ಚೆನ್ನೈ: ಲೋಕಸಭೆ ಅಂಗೀಕರಿಸಿರುವ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ತಮಿಳುನಾಡು ರಾಜ್ಯದ ಆಡಳಿತಾರೂಢ ಡಿಎಂಕೆ ತಿಳಿಸಿದೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಡಿಎಂಕೆ ಶಾಸಕರು ಕಪ್ಪುಪಟ್ಟಿ ಧರಿಸಿ ಗುರುವಾರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, ವಕ್ಫ್ ಆಸ್ತಿ ವಿಚಾರವಾಗಿ ಡಿಎಂಕೆ ಹೋರಾಡಲಿದ್ದು, ಜಯಶಾಲಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಿಳುನಾಡು ವಿಧಾನಸಭೆಯು ಮಾರ್ಚ್ 27 ರಂದು ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತ್ತು. ಈ ಮಸೂದೆ ಧಾರ್ಮಿಕ ಸಾಮರಸ್ಯವನ್ನು ಹಾಳುಗೆಡುವುದಲ್ಲದೇ, ಮುಸ್ಲಿಂ ಸಮುದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ದೇಶದ ಬಹುತೇಕ ರಾಜಕೀಯ ಪಕ್ಷಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದವು. ಆದರೂ, ಇದನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಮಸೂದೆ ಅಂಗೀಕಾರವಾದರೂ ಮಸೂದೆ ವಿರುದ್ಧ ಚಲಾವಣೆಯಾದ ಮತಗಳ ಸಂಖ್ಯೆಯನ್ನು ನಿರ್ಲಕ್ಷಿಸಬಾರದು ಎಂದು ಅವರು ಹೇಳಿದರು.