ಮೀನನ್ನು ಕ್ರಿಮಿನಲೈಸ್ ಮಾಡಿದ್ರೆ ಮೋದಿಗೇನು ಲಾಭ ಗೊತ್ತಾ ?!

Most read

ಈಗ ಒಂದೈದು ವರ್ಷಗಳಲ್ಲಿ ಮೀನುಗಾರರ ಬದುಕಿನಲ್ಲಿ ಏನಾಗುತ್ತಿದೆ ?  ಇಲ್ಲಿಯವರೆಗೂ ದಕ್ಷಿಣ ಕನ್ನಡ- ಉಡುಪಿಯ ಮೀನುಗಾರರು ಮೀನುಗಳನ್ನು ವಿದೇಶಗಳಿಗೆ ಕಳುಹಿಸುತ್ತಿದ್ದರೆ, ಸರ್ಕಾರ ಈಗ ಮೀನುಗಳನ್ನು ವಿದೇಶದಿಂದ ತರಿಸಿಕೊಳ್ಳುತ್ತಿದೆ. ಇದರಿಂದಾಗಿ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ ನವೀನ್ ಸೂರಿಂಜೆ, ಪತ್ರಕರ್ತರು.

ಆಗ ಮೋದಿ ಇನ್ನೂ ಪ್ರಧಾನಿ ಆಗಿರಲಿಲ್ಲ. ಆದರೆ ಪ್ರಧಾನಿ ಆಗಿಯೇ ಆಗ್ತೀನಿ ಅಂತ ದೇಶದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿ ಭಾಷಣ ಮಾಡುತ್ತಿದ್ದರು. ಮೋದಿಯವರ ಆಗಿನ ಕಾಲದ ಗುರುಗಳಾದ ಬಾಬಾ ರಾಮ್ ದೇವ್ ಕಾರ್ಯಕ್ರಮಗಳೂ ಕೂಡಾ ಭಾರೀ ಪ್ರಸಿದ್ದಿಯನ್ನು ಪಡೆದಿದ್ದ ಕಾಲ. ರಾಮ್ ದೇವ್ ನಡೆಸುವ ಯೋಗ ಕಾರ್ಯಕ್ರಮಗಳಿಗೆ ಕಾಂಗ್ರೆಸ್ಸಿಗರೂ, ಐಎಎಸ್, ಐಪಿಎಸ್ ಅಧಿಕಾರಿಗಳು ಚಾಪೆ ಹಿಡಿದುಕೊಂಡು ಹೋಗುತ್ತಿದ್ದ ಕಾಲವದು. 

ಮಂಗಳೂರಿನ ನೆಹರೂ ಮೈದಾನದಲ್ಲಿ ಮೋದಿಯ ಗುರು ಬಾಬಾ ರಾಮ್ ದೇವ್ ಯೋಗ ಕಾರ್ಯಕ್ರಮ ಆಯೋಜಿಸಿದ್ದರು. ಐಎಎಸ್, ಐಪಿಎಸ್ ಅಧಿಕಾರಿಗಳೂ ಸೇರಿದಂತೆ ಸರ್ವಪಕ್ಷದ ಸಾವಿರಾರು ಜನ ಸೇರುವ ಬಗ್ಗೆ ಪತ್ರಿಕೆಗಳಲ್ಲಿ ದಿನಗಟ್ಟಲೆ ಸುದ್ದಿ ಬಂದಿತ್ತು. ಕರಾವಳಿಯಲ್ಲಿ ಆಗ ಪೆಟ್ರೋಲಿಯಂ ಆಧರಿತ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಭೂಸ್ವಾಧೀನ ನಡೆಯುತ್ತಿತ್ತು. ರೈತರ ಭೂಮಿ ಸ್ವಾಧೀನ ಆಗುವುದರ ಜೊತೆಗೆ ಪೆಟ್ರೋಲ್ ತ್ಯಾಜ್ಯಗಳು ಸಮುದ್ರ ಸೇರಿ ಮೀನು ಸಂತತಿಯೇ ನಾಶ ಆಗುವ ಭೀತಿ ಇತ್ತು. ಇದರ ವಿರುದ್ದ ಪಕ್ಷ- ಜಾತಿ- ಧರ್ಮ ಮೀರಿ ಜನರನ್ನು ಸಂಘಟಿಸಲು ವಿದ್ಯಾದಿನಕರ್ ನೇತೃತ್ವದ ಕೃಷಿ ಭೂಮಿ ಸಂರಕ್ಷಣಾ ಸಮಿತಿ ನಿರ್ಧರಿಸಿತ್ತು. ಮಂಗಳೂರಿನಲ್ಲಿ ನಡೆಯುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಬಾಬಾ ರಾಮದೇವರು ಈ ಬಗ್ಗೆ ಮಾತನಾಡಿದರೆ ದೇಶದಾದ್ಯಂತ ಎಸ್ ಇಝಡ್ ಅಪಾಯಗಳ ಬಗ್ಗೆ ಚರ್ಚೆಯಾಗುತ್ತದೆ ಎಂಬ ನಿರೀಕ್ಷೆಯಿಂದ ವಿದ್ಯಾ ದಿನಕರ್ ತನ್ನ ತಂಡದೊಂದಿಗೆ ಬಾಬಾ ರಾಮ್ ದೇವ್ ಭೇಟಿಯಾಗಿದ್ದರು. ನಾನೂ ಕುತೂಹಲದಿಂದ ಅವರಿಗೆ ಜೊತೆಯಾಗಿದ್ದೆ. 

ಎಲ್ಲವನ್ನೂ ಕೇಳಿಸಿಕೊಂಡ ಮೋದಿಯ ಗುರು ಬಾಬಾ ರಾಮ್ ದೇವ್ “ಸಮುದ್ರದಲ್ಲಿ  ಮೀನು ಸಂತತಿ ನಾಶವಾದರೆ ಒಳ್ಳೆಯದೇ ಅಲ್ವಾ ? ಜನ ಆಗಲಾದರೂ ಮೀನು ತಿನ್ನೋದು ನಿಲ್ಲಿಸಿ ಸಸ್ಯಹಾರಿಗಳಾಗುತ್ತಾರೆ” ಎಂದರು ! ಬಾಬಾ ರಾಮ್ ದೇವ್ ದು ಖಾಲಿ ತಲೆ ಎಂದು ನಾವಂದುಕೊಂಡೆವು. ಆದರೆ ಅದು ಖಾಲಿ ತಲೆಯಲ್ಲ, ಅದರ ಹಿಂದೆ ಒಂದು ವ್ಯಾಪಾರದ ತಲೆಯಿದೆ ಎಂದು ಮತ್ತೆ ತಿಳಿಯಿತು.

ಇದಾದ ಬಳಿಕ ಮೋದಿ ಪ್ರಧಾನಿಯಾದರು‌. ಮೋದಿಯ ಆಪ್ತ ಬಾಬಾ ರಾಮ್ ದೇವ್ ಮಂಗಳೂರು ವಿಶೇಷ ಅರ್ಥಿಕ ವಲಯದಲ್ಲಿ ಪತಂಜಲಿ ಫುಡ್ಸ್ ರುಚಿ ಸೋಯಾ ಕಂಪನಿ ಆರಂಭಿಸಿದರು. ಅದರ ರಾಸಾಯನಿಕ ತ್ಯಾಜ್ಯವನ್ನು ನದಿಯ ಮೂಲಕ ಸಮುದ್ರಕ್ಕೆ ಬಿಡುತ್ತಿದ್ದಾರೆ. ಒಂದೆಡೆ ಪೆಟ್ರೊಲಿಯಂ ತ್ಯಾಜ್ಯ, ಇನ್ನೊಂದೆಡೆ ಪತಂಜಲಿ ತ್ಯಾಜ್ಯದಿಂದಾಗಿ ಕರಾವಳಿಯಲ್ಲಿ ಮೀನುಗಾರಿಕೆಯೇ ಬಹುತೇಕ ಸ್ಥಗಿತಗೊಂಡಿದೆ. ಇದರ ವಿರುದ್ದ ಎಡ ಯುವಜನ ಚಳವಳಿಯ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. “ಮೀನು ಸತ್ತರೆ ಒಳ್ಳೆಯದೇ ಅಲ್ವಾ. ಜನ ಸಸ್ಯಹಾರಿಗಳಾಗುತ್ತಾರೆ ” ಎಂದು ಬಾಬಾ ರಾಮ್ ದೇವ್ ಹೇಳಿದ್ದು ಯಾಕೆ ಎಂದು ತಿಳಿಯಲು ಹತ್ತು ವರ್ಷ ಬೇಕಾಯಿತು.

ಮಂಗಳೂರಲ್ಲಿ ಮೀನುಗಾರಿಕೆ

“ವಿಪಕ್ಷದವರು ಮೊಗಲರಂತೆ ಮೀನು ತಿಂದು ಅದರ ಫೋಟೋ ಶೇರ್ ಮಾಡ್ತಾರೆ” ಎಂದು ಪ್ರಧಾನಿ ಮೋದಿ ಹೇಳಿಕೆ ಕೊಟ್ಟಿದ್ದಾರೆ. ಆ ಮೂಲಕ ಮೀನುಗಾರಿಕೆ ಮತ್ತು ಮೀನು ಆಹಾರ ಎಂಬುದು ಕ್ರೈಂ ಎನ್ನುವ ಸಂದೇಶ ಕೊಟ್ಟಿದ್ದಾರೆ. ಮೋದಿಯ ಈ ಸಂದೇಶದ ಹಿಂದೆ ಒಂದು ವ್ಯಾಪಾರಿ ಹುನ್ನಾರವಿದೆ. ಸ್ಥಳೀಯ ದನದ ಮಾಂಸ ವ್ಯಾಪಾರವನ್ನು ಗೋರಕ್ಷಣೆ ನೆಪದಲ್ಲಿ ಕಡಿತಗೊಳಿಸಿ ದನದ ಮಾಂಸ ರಫ್ತಿನಲ್ಲಿ ಭಾರತ ಅಗ್ರಸ್ಥಾನ ಗಳಿಸುವ ಮೂಲಕ ಗುಜರಾತ್ ರಫ್ತು ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಂತೆ ಮೀನು ವ್ಯಾಪಾರ ಮಾಡಲು ಮೋದಿ ಮುಂದೆ ಬಂದಿದ್ದಾರೆ. ದೇಶದಲ್ಲಿ ಮೀನುಗಾರಿಕೆ ನಿಂತರೆ ಮೋದಿ ಸರ್ಕಾರದ ಆಮದು ವ್ಯಾಪಾರ ಕುದುರುತ್ತದೆ.

ಈಗ ಒಂದೈದು ವರ್ಷಗಳಲ್ಲಿ ಮೀನುಗಾರರ ಬದುಕಿನಲ್ಲಿ ಏನಾಗುತ್ತಿದೆ ?  ಇಲ್ಲಿಯವರೆಗೂ ದಕ್ಷಿಣ ಕನ್ನಡ- ಉಡುಪಿಯ ಮೀನುಗಾರರು ಮೀನುಗಳನ್ನು ವಿದೇಶಗಳಿಗೆ ಕಳುಹಿಸುತ್ತಿದ್ದರೆ, ಸರ್ಕಾರ ಈಗ ಮೀನುಗಳನ್ನು ವಿದೇಶದಿಂದ ತರಿಸಿಕೊಳ್ಳುತ್ತಿದೆ. ಗುಣಮಟ್ಟವೂ ಇಲ್ಲದ, ರುಚಿಕರವೂ ಅಲ್ಲದ ಒಮನ್ ದೇಶದ ಬೂತಾಯಿ ಮೀನನ್ನು ಕರಾವಳಿಗರು ತಿನ್ನಬೇಕಿದೆ. ಇದರಿಂದಾಗಿ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ.

ಒಮನ್ ದೇಶದಿಂದ ಮಂಗಳೂರು ಬಂದರಿಗೆ ಬಂದಿಳಿಯುವ ನೋಡೋಕೆ ಬಂಗುಡೆಯಷ್ಟು ದೊಡ್ಡದಿರುವ, ದುಬಾರಿಯೂ ಆಗಿರುವ ಒಮನ್ ಬೂತಾಯಿಗೆ ಸ್ಥಳೀಯರು ಇಟ್ಟಿರುವ ಹೆಸರು “ಮೋದಿ ಮೀನು”…! ಹಾಸ್ಯಕ್ಕಾಗಿ ಇಟ್ಟ ಹೆಸರಾದರೂ ಒಮನ್ ಬೂತಾಯಿಗೆ ಇದೇ ಹೆಸರು ಫಿಕ್ಸ್ ಆಗಿದೆ. ಈ ಒಮನ್ ಬೂತಾಯಿ ಕಡಲ ಒಡಲಿಗೆ ಹೋಗಿ ಜೀವ ಪಣಕ್ಕಿಟ್ಟು ಮೀನು ಹಿಡಿಯುವ ಮೀನುಗಾರರ ಕೈ ಬರಿದಾಗಿಸಿದೆ.

ಮೋದಿ ಬೂತಾಯಿ

“ದಕ್ಷಿಣ ಕನ್ನಡ-ಉಡುಪಿ ಕಡಲಲ್ಲಿ ಮೀನು ಸಂತಾನೋತ್ಪತ್ತಿ ಕಡಿಮೆಯಾಗಿದೆ. ಹಾಗಾಗಿ ಜನರಿಗೆ ಮೀನಿನ ಕೊರತೆ ಆಗದಿರುವಂತೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ” ಎಂದು ಆಡಳಿತಗಾರರು ಸಮಜಾಯಿಸಿ ಕೊಟ್ಟಿದ್ದಾರೆ.  ಅಂದರೆ ಕರಾವಳಿಯಲ್ಲಿ ಮೀನು ಸಿಗದಂತೆ ಮಾಡಿ ಆಮದು ಮಾಡಿಕೊಳ್ಳುವ ವ್ಯಾಪಾರಕ್ಕೆ ಮಂಗಳೂರನ್ನು ಹತ್ತು ವರ್ಷಗಳಿಂದ ಸಜ್ಜುಗೊಳಿಸಲಾಗಿತ್ತು ಎಂದು ಅರ್ಥ ತಾನೆ ? ಇಲ್ಲವಾದಲ್ಲಿ, ಕರ್ನಾಟಕದ ಕರಾವಳಿಯಲ್ಲಿ ಮೀನು ಸಂತತಿ ಕಡಿಮೆಯಾಗುತ್ತಿರುವುದಕ್ಕೆ, ಮೀನನ್ನು ವಿದೇಶದಿಂದ ತರುವುದು ಪರಿಹಾರವೇ ? ಎಸ್ ಇಝಡ್, ಪತಂಜಲಿಯನ್ನು ಮುಚ್ಚುವುದು ಪರಿಹಾರವಲ್ಲವೇ ? ಇದೆಲ್ಲಾ ಮೋದಿಗೆ ಗೊತ್ತಿಲ್ಲವೆಂದಲ್ಲ. ಮೋದಿ ಈಗ ಮೀನು ಆಮದು ವ್ಯಾಪಾರಕ್ಕೆ ಕೈ ಹಾಕಿದ್ದಾರಷ್ಟೆ ! 

ಹಾಗಾಗಿ ಗೋಮಾಂಸವನ್ನು ಕ್ರಿಮಿನಲೈಸ್ ಮಾಡಿ ಮಾರ್ವಾಡಿಗಳು ರಫ್ತು ಹೆಚ್ಚಿಸಿದಂತೆ  ಮೀನನ್ನು ಕ್ರಿಮಿನಲೈಸ್ ಮಾಡುವ ಮೂಲಕ ಮೀನು ಆಮದು ವ್ಯಾಪಾರಕ್ಕೆ ಮೋದಿ ಬೃಹತ್ ವೇದಿಕೆ ಸಜ್ಜುಗೊಳಿಸಿದ್ದಾರೆ. ಈಗಾಗಲೇ ಮೀನುಗಾರರಿಗೆ ಕಂಟಕವಾಗಿರುವ ಮೀನು ಆಮದು ಇನ್ನು ಇನ್ನಷ್ಟೂ ವಿಸ್ತಾರತೆ ಪಡೆದು ಮೀನುಗಾರರನ್ನು ಬೀದಿಗೆ ತರುವ ಸೂಚನೆಯನ್ನು ಪ್ರಧಾನಿಗಳು ನೀಡಿದ್ದಾರೆ. ಈಗ ಎಚ್ಚೆತ್ತು ಕೊಳ್ಳುವ ಸರದಿ ಮೀನುಗಾರರದ್ದು.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- ಮೋದಿಯವರೇ, ಮೀನುಗಾರರ ಮೇಲೆ ನಿಮಗೇಕೆ ದ್ವೇಷ?

More articles

Latest article