2020 ರ ದೆಹಲಿ ಕೋಮುಗಲಭೆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದುದು ಆಪ್. ಆದರೆ ಆ ಗಲಭೆ ನಿಲ್ಲಿಸಲು ಆಪ್ ತನ್ನ ಕಾರ್ಯಕರ್ತರ ಮೂಲಕ ಕನಿಷ್ಠ ಯತ್ನವನ್ನೂ ಮಾಡಲಿಲ್ಲ. ಮುಖ್ಯಮಂತ್ರಿ ಕೇಜ್ರಿವಾಲ್ ಆ ಸಂದರ್ಭದಲ್ಲೂ ತನ್ನ ಸಾಂವಿಧಾನಿಕ ಕರ್ತವ್ಯ ಮರೆತು ರಾಜಘಾಟ್ ಗೆ ತೆರಳಿ ಪ್ರಾರ್ಥನೆಯಲ್ಲಿ ತೊಡಗಿದರು. ಕಾಶ್ಮೀರ ವಿಶೇಷ ಸ್ಥಾನಮಾನ ತೆಗೆದುಹಾಕಿದಾಗ ಖುಷಿಪಟ್ಟವರಲ್ಲಿ ಮೊದಲಿಗರೆಂದರೆ ಕೇಜ್ರಿವಾಲ್, ಸಿಎಎ ವಿರುದ್ಧ ದೇಶವೇ ಎದ್ದುನಿಂತಾಗ ಕೇಜ್ರಿವಾಲ್ ಮೌನಕ್ಕೆ ಶರಣಾದರು. ಅನೇಕ ವಿದ್ಯಾರ್ಥಿ ನಾಯಕರು ಜೈಲು ಸೇರಿದಾಗ ಕೇಜ್ರಿವಾಲ್ ಆ ವಿದ್ಯಾರ್ಥಿಗಳ ಪರ ದನಿ ಎತ್ತಲಿಲ್ಲ. …… ಶ್ರೀನಿವಾಸ ಕಾರ್ಕಳ, ಚಿಂತಕರು.
ಖ್ಯಾತ ಕಾದಂಬರಿಕಾರ ಜಾರ್ಜ್ ಆರ್ವೆಲ್ ನ ʼಅನಿಮಲ್ ಫಾರ್ಮ್ʼ ಕಾದಂಬರಿಯಲ್ಲಿ ಎಸ್ಟೇಟ್ ಒಂದರ ಮಾಲೀಕನ ಶೋಷಣೆ, ಸರ್ವಾಧಿಕಾರದ ವಿರುದ್ಧ ಒಗ್ಗೂಡಿ ಹೋರಾಡುವ ಆತನ ಸಾಕುಪ್ರಾಣಿಗಳು ಆತನನ್ನು ಓಡಿಸಿ ತಾವೇ ಆಡಳಿತ ವಹಿಸಿಕೊಳ್ಳುತ್ತವೆ. ಆದರೆ ಯಾವ ಸ್ವಾತಂತ್ರ್ಯ, ಸಮಾನತೆಗಾಗಿ ಮತ್ತು ಶ್ರೇಣೀಕರಣ ಹಾಗೂ ಸರ್ವಾಧಿಕಾರ ಇತ್ಯಾದಿ ಅನಿಷ್ಟಗಳ ವಿರುದ್ಧ ಅವು ಹೋರಾಡಿದ್ದವೋ ಅವೇ ಅನಿಷ್ಟಗಳನ್ನು ಮೈಗೂಡಿಸಿಕೊಂಡು ಆ ಕೆಲವು ಪ್ರಾಣಿಗಳಲ್ಲಿಯೇ ಶ್ರೇಣೀಕರಣ ಉಂಟಾಗಿ ಕೊನೆಗೆ ಅಲ್ಲೂ ಸರ್ವಾಧಿಕಾರ ಸ್ಥಾಪನೆಗೊಂಡು ಶೋಷಣೆಯ ಮೂಲಸ್ಥಿತಿಗೆ ಮರಳುವ ಕತೆ ಅದರಲ್ಲಿದೆ.
ಈ ಕಾದಂಬರಿಯನ್ನು ನೆನಪಿಸುವಾಗಲೆಲ್ಲ ನಮ್ಮ ಆಮ್ ಆದ್ಮಿ ಪಕ್ಷವೂ ನೆನಪಾಗುತ್ತದೆ. ಈ ದೇಶದ ಅಸ್ತಿತ್ವಕ್ಕೆ ಮಾರಕವಾಗಿರುವುದು ಭ್ರಷ್ಟಾಚಾರಕ್ಕಿಂತಲೂ ಮುಖ್ಯವಾಗಿ ಕೋಮುವಾದ. ಆದರೆ ಈ ವಾಸ್ತವವನ್ನು ಅರಿಯದ ಆಪ್ ಪಕ್ಷ ತನ್ನ ಮುಖ್ಯ ವಿಷಯವನ್ನಾಗಿ ಆರಿಸಿಕೊಂಡುದು ಭ್ರಷ್ಟಾಚಾರದ ವಿರುದ್ಧ ಹೋರಾಟ. ದಶಕದ ಹಿಂದೆ ಐಎಸಿ-ʼಇಂಡಿಯಾ ಅಗೇನೆಸ್ಟ್ ಕರಪ್ಶನ್ʼ (India Against Corruption-IAC) ಎಂಬ ಸಂಘಟನೆ ಕಟ್ಟಿಕೊಂಡು ಅಣ್ಣಾ ಹಜಾರೆ ಮತ್ತು ಕೇಜ್ರಿವಾಲ್ ತಂಡ ಅಸಾಧಾರಣ ಹೋರಾಟ ಸಂಘಟಿಸಿತು. ಈ ಹೋರಾಟದ ಹಿಂದೆ ಇದ್ದುದು ವಿವೇಕಾನಂದ ಫೌಂಡೇಶನ್ ಎಂಬ ಬಲಪಂಥೀಯ ಸಂಸ್ಥೆ, ಆರ್ ಎಸ್ ಎಸ್ ಮತ್ತು ಬಿಲಿಯಾಧಿಪತಿಗಳಾಗುವ ಕನಸು ಹೊತ್ತ ಬಾಬಾಗಳು ಮೊದಲಾದವರು. ಇವರಿಗೆ ಮಾಧ್ಯಮಗಳ ಸಂಪೂರ್ಣ ಬೆಂಬಲ ಸಿಕ್ಕಿದ್ದರಿಂದ ಹೋರಾಟ ಫಲಪ್ರದವಾಯಿತು. ಆಗಿನ ಕಾಂಗ್ರೆಸ್ ನೇತೃತ್ವದ ಸರಕಾರ ತೊಲಗಬೇಕು ಎಂದು ಜನ ಸ್ಪಷ್ಟ ತೀರ್ಮಾನಕ್ಕೆ ಬರುವಂತಾಯಿತು. ೨೦೧೪ ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡು ಅಧಿಕಾರ ಕಳೆದು ಕೊಂಡಿತು. ಮೋದಿ ನೇತೃತ್ವದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ದೆಹಲಿ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಆಪ್ ಜಯಶಾಲಿಯಾಗಿ ಅಧಿಕಾರ ಹಿಡಿಯಿತು. ಕೇಜ್ರಿವಾಲ್ ಮುಖ್ಯಮಂತ್ರಿಯಾದರು.
ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಆಪ್ ಪಕ್ಷ ಮೊನ್ನೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದು ಮಾತ್ರವಲ್ಲ. ಕೇಜ್ರಿವಾಲ್, ಸಿಸೋಡಿಯಾ, ಸೌರಭ್ ಭಾರದ್ವಾಜ್ ಸಹಿತ ಅನೇಕ ಘಟಾನುಘಟಿಗಳು ಚುನಾವಣೆಯಲ್ಲಿ ಸೋತರು. ಒಟ್ಟಾರೆಯಾಗಿ ಆಪ್ ಪಕ್ಷಕ್ಕೆ ಇನ್ನು ಮುಂದೆ ರಾಜಕೀಯ ಭವಿಷ್ಯವೇ ಇಲ್ಲ ಎಂಬಂತಹ ಸ್ಥಿತಿಯನ್ನು ಅದೀಗ ತಲಪಿದೆ.
ಇದಕ್ಕೆ ಕಾರಣ ಏನು?
ಆಪ್ ನ ಪ್ರವರ್ಧಮಾನದ ಕಾಲದಲ್ಲಿ ಟಿವಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕಮ್ಯುನಿಸ್ಟ್ ನಾಯಕ ಸೀತಾರಾಮ ಯಚೂರಿ “ಆಪ್ ಪಕ್ಷದ ಬಗ್ಗೆ ನಮ್ಮ ವಿರೋಧವೇನೂ ಇಲ್ಲ, ಆದರೆ ಅವರ ರಾಜಕೀಯ ಸಿದ್ಧಾಂತವೇನು ಎಂಬುದು ಸ್ಪಷ್ಟವಿಲ್ಲ” ಎಂದಿದ್ದರು. ಐಎಸಿ ಹೋರಾಟ ಕಾಲದಲ್ಲಿ ಕೇಜ್ರಿವಾಲ್ ಬಳಗಕ್ಕೆ ರಾಜಕೀಯ ಪ್ರವೇಶದ ಆಸೆಗಳಿರಲಿಲ್ಲ ಅಥವಾ ಅದು ಬಹಿರಂಗವಾಗಿರಲಿಲ್ಲ. ಕೇವಲ ಭ್ರಷ್ಟಾಚಾರದ ವಿರುದ್ಧ ಮತ್ತು ಜನಲೋಕಪಾಲ್ ಪರವಾದ ಹೋರಾಟ ಅದರದ್ದಾಗಿತ್ತು. ತಾವು ಯಾವುದೇ ಕಾರಣಕ್ಕೂ ಚುನಾವಣೆ ಸ್ಪರ್ಧಿಸುವುದಿಲ್ಲ ಮತ್ತು ತನಗೆ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ ಎಂದು ಕೇಜ್ರಿವಾಲ್ ಅರ್ನಾಬ್ ಗೋಸ್ವಾಮಿಯ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ ವೀಡಿಯೋ ಈಗಲೂ ಲಭ್ಯ ಇದೆ.
ಸರ್ವಾಧಿಕಾರಿಯಾಗತೊಡಗಿದ ಕೇಜ್ರಿವಾಲ್
ಆದರೆ ಐಎಸಿ ಹೋರಾಟದ ಕೊನೆಯಲ್ಲಿ ಅವರು ಒಂದು ರೀತಿಯಲ್ಲಿ ಏಕಪಕ್ಷೀಯವಾಗಿ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರ ಕೈಗೊಂಡರು. ಕ್ರಮೇಣ ತನ್ನ ಸಂಘಟನೆಯಲ್ಲಿ ಅವರು ಸರ್ವಾಧಿಕಾರಿಯಾಗಿ ವರ್ತಿಸತೊಡಗಿದರು. ತನ್ನ ಮಾತೇ ಅಂತಿಮ ಎನ್ನ ತೊಡಗಿದರು. ಸಂಘಟನೆಯೊಳಗೆ ಆಂತರಿಕ ಪ್ರಜಾತಂತ್ರಕ್ಕೆ ಅವಕಾಶ ಇಲ್ಲದಂತೆ ಮಾಡಿದರು. ಪರಿಣಾಮವಾಗಿ ಪ್ರಶಾಂತ ಭೂಷಣ್, ಯೋಗೇಂದ್ರ ಯಾದವ್, ಆಶುತೋಷ್, ಆಶಿಷ್ ಖೇತಾನ್, ಕುಮಾರ್ ವಿಶ್ವಾಸ್, ಕಿರಣ್ ಬೇಡಿ ಮೊದಲಾದ ಬಹುಮುಖ್ಯರು ಆಪ್ ನಿಂದ ಹೊರ ಬೀಳುವಂತಾಯಿತು. ಕೇಜ್ರಿವಾಲ್ ರ ಅಹಂಕಾರ ಆಪ್ ಸಂಘಟನೆಗೆ ಮಾರಕವಾಗಲಾರಂಭಿಸಿತು. ಆತ ಸ್ನೇಹಶೀಲನಾಗಿರಲಿಲ್ಲ. ಯಾರನ್ನೂ ನಂಬದ ವ್ಯಕ್ತಿ. ʼಫಿರ್ ಲಾಯೇಂಗೇ ಕೇಜ್ರಿವಾಲ್ʼ ಎಂಬ ಅವರದೇ ಸ್ಲೋಗನ್ ನ ಹಾಗೆ ಆ ಪಕ್ಷದಲ್ಲಿ ಅವರದು ಸ್ವಪ್ರಚಾರ ಬಯಕೆಯ ಏಕವ್ಯಕ್ತಿ ಪ್ರದರ್ಶನ. ಜನಲೋಕಪಾಲ ಎನ್ನುತ್ತಾ ಹೋರಾಟ ನಡೆಸಿದ ಅವರು ಜನಲೋಕಪಾಲ್ ಬಗ್ಗೆ ಆ ಬಳಿಕ ಎಂದೂ ದನಿ ಎತ್ತಲಿಲ್ಲ. ಮಾತ್ರವಲ್ಲ ತನ್ನದೇ ಪಕ್ಷದೊಳಗಿನ ಲೋಕಪಾಲರನ್ನೂ ಹೊರ ಹಾಕಿಬಿಟ್ಟರು. ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಆಪ್ ಪಕ್ಷದ ಅನೇಕರು ಭ್ರಷ್ಟಾಚಾರ ಆರೋಪದ ಮೇಲೆಯೇ ಜೈಲು ಸೇರಿದರು.
ಇಡೀ ಐಎಸಿ ಚಳುವಳಿಯ ದುರುದ್ದೇಶದ ಬಗ್ಗೆ ಕೆಲವರಾದರೂ ಆಗಲೇ ಎಚ್ಚರಿಸಿದ್ದರು. ಆದರೆ ಕಿವಿಗೊಡುವ ವ್ಯವಧಾನ ಯಾರಲ್ಲೂ ಇರಲಿಲ್ಲ. ಹಾಗೆ ನೋಡಿದರೆ ಕೇಜ್ರಿವಾಲ್ ರ ಆಪ್ ಪಕ್ಷಕ್ಕೂ ಮೋದಿಯವರ ಬಿಜೆಪಿ ಪಕ್ಷಕ್ಕೂ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಕೇಜ್ರಿವಾಲ್ ಬಳಗದ ಅನೇಕರು ಆರ್ ಎಸ್ ಎಸ್ ಸಂಬಂಧ ಇದ್ದವರು ಎಂಬುದನ್ನು ಆ ಸಂಘಟನೆಯೊಳಗಿದ್ದವರೇ ಹೇಳುತ್ತಿದ್ದಾರೆ. ಬಾಬಾ ರಾಮದೇವ್, ರವಿಶಂಕರ ಗುರು ಮೊದಲಾದವರ ಜತೆಗಿನ ಕೇಜ್ರಿವಾಲ್ ಸ್ನೇಹಸಂಬಂಧ ಗುಟ್ಟಿನ ವಿಷಯವೇನೂ ಅಲ್ಲ. ಆತ ಆರ್ ಎಸ್ ಎಸ್ ವಿರುದ್ಧ ಅಥವಾ ಸಂಘಪರಿವಾರದ ವಿಭಜನಕಾರಿ ಸಿದ್ಧಾಂತದ ವಿರುದ್ಧ ಎಂದೂ ಮಾತನಾಡಿದ್ದಿಲ್ಲ.
ಐಎಸಿ ಸಂಘಟನೆಯ ಭ್ರಷ್ಟಾಚಾರ ವಿರೋಧಿ ಹೋರಾಟದ ಅಂತಿಮ ಫಲವೇನು? ಮೋದಿ ಪ್ರಧಾನಿಯಾದರು. ಬಿಜೆಪಿ ದೇಶದ ಅಧಿಕಾರ ಹಿಡಿಯಿತು. ಕೇಜ್ರಿವಾಲ್ ಮುಖ್ಯಮಂತ್ರಿಯಾದರು, ಆಪ್ ದೆಹಲಿ ಗದ್ದುಗೆ ಏರಿತು. ಕಿರಣ್ ಬೇಡಿ ಬಿಜೆಪಿ ಸೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ಸುಖ ಅನುಭವಿಸಿದರು. ಆಪ್ ನ ಶಾಜಿಯಾ ಇಲ್ಮಿ ಬಿಜೆಪಿ ಸೇರಿ ಈಗ ಅದರ ರಾಷ್ಟ್ರೀಯ ವಕ್ತಾರೆ. ಆಪ್ ಸರಕಾರದಲ್ಲಿ ಮಂತ್ರಿಗಳಾದವರೂ ಕೊನೆಗೆ ಬಿಜೆಪಿ ಸೇರಿದರು. ಯಾರು ಯಾರಿಗೆ ಏನೇನು ಬೇಕಾಗಿತ್ತೋ ಅವೆಲ್ಲ ಅವರಿಗೆ ಸಿಕ್ಕವು. ಭ್ರಷ್ಟಾಚಾರ ಅಲ್ಲೇ ಹಾಗೆಯೇ ಉಳಿಯಿತು.
ಆಪ್ ನ ಸಿದ್ಧಾಂತವೇನು?
ಕಾಂಗ್ರೆಸ್, ಡಿಎಂಕೆ, ಎಡಪಕ್ಷ, ಆರ್ ಜೆ ಡಿ, ಟಿಎಂಸಿ, ಜೆಎಂಎಂ, ಎನ್ ಸಿ ಪಿ, ಸಪಾ ಹೀಗೆ ಇವತ್ತು ದೇಶದಲ್ಲಿರುವ ಯಾವುದೇ ರಾಜಕೀಯ ಪಕ್ಷ ತೆಗೆದುಕೊಳ್ಳಿ ಅವುಗಳಿಗೊಂದು ಸ್ಪಷ್ಟ ರಾಜಕೀಯ ಸಿದ್ಧಾಂತವಿದೆ. ವಿಶೇಷವಾಗಿ ಕೋಮುವಾದದ ವಿಷಯದಲ್ಲಿ, ಸಂವಿಧಾನದ ಆಶಯಗಳ ವಿಷಯದಲ್ಲಿ ಅವುಗಳ ನಿಲುವು ಸ್ಪಷ್ಟವಿದೆ. ಆದರೆ ಆಪ್ ನ ಸಿದ್ಧಾಂತವೇನು?
2020 ರ ದೆಹಲಿ ಕೋಮುಗಲಭೆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದುದು ಆಪ್. ಆದರೆ ಆ ಗಲಭೆ ನಿಲ್ಲಿಸಲು ಆಪ್ ತನ್ನ ಕಾರ್ಯಕರ್ತರ ಮೂಲಕ ಕನಿಷ್ಠ ಯತ್ನವನ್ನೂ ಮಾಡಲಿಲ್ಲ. ಮುಖ್ಯಮಂತ್ರಿ ಕೇಜ್ರಿವಾಲ್ ಆ ಸಂದರ್ಭದಲ್ಲೂ ತನ್ನ ಸಾಂವಿಧಾನಿಕ ಕರ್ತವ್ಯ ಮರೆತು ರಾಜಘಾಟ್ ಗೆ ತೆರಳಿ ಪ್ರಾರ್ಥನೆಯಲ್ಲಿ ತೊಡಗಿದರು. ಕಾಶ್ಮೀರ ವಿಶೇಷ ಸ್ಥಾನಮಾನ ತೆಗೆದುಹಾಕಿದಾಗ ಖುಷಿಪಟ್ಟವರಲ್ಲಿ ಮೊದಲಿಗರೆಂದರೆ ಕೇಜ್ರಿವಾಲ್, ಸಿಎಎ ವಿರುದ್ಧ ದೇಶವೇ ಎದ್ದುನಿಂತಾಗ ಕೇಜ್ರಿವಾಲ್ ಮೌನಕ್ಕೆ ಶರಣಾದರು. ಅನೇಕ ವಿದ್ಯಾರ್ಥಿ ನಾಯಕರು ಜೈಲು ಸೇರಿದಾಗ ಕೇಜ್ರಿವಾಲ್ ಆ ವಿದ್ಯಾರ್ಥಿಗಳ ಪರ ದನಿ ಎತ್ತಲಿಲ್ಲ. ದೇಶಕ್ಕೆ ಮೋದಿ ದೆಹಲಿಗೆ ಕೇಜ್ರಿವಾಲ್ ಎಂಬುದು ಆಪ್ ನ ಅನೇಕರ ಸ್ಲೋಗನ್ ಆಗಿತ್ತು. ಬಿಲ್ಕಿಸ್ ಬಾನು ಅತ್ಯಾಚಾರ ಆರೋಪಿಗಳನ್ನು ಕ್ಷಮಾಧಾನ ಮೂಲಕ ಬಿಡುಗಡೆಗೊಳಿಸಿದ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಮನೀಷ್ ಸಿಸೋಡಿಯಾರನ್ನು ಗುಜರಾತ್ ನಲ್ಲಿ ಪ್ರಶ್ನಿಸಿದಾಗ ನಮ್ಮ ಅಜೆಂಡಾ ಶಾಲೆ ಮತ್ತು ಆಸ್ಪತ್ರೆ ಎಂದರು. ದೇಶದಲ್ಲಿ ಮುಸ್ಲಿಂ ಲಿಂಚಿಂಗ್ ನಡೆದಾಗ, ಮುಸ್ಲಿಮರ ಮನೆಗಳ ಮೇಲೆ ಬುಲ್ ಡೋಜರ್ ಓಡಿಸಿದಾಗ, ಮಸೀದಿಗಳ ಮೇಲೆ ದಾಳಿ ನಡೆದಾಗ ಅದನ್ನ ಖಂಡಿಸಿ ಕೇಜ್ರಿವಾಲ್ ಒಂದೇ ಒಂದು ಹೇಳಿಕೆ ನೀಡಲಿಲ್ಲ. ಕೋವಿಡ್ ಪ್ರಸರಣಕ್ಕೆ ತಬ್ಲಿಗಿ ಜಮಾತ್ ಅನ್ನು ಕೇಜ್ರಿವಾಲ್ ದೂರಿದರು. ದೆಹಲಿ ರಸ್ತೆಯ ಔರಂಗಜೇಬ್ ಹೆಸರು ಬದಲಾಯಿಸಿದಾಗ ಕೇಜ್ರಿವಾಲ್ ಬಹಿರಂಗವಾಗಿಯೇ ಸಂತಸ ಪಟ್ಟರು. ಕೇಜ್ರಿವಾಲ್ ರ ಕಚೇರಿಯಿಂದ ಮಹಾತ್ಮಾ ಗಾಂಧಿಯನ್ನು ಎಂದೋ ಹೊರಹಾಕಲಾಗಿತ್ತು. ಅಲ್ಲಿದ್ದ ಫೋಟೋಗಳೆಂದರೆ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಮಾತ್ರ. ಗಾಂಧಿಯನ್ನು ಅತ್ಯಂತ ದ್ವೇಷಿಸುವ ಮುಖ್ಯ ಒಂದು ಸಂಘಟನೆ ಎಂದರೆ ಆರ್ ಎಸ್ ಎಸ್ ಎಂಬುದು ನೆನಪಿರಲಿ.
ಮೋದಿ, ಕೇಜ್ರಿವಾಲ್ ಒಂದೇ ನಾಣ್ಯದ ಎರಡು ಮುಖ
ಸ್ವಮೋಹ, ಸ್ವಪ್ರಚಾರ, ಸರ್ವಾಧಿಕಾರ, ಅಧಿಕಾರ ದಾಹ, ಬೂಟಾಟಿಕೆ, ಪ್ರದರ್ಶನ ಪ್ರಿಯತೆ, ಬಹಿರಂಗವಾಗಿ ಧಾರ್ಮಿಕ ಆಚರಣೆಯ ಪ್ರದರ್ಶನ, ತಾನು ಅಪ್ರತಿಮ ಹಿಂದೂ ಎಂದು ತೋರಿಸುವ ನಿರಂತರ ಯತ್ನಗಳು, ಸಹೋದ್ಯೋಗಿಗಳನ್ನು ನಂಬದಿರುವುದು, ಪ್ರಜಾತಂತ್ರಕ್ಕೆ ತಿಲಾಂಜಲಿ, ಮುಸ್ಲಿಂ ದ್ವೇಷ, ಮಾತು ಮತ್ತು ಕೃತಿಗಳ ಮೇಲಣ ಅಂತರ, ಅಧಿಕಾರದ ಏಕವ್ಯಕ್ತಿ ಪ್ರದರ್ಶನ ಇತ್ಯಾದಿಗಳಲ್ಲಿ ಕೇಜ್ರಿವಾಲ್ ಮತ್ತು ಮೋದಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಸಂಪೂರ್ಣ ಅಧಿಕಾರ ಸಿಕ್ಕರೆ ಇನ್ನೊಂದು ಮೋದಿ ಆಗಬಲ್ಲವರು ಕೇಜ್ರಿವಾಲ್.
ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎರಡೂ ಪಕ್ಷಗಳ ಸಿದ್ಧಾಂತ, ಕಾರ್ಯಕ್ರಮ ಒಂದೇ ಆದಾಗ ಜನ ಯಾರನ್ನು ಆರಿಸುತ್ತಾರೆ? ಆಗ ಹಿಂದುತ್ವದ ಪರ ಇರುವ ಜನರು ಉಗ್ರ ಹಿಂದುತ್ವದ ಪಕ್ಷವನ್ನೇ ಆರಿಸುತ್ತಾರೆ. ಈಗ ದೆಹಲಿಯಲ್ಲಿ ಆಗಿರುವುದೂ ಅದೇ ಎನ್ನುತ್ತಾರೆ ಅನೇಕ ರಾಜಕೀಯ ವಿಶ್ಲೇಷಕರು. ಕೋಮುವಾದದ ವಿರುದ್ಧ ಮತ್ತು ಸಾಮಾಜಿಕ ನ್ಯಾಯದ ವಿರುದ್ಧ ಆಪ್ ಒಂದು ಸ್ಪಷ್ಟ ಸಿದ್ಧಾಂತವೊಂದನ್ನು ಹೊಂದಿರ ಬೇಕಿತ್ತು (ಮೀಸಲಾತಿ ವಿರುದ್ಧ ಕೇಜ್ರಿವಾಲ್ ಸಹಿತ ಅನೇಕ ಆಪ್ ನಾಯಕರು ಮಾತನಾಡಿದ್ದಾರೆ). ಆಗ ಮುಸ್ಲಿಮರು ಮತ್ತಿತರ ಅಲ್ಪಸಂಖ್ಯಾತರು ಮತ್ತು ದಲಿತರು ಬಲವಾಗಿ ಆಪ್ ಜತೆ ನಿಲ್ಲುತ್ತಿದ್ದರು. ಆದರೆ ಈ ವಿಷಯದಲ್ಲಿ ಒಂದು ಸ್ಪಷ್ಟ ನಿಲುವು ಇಲ್ಲದ ಕಾರಣ ಆಪ್ ದೊಡ್ಡ ಜನವರ್ಗದ ಬೆಂಬಲ ಕಳೆದು ಕೊಂಡಿತು, ಬಿಜೆಪಿ ಮತ್ತು ಆಪ್ ಎರಡೂ ಹಿಂದುತ್ವ ಪರ ಪಕ್ಷವಾದಾಗ ಹಿಂದುತ್ವ ಪರ ಜನರು ಬಿಜೆಪಿಯನ್ನೇ ಆರಿಸುವುದು ಸಹಜ ಎನ್ನುತ್ತಾರೆ ಅವರು. ಬಡವರಿಗೆ ನೆರವಾಗುವುದೇ ಗುರಿಯಾದರೆ ಅದನ್ನು ಮಾಡಲು ಆಪ್ ಏಕೆ ಬೇಕು? ಬಿಜೆಪಿ ಕೂಡಾ ಅದನ್ನು ಮಾಡಬಹುದು ಅಲ್ಲವೇ?
ಬಹು ಸಂಕೀರ್ಣ ಸಾಮಾಜಿಕ ಪರಿಸ್ಥಿತಿ ಇರುವ ದೇಶದಲ್ಲಿ ರಾಜಕೀಯ ಪಕ್ಷವೊಂದಕ್ಕೆ ಸ್ಪಷ್ಟ ರಾಜಕೀಯ ಸಿದ್ಧಾಂತವಿರಲೇಬೇಕು. ಇಲ್ಲವಾದರೆ ಅವು ಒಮ್ಮೆ ಜನ ಮೆಚ್ಚುಗೆ ಗಳಿಸಿ ಅಧಿಕಾರಕ್ಕೇರಿದರೂ ಬಹುಬೇಗನೇ ಅಧಿಕಾರ ಕಳೆದುಕೊಂಡು ರಾಜಕೀಯ ಕ್ಯಾನ್‌ವಾಸ್ ನಲ್ಲಿ ಅಪ್ರಸ್ತುತ ಮಾತ್ರವಲ್ಲ, ಅದೃಶ್ಯರೂ ಆಗುತ್ತಾರೆ ಎನ್ನುವುದಕ್ಕೆ ಆಪ್ ಪಕ್ಷ ಅತ್ಯುತ್ತಮ ಉದಾಹರಣೆ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- ಅತಿರೇಕದ ಅಪಹಾಸ್ಯದಲಿ ಅಗೋಚರವಾದ ʼತಾಜಮಹಲ್ ಟೆಂಡರ್ʼ ನಾಟಕದಾಶಯ