ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರೇ ಜೆಡಿಎಸ್ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಪಕ್ಷ ಸರಿಯಿಲ್ಲ ಎಂದು ಅವರ ಅಳಿಯ ತೀರ್ಮಾನ ಮಾಡಿರುವುದರ ಬಗ್ಗೆ ಜನತಾದಳದ ಕಾರ್ಯಕರ್ತರು ಮ್ಮ ಮುಂದಿನ ತೀರ್ಮಾನ ಮಾಡಬೇಕು ಎಂದು ಬೆಂಗಳೂರು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಡಾ. ಮಂಜುನಾಥ್ ಅವರು ರಾಜಕಾರಣಕ್ಕೆ ಬರುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಅವರು ದೇವೇಗೌಡರ ಕುಟುಂಬದವರು. ಇದು ನನ್ನ ಹಾಗೂ ಡಿಕೆ ಶಿವಕುಮಾರ್ ಅವರ ರಾಜಕಾರಣಕ್ಕೆ ಹೊಸತೇನಲ್ಲ. ಹೀಗಾಗಿ ನಿಮ್ಮ (ಮಾಧ್ಯಮಗಳ) ನೇತೃತ್ವದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಹೇಳಿದ್ದಾರೆ.
ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಪಕ್ಷ ಸರಿಯಿಲ್ಲ ಎಂದು ಅವರ ಅಳಿಯ ತೀರ್ಮಾನ ಮಾಡಿರುವುದರ ಬಗ್ಗೆ ಜನತಾದಳದ ಕಾರ್ಯಕರ್ತರು ಚಿಂತನೆ ಮಾಡಬೇಕು. ದೇವೇಗೌಡರ ಬುದ್ಧಿವಂತ ಅಳಿಯನವರೇ ಬೇರೆ ಪಕ್ಷ ಆಯ್ಕೆ ಮಾಡಿಕೊಂಡ ನಂತರ ಅವರ ಕಾರ್ಯಕರ್ತರು ಉಳಿದ ವಿಚಾರ ತೀರ್ಮಾನ ಮಾಡಬೇಕು ಎಂದು ಟೀಕಿಸಿದ್ದಾರೆ.
ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ನೀವು ಆಹ್ವಾನ ನೀಡುತ್ತೀರಾ ಎಂದು ಕೇಳಿದಾಗ, “ಜೆಡಿಎಸ್ ನಾಯಕರ ಕುಟುಂಬ ಸದಸ್ಯರೇ ಬೇರೆ ಪಕ್ಷದ ಚಿಹ್ನೆಯಡಿ ಚುನಾವಣೆಗೆ ಸ್ಪರ್ಧಿಸುತ್ತಿರುವಾಗ, ಜೆಡಿಎಸ್ ಕಾರ್ಯಕರ್ತರು ಏನು ಮಾಡಬೇಕು? ನಾನು ಮಾಧ್ಯಮಗಳ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಆಹ್ವಾನ ನೀಡುತ್ತೇನೆ. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಗ. ನಿಮ್ಮ ಸಹೋದರನಾಗಿ ಈ ಜಿಲ್ಲೆ ಹಾಗೂ ಇಲ್ಲಿನ ತಾಲೂಕುಗಳ, ರೈತರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ನೀವೆಲ್ಲರೂ ಪಕ್ಷಭೇದ ಮರೆತು ಬನ್ನಿ ಎಂದು ತುಂಬು ಹೃದಯದಿಂದ ಕರೆಯುತ್ತೇನೆ” ಎಂದರು.
ದೇವೇಗೌಡರು ಕಟ್ಟಿದ ಪಕ್ಷಕ್ಕೆ ಈಗ ಜನಪ್ರಿಯತೆ ಇಲ್ಲ ಎಂಬುದನ್ನು ಅವರ ಕುಟುಂಬದ ಹಿರಿಯ ಸದಸ್ಯರೇ ಸ್ಪಷ್ಟಪಡಿಸುತ್ತಿದ್ದಾರೆ. ಆ ಪಕ್ಷ ಇಲ್ಲವೆಂದು ದೇವೇಗೌಡರ ಅಳಿಯನವರೇ ನಿರ್ಧರಿಸಿರುವಾಗ ಉಳಿದ ವಿಚಾರವನ್ನು ನೀವೇ ಮುಂದುವರಿಸಬೇಕು ಎಂದು ತಿವಿದಿದ್ದಾರೆ.