ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಲ್ಲಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಕಾನೂನ ಬಾಹಿರವಾಗಿ 38 ಶವಗಳನ್ನು ಹೂತು ಹಾಕಿರುವುದನ್ನು ಪತ್ತೆ ಹಚ್ಚಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ಖಚಿತಪಡಿವೆ ಎಂದು ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
ತನಿಖೆಯ ಭಾಗವಾಗಿ ಎಸ್ ಐಟಿಯು ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವಿನ ಪ್ರಕರಣಗಳು (ಯುಡಿಆರ್) ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ತುಲನೆ ಮಾಡುತ್ತಿದೆ.
ಈ ದಾಖಲೆಗಳ ಪರಿಶೀಲನೆ ನಡೆಸಿದಾಗ ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 38 ಶವಗಳನ್ನು ಹೂತು ಹಾಕಲಾಗಿದೆ. ಆದರೆ ಶವಗಳನ್ನು ಹೂತು ಹಾಕುವಲ್ಲಿ ಯಾವುದೇ ಕಾನೂನು ಪ್ರಕ್ರಿಯೆಗಳನ್ನು ನಡೆಸದಿರುವುದು ಕಂಡು ಬಂದಿದೆ. ಶವಗಳನ್ನು ಹೂತು ಹಾಕಿರುವುದಾಗಿ ಪಂಚಾಯಿತಿ ದಾಖಲೆಗಳು ದೃಢೀಕರಿಸಿದರೆ, ಈ ಶವಗಳನ್ನು ಕುರಿತ ಮಾಹಿತಿ ಪೊಲೀಸ್ ದಾಖಲೆಗಳಲ್ಲಿ ಕಂಡು ಬರುತ್ತಿಲ್ಲ. ಯುಡಿಆರ್ ಪ್ರಕರಣಗಳನ್ನು ದಾಖಲಿಸದೆ ಈ ಶವಗಳನ್ನು ಹೂತು ಹಾಕಿದ್ದಾದರೂ ಏಕೆ ಎಂದು ಪತ್ತೆ ಹಚ್ಚುತ್ತಿರುವ ಎಸ್ ಐಟಿ, ಈ ಪ್ರಕರಣಗಳಿಗೂ ಹಿಂಸೆ ಅಥವಾ ಶಂಕಾಸ್ಪದ ಸನ್ನಿವೇಶಗಳಿಗೂ ಸಂಬಂಧ ಇದೆಯೇ ಎಂದು ತನಿಖೆ ಆರಂಭಿಸಿದೆ.
ಪಂಚಾಯಿತಿಯ ದಾಖಲೆಗಳಲ್ಲಿ ಶವಗಳನ್ನು ಹೂತುಹಾಕಿದ ಸ್ಥಳ ಕುರಿತು ಯಾವುದೇ ಮಾಹಿತಿ ಉಲ್ಲೇಖವಾಗಿಲ್ಲ. ಕೇವಲ ಈ 38 ಪ್ರಕರಣ ಮಾತ್ರವಲ್ಲದೆ ಬಹುತೇಕ ಶವಗಳನ್ನು ಹೂತುಹಾಕಿರುವ ಪ್ರಕರಣಗಳ ಸ್ಥಳಗಳನ್ನು ನಮೂದಿಸಿಯೇ ಇಲ್ಲ. ಈ ಹಂತದಲ್ಲಿ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಶವಗಳನ್ನು ಹೂಳುವ ಸ್ಥಳವನ್ನು ಅಗೆಯುತ್ತಿದ್ದ ಎಂದು ಎಸ್ ಐಟಿ ಖಚಿತಪಡಿಸಿದೆ.
ಇದಕ್ಕೆ ಪೂರಕವಾಗಿ ಎಸ್ ಐಟಿಯು ಪಂಚಾಯಿತಿ ದಾಖಲೆಗಳು, ಪಂಚಾಯಿತಿಯಲ್ಲಿ ಶವಗಳನ್ನು ಹೂತಿರುವುದಕ್ಕೆ ಸಂಬಂಧಪಟ್ಟ ದಾಖಲೆಗಳು, ಯುಡಿಆರ್ ಗಳು ಮತ್ತು ಕಳೆದ ಎರಡು ದಶಕಗಳಲ್ಲಿ ಕಾಣೆಯಾದವರ ವ್ಯಕ್ತಿಗಳ ವರದಿಗಳ ಜತೆ ಜತೆಗೆ ಪ್ರಕರಣ ಬಿಎನ್ ಎನ್ ಎಸ್ ಸೆ. 183 ಅಡಿಯಲ್ಲಿ ಚಿನ್ನಯ್ಯ ಮತ್ತು ಸೌಜನ್ಯ ಪರ ಹೋರಾಟಗಾರರು ನೀಡಿರುವ ಹೇಳಿಕೆಗಳನ್ನೂ ಪರಿಶೀಲಿಸುತ್ತಿದೆ.
ಮೊನ್ನೆಯಷ್ಟೇ ನಮ್ಮ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ ಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ತಡೆ ನೀಡಿ ಆದೇಶಿಸಿದೆ.
ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಹತ್ಯೆ ಮಾಡಿದ ಶವಗಳನ್ನು ನನ್ನಿಂದ ಹೂತು ಹಾಕಿಸಲಾಗಿದೆ ಎಂದು ಜುಲೈ 3ರಂದು ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾನೆ. ನ್ಯಾಯಾಲಯದಲ್ಲಿಯೂ ಬಿಎನ್ ಎನ್ ಎಸ್ ಸೆ-183 ಅಡಿಯಲ್ಲಿ ತನ್ನ ಆರೋಪವನ್ನು ದೃಢೀಕರಿಸಿರುತ್ತಾನೆ. ಈತನ ಹೇಳಿಕೆಯನ್ನು ಆಧರಿಸಿ ಆರೋಪಗಳನ್ನು ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರ ಜುಲೈ 19 ರಂದು ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸಿರುತ್ತದೆ.
ನಂತರ ಎಸ್ ಐಟಿ ಸುಮಾರು ಎರಡು ವಾರದ ಕಾಲ ಶವಗಳ ಅವಶೇಷಗಳಿಗಾಗಿ ಮಹಜರು ನಡೆಸಿದೆ. ತದನಂತರ ನ್ಯಾಯಾಲಯದಲ್ಲಿ ತಾನು ಶವಗಳನ್ನು ಹೂತು ಹಾಕಿರುವುದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ್ದಾಗಿ ಹೇಳಿದ ನಂತರ ಆಗಸ್ಟ್ 23ರಂದು ಎಸ್ ಐಟಿ ಚಿನ್ನಯ್ಯನನ್ನು ಬಂಧಿಸುತ್ತದೆ. ಇದೇ ಸೆಕ್ಷನ್ ಅಡಿಯಲ್ಲಿ ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿರುತ್ತದೆ.

