ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಳ್ಳಲು ಟಿಪ್ಪು ಸುಲ್ತಾನ್, ಮಹಿಷಾಸುರ ಕಾರಣರೇ?

Most read

ಬೆಂಗಳೂರು: ಎರಡು ಬಾರಿ ಮೈಸೂರು-ಕೊಡಗು ಕ್ಷೇತ್ರ ಸಂಸತ್ ಸದಸ್ಯರಾಗಿದ್ದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೇ ಯದುವೀರ ಒಡೆಯರ್ ಅವರನ್ನು ಕಣಕ್ಕಿಳಿಸುತ್ತಿದೆ. ಟಿಕೆಟ್ ಕಳೆದುಕೊಂಡ ಬೆನ್ನಲ್ಲೇ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣಗಳಲ್ಲಿ ದಾರುಣವಾಗಿ ಟ್ರಾಲ್ ಆಗುತ್ತಿದ್ದಾರೆ.

ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿರುವ ವಿಷಯ ಗೊತ್ತಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಅಭಿಪ್ರಾಯಗಳು ಕೇಳಿ ಬಂದವು. ಈ ಪೈಕಿ ಅತಿ ಹೆಚ್ಚು ಗಮನ ಸೆಳೆದಿದ್ದು, ಟಿಪ್ಪು ಸುಲ್ತಾನ್ ಮತ್ತು ಮಹಿಷಾಸುರರ ಪ್ರಸ್ತಾಪಗಳು. ಟಿಪ್ಪು ಸುಲ್ತಾನ್ ಮತ್ತು ಮಹಿಷಾಸುರರಿಗೆ ಪ್ರತಾಪ್ ಸಿಂಹ ಅಪಮಾನ ಎಸಗಿದ್ದರಿಂದಲೇ ಟಿಕೆಟ್ ಕಳೆದುಕೊಂಡಿದ್ದಾರೆ, ಅವರ ಶಾಪ ತಟ್ಟಿದೆ ಎಂದು ಫೇಸ್ ಬುಕ್ ಮತ್ತು ಎಕ್ಸ್ ಬಳಕೆದಾರರು ಟಾಂಗ್ ನೀಡಿದ್ದಾರೆ. ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲಾವಣೆಯನ್ನು ಪ್ರಸ್ತಾಪಿಸಿರುವ ಹಲವರು, ಕರ್ಮ ರಿಟರ್ನ್ಸ್ ಎಂದು ಬರೆದಿದ್ದಾರೆ.

ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಅಂದು ಟಿಪ್ಪು ಹೆಸರು ಬದಲಿಸಿ ನೀನು ಒಡೆಯರ್ ಹೆಸರಿಟ್ಟೆ, ಇಂದು ಒಡೆಯರ್ ನಿನ್ನನ್ನೇ ಬದಲಾಯಿಸಿದರು. ಏನಿದು ಟಿಪ್ಪು ಮಹಿಮೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟನ್ನು 1900ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 279 ಮಂದಿ ಹಂಚಿಕೊಂಡಿದ್ದಾರೆ.

ಟಿಪ್ಪು ಹಾಗು ಮಹಿಷಾಸರು ಇಬ್ಬರೂ ಸೇರಿ ಸಿಂಹನನ್ನು ಬೋನಿಗೆ ಹಾಕಿದ್ದಾರೆ, ಇದಕ್ಕೆ ಹುಚ್ಚು ಹಿಡಿದು ಕಂಡಕಂಡವರನ್ನು ಕಚ್ಚುತ್ತಿತ್ತು ಎಂದು ಶ್ರೀರಾಮಪ್ಪ ಚಿನ್ನಪ್ಪ ಎಂಬುವವರು ಬರೆದಿದ್ದಾರೆ.

ಮಹಿಷ ದೊರೆ ರಾಕ್ಸ್, ಪ್ರತಾಪ್ ಸಿಂಹ ಶಾಕ್ ಎಂದು ಬರೆಯಲಾದ ಪೋಸ್ಟರ್ ಗಳನ್ನು ನೂರಾರು ಮಂದಿ ಹಂಚಿಕೊಂಡು ಮಹಿಷಾಸುರನಿಗೆ ಮಾಡಿದ ಅವಮಾನಕ್ಕೆ ಸಿಂಹ ಬೆಲೆ ತೆತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪತ್ರಕರ್ತ ಏ.ಕೆ. ಕುಕ್ಕಿಲ, ಫೇಸ್ ಬುಕ್ ನಲ್ಲಿ ಪ್ರತಾಪ್ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ದೀರ್ಘವಾಗಿ ಬರೆದಿದ್ದು, ನಿಜಕ್ಕೂ ಬಿಜೆಪಿ ಹೈಕಮಾಂಡ್ ಟಿಪ್ಪು ಸುಲ್ತಾನರ ವಿರೋಧಿಯೋ ಅಥವಾ ಪ್ರೇಮಿಯೋ ಎಂಬ ಅನುಮಾನ ಕಾಡುತ್ತಿದೆ. ಟಿಪ್ಪು ಸುಲ್ತಾನ್ ರನ್ನು ಕ್ರೂರಿ, ಮತಾಂಧ, ಮತಾಂತರಿ, ನಾಡದ್ರೋಹಿ, ಪರಮ ಹೇಡಿ… ಎಂಬಲ್ಲಿಂದ ಹಿಡಿದು ಅತ್ಯಂತ ಅವಹೇಳನಕಾರಿಯಾಗಿ ಮತ್ತು ಅತಿ ಕೆಟ್ಟ ಭಾಷೆಯಲ್ಲಿ ಬೈದ ಒಬ್ಬೊಬ್ಬರೇ ನಾಯಕರನ್ನು ಬಿಜೆಪಿ ಹೈಕಮಾಂಡ್ ಒದ್ದು ಹೊರ ಹಾಕುತ್ತಿದೆ. ಇದಕ್ಕೆ ಲೇಟೆಸ್ಟ್ ಸೇರ್ಪಡೆ ಮೈಸೂರು ಸಂಸದ ಪ್ರತಾಪ ಸಿಂಹ ಮತ್ತು ದ ಕ ಸಂಸದ ನಳಿನ್ ಕುಮಾರ್ ಕಟೀಲ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಾಪಸಿಂಹರಂತೂ ಟಿಪ್ಪು ಸ್ಮರಣೆಯಲ್ಲೇ ಮಾತು ಆರಂಭಿಸುತ್ತಿದ್ದರು. ಟಿಪ್ಪು ವಿರುದ್ಧ ಅತಿರಂಜಿತವಾಗಿ ಪುಸ್ತಕ ಬರೆದರು. ಟಿಪ್ಪುವನ್ನು ಹೇಗೆಲ್ಲಾ ಅವಮಾನಿಸಬಹುದೋ ಹಾಗೆಲ್ಲ ಪ್ರತಿದಿನ ಅವಮಾನಿಸಿದರು. ಕಟೀಲ್ ಕೂಡ ಕಡಿಮೆ ಇರಲಿಲ್ಲ. ಇದೀಗ ಇವರಿಬ್ಬರನ್ನೂ ಖಾಲಿ ಕೈಯಲ್ಲಿ ಬಿಜೆಪಿ ಹೈಕಮಾಂಡ್ ಬೀದಿಗಟ್ಟಿದೆ. ಈ ಮೊದಲು ಅಸೆಂಬ್ಲಿ ಚುನಾವಣೆಯಲ್ಲಿ ಈಶ್ವರಪ್ಪರಿಗೆ ಬಿಜೆಪಿ ಟಿಕೆಟ್ ಅನ್ನೇ ನಿರಾಕರಿಸಿತ್ತು. ಸಿ ಟಿ ರವಿಯನ್ನು ಒಳಗಿಂದೊಳಗೇ ಮಸಲತ್ತು ನಡೆಸಿ ಸೋಲಿಸಿತ್ತು. ಇವರಿಬ್ಬರೂ ಉರಿ ಗೌಡ ನಂಜೇಗೌಡ ಪಾತ್ರಧಾರಿಗಳಾಗಿ ಹಲವು ಸಮಯ ಮಿಂಚಿದ್ದರು. ಈ ಎರಡು ಕಾಲ್ಪನಿಕ ಪಾತ್ರಗಳನ್ನು ಎತ್ತಿಕೊಂಡು ಟಿಪ್ಪುವನ್ನು ಹೇಡಿಯಂತೆ, ಕ್ರೂರಿ ಯಂತೆ ಮತ್ತು ಇಲ್ಲಿ ಬರೆಯಲೂ ಸಾಧ್ಯವಾಗದ ಭಾಷೆಯಲ್ಲಿ ಅವಮಾನಿಸಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಅವರ ಭಾಷೆ ಇವರಂತೆ ಇಲ್ಲದಿದ್ದರೂ ಅವರೂ ಇವರ ತಾಳಕ್ಕೆ ತಕ್ಕಂತೆ ಕುಣಿದಿದ್ದರು. ಅವರಂತೂ ಮುಖ್ಯಮಂತ್ರಿ ಸ್ಥಾನವನ್ನೇ ಕಳ್ಕೊಂಡರು ಎಂದು ಕುಕ್ಕಿಲ ಬರೆದಿದ್ದಾರೆ.

ಹಿರಿಯ ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಂಡ ವಿಷಯವನ್ನು ಪ್ರಸ್ತಾಪಿಸುತ್ತ, ಮೋದಿಯ ನಾಮಬಲ ಇಲ್ಲದಿದ್ದರೆ ಒಂದು ಗ್ರಾಮಪಂಚಾಯ್ತಿ ಚುನಾವಣೆಯನ್ನೂ ಗೆಲ್ಲಲು ಸಾದ್ಯವಿಲ್ಲದಿದ್ದ ಪ್ರತಾಪ ಸಿಂಹಗೆ ಇದೀಗ ಯಾವ್ ಯಾವ್ದೋ ಕಡೆಯಿಂದ ಸರುಯಾಗೇ ಗುನ್ನ ಬಿದ್ದಿದೆ. ದೇವೇಗೌಡರೋ, ಯಡಿಯೂರಪ್ಪ ಅವರೋ ಒಟ್ಟಲ್ಲಿ ಬಾಲ ಕಟ್ ಮಾಡಿ ಕುಕ್ಕುರು ಬಡಿ ಅಂದಿದ್ದಾರೆ. ಮೊನ್ನೆ ಗೋಳೋ ಅಂತಿದ್ದ ಸಿಮ್ಮ, ನೆನ್ನೆ ಯದುವೀರ ಬಗ್ಗೆ ವ್ಯಂಗ್ಯವಾಡಿ ಅವರೇ ಹಿಂದೆ ಸರಿಯಬಹುದೇನೋ ಅಂತ ಟ್ರೈ ಮಾಡಿರಬೇಕು. ಇವತ್ತು ಮೇಲಿಂದ ಯಾರೋ ಗುಮ್ಮಿರಬೇಕು. ಅದಕ್ಕೇ ‘ನಾನು ಜೀವ ಇರೋವರೆಗೂ ಮೋದಿ, ಬಿಜೆಪಿ ಬಿಡಲ್ಲ’ ಅಂತಿದ್ದ. ವ್ಯಕ್ತಿಗಳಿಗೆ ಬದುಕಲ್ಲಿ ಏನಿರದಿದ್ರೂ ಒಂದು ಗೌರವ ಘನತೆ ಇರಬೇಕು, ಯಾರಿಗೋ ಬಕೆಟ್ ಹಿಡಿಯೋದು, ಇನ್ನಾರಿಗೋ ಸಿಂಟೆಕ್ಸ್ ಹಿಡಿಯೋದು ಸರಿಯಲ್ಲ ಎಂದು ಫೇಸ್‌ ಬುಕ್‌ ನಲ್ಲಿ ಬರೆದಿದ್ದಾರೆ.

More articles

Latest article