ಕನ್ನಡದ ಹಾಡಿಗೂ ಪಹಲ್ಗಾಮ್ ಹತ್ಯಾಕಾಂಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಆದರೆ ಸೋನು ನಿಗಮ್ ಒಳಗಿದ್ದ ಕೋಮುವಾದಿತನ ಈ ರೀತಿಯ ಅಸಂಬದ್ಧ ಸಂಬಂಧವನ್ನು ಕಲ್ಪಿಸಿತ್ತು. ಕನ್ನಡದ ಹಾಡಿಗಾಗಿ ಒತ್ತಾಯಿಸುವುದು ಉಗ್ರರು ನಡೆಸಿದ ನರಹತ್ಯೆಗೆ ಸಮ ಎನ್ನುವ ರೀತಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ಈ ಗಾಯಕ ತನ್ನೊಳಗಿನ ಮತಾಂಧತೆಯನ್ನು ಹೊರಗೆ ಹಾಕಿದ್ದಾನೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಫಲ ತುಂಬಿದ ಮರ ಬಾಗಬೇಕೇ ಹೊರತು ಬೀಗಬಾರದು. ಮಾಡಿದ ಸಾಧನೆ ಹೆಚ್ಚಾದಷ್ಟೂ ಯಶಸ್ಸಿನ ಹುಚ್ಚು ಅತಿಯಾಗಬಾರದು. ಆದರೆ ಈ ಸೋನು ನಿಗಮ್ ಎನ್ನುವ ಗಾಯಕ ತನ್ನ ದುರಹಂಕಾರದ ಮಾತುಗಳಿಂದ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿ ತತ್ತರಿಸಿದ್ದಾನೆ.
ಆಗಿದ್ದಿಷ್ಟೇ.. ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಎನ್ನುವ ಕಾಲೇಜಿನಲ್ಲಿ ಎಪ್ರಿಲ್ 25 ರಂದು ಸಂಗೀತದ ಮನರಂಜನೆ ಕಾರ್ಯಕ್ರಮಕ್ಕೆ ಸುಮಧುರ ಕಂಠದ ಹಾಡುಗಾರ ಸೋನು ನಿಗಮ್ ರವರನ್ನು ಕರೆಸಲಾಗಿತ್ತು. ಬಂದು ಹಾಡಿ ಮನರಂಜಿಸಿ ಹೋಗಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ, ಹೀಗೆಲ್ಲಾ ಪ್ರತಿರೋಧವೂ ವ್ಯಕ್ತವಾಗುತ್ತಿರಲಿಲ್ಲ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಕೇಳಬಾರದ್ದೇನೂ ಕೇಳಿರಲಿಲ್ಲ. ಕನ್ನಡ ಹಾಡು ಹಾಡಿ ಎಂದು ಆಗ್ರಹಿಸಿದ್ದನಷ್ಟೇ. ಇಷ್ಟಕ್ಕೇ ಅಸಹನೆ ಪೀಡಿತನಾದ ಗಾಯಕ ಸೋನು ‘ಕನ್ನಡ ಕನ್ನಡ’ ಎಂದು ವ್ಯಂಗ್ಯವಾಗಿ ಮಾತಾಡಿದ. ಇಷ್ಟೇ ಆಗಿದ್ದರೆ ಆತನ ವರ್ತನೆಯನ್ನು ಸಹಿಸಬಹುದಾಗಿತ್ತು. ಆದರೆ ಯಾವಾಗ “ಪಹಲ್ಗಾಮ್ ಏನು ಘಟನೆ ನಡೆದಿದೆಯೋ ಅದಕ್ಕೆ ಇದೇ ಕಾರಣ, ಈಗ ನೀನು ಮಾಡಿರುವುದೇ ಕಾರಣ” ಎಂದು ಕನ್ನಡದ ಹಾಡಿಗಾಗಿ ಆಗ್ರಹಿಸಿದ ಕನ್ನಡಿಗನಿಗೆ ಕುಹಕವಾಗಿ ಉತ್ತರಿಸಿದ್ದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತೋ ಆಗ ಅದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿತು.
ಕನ್ನಡದ ಹಾಡಿಗೂ ಪಹಲ್ಗಾಮ್ ಹತ್ಯಾಕಾಂಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಆದರೆ ಸೋನು ನಿಗಮ್ ಒಳಗಿದ್ದ ಕೋಮುವಾದಿತನ ಈ ರೀತಿಯ ಅಸಂಬದ್ಧ ಸಂಬಂಧವನ್ನು ಕಲ್ಪಿಸಿತ್ತು. ಕನ್ನಡದ ಹಾಡಿಗಾಗಿ ಒತ್ತಾಯಿಸುವುದು ಉಗ್ರರು ನಡೆಸಿದ ನರಹತ್ಯೆಗೆ ಸಮ ಎನ್ನುವ ರೀತಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ಈ ಗಾಯಕ ತನ್ನೊಳಗಿನ ಮತಾಂಧತೆಯನ್ನು ಹೊರಗೆ ಹಾಕಿದ್ದಾನೆ.
ಯಾವಾಗ ಈ ಹಾಡುಗಾರ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದನೋ, ಯಾವಾಗ ಈ ಗಾಯಕ ಕನ್ನಡಕ್ಕೂ ಭಯೋತ್ಪಾದಕರ ಹತ್ಯಾಕಾಂಡಕ್ಕೂ ನಡುವೆ ಸಲ್ಲದ ಹೋಲಿಕೆ ವಿಸರ್ಜಿಸಿದನೋ ಆಗ ಕನ್ನಡಿಗರು ಕೆರಳಿ ನಿಂತರು. ಕನ್ನಡದ ಸಿನೆಮಾಗಳಲ್ಲಿ ಕನ್ನಡ ಭಾಷೆಯ ಹಾಡುಗಳನ್ನು ಹಾಡಿ ಹೆಸರು ಕೆಲಸ ಹಾಗೂ ಕೋಟ್ಯಂತರ ರೂಪಾಯಿ ಸಂಪಾದಿಸಿರುವ ಈ ಗಾಯಕ ಕನ್ನಡಕ್ಕೆ ಹೀಗೆ ಅವಮಾನ ಮಾಡಿದನೋ ಆಗ ಕನ್ನಡಿಗರಲ್ಲಿ ಆಕ್ರೋಶ ಭುಗಿಲೆದ್ದಿತು. ಸಾಮಾಜಿಕ ಜಾಲತಾಣಗಳಲ್ಲಿ ಸೋನು ನಿಗಮ್ ವಿರುದ್ಧ ಬಂಡಾಯ ಸಾರಲಾಯ್ತು. ಸುದ್ದಿ ಮಾಧ್ಯಮಗಳಲ್ಲೂ ಈ ಗಾಯಕನ ಉಡಾಫೆತನ ಸದ್ದು ಮಾಡಿತು.
“ಕನ್ನಡದ ಹಾಡು ಹೇಳಲು ಕೇಳಿದರೆ ಅದು ಭಯೋತ್ಪಾದಕ ದಾಳಿಗೆ ಹೇಗೆ ಕಾರಣವಾಗುತ್ತದೆ? ಕನ್ನಡದ ಅನ್ನ ತಿಂದು ಕೊಬ್ಬಿರುವ ಈತ ಅದು ಹೇಗೆ ಕರ್ನಾಟಕದಲ್ಲಿ ಶೋಗಳನ್ನು ನಡೆಸುತ್ತಾನೋ ನೋಡೋಣ, ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ, ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರನ್ನು ಖಳನಾಯಕರನ್ನಾಗಿ ಮಾಡುವ ಹುನ್ನಾರವನ್ನು ಖಂಡಿಸುತ್ತೇವೆ” ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರು ಸವಾಲು ಹಾಕಿದರು. ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯ್ತು.
ಇದೇನು ಈ ಗಾಯಕ ಮಾಡಿಕೊಂಡ ಮೊದಲ ಎಡವಟ್ಟೇನಲ್ಲಾ. ಈ ಹಿಂದೆ ಮಸೀದಿಯ ಆಜಾನ್ ವಿರುದ್ಧವೂ ಧ್ವನಿ ಎತ್ತಿ ತನ್ನ ಧಾರ್ಮಿಕ ಅಸಹನೆಯನ್ನು ತೋರಿಸಿದ ಈ ಗಾಯಕ ಹಿಂದುತ್ವವಾದಿಗಳನ್ನು ಮೆಚ್ಚಿಸಲು ಪ್ರಯತ್ನಿಸಿದ್ದ. ಪ್ರತಿಭಾನ್ವಿತ ಹಾಡುಗಾರನಿಗೆ ಈ ರೀತಿಯ ಮತೀಯ ಕೋಮುವಾದಿತನ ಬೇಕಿರಲಿಲ್ಲ. ಈ ಹಾಡುಗಾರನ ಹಾಡುಗಳನ್ನು ಕೇಳಿ ಮೆಚ್ಚಿ ಸಿನೆಮಾಗಳನ್ನು ಗೆಲ್ಲಿಸಿದವರಲ್ಲಿ ಎಲ್ಲಾ ಭಾಷೆ ಮತ ಜಾತಿ ಧರ್ಮದ ಜನರೂ ಇದ್ದಾರೆ. ಆದರೆ ಜನರ ಮೆಚ್ಚುಗೆಯಿಂದ ಉಚ್ಚ ಸ್ಥಾನಕ್ಕೆ ಏರಿದ ಮೇಲೆ ಕನ್ನಡ ಭಾಷಿಕರ ಮೇಲೆ ನೀಚತನ ತೋರುವುದು ಬೇಕಿರಲಿಲ್ಲ.
ಏನೇ ಆಗಲಿ ಸೋನು ನಿಗಮ್ ಸುಮಧುರ ಕಂಠದ ಪ್ರತಿಭಾನ್ವಿತ ಗಾಯಕ. ಅವರು ಹಾಡಿದ ಅದೆಷ್ಟೋ ಹಾಡುಗಳು ಕನ್ನಡಿಗರ ಮನಸಲ್ಲಿ ನಿಂತಿವೆ. ಆದರೆ ಯಶಸ್ಸಿನ ಪಿತ್ತ ನೆತ್ತಿಗೇರಿದ್ದರ ದುಷ್ಪರಿಣಾಮದಿಂದ ಈ ರೀತಿಯ ದುರಹಂಕಾರದ ಮಾತುಗಳು ಹೊರಹೊಮ್ಮಿವೆ. ಕನ್ನಡಿಗರು ದಯಾಳುಗಳು. ಈ ಕಲಾವಿದನ ಪ್ರಮಾದವನ್ನು ಹೊಟ್ಟೆಗೆ ಹಾಕಿಕೊಂಡು, ಆಡಿದ ಮಾತುಗಳಿಗೆ ಕ್ಷಮೆಯಾಚಿಸಲು ಆಗ್ರಹಿಸಿದರೆ ಸಾಕು. ಬ್ಯಾನ್ ಮಾಡುವುದು, ಕನ್ನಡ ಸಿನೆಮಾಗಳಿಂದಲೇ ನಿಷೇಧಿಸುವುದು, ಕರ್ನಾಟಕದಲ್ಲಿ ಹಾಡಲು ಅವಕಾಶ ಕೊಡುವುದಿಲ್ಲ ಎನ್ನುವುದು ಖಂಡಿತಾ ಒಳಿತಲ್ಲ.
ಈ ದುರಹಂಕಾರದ ಮಾತುಗಳನ್ನು ಆಡಿದ ಕಾರ್ಯಕ್ರಮದಲ್ಲಿಯೇ “ನನ್ನ ಜೀವನದಲ್ಲಿ ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದವು. ಕರ್ನಾಟಕಕ್ಕೆ ಬಹಳ ಪ್ರೀತಿಯಿಂದ ಬರುತ್ತೇನೆ. ನಾನು ಕನ್ನಡಿಗರನ್ನು ಪ್ರೀತಿಸುತ್ತೇನೆ” ಎಂದೂ ಸಹ ಸೋನು ನಿಗಮ್ ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಅಭಿಮಾನದಿಂದಲೇ ಹೇಳಿದ್ದಾರೆ. ಹೀಗಾಗಿ ಈ ಗಾಯಕ ನುಡಿದ ಉಡಾಫೆ ಮಾತುಗಳಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುವ ಮೂಲಕ ಕಲಾವಿದನನ್ನು ಕ್ಷಮಿಸುವ ದೊಡ್ಡಗುಣ ಕನ್ನಡಿಗರದ್ದಾಗಲಿ. ಅತಿರೇಕದ ಮಾತಿಗೆ ಕ್ಷಮೆಯಾಚಿಸುವ ಮೂಲಕ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಸದ್ಬುದ್ಧಿ ಸೋನು ನಿಗಮ್ ರವರಿಗೆ ಬರಲಿ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಕನ್ನಡಿಗರ ಭಾವನೆಗಳನ್ನು ಪಹಲ್ಗಾಮ್ ಕೃತ್ಯಕ್ಕೆ ಹೋಲಿಸಿದ್ದ ಗಾಯಕ ಸೋನು ನಿಗಂ ವಿರುದ್ಧ ಬೆಂಗಳೂರಿನಲ್ಲಿ ಎಫ್ ಐ ಆರ್