ಬೆಳಗಾವಿ ಅಧಿವೇಶನಕ್ಕೆ 13 ಕೋಟಿ ರೂ ಅಂದಾಜು ಪಟ್ಟಿ ಸಲ್ಲಿಸಿದ ಜಿಲ್ಲಾಡಳಿತ; ಊಟ ವಸತಿ ಬಹುತೇಕ ವೆಚ್ಚ

Most read

ಬೆಂಗಳೂರು: ಪ್ರತಿ ವರ್ಷ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಡಿಸೆಂಬರ್‌ ನಲ್ಲಿ 10 ದಿನಗಳ ಕಾಲ ನಡೆಯುತ್ತದೆ. ಈ ಅಧಿವೇಶನಕ್ಕಾಗಿ ಇಡೀ ವಿಧಾನಸೌಧ ಕುಂದಾನಗರಿ ಬೆಳಗಾವಿಗೆ ಶಿಫ್ಟ್‌ ಆಗುತ್ತದೆ. ಅಧಿವೇಶನ ನಡೆಸಲಿಕ್ಕಾಗಿಯೇ ಪ್ರತಿವರ್ಷ ಸರ್ಕಾರ 10-15 ಕೋಟಿ ರೂ.ವರೆಗೆ ವೆಚ್ಚ ಮಾಡುತ್ತದೆ. ಸಚಿವರು ಶಾಸಕರ ಭತ್ಯೆ ಇತ್ಯಾದಿ ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ.

ಡಿಸೆಂಬರ್‌ 9 ರಿಂದ 20 ರವರೆಗೆ ನಡೆಯುವ ಅಧಿವೇಶನಕ್ಕೆ 13.2 ಕೋಟಿ ರೂ ವೆಚ್ಚದ ಅಂದಾಜುಪಟ್ಟಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಸಚಿವರು, ಶಾಸಕರು, ಅಧಿಕಾರಿಗಳ ವಸತಿ, ಊಟ ಎಲ್ಲವೂ ಸೇರಿರುತ್ತದೆ.

ಸುವರ್ಣಸೌಧದ ಎದುರು ಪ್ರತಿದಿನ ಹತ್ತಾರು ಪ್ರತಿಭಟನೆಗಳು ನಡೆಯುತ್ತವೆ. ಈ ಪ್ರತಿಭಟನೆಗಳನ್ನು ನಡೆಸಲು ಸುವರ್ಣಸೌಧದ ಎದುರು ಇರುವ
ಜಾಗವನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಇದಕ್ಕಾಗಿ ಜಿಲ್ಲಾಡಳಿತ ಸರ್ಕಾರ 8.5 ಲಕ್ಷ ರೂ ಭರಿಸುತ್ತದೆ.

ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಸಭಾಧ್ಯಕ್ಷರು ಮತ್ತು ಇತರ ಹಿರಿಯ ಅಧಿಕಾರಿಗಳು ಉಳಿದುಕೊಳ್ಳಲಿದ್ದಾರೆ. ಪ್ರತಿದಿನ ಸಭಾಧ್ಯಕ್ಷರು ಸಭೆಗಳನ್ನು ನಡೆಸುತ್ತಲೇ ಇದ್ದಾರೆ. ಮುಖ್ಯಮಂತ್ರಿಗಳು ಉಳಿದುಕೊಳ್ಳುವ ಹೋಟೆಲ್‌ ನಲ್ಲಿಯೂ ಸಭೆಗಳು ನಡೆಯುತ್ತಲೇ ಇರುತ್ತವೆ. ಈ ಸಭೆಗಳು ಮತ್ತು ಸದನ ಸಮಿತಿಗಳ ಸಭೆಗಳಲ್ಲಿ ಸರಬರಾಜು ಮಾಡುವ ಊಟ ತಿಂಡಿಗೆ ಸಾಕಷ್ಟು ವೆಚ್ಚ ಮಾಡಲಾಗುತ್ತದೆ. ಸಿಬ್ಬಂದಿ ಮತ್ತು ಚಾಲಕರು ಮತ್ತು ಇತರ ಅಧಿಕಾರಿಗಳ ಊಟ ವಸತಿಗೆ 2.80 ಕೋಟಿ ರೂ ಅಂದಾಜುಪಟ್ಟಿ ಸಲ್ಲಿಸಿದೆ.

ಗಣ್ಯರು ಉಳಿದುಕೊಳ್ಳುವ ಹೋಟೆಲ್‌ ಮತ್ತು ವಸತಿಗೃಹಗಳಲ್ಲಿ ಇಂಟರ್‌ ನೆಟ್‌ ಸೌಲಭ್ಯ ಕಲ್ಪಿಸಲು 44 ಲಕ್ಷ ರೂ, ವಾಹನಗಳ ಇಂಧನಕ್ಕೆ 44 ಲಕ್ಷ ರೂ. ತುರ್ತು ಬಳಕೆಗಾಗಿ ವಾಹನಗಳನ್ನು ಬಾಡಿಗೆ ಪಡೆದುಕೊಳ್ಳಲು 25 ಲಕ್ಷ ರೂ, ಚಾಲಕರ ವಸತಿಗಾಗಿ 20 ಲಕ್ಷ ರೂ, ಕಟ್ಟಡಗಳ ಅಲಂಕಾರಕ್ಕಾಗಿ 15 ಲಕ್ಷ ರೂ. ವೆಚ್ಚವಾಗಲಿದೆ. ಸ್ವಚ್ಚತೆ, ಬಿಸಿನೀರು, ಸ್ಟೇಷನರಿ ಮತ್ತಿತರ ವೆಚ್ಚಗಳಿಗಾಗಿ 25 ಲಕ್ಷ ರೂ ಬಳಕೆ ಮಾಡಲಿದೆ. ಸುವರ್ಣಸೌಧದ ಎದುರು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 15 ಲಕ್ಷ ರೂ ನಿಗದಿ ಮಾಡಲಾಗಿದೆ.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆ ನಡೆಸಬೇಕು ಎಂದು ಕಳೆದ 15 ವರ್ಷಗಳಿಂದ ಬೆಳಗಾವಿಯಲ್ಲಿ ಚಳಿಗಾಲದ ಅದಿವೇಶನ ನಡೆಯುತ್ತಿದೆ. ಆದರೆ ಉತ್ತರ ಕರ್ನಾಟಕ ಕುರಿತು ಚರ್ಚೆ ನಡೆದಿದ್ದು ಕಡಿಮೆಯೇ. ಇದಕ್ಕೆ ಎಲ್ಲ ಆಡಳಿತ ಮತ್ತು ಪ್ರತಿಪಕ್ಷಗಳೂ ಸಮಾನ ಹೊಣೆಯನ್ನು ಹೊರಬೇಕು. ಯಾವುದೇ ಪಕ್ಷದ ಸರ್ಕಾರವೂ ಅಧಿವೇಶನವೂ ಗಂಭೀರವಾಗಿ
ಪರಿಗಣಿಸಿಯೇ ಇಲ್ಲ.

More articles

Latest article