ಮುಜಾಫರ್ ನಗರ: ಮುಜಾಫರ್ ನಗರದ ಭೆನ್ಸಿ ಎಂಬ ಗ್ರಾಮದಲ್ಲಿ ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಗ್ರಾಮದ ಮುಖಂಡ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಬಾಬುರಾಮ್ ಎಂಬುವವರು ನವೆಂಬರ್ 9 ರಂದು ಮೃತಪಟ್ಟಿದ್ದರು. ಶವವನ್ನು ಗ್ರಾಮದ ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ಗ್ರಾಮದ ಮುಖಂಡ ಅಮಿತ್ ಅಹ್ಲಾವತ್ ನೇತೃತ್ವದ ಗುಂಪು ಅಂತಿಮ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದರು. ಅಲ್ಲದೆ, ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಸೋನಿಯಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಮಶಿಶ್ ಯಾದವ್ ಹೇಳಿದ್ದಾರೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆರೋಪಿಗಳ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.