಪಕ್ಷೀಯ ಆದೇಶಗಳು ಕಾನೂನಿನ ವ್ಯಾಪ್ತಿಗೆ ಒಳಪಡುತ್ತವೆ. ಇದು ಜಾರಿಯಾಗಲು ಸಂಸತ್‌ನ ಅನುಮೋದನೆ ಅಗತ್ಯವಿಲ್ಲ. ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿರುವುದಿಲ್ಲ. ದಕ್ಷಿಣ ಗಡಿಭಾಗವನ್ನು ಮುಚ್ಚುವ ನಿರ್ಧಾರ, ಸಾಮೂಹಿಕ ಗಡಿಪಾರು, ಮಹಿಳಾ ಕ್ರೀಡಾ ವಿಭಾಗದಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಗೆ ತಡೆ, ಇಂಧನ ಬಳಕೆಗೆ ಹೇರಲಾಗಿರುವ ಮಿತಿ ಕೈಬಿಡುವುದು ಹಾಗೂ ಸರ್ಕಾರದ ಆಡಳಿತದಲ್ಲಿ ದಕ್ಷತೆ ಹೆಚ್ಚಳ ಸೇರಿ ಪ್ರಮುಖ ಐದು ವಿಚಾರಗಳಿಗೆ ಟ್ರಂಪ್ ಸಹಿಹಾಕುವ ಸಾಧ್ಯತೆಯಿದೆ ಎಂದು ಅವರ ನಿಕಟವರ್ತಿ ಸ್ಟೀಫನ್ ಮಿಲ್ಲರ್ ಅವರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.