ಸುದ್ದಿ ಮಾಧ್ಯಮಗಳ ಮೇಲೆ ಸರ್ವಾಧಿಕಾರಿಯ ಹಿಡಿತ

Most read

ಈಗ ಸರ್ವಾಧಿಕಾರಿಯ ಪಿತ್ತ ನೆತ್ತಿಗೇರಿದ್ದು, ಸೋಷಿಯಲ್ ಮೀಡಿಯಾಗಳ ಮೇಲೆ ನಿಯಂತ್ರಣ ಹೇರುವ ಕಾನೂನು ಜಾರಿಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಸರಕಾರವೇ ಬಹುಮತದಿಂದ ಅಧಿಕಾರಕ್ಕೆ ಬಂದರೆ ಮೊಟ್ಟ ಮೊದಲು ಜಾರಿಯಾಗುವುದೇ “ ಬ್ರಾಡ್‌ ಕಾಸ್ಟಿಂಗ್ ಸರ್ವಿಸಸ್ (ರೆಗ್ಯುಲೇಶನ್) ಬಿಲ್ “. ಇಲ್ಲಿಗೆ ಪರ್ಯಾಯ ಸ್ವತಂತ್ರ ಮಾಧ್ಯಮಗಳ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಾನೂನಾತ್ಮಕವಾಗಿ ದಮನಿಸಲಾಗುತ್ತದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಇರುವುದನ್ನು ಇದ್ದಂತೆ ತೋರಿಸುವುದು, ಸತ್ಯಕ್ಕೆ ಅಪಚಾರ ಆಗದಂತೆ ನೋಡಿಕೊಳ್ಳುವುದೇ ಪತ್ರಿಕಾಧರ್ಮ ಎಂಬುದು ಹಳೆಯ ಮಾತು. ಈಗ ಫ್ಯಾಸಿಸಂ ಪೂರ್ವಕಾಲ. ಡೆಮಾಕ್ರಸಿಯ ಮುಖವಾಡ ಹಾಕಿರುವ ಡಿಕ್ಟೇಟರ್ ಆಳುತ್ತಿರುವ ಕಾಲ. ತನಗೆ ಬೇಕಾದಂತೆ ವಿದ್ಯಮಾನಗಳನ್ನು ತಿರುಚಿ ಜನರನ್ನು ನಂಬಿಸಲು ಈ ಸುದ್ದಿ ಮಾಧ್ಯಮಗಳು ಅಂದರೆ ಮೀಡಿಯಾಂಗಗಳನ್ನು ಪಳಗಿಸುವ ಕೆಲಸವನ್ನು ಕಳೆದ ಹತ್ತು ವರ್ಷಗಳಿಂದ ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗಿದೆ. ಆಳುವ ಪ್ರಭುವಿನ ಹಿತಾಸಕ್ತಿಗೆ, ಆತನ ಹಿಂದಿರುವ ಸಂಘದ ಸಿದ್ಧಾಂತಕ್ಕೆ ಪೂರಕವಾಗಿ ಸುದ್ದಿ ಮಾಧ್ಯಮಗಳು ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ನಿಯಂತ್ರಿಸುವ ಸಂಚು ಮಿಂಚಿನ ವೇಗದಲ್ಲಿ ನಡೆದುಕೊಂಡು ಬಂದಿದೆ. 

ನಮ್ಮ ದೇಶದ ಸಂವಿಧಾನಕ್ಕೆ ಆಧಾರವಾಗಿರೋದು ಮೂರು ಮತ್ತೊಂದು ಕಾಲುಗಳು. ನ್ಯಾಯಾಂಗವನ್ನೂ ನಿಯಂತ್ರಿಸಲಾಗುತ್ತಿದೆ. ತಮಗೆ ಬೇಕಾದವರನ್ನೇ ನ್ಯಾಯಾಧೀಶರಾಗಿ ಆಯ್ಕೆ ಮಾಡುವ ಹಾಗೂ ತಮಗೆ ಅನುಕೂಲಕರವಾದ ತೀರ್ಪನ್ನು ಪಡೆಯುವ ತಂತ್ರಗಾರಿಕೆ ಕೆಲವಾರು ಸಂದರ್ಭಗಳಲ್ಲಿ ಗೊತ್ತಾಗಿದೆ. ಜನರ ಭಾವನೆಗಳನ್ನು ಪ್ರಚೋದಿಸಿ, ಭ್ರಮೆಗಳನ್ನು ಹುಟ್ಟಿಸಿ ಶಾಸಕಾಂಗವನ್ನು ಹೇಗೆ ವಶಪಡಿಸಿಕೊಂಡು ಅಧಿಕಾರ ಗಳಿಸಬೇಕು ಎನ್ನುವುದು ಪ್ರಾಯೋಗಿಕವಾಗಿ ಈಗಾಗಲೇ ಜಾರಿಯಾಗಿದೆ. ಶಾಸಕಾಂಗ ಹೇಳಿದಂತೆ  ಕಾರ್ಯಾಂಗ ಕಾರ್ಯಪ್ರವೃತ್ತವಾಗಿದೆ. ತನಿಖಾ ಸಂಸ್ಥೆಗಳ ವ್ಯಾಪಕ ದುರ್ಬಳಕೆ ಇದಕ್ಕೆ ಸಾಕ್ಷಿಯಾಗಿದೆ. 

ಈ ಮೂರೂ ಮುಖ್ಯ ಅಂಗಗಳ ಮೇಲೆ ನಿಯಂತ್ರಣ ಸಾಧಿಸಿದ ಮೇಲೆ ಕೊನೆಗೆ ಉಳಿದಿರುವ ಆ ಇನ್ನೊಂದೇ ಮಾಧ್ಯಮಾಂಗ. ಬಹುತೇಕ ಸುದ್ದಿ ಮಾಧ್ಯಮಗಳು ಈಗಾಗಲೇ ಸರ್ವಾಧಿಕಾರಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಅಂತವುಗಳಿಗೆ ಗೋದಿ ಮೀಡಿಯಾ ಅಂತಲೋ, ಮಾರಿಕೊಂಡ ಮಾಧ್ಯಮಗಳು ಅಂತಲೋ ಕರೆಯಲಾಗುತ್ತದೆ. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳನ್ನೇ ಒಂದೊಂದಾಗಿ ಹಿಡಿತಕ್ಕೆ ತೆಗೆದುಕೊಂಡಾದ ಮೇಲೆ ಸಂವಿಧಾನವನ್ನು ಬುಡಮೇಲು ಮಾಡಲು ಇನ್ನೇನು ಹೆಚ್ಚು ಕಾಲ ಬಾಕಿ ಉಳಿದಿಲ್ಲ. 2024 ರ ಲೋಕಸಭಾ ಚುನಾವಣೆಯಲ್ಲಿ ಈ ದೇಶದ ಜನತೆ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಭಾರೀ ಬಹುಮತ ಕೊಟ್ಟಿದ್ದೇ ಆದರೆ ಸಂವಿಧಾನ ಬದಲಾವಣೆ ಶತಸಿದ್ಧ. ಹಿಂದೂ ರಾಷ್ಟ್ರದ ಹೆಸರಲ್ಲಿ ಹಿಂದುತ್ವವಾದಿ ಸರ್ವಾಧಿಕಾರ ಅಸ್ತಿತ್ವಕ್ಕೆ ಬರೋದಂತೂ ಸತ್ಯ. ಫ್ಯಾಸಿಸಂ ವ್ಯವಸ್ಥೆಯ ಆಡಳಿತ ಬಂದಿದ್ದೇ ಆದರೆ ಅದಕ್ಕೆ ಈ ಗೋದಿ ಮೀಡಿಯಾಗಳ ಕೊಡುಗೆ ಅಪಾರ. ಯಾಕೆಂದರೆ ಬಹುಜನರ ಆಲೋಚನೆಗಳ ದಿಕ್ಕನ್ನು ಒಂದು ಸಿದ್ಧಾಂತದ ಪರವಾಗಿ ಮಾರ್ಪಡಿಸುವ ಸಾಮರ್ಥ್ಯ ಸುದ್ದಿ ಮಾಧ್ಯಮಗಳಿಗಿದೆ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಸುಳ್ಳುಗಳನ್ನೇ ಪ್ರಚಾರ ಮಾಡುತ್ತಾ ಸತ್ಯವೆಂಬ ಭ್ರಮೆಯನ್ನು ಹುಟ್ಟಿಸುವಲ್ಲಿ ಮೀಡಿಯಾಂಗಗಳು ಪ್ರಯತ್ನಿಸುತ್ತಲೇ ಇರುತ್ತವೆ.  

ಸುದ್ದಿ ಮಾಧ್ಯಮಗಳ ಕಾರ್ಪೋರೇಟೀಕರಣ..

ಈ ಸುದ್ದಿ ಮಾಧ್ಯಮಗಳೇಕೆ ಪ್ರಭುತ್ವದ ಪರವಾಗಿವೆ? ಯಾಕೆಂದರೆ ಈಗ ಭಾರತದಲ್ಲಿ ಇರುವ ಸುದ್ದಿ ಮಾಧ್ಯಮಗಳು ಅದರಲ್ಲೂ ಪ್ರಮುಖವಾಗಿ ಬಹುತೇಕ ವಿದ್ಯುನ್ಮಾನ ಮೀಡಿಯಾಗಳು ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ಮಾಲೀಕತ್ವದಲ್ಲಿವೆ. ಉದಾಹರಣೆಗೆ.. ಅತೀ ದೊಡ್ಡ ಕಾರ್ಪೋರೇಟ್ ದೈತ್ಯ ಮುಖೇಶ ಅಂಬಾನಿ ಹಾಗೂ ಗೌತಮ್ ಅಂಬಾನಿಯವರ ಒಡೆತನದ ಕಂಪನಿಗಳ ನಿಯಂತ್ರಣದಲ್ಲಿ ಪ್ರಮುಖ ನ್ಯೂಸ್ ಚಾನೆಲ್ ಗಳಿವೆ. ಇವು ತಮ್ಮ ಸುದ್ದಿ ಮಾಧ್ಯಮಗಳ ಮೂಲಕ ಬಿಜೆಪಿಯ ಪರವಾದ ಅಲೆಯನ್ನು ಸೃಷ್ಟಿಸಲು, ಮೋದಿಯನ್ನು ವಿಶ್ವಗುರು ಎಂದು ಸಾಬೀತು ಪಡಿಸಲು, ವಿರೋಧ ಪಕ್ಷಗಳನ್ನು ಟೀಕಿಸಲು 24/7 ಮೀಸಲಾಗಿವೆ. ಕರ್ನಾಟಕದಲ್ಲಿರುವ ಬಹುತೇಕ ಸುದ್ದಿ ಮಾಧ್ಯಮಗಳು ಮೋದಿ ಭಜನಾ ಮಂಡಳಿ ಸೇರಿವೆ. ಅಕಸ್ಮಾತ್ ಮೋದಿ ವಿರುದ್ದ ಹಾಗೂ ಬಿಜೆಪಿ ವಿರುದ್ಧ ಯಾವುದಾದರೂ ಸುದ್ದಿ ಮಾಧ್ಯಮ ನಿರಂತರವಾಗಿ ಮುಗಿಬಿದ್ದಿದ್ದೇ ಆದರೆ ಆ ವಾಹಿನಿಯ ಕತ್ತು ಹಿಚುಕಲು ಹಾಗೂ ಮುಚ್ಚಿಸಲು ಏನು ಮಾಡಬೇಕೋ ಅದನ್ನು ಮಾಡಿ ಮುಗಿಸಲು ಮೋದಿ ಪಡೆ ಸಿದ್ಧವಾಗಿರುತ್ತದೆ. 

ಉದಾಹರಣೆಗೆ ಕರ್ನಾಟಕದಲ್ಲಿ ಶಶಿಧರ್ ಭಟ್ ರವರ ಸುದ್ದಿ ಟಿವಿ ಬಿಜೆಪಿ ಪಕ್ಷದ ವಿರುದ್ಧ ನಿಂತಿದ್ದರಿಂದ ಅದರ ಆರ್ಥಿಕ ಸಂಪನ್ಮೂಲಗಳನ್ನೇ ನಿಲ್ಲಿಸಿ ಆ ಚಾನೆಲನ್ನು ಮುಚ್ಚಿಸಲಾಯ್ತು. ಯಡಿಯೂರಪ್ಪನವರ ಕುಟುಂಬದ ಭ್ರಷ್ಟಾಚಾರದ ವಿರುದ್ಧ ತಿರುಗಿ ಬಿದ್ದಿದ್ದರಿಂದಾಗಿ ಪವರ್ ಟಿವಿಯ ಸ್ಟುಡಿಯೋಗೆ ತನಿಖಾ ಸಂಸ್ಥೆಗಳನ್ನು ನುಗ್ಗಿಸಿ ಉಪಕರಣಗಳನ್ನು ಸೀಝ್ ಮಾಡಿಸಲಾಯ್ತು. ಈಗ ಪವರ್ ಟಿವಿ ಕೇಸರಿಮಯವಾಗಿ ಬದಲಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು.  ಟಿವಿ 5 ವಾಹಿನಿಯೊಂದನ್ನು ಹೊರತುಪಡಿಸಿ( ಅದೂ ಪೂರ್ತಿ ಅಲ್ಲ) ಕನ್ನಡದ ಸಮಸ್ತ ಸುದ್ದಿ ವಾಹಿನಿಗಳು ಬಿಜೆಪಿ ಪರವಾಗಿವೆ ಇಲ್ಲವೇ ತಮ್ಮ ಅಸ್ತಿತ್ವಕ್ಕಾಗಿ ಸಮತೋಲನದ ಮುಖವಾಡ ಹಾಕಿ ಒಳಗೊಳಗೆ ಕೇಸರೀಕರಣ ಗೊಂಡಿವೆ. 

ಇನ್ನು ರಾಷ್ಟ್ರೀಯ ಮಟ್ಟದಲ್ಲಿ NDTV ಸುದ್ದಿ ಪ್ರಸಾರದಲ್ಲಿ ಸಮತೋಲನ ಹೊಂದಿತ್ತು. ಪ್ರಭುತ್ವ ವಿರೋಧಿ ನಿಲುವನ್ನೂ ಪ್ರಕಟಿಸುತ್ತಿತ್ತು. ಆದರೆ ಆದಾನಿ ಕಂಪನಿ ಆ ಸುದ್ದಿ ವಾಹಿನಿಯ ಶೇರುಗಳನ್ನು ಖರೀದಿಸಿ ಕೇಸರೀಕರಣ ಮಾಡಿಬಿಟ್ಟಿತು. ಅರ್ನಬ್ ಗೋಸ್ವಾಮಿಯವರ ರಿಪಬ್ಲಿಕ್ ಟಿವಿ ಯಂತೂ ಗೋದಿ ಮಾಧ್ಯಮಗಳ ಮುಂಚೂಣಿಯಲ್ಲಿದೆ. ಹೀಗೆ ಈ ಮಾರಿಕೊಂಡ ಮಾಧ್ಯಮಗಳು ಫ್ಯಾಸಿಸ್ಟ್ ವ್ಯವಸ್ಥೆಯ ಸ್ಥಾಪನೆಗೆ ಪೂರ್ವಭಾವಿ ವೇದಿಕೆಯನ್ನು ಸಿದ್ಧಗೊಳಿಸುತ್ತಿವೆ. ಸರ್ವಾಧಿಕಾರಿಯ ಸೃಷ್ಟಿಗೆ ಪೂರಕವಾಗಿ ಸ್ಪಂದಿಸುತ್ತಿವೆ. ದೇಶದ ಜನರ ಮೆದುಳಲ್ಲಿ ಮೋದಿ ಭ್ರಮೆಯನ್ನು ತುಂಬಲು, ಹಿಂದುತ್ವವಾದಿ ಬೀಜಗಳನ್ನು ಬಿತ್ತಲು, ಅನ್ಯಧರ್ಮ ದ್ವೇಷವನ್ನು ಹರಡಲು ಹಗಲಿರುಳು ಶ್ರಮಿಸುತ್ತಿವೆ. ಸತ್ಯ ಸಂಗತಿಗಳನ್ನು ಮರೆಮಾಚಿ ತಿರುಚಲ್ಪಟ್ಟ ಸುದ್ದಿಗಳನ್ನೇ ಹೆಚ್ಚಾಗಿ ಪ್ರಚಾರ ಮಾಡುತ್ತಿವೆ. 

ಆದರೆ ಮೋದಿ ಸರಕಾರ ಹಾಗೂ ಸಂಘ ಪರಿವಾರದ ನಾಯಕರಿಗೆ ಈಗ ಸಿಂಹಸ್ವಪ್ನವಾಗಿ ಕಾಡುತ್ತಿರುವುದು ಸಾಮಾಜಿಕ ಮಾಧ್ಯಮಗಳು. ಯಾವ ಸತ್ಯ ಸಂಗತಿಗಳನ್ನು ಮುಖ್ಯ ಸುದ್ದಿ ವಾಹಿನಿಗಳು ಮುಚ್ಚಿಡುತ್ತವೆಯೋ, ತಿರುಚಲ್ಪಡುತ್ತವೆಯೋ ಅಂತಹ ಸುದ್ದಿಗಳ ಹಿಂದಿರುವ ಸತ್ಯವನ್ನು ನಿರ್ಭಯವಾಗಿ ಹೇಳುವ ಕೆಲಸವನ್ನು ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಯುಟ್ಯೂಬ್ ಗಳಂತಹ ಮಾಧ್ಯಮಗಳು ಮಾಡುತ್ತಿವೆ. NDTV ಮಾರಾಟವಾದ ನಂತರ ಅಲ್ಲಿಂದ ಹೊರಗೆ ಬಂದ ರವೀಶ್ ಕುಮಾರ್ ರವರ ಯುಟ್ಯೂಬ್ ಚಾನೆಲ್ ಚಂದಾದಾರರೇ ಕೋಟಿಯಷ್ಟಿದ್ದಾರೆ. ಧ್ರುವ ರಾಠಿ ಯಂತವರು ತಮ್ಮ ಯುಟ್ಯೂಬ್ ಮೂಲಕ ನೇರಾ ನೇರಾ ಮೋದಿ ಸರಕಾರದ ಸರ್ವಾಧಿಕಾರಿ ನೀತಿಯನ್ನು ಟೀಕಿಸುತ್ತಿದ್ದಾರೆ. ಇದೇ ರೀತಿ ಪ್ರಜಾಪ್ರಭುತ್ವದ ಉಳಿವಿಗಾಗಿ ಸರ್ವಾಧಿಕಾರಿಯ ವಿರುದ್ದ ಹಲವಾರು ಯುಟ್ಯೂಬರ್ ಗಳು ಸಿಡಿದೆದ್ದು ನಿಂತಿದ್ದಾರೆ. ಇಡೀ ವಿಶ್ವದ ಅತಿ ದೊಡ್ಡ ಚುನಾವಣಾ ಬಾಂಡ್ ಹಗರಣದ ಬಗ್ಗೆ ಅತೀ ಹೆಚ್ಚು ವಿವರಗಳನ್ನು ಕೊಟ್ಟು ಮೋದಿ ಸರಕಾರದ ಭ್ರಷ್ಟಾಚಾರದ ಹಿಂದಿರುವ ಸತ್ಯ ಸಂಗತಿಗಳನ್ನು ಜನರಿಗೆ ತಲುಪಿಸಿದ್ದು ಇದೇ ಸೋಷಿಯಲ್ ಮೀಡಿಯಾಗಳು. ‌

ಹೀಗಾಗಿ ಇಂತಹ ಪ್ರಭಾವಶಾಲಿ ಮಾಧ್ಯಮಗಳನ್ನೇ ತನ್ನ ಪರವಾಗಿ ಬಳಸಿಕೊಳ್ಳಬೇಕೆಂದು ಬಿಜೆಪಿ ಪಕ್ಷವು ಐಟಿ ಸೆಲ್ ಹುಟ್ಟುಹಾಕಬೇಕಾಯ್ತು. ಮೋದಿಯನ್ನು ವೈಭವೀಕರಿಸಲು, ಮೋದಿ ವಿರೋಧಿಗಳ ಮೇಲೆ ಅಸಹ್ಯಕರವಾಗಿ ಟ್ರೋಲ್ ಮಾಡಲು, ಮೋದಿ ಸರಕಾರದ ಸುಳ್ಳುಗಳನ್ನು ಸತ್ಯವೆಂದು ಸಮರ್ಥಿಸಿಕೊಳ್ಳಲು ಬಿಜೆಪಿ ಐಟಿ ಸೆಲ್ ನ ಕೇಸರಿ ಪಡೆ ಕಾರ್ಯನಿರತವಾಯ್ತು. ಮೋದಿ ಪಡೆಯ ಸುಳ್ಳುಗಳನ್ನು ಫ್ಯಾಕ್ಟ್ ಚೆಕ್ ಮೂಲಕ ಬಯಲು ಮಾಡಿದವರ ವಿರುದ್ಧ ಟ್ರೋಲ್ ಮಾಡಿ ನಿಂದಿಸಲು ಮೋದಿ ಭಕ್ತರನ್ನೂ ಬಳಸಿ ಕೊಳ್ಳಲಾಯ್ತು.

ಆದರೆ ಅದೇನೇ ಶಡ್ಯಂತ್ರ ಮಾಡಿದರೂ ಸತ್ಯದ ಮುಂದೆ ಈ ಸುಳ್ಳುಗಳು ಹೆಚ್ಚು ದಿನ ಬಾಳದಾದವು. ಮೋದಿಯ ಬಂಡವಾಳವನ್ನು ದಾಖಲೆ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದರಿಂದಾಗಿ ಪ್ರಜ್ಞಾವಂತ ಜನರಲ್ಲಿ ಜಾಗೃತಿ ಮೂಡಿದಂತಾಯ್ತು. ಹೀಗಾಗಿ ಗೋದಿ ಮೀಡಿಯಾಗಳು ಹಬ್ಬಿಸುವ ಸುಳ್ಳುಗಳ ನಡುವೆ ಸತ್ಯವನ್ನು ಪ್ರತಿಪಾದಿಸುವ ಸೋಷಿಯಲ್ ಮಾಧ್ಯಮಗಳನ್ನೇ ನಿಯಂತ್ರಿಸುವ, ಪ್ರತಿರೋಧದ ದ್ವನಿಗಳನ್ನೇ ದಮನಿಸುವ ಹುನ್ನಾರವೊಂದನ್ನು ಮೋದಿ ಸರಕಾರ ರೂಪಿಸಿತು. ಅದೇನೆಂದರೆ..

‘ಬ್ರಾಡಕಾಸ್ಟಿಂಗ್ ಸರ್ವಿಸಸ್ (ರೆಗ್ಯುಲೇಶನ್) ಬಿಲ್ – 2023’ ಎನ್ನುವ ಕರುಡನ್ನು ಕೇಂದ್ರ ಸರಕಾರ ಸಿದ್ಧಗೊಳಿಸಿ ನವೆಂಬರ್ 10 ರಂದು ತಕರಾರುಗಳಿಗೆ ಆಹ್ವಾನ ಕೊಟ್ಟಿತು. ಹಾಗೂ ಜನವರಿ 15, 2024 ರ ಒಳಗಾಗಿ ತಕರಾರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಚುನಾವಣೆ ಇಲ್ಲದೇ ಹೋಗಿದ್ದರೆ ಈ ಕರಾಳ ಕಾಯ್ದೆ ಈಗಾಗಲೇ ಜಾರಿಯಾಗುತ್ತಿತ್ತು. ಸೋಶಿಯಲ್ ಮೀಡಿಯಾಗಳಿಗೆ ಮೂಗುದಾರ ಹಾಕಿ ನಿಯಂತ್ರಿಸಲು ಈ ಕಾಯಿದೆಯ ಅನುಷ್ಟಾನಕ್ಕಾಗಿ ಮೋದಿ ಸರಕಾರ ಕಾಯುತ್ತಿದೆ. ಈ ಕಾಯಿದೆ ಪ್ರಕಾರ ಯಾರೆಲ್ಲಾ ಯುಟ್ಯೂಬ್, ಫೇಸ್ಬುಕ್, ಇನ್ಟ್ರಾಗ್ರಾಂ, ವಾಟ್ಸಾಪ್ ನಂತಹ ಸೋಶಿಯಲ್ ಮೀಡಿಯಾ ಅಕೌಂಟ್‌ ಗಳನ್ನು ಬಳಸುತ್ತಾರೋ ಅಂತವರೆಲ್ಲಾ ಈ ಬ್ರಾಡ್‌ ಕಾಸ್ಟ್ ಕಾನೂನಿಗೆ ಒಳಪಡುತ್ತಾರೆ. ಇವುಗಳನ್ನು ಬಳಸುವ ಬ್ರಾಡ್‌ ಕಾಸ್ಟರ್ ಸರಕಾರದಿಂದ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗುತ್ತದೆ. ಅವುಗಳಿಗೆ ಅನುಮತಿ ಕೊಡಲು ಸೆಂಟ್ರಲ್ ಇವ್ಯಾಲ್ಯುಯೇಶನ್ ಕಮಿಟಿ ನೇಮಕ ಮಾಡಲಾಗುತ್ತದೆ. ಈ ಸಮಿತಿ ಅನುಮತಿಸಿದ ವಿಡಿಯೋ ಹಾಗೂ ಮೆಸೇಜ್‌ ಗಳನ್ನು ಮಾತ್ರ ಬ್ರಾಡ್‌ ಕಾಸ್ಟರ್ ಪೋಸ್ಟ್ ಮಾಡಬೇಕಾಗುತ್ತದೆ. ಸಮಿತಿಯ ನಿಯಮಗಳನ್ನು ಮೀರಿದವರ ಡಿವೈಸ್ ಗಳು ಅಂದರೆ ಮೊಬೈಲ್ ಫೋನ್, ಲ್ಯಾಪ್‌ ಟಾಪ್ ಹಾಗೂ ಕಂಪ್ಯೂಟರ್ ಗಳನ್ನೆಲ್ಲಾ ಸೀಝ್ ಮಾಡುವ ಅಧಿಕಾರವನ್ನೂ ಈ ಸಮಿತಿಗೆ ಕೊಡಲಾಗುತ್ತದೆ.

ಭಾಗ ಎರಡನ್ನೂ ಓದಿ- ಮೋದಿ ಸರಕಾರದ ಸ್ಕೀಂ ಮತ್ತು ಸ್ಕ್ಯಾಂಗಳು

ಅಂದರೆ ಕಾನೂನಾತ್ಮಕವಾಗಿ ಸಾಮಾಜಿಕ ಮಾಧ್ಯಮಗಳ ದ್ವನಿಯನ್ನೂ ಸಹ ದಮನ ಮಾಡುವ ಪ್ರಯತ್ನವನ್ನು ಮೋದಿ ಸರಕಾರ ಮಾಡುತ್ತಿದೆ. ಸಂವಿಧಾನ ಕೊಡಮಾಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ಪಾತಕ ಪ್ರಯತ್ನ ಸರ್ವಾಧಿಕಾರದ ಹೆಜ್ಜೆಯಾಗಿದೆ. ಪ್ರತಿರೋಧಗಳೇ ಇಲ್ಲದಂತೆ ಮಾಡುವುದೇ ಸರ್ವಾಧಿಕಾರಿಯ ಮೊದಲ ಆದ್ಯತೆಯೂ ಆಗಿದೆ. ಪ್ರಶ್ನಿಸುವ ಸ್ವಾತಂತ್ರ್ಯವನ್ನೇ ದಮನಿಸುವ ಮೂಲಕ ವಿರೋಧವನ್ನು ಹತ್ತಿಕ್ಕುವ, ವಿರೋಧಿಗಳನ್ನು ಬಂಧಿಸಿ ಶಿಕ್ಷಿಸುವ ಕಾನೂನುಗಳನ್ನು ಫ್ಯಾಸಿಸ್ಟ್ ವ್ಯವಸ್ಥೆ ಮಾತ್ರ ರೂಪಿಸಲು ಸಾಧ್ಯ. ಅದೇ ಪ್ರಯತ್ನದಲ್ಲಿ ಮೋದಿ ಸರಕಾರ ಇದೆ. ಮತ್ತೆ 2024 ರ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತದಿಂದ ಗೆದ್ದು ಮತ್ತೊಮ್ಮೆ ಗದ್ದುಗೆ ಹಿಡಿದಿದ್ದೇ ಆದರೆ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳ ಹರಣ ಶತಸಿದ್ಧ.

 “ಪ್ರತಿಯೊಬ್ಬರಿಗೂ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ. ಈ ಹಕ್ಕು ಯಾವುದೇ ಹಸ್ತಕ್ಷೇಪವಿಲ್ಲದೇ ಅಭಿಪ್ರಾಯಗಳನ್ನು ಹೊಂದಲು ಮತ್ತು ಯಾವುದೇ ಮಾಧ್ಯಮಗಳ ಮೂಲಕ ಮಾಹಿತಿ ಮತ್ತು ಆಲೋಚನೆಗಳನ್ನು ಹುಡುಕುವ, ಸ್ವೀಕರಿಸುವ ಮತ್ತು ನೀಡುವ ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ” ಎಂದು ವಿಶ್ವಸಂಸ್ಥೆಯ 1948ರ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಸ್ಪಷ್ಟಪಡಿಸುತ್ತದೆ. ಸಂವಿಧಾನದ 19 (1) (ಎ) ನೇ ವಿಧಿಯು ಭಾರತದ ಪ್ರತಿಯೊಬ್ಬ ಪ್ರಜೆಗೂ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ.  ಆದರೆ ಸರ್ವಾಧಿಕಾರಕ್ಕೆ ಈ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದೇ ಮೊದಲ ಶತ್ರುವಾಗಿದೆ. ಹಾಗಾಗಿ ಕಾನೂನಾತ್ಮಕವಾಗಿಯೋ ಇಲ್ಲಾ ದಬ್ಬಾಳಿಕೆಯ ಮೂಲಕವೋ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಅನಿವಾರ್ಯತೆ ಫ್ಯಾಸಿಸಂ ವ್ಯವಸ್ಥೆಗೆ ಇದೆ. ಮೋದಿ ಸರಕಾರ ಈಗ ಅದನ್ನೇ ಮಾಡಲು ಹೊರಟಿದೆ. 

ಸಿದ್ದಿಕಿ ಕಪ್ಪನ್

ಜಗತ್ತಿನ ವಿವಿಧ ದೇಶಗಳಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಕುರಿತು ಅಧ್ಯಯನ ನಡೆಸಿ ಸೂಚ್ಯಂಕ ದಾಖಲಿಸುವ ಕೆಲಸವನ್ನು ʼರಿಪೋರ್ಟ್ಸ್ ವಿಥೌಟ್ ಬಾರ್ಡರ್ಸ್ʼ ಎನ್ನುವ ಪ್ಯಾರೀಸ್ ಮೂಲದ ಸ್ವಯಂ ಸೇವಾ ಸಂಸ್ಥೆ ಪ್ರಕಟಿಸುತ್ತದೆ. 2019 ರಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ  ಭಾರತವು 140ನೇ ಸ್ಥಾನಕ್ಕೆ ಇಳಿದಿತ್ತು. 2022 ರಲ್ಲಿ ಭಾರತದ ಶ್ರೇಯಾಂಕವು 150 ನೇ ಸ್ಥಾನಕ್ಕೆ ಇಳಿಯಿತು. ವರ್ಷದಿಂದ ವರ್ಷಕ್ಕೆ ಸೂಚ್ಯಂಕದಲ್ಲಿ ಭಾರತ ಕುಸಿಯುತ್ತಲೇ ಇದೆ.  2023 ಅಕ್ಟೋಬರ್ ತಿಂಗಳಲ್ಲಿ ದೆಹಲಿ ಪೊಲೀಸರು ನ್ಯೂಸ್ ಕ್ಲಿಕ್ ನ ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕ ಪ್ರಬೀರ್ ಪುರುಕಾಯಸ್ಥ ಮತ್ತು ಅದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯವರನ್ನು ಕಾನೂನು ಬಾಹಿರ ಚಟುವಟಿಕೆ (UAPA) ಕಾಯ್ದೆಯ ಅಡಿಯಲ್ಲಿ ಬಂಧಿಸಿದರು. ಮೋದಿ ಸರಕಾರದ ವಿರುದ್ಧ ಸುದ್ದಿ ಪ್ರಸಾರ ಮಾಡಿದ್ದೇ ಈ ಬಂಧನದ ಹಿಂದಿನ ಅಸಲಿ ಕಾರಣವಾಗಿತ್ತು. ಯುಎಪಿಎ ಯಂತಹ ಕರಾಳ ಕಾಯಿದೆಗಳನ್ನು ಪ್ರಭುತ್ವ ವಿರೋಧಿ ಪತ್ರಕರ್ತರ ವಿರುದ್ಧ ದುರ್ಬಳಕೆ ಮಾಡಿಕೊಳ್ಳುವುದನ್ನು ಪ್ರೆಸ್ ಕ್ಲಬ್ ಆಫ್‌ ಇಂಡಿಯಾ ವಿರೋಧಿಸಿ ರಾಷ್ಟ್ರಪತಿಯವರಿಗೂ ದೂರು ನೀಡಿತ್ತಾದರೂ ಫಲಿತಾಂಶ ನಿರಾಶಾದಾಯಕವಾಗಿತ್ತು. 

ಬಿಜೆಪಿ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ದಾಖಲಿಸಿದ ದೂರಿನ ಮೇಲೆ ದೆಹಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ನವರು ‘ದಿ ವೈರ್’ ಸಂಪಾದಕರ ಮನೆಯ ಮೇಲೆ ದಾಳಿ ಮಾಡಿ ಪರಿಕರಗಳನ್ನು ವಶಪಡಿಸಿ ಕೊಂಡರು. ಸಿದ್ದಿಕ್ ಕಪ್ಪನ್, ಫಹಾದ್ ಶಾ, ಮೊಹಮ್ಮದ್ ಜುಬೇರ್, ಸನ್ನಾ ಇರ್ಷಾದ್ ಮಟ್ಟು ವಂತಹ ಅನೇಕ ಪ್ರಗತಿಪರ ಪತ್ರಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಕಿರುಕುಳ ಕೊಡಲಾಯಿತು. ಹಿಂದುತ್ವವಾದದ ವಿರುದ್ಧ ದ್ವನಿ ಎತ್ತಿದ್ದ ಪತ್ರಕರ್ತೆ ಗೌರಿ ಲಂಕೇಶರನ್ನು ಹತ್ಯೆ ಮಾಡಲಾಯಿತು. 

“ಪ್ರಭುತ್ವ ವಿರೋಧಿ ಪತ್ರಕರ್ತರ ವಿರುದ್ಧ ಕಠಿಣ ಕಾನೂನುಗಳ ಬಳಕೆ ಅತಿಯಾಗುತ್ತಿದೆ. ಪತ್ರಕರ್ತರ ಲ್ಯಾಪ್‌ ಟಾಪ್, ಮೊಬೈಲ್ ಗಳಂತಹ ಸಾಧನಗಳನ್ನು ಜಪ್ತಿ ಮಾಡಲಾಗುತ್ತಿದೆ. ಮೋದಿ ಸರಕಾರದಲ್ಲಿ 44 ಪತ್ರಕರ್ತರಿಗೆ ಸಂಬಂಧಿಸಿದ ಡಿಜಿಟಲ್ ಸಾಧನಗಳನ್ನು ವಶಪಡಿಸಿ ಕೊಳ್ಳಲಾಗಿದೆ.” ಎಂದು ಪತ್ರಿಕಾ ಸಂಸ್ಥೆಗಳ ಒಕ್ಕೂಟವು ರಾಷ್ಟ್ರಪತಿ ದ್ರೌಪತಿ ಮುರ್ಮುರವರಿಗೆ ಪತ್ರ ಬರೆದು ವಾಕ್ ಸ್ವಾತಂತ್ರ್ಯ ಹಾಗೂ ಸಂವಿಧಾನದತ್ತ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಲು ಮಧ್ಯ ಪ್ರವೇಶಿಸಬೇಕು ಎಂದು ಕೋರಿವೆ.

ಭಾಗ ಮೂರನ್ನೂ ಓದಿ- ತನಿಖಾ ಸಂಸ್ಥೆಗಳ ದುರ್ಬಳಕೆ

ಯಾವುದೇ ಕಟ್ಟುಪಾಡುಗಳಿಲ್ಲದೆ, ಅಡಚಣೆಗಳಿಲ್ಲದೇ, ಯಾರ ಒತ್ತಡ ಮತ್ತು ಹಸ್ತಕ್ಷೇಪವಿಲ್ಲದೇ ಮುಕ್ತವಾಗಿ ಸುದ್ದಿಯನ್ನು ಬಿತ್ತರಿಸುವುದು ಮತ್ತು ವಿಶ್ಲೇಷಿಸುವುದನ್ನು ಪತ್ರಿಕಾ ಸ್ವಾತಂತ್ರ್ಯ ಎನ್ನಲಾಗುತ್ತದೆ. ಆದರೆ ಸರ್ವಾಧಿಕಾರಿ ಆಡಳಿತದಲ್ಲಿ ಇದಕ್ಕೆಲ್ಲಾ ಈಗ ಬೆಲೆ ಇಲ್ಲದಂತಾಗಿದೆ. ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೂ ಕರೆಯಲಾಗುತ್ತದೆ. ಆದರೆ ಕಾರ್ಪೋರೇಟ್ ಕಂಪನಿಗಳ ನಿಯಂತ್ರಣದಲ್ಲಿರುವ ಬಹುತೇಕ ಕಾವಲು ನಾಯಿಗಳೇ ಸರ್ವಾಧಿಕಾರಿಯ ಮನೆಯ ಬಾಗಿಲು ಕಾಯುವಂತಾಗಿದೆ. ಪ್ರಜಾತಂತ್ರದ ಪರವಾಗಿರುವ ಪತ್ರಕರ್ತರು ಅತಂತ್ರವಾಗಿದ್ದಾರೆ. ಸ್ವತಂತ್ರ ಸಾಮಾಜಿಕ ಮೀಡಿಯಾಗಳತ್ತ ತಮ್ಮ ಚಿತ್ತ ಬದಲಾಯಿಸಿದ್ದಾರೆ. ಈಗ ಸರ್ವಾಧಿಕಾರಿಯ ಪಿತ್ತ ನೆತ್ತಿಗೇರಿದ್ದು, ಸೋಷಿಯಲ್ ಮೀಡಿಯಾಗಳ ಮೇಲೆ ನಿಯಂತ್ರಣ ಹೇರುವ ಕಾನೂನು ಜಾರಿಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಸರಕಾರವೇ ಬಹುಮತದಿಂದ ಅಧಿಕಾರಕ್ಕೆ ಬಂದರೆ ಮೊಟ್ಟ ಮೊದಲು ಜಾರಿಯಾಗುವುದೇ “ ಬ್ರಾಡ್‌ ಕಾಸ್ಟಿಂಗ್ ಸರ್ವಿಸಸ್ (ರೆಗ್ಯುಲೇಶನ್) ಬಿಲ್ “. ಇಲ್ಲಿಗೆ ಪರ್ಯಾಯ ಸ್ವತಂತ್ರ ಮಾಧ್ಯಮಗಳ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಾನೂನಾತ್ಮಕವಾಗಿ ದಮನಿಸಲಾಗುತ್ತದೆ.. ಅದು ಆಗಬಾರದು ಎಂದರೆ ಹಿಂದುತ್ವವಾದಿ ಸರ್ವಾಧಿಕಾರಿ ಶಕ್ತಿಗಳನ್ನು ಈ ಚುನಾವಣೆಯಲ್ಲಿ ಸೋಲಿಸಲೇ ಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article