ಬೆಂಗಳೂರು: ದಿಂಗಾಲೇಶ್ವರ ಸ್ವಾಮೀಜಿಯವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬುದು ನಮಗೆ ಗೊತ್ತಿರಲಿಲ್ಲ. ಮೊದಲೇ ಗೊತ್ತಿದ್ದರೆ ನಾವೇ ಯೋಚನೆ ಮಾಡುತ್ತಿದ್ದವು. ಧಾರವಾಡ ಕ್ಷೇತ್ರದಲ್ಲಿ ಬಹಳಷ್ಟು ಅನ್ಯಾಯ ಆಗ್ತಿದೆ. ಧಾರವಾಡದಲ್ಲಿ ಹಿಟ್ಲರ್ ಆಡಳಿತ ಆಗಿಬಿಟ್ಟಿದೆ. ಸ್ವಾಮೀಜಿಯವರು ಅನ್ಯಾಯದ ವಿರುದ್ದ ಧ್ವನಿ ಎತ್ತಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿಗಳಿಗೆ ನಾನು ಸೆಲ್ಯೂಟ್ ಮಾಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮನ್ನು ಕೂಡ ಸಂಸದ ಪ್ರಹ್ಲಾದ್ ಜೋಷಿ ಟೆರರಿಸ್ಟ್ ಗಳ ತರ ನೋಡ್ತಾರೆ. ಸ್ವಾಮೀಜಿಯವರು ಅನ್ಯಾಯದ ವಿರುದ್ದ ಸಿಡಿದು ನಿಂತಿದ್ದಾರೆ. ಯಾವಾಗ ಅನ್ಯಾಯ ಅತಿರೇಕಕ್ಕೆ ಹೋಗಿದೆ. ಅದಕ್ಕಾಗಿ ಸ್ಪರ್ಧೆ ಮಾಡ್ತಾರೆ. ಯಾರು ಅನ್ಯಾಯ ಮಾಡಿದ್ದಾರೋ ಅವರ ಹೆಸರನ್ನೇ ಸ್ವಾಮೀಜಿ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಧಾರವಾಡ ಜನತೆ ಇಂಥ ದುಷ್ಟರನ್ನು ದೂರ ಕಳಿಸಬೇಕು. ಬಿಜೆಪಿ ಪಕ್ಷದಲ್ಲಿ ಇದ್ದವರಿಗೂ ಕೂಡ ಜೋಷಿಯವರ ಬಗ್ಗೆ ಬೇಸರ ಇದೆ, ಅನ್ಯಾಯ ಆಗಿದೆ. ಈಗಾಗಲೇ ನಾವು ಅಭ್ಯರ್ಥಿ ಘೋಷಣೆ ಮಾಡಿದ್ದರಿಂದ ಸ್ವಾಮೀಜಿಯವರನ್ನು ಕಾಂಗ್ರೆಸ್ ಗೆ ಕರೆತರುವುದು ಕಷ್ಟವಾಗುತ್ತಿದೆ. ಸ್ವಾಮೀಜಿ ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಸ್ವಪಕ್ಷೀಯರೆ ಅವರಿಂದ ನೋವು ಅನುಭವಿಸುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುವುದಕ್ಕೂ ಅವರೇ ಕಾರಣ. ನಾನು ಜಿಲ್ಲೆಗೇ ಕಾಲಿಡದಂತೆ ಪಿತೂರಿ ಮಾಡಿದ್ದಾರೆ. ನನ್ನ ಹಾಗೆ ಜೋಷಿಯವರಿಂದ ನೊಂದವರು ಬಹಳ ಜನ ಇದ್ದಾರೆ. ಅವರಿಂದ ಅನ್ಯಾಯಕ್ಕೆ ಒಳಗಾದ ಹಲವಾರು ಸ್ವಾಮೀಜಿಗಳಿದ್ದಾರೆ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಹರಿಹಾಯ್ದಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ನನ್ನ ಡೈರಿ ಹಾಲು ಮಾರಾಟ ಮಾಡಲು ಬಿಟ್ಟಿಲ್ಲ. 300 ರೂಮ್ ಗಳಿರುವ ಬಿಲ್ಡಿಂಗ್ ನಲ್ಲಿ ನನ್ನನ್ನು ಒಬ್ಬನ್ನೆ ಇಟ್ಟಿದ್ದರು ಎಂದು ನೆನಪಿಸಿಕೊಂಡ ಅವರು, ಇದಕ್ಕೆಲ್ಲ ಜೋಶಿ ಕಾರಣ ಎಂದರು.
ಅಭ್ಯರ್ಥಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ವಿನೋದ್ ಅಸೂಟಿ ಯುವ ನಾಯಕ, ಒಳ್ಳೆಯ ಪ್ರಚಾರ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಏನು ತೀರ್ಮಾನ ಮಾಡ್ತಾರೆ ನೋಡೋಣ. ಯಾಕೆಂದರೆ ಈ ರೀತಿಯ ಅನೇಕ ಘಟನೆಗಳು ಅವರು ನೋಡಿರುತ್ತಾರೆ. ಕರೆದು ಮಾತಾಡಿದರೆ ನಾವು, ಸಂತೋಷ ಲಾಡ್ ಸೇರಿದಂತೆ ಜಿಲ್ಲೆ ಹಿರಿಯ ನಾಯಕರು ಅಭಿಪ್ರಾಯ ಹೇಳುತ್ತೇವೆ ಎಂದಿದ್ದಾರೆ.